ನನ್ನ ಬಳಿಯೂ ಪೆನ್‌ಡ್ರೈವ್ ಇದೆ; ಯಾವ ಪಕ್ಷಕ್ಕೆ ಸೇರಿದ್ದು ಗೊತ್ತಾ? : ಲಕ್ಷ್ಮಣ ಸವದಿ ಸ್ಫೋಟಕ ಹೇಳಿಕೆ
ಬೆಳಗಾವಿ, ಆಗಸ್ಟ್ 11: ರಾಜ್ಯ ರಾಜಕಾರಣದಲ್ಲಿ ಪೆನ್ ಡ್ರೈವ್ ರಾಜಕೀಯ ಸಾಕಷ್ಟು ಸದ್ದು ಮಾಡಿದ್ದು, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಪೆನ್ ಡ್ರೈವ್ ಬಾಂಬ್ ಬಳಿಕ, ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಪೆನ್‌ಡ್ರೈವ್ ಸಿಡಿಸಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ಈ ಕುರಿತು ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ನನ್ನ ಹತ್ತಿರ ಪೆನ್‌ಡ್ರೈವ್ ಇರೋದು ಕಟು ಸತ್ಯ. ಸಂದರ್ಭ ಬಂದಾಗ ರಿಲೀಸ್ ಮಾಡುತ್ತೇನೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ನನ್ನ ಬಳಿ ಪೆನ್ ಡ್ರೈವ್ ಇರುವುದು ಕಟು ಸತ್ಯ ಸಮಯ ಸಂದರ್ಭ ಬಂದಾಗ ಪೆನ್ ಡ್ರೈವ್ ಹೊರ ಬರುತ್ತದೆ. ನನ್ನ ಮೇಲೆ ಎಷ್ಟು ಒತ್ತಡ ಹೆಚ್ಚಾಗುತ್ತದೆಯೋ ಅಷ್ಟು ಬೇಗ ರಿಲೀಸ್ ಮಾಡುತ್ತೇನೆ. ಪೆನ್ ಡ್ರೈವ್ ಯಾವ ಪಕ್ಷಕ್ಕೆ ಸೇರಿದ್ದು ಎಂಬುದು ಬಹಿರಂಗವಾದ ಬಳಿಕ ಗೊತ್ತಾಗಲಿದೆ. ಅಲ್ಲಿಯವರೆಗೆ ಕಾದು ನೋಡಿ ಎಂದು ಲಕ್ಷ್ಮಣ್ ಸವದಿ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಪಶು ವೈದ್ಯಕೀಯ ಮಹಾವಿದ್ಯಾಲಯ ನಿರ್ಮಾಣಕ್ಕೆ ಬಿಜೆಪಿ ಸರಕಾರದಿಂದ ಅನುದಾನ ಬಿಡುಗಡೆ ಆಗಿತ್ತು. ಬಿಜೆಪಿ ಅನುದಾನದ ಪ್ರಚಾರ ಕಾಂಗ್ರೆಸ್ ಪಡೆದುಕೊಳ್ಳುತ್ತಿದೆ ಎನ್ನುವ ಮಾಜಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿಕೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದಿನ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿಯೇ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಅನುದಾನ ಬಿಡುಗಡೆ ಆಗಿದೆ. ಇಂತಹ ಸಾಮಾನ್ಯ ಜ್ಞಾನವೂ ಇಲ್ಲದೆ ಮಾತನಾಡುವುದು ಹಾಸ್ಯಾಸ್ಪದ. ಅನುಭವದ ಕೊರತೆಯಿಂದ ಮಹೇಶ್ ಕುಮಠಳ್ಳಿ ಹೇಳಿಕೆ ನೀಡುತ್ತಿದ್ದಾರೆ. ಈ ಹಿಂದೆಯೇ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಅನುದಾನ ಬಿಡುಗಡೆ ಆಗಿತ್ತು. ಈ ಸಂಗತಿ ಕುಮಟಳ್ಳಿಗೆ ಗೊತ್ತಿಲ್ಲ. ಇತಿಹಾಸ ತಿಳಿಯದವರಿಂದ ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಇನ್ನೂ ಯಾವುದೇ ಪಕ್ಷದ ಸರಕಾರ ಇರಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸ್ವತಃ ಸರಕಾರವೇ ಅನುದಾನ ಮಂಜೂರು ಮಾಡುತ್ತದೆ. ಅದು ಸಾರ್ವಜನಿಕರ ದುಡ್ಡು ಯಾವುದೇ ಖಾಸಗಿಯ ವ್ಯಕ್ತಿಯಿಂದ ಬಂದದ್ದಲ್ಲ. ನಾನು ಕೆಳಮಟ್ಟದ ರಾಜಕಾರಣ ಮಾಡುವ ವ್ಯಕ್ತಿಯಲ್ಲ ಎಂದು ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.
ರಾಜಕೀಯವಾಗಿ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. 2700 ಕೋಟಿ ರೂ.ಗಳ ಅನುದಾನದಲ್ಲಿ ಅಥಣಿ ಮತ ಕ್ಷೇತ್ರದ ವಿವಿಧ ಕಾಮಗಾರಿಗಳ ಉದ್ಘಾಟನೆ ಆಗುತ್ತಿದೆ. ಇದು ಬಿಜೆಪಿ ಕಾಲಾವಧಿಯಲ್ಲಿ ಮಂಜೂರಾದ ಅನುದಾನದಿಂದ ಎಂದು ದಾಖಲೆ ಸಮೇತ ಸಾಬೀತುಪಡಿಸಿದರೆ ನಾನು ರಾಜಕೀಯದಿಂದಲೇ ನಿವೃತ್ತಿ ಹೊಂದುತ್ತೇನೆ ಎಂದು ಮಹೇಶ್ ಕುಮಟಳ್ಳಿ ವಿರುದ್ದ ಕಿಡಿಕಾರಿದರು.












Click it and Unblock the Notifications