ನಾನು ಕುಡ್ಕೊಂಡೇ ಬಂದೋನು ಅಂದ್ರು ಸಿದ್ದು!
ಬೆಂಗಳೂರು, ಜ 31 : ಕೊನೆ ದಿನವೂ ಹಾಸ್ಯದ ಗಮ್ಮತ್ತು! ಗುರುವಾರ ವಿಧಾನಮಂಡಲದ ಜಂಟಿ ಅಧಿವೇಶನದ ಕೊನೆ ದಿನವಾಗಿತ್ತು. ಆದರೆ, ಸದನದಲ್ಲಿ ಸಿಎಂ ಉತ್ತರ ನೀಡಬೇಕಿದ್ದರೂ ಹಾಸ್ಯಕ್ಕೇನೂ ಕಮ್ಮಿಯಿರಲಿಲ್ಲ. ಗುರುವಾರ ನಡೆದ ಹಾಸ್ಯ ಪ್ರಸಂಗಗಳ ಝಲಕ್ ಇಲ್ಲಿದೆ ನೋಡಿ.
ಮೊದ್ಲು ಪ್ಯಾಕೆಟ್, ಈಗ ಬಾಟ್ಲಿ..! : ಸಾರಾಯಿ ನಿಷೇಧ ಮಾಡಿದ್ರಿಂದ ಕುಡುಕರ ಸಂಖ್ಯೆ ಕಮ್ಮಿಯಾಗಿಲ್ಲ. ಇದರಿಂದ ಏನೂ ಉಪಯೋಗವಾಗಿಲ್ಲ. ಮೊದಲು 10 ರೂ.ಗೆ ಸಾರಾಯಿ ಸಿಗುತ್ತಿತ್ತು. ಆದರೆ ಈಗ 40 ರೂ. ಕೊಟ್ರೆ ವಿಸ್ಕಿ ರಮ್ ಸಿಗುತ್ತೆ. ಜನರು ಈಗ ಅದನ್ನೇ ಕುಡಿಯುತ್ತಿದ್ದಾರೆ ಅಂತ ಸಿಎಂ ಹೇಳಿದರು.
ತಕ್ಷಣ ಎದ್ದು ನಿಂತ ಭಾರತಿ ಶೆಟ್ಟಿ, ನಾವು ಅವರ ಮಧ್ಯದಿಂದಲೇ ಬಂದಿರೋರು ಅವರ ಕಷ್ಟ ಸುಖ ಏನು ಅಂತ ನಮಗೆ ಗೊತ್ತು ಅಂದ್ರು. ಅದಕ್ಕೆ ಸಿಎಂ ಸಿದ್ದರಾಮಯ್ಯ, ಅಲ್ಲ ಕಣಮ್ಮಾ ನಿಂಗೆ ಇದು ಗೊತ್ತಾಗಲ್ಲ ಬಿಡು ಅಂದ್ರು. ಆದ್ರೆ ಭಾರತಿಯಕ್ಕ ಮಾತ್ರ ಯಾಕೋ ಸುಮ್ಮನಾಗದೆ, ಕಷ್ಟ ಕಂಡಿರೋರು ನಾವು... ಅದು ಇದು ಅಂತ ಅದೇನೇನೋ ಅನ್ನೋಕೆ ಆರಂಭಿಸಿದ್ರು. [ಮದ್ಯ ಸೇವನೆಯಿಂದ ಕ್ಯಾನ್ಸರ್!]

ಅಲ್ಲಿವರೆಗೂ ಸುಮ್ಮನಿದ್ದ ಸಿದ್ರಾಮಣ್ಣ ಅಮ್ಮೋ ನಿನಗಿಂತ ನನಗೆ ಚಂದಾಗಿ ಗೊತ್ತು. ನಾನು ಅದನ್ನ ಕುಡುಕೊಂಡೇ ಬಂದೋನು. ಕಷ್ಟ ನಷ್ಟ ಏನು ಅಂತಾ ನಂಗೆ ಗೊತ್ತಾಗಕಿಲ್ವಾ ಅಂದು ಬಿಟ್ರು. ಜೊತೆಗೆ ನಿಂಗೆ ಪಕ್ಕಾ ಅದ್ರ ಡಿಟೇಲ್ ಬೇಕಂದ್ರೆ ನಾಣಯ್ಯನವರನ್ನು ಕೇಳಿ ಅಂದ್ರು. ಇತ್ತ ಎದ್ದು ನಿಂತ ನಾಣಯ್ಯ, ಸಾರಾಯಿ ನಿಷೇಧದಿಂದ ಲಾಭವಾಗಿಲ್ಲ. ಎರಡರಲ್ಲೂ ಆಲ್ಕೋಹಾಲ್ ಇದೆ. ಈಗ ಬಣ್ಣ ಬದಲಾಯಿಸಿ ಕೊಡುತ್ತೀರಿ. ಇದರಿಂದ ಬದಲಾವಣೆ ಏನೂ ಇಲ್ಲ. ಅವತ್ತು ಪ್ಯಾಕೆಟ್ ನಲ್ಲಿ ಕುಡಿಯುತ್ತಿದ್ದೆವು. ಈಗ ಬಾಟ್ಲಿಯಲ್ಲಿ ಕೊಡ್ತಿದ್ದಾರೆ ಅಂದ್ರು. [ಮುಖ್ಯಮಂತ್ರಿಗಳೇ ಶೌಚಾಲಯಭಾಗ್ಯ ಕಲ್ಪಿಸಿ!]
ಇದಕ್ಕೆ ಇನ್ನೋರ್ವ ಸದಸ್ಯ ಗಣೇಶ್ ಕಾರ್ಣಿಕ್, ಕುಡಿಯುವುದು ಬಿಟ್ಟು ಪ್ರಗತಿಪರರ ಬಗ್ಗೆ ಮಾತನಾಡಿ ಅಂದ್ರು. ಅದಕ್ಕೆ ಸಿಎಂ ಸಿದ್ದರಾಮಯ್ಯ, ನೀವು ಮಿಲಿಟರಿಯಲ್ಲಿದ್ರಿ. ನೀವು ಕುಡಿದಿಲ್ವಾ ಅಂತಾ ಕೇಳಿದ್ರು. ಅದ್ಕೆ ಕಾರ್ಣಿಕ್ ಇಲ್ಲ ಅಂತ ತಲೆಯಾಡಿಸಿದರು. ಅದಕ್ಕೋಸ್ಕರಾನೇ ವಿಆರ್‍ಎಸ್ ತೆಗೆದುಕೊಂಡ ಬಂದಿದೀಯಾ ಅಂತಾ ಕಾರ್ಣಿಕ್ ರನ್ನೂ ಛೇಡಿಸಿ ಮತ್ತೆ ಅಬಕಾರಿ ಸುಂಕ ಸರ್ಕಾರದ ಕೆಲ್ಸ ಲಾಭ ನಷ್ಟ ಅಂತಾ ಮತ್ತೆ ಮಾತು ಮುಂದುವರಿಸಿದ್ರು ಸಿದ್ದರಾಮಯ್ಯ. [ಕುಡಿದು ಕುಡಿದೇ ಹಾಳಾದೆ]











Click it and Unblock the Notifications