RCB: "ನಾನು ಬದುಕಿರುವವರೆಗೆ ಕನ್ನಡಿಗನೆ, ಆರ್.ಸಿ.ಬಿಯ ಹೆಮ್ಮೆಯ ಅಭಿಮಾನಿಯೇ" ಎಂದ ಸಿದ್ದರಾಮಯ್ಯ
ಬೆಂಗಳೂರು, ಮಾರ್ಚ್ 22: ಕದ್ದು ಮುಚ್ಚಿ ಕಾವೇರಿಯನ್ನು ತಮಿಳು ನಾಡಿಗೆ ಹರಿಸಿ ಕನ್ನಡಿಗರಿಗೆ ದ್ರೋಹ ಬಗೆಯುತ್ತಿರುವ ಸಿಎಸ್'ಕೈ'. ಎಂದು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಭಾವಚಿತ್ರಕ್ಕೆ ಹಳದಿ ಬಣ್ಣದ ಜೆರ್ಸಿ ಹಾಕಿ ಪೋಸ್ಟ್ ಮಾಡಿದ್ದು, ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯ ಬಿಜೆಪಿ ನನ್ನ ಭಾವಚಿತ್ರಕ್ಕೆ ಹಳದಿ ಬಣ್ಣದ ಜೆರ್ಸಿ ಹಾಕಿ ನನ್ನ ಬದ್ಧತೆಯನ್ನು ಅವಮಾನಿಸಬೇಡಿ, "ನಾನು ಬದುಕಿರುವವರೆಗೆ ಕನ್ನಡಿಗನೆ, ಆರ್.ಸಿ.ಬಿಯ ಹೆಮ್ಮೆಯ ಅಭಿಮಾನಿಯೇ" ಎಂದು ತಿರುಗೇಟು ನೀಡಲಾಗಿದೆ.

ಮೇಕೆದಾಟು ಯೋಜನೆ ಜಾರಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದಾಗ ನಮ್ಮ ಮೇಲೆ ಮೊಕದ್ದಮೆ ದಾಖಲಿಸಿದವರು ನೀವೇ, ಕಾವೇರಿ ನೀರು ಹಂಚಿಕೆಯಲ್ಲಿ ನಾಡಿಗೆ ಅನ್ಯಾಯ ಆಗುತ್ತಿದ್ದಾಗ ಹಲವು ಬಾರಿ ಮನವಿ ಮಾಡಿದರೂ ಮಧ್ಯಪ್ರವೇಶಿಸದೆ ಕನ್ನಡಿಗರನ್ನು ಸಂಕಷ್ಟಕ್ಕೆ ತಳ್ಳಿದವರು ನಿಮ್ಮದೇ ಪ್ರಧಾನಿಗಳು, ನಿಮ್ಮದೇ ಪಕ್ಷದ ರಾಜ್ಯಾಧ್ಯಕ್ಷ ತಮಿಳುನಾಡಿನಲ್ಲಿ ಕಾವೇರಿ ನೀರಿಗಾಗಿ ಹೋರಾಟ ನಡೆಸುತ್ತಾರೆ, ಮೇಕೆದಾಟು ಯೋಜನೆ ವಿರುದ್ಧ ಉಪವಾಸ ಸತ್ಯಾಗ್ರಹ ಕೂರುತ್ತಾರೆ ಎಂದು ಹೇಳಿದ್ದಾರೆ.
ಮೇಕೆದಾಟು ಯೋಜನೆಯ ಜಾರಿಗೆ ನಾವು ಎಂ.ಕೆ ಸ್ಟಾಲಿನ್ ಅವರ ಅನುಮತಿಗಾಗಿ ಕಾದು ಕುಳಿತಿಲ್ಲ, ನಮಗೆ ಅನುಮತಿ ಬೇಕಿರುವುದು ಕೇಂದ್ರ ಸರ್ಕಾರದ್ದು. ನಿಮ್ಮದೇ ಪಕ್ಷದ ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಅನುಮತಿ ನೀಡಿದರೆ ನಾಳೆಯಿಂದಲೇ ಅಣೆಕಟ್ಟು ಕೆಲಸ ಆರಂಭ ಮಾಡಲು ನಾವು ತಯಾರಿದ್ದೇವೆ.. ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆ ಎಂಬ ಸುಳ್ಳು ಸುದ್ದಿಯ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುವುದನ್ನು ನಿಲ್ಲಿಸಿ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದೆ.












Click it and Unblock the Notifications