ಸ್ಪೀಕರ್ ಆಗುವ ಅರ್ಹತೆ ನನಗೆ ಇಲ್ಲ ಎಂದ ಆರ್‌ವಿ ದೇಶಪಾಂಡೆ
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಗೆದ್ದು ಕಾಂಗ್ರೆಸ್ ಬಹುಮತ ಗಳಿಸಿದರೆ, ಬಿಜೆಪಿ 66 ಮತ್ತು ಜೆಡಿಎಸ್ 19 ಸ್ಥಾನಗಳಿಗೆ ತೃಪ್ತಿಪಟ್ಟವು. ಕಾಂಗ್ರೆಸ್ ಪಕ್ಷ ಶನಿವಾರ, ಮೇ 13ರಂದು ಏಕಾಂಗಿಯಾಗಿ ಸರ್ಕಾರ ರಚಿಸಲು ಮುಂದಾಗಿದೆ.
ಇನ್ನು ಶನಿವಾರ, ಮೇ 20ರಂದು ಮಧ್ಯಾಹ್ನ 12.30ಕ್ಕೆ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ. ಶಿವಕುಮಾರ್ ಸೇರಿದಂತೆ 20ಕ್ಕೂ ಹೆಚ್ಚು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದಕ್ಕೂ ಮುನ್ನ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಸಚಿವ ಸಂಪುಟ ಸೇರುವವರ ಪಟ್ಟಿ ಹಿಡಿದು ಮತ್ತೆ ದೆಹಲಿಗೆ ತೆರಳಿದ್ದಾರೆ. ತಮ್ಮ ಬೆಂಬಲಿಗ ಶಾಸಕರಿಗೆ ಮಂತ್ರಿ ಸ್ಥಾನ ಪಡೆಯಲು ಮತ್ತೊಂದು ಸುತ್ತಿನ ಪೈಪೋಟಿ ನಡೆಸಲಿದ್ದಾರೆ.
ಸಚಿವ ಸಂಪುಟ ರಚನೆಯ ಕುರಿತು ಮಾತನಾಡಿರುವ ಕಾಂಗ್ರೆಸ್ ಹಿರಿಯ ಶಾಸಕ ಹಾಗೂ ಮಾಜಿ ಆರ್.ವಿ. ದೇಶಪಾಂಡೆ, "2023ರ ಹೊಸ ಕಾಂಗ್ರೆಸ್ ಸರ್ಕಾರದಲ್ಲಿ ನನಗೆ ಸ್ಪೀಕರ್ ಆಗುವ ಅರ್ಹತೆ ಇಲ್ಲವೆಂದು ಅನ್ನಿಸುತ್ತಿದೆ," ಎಂದು ಹೇಳಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿರುವ ಆರ್.ವಿ. ದೇಶಪಾಂಡೆ ಅವರು ತಾವು ಸ್ಪೀಕರ್ (ವಿಧಾನಸಭಾಧ್ಯಕ್ಷ) ಸ್ಥಾನಕ್ಕಿಂತ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವುದನ್ನು ಪರೋಕ್ಷವಾಗಿ ತಿಳಿಸಿದರು.

ಸಿಎಂ ಆಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸುವ ಜೊತೆಗೆ 25ರಿಂದ 28 ಶಾಸಕರು ಸಚಿವರಾಗಿ ಪ್ರಮಾಣ ವಚನ ತೆಗೆದುಕೊಳ್ಳಲಿದ್ದಾರೆ.
"ಸಚಿವ ಸಂಪುಟದಲ್ಲಿ ನಾನು ಇರಬೇಕೆ, ಬೇಡವೇ ಎಂಬ ಕುರಿತು ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ. ರಾಜ್ಯ ಸಚಿವ ಸಂಪುಟದಿಂದ ಹಿರಿಯರನ್ನು ಕೈ ಬಿಡುವ ಬಗ್ಗೆ ನನಗೆ ಮಾಹಿತಿ ಇಲ್ಲ," ಎಂದು ಆರ್.ವಿ. ದೇಶಪಾಂಡೆ ತಿಳಿಸಿದರು.
"ನಾನು ಈಗಾಗಲೇ ರಾಜ್ಯದಲ್ಲಿ 8 ಮುಖ್ಯಮಂತ್ರಿಗಳೊಂದಿಗೆ ಕೆಲಸ ಮಾಡಿದ್ದೇನೆ. ಈ ಬಾರಿ ಏನು ಮಾಡುತ್ತಾರೆ ಗೊತ್ತಿಲ್ಲ. ಎಲ್ಲವೂ ಸಿಎಂ ಹಾಗೂ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟ ವಿಚಾರ," ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ಸ್ಪೀಕರ್ ಆಗುವ ಅರ್ಹತೆ ನನಗಿಲ್ಲ. ಅದು ಬಹಳ ದೊಡ್ಡ ಹುದ್ದೆಯಾಗಿದ್ದು, ಸರ್ಕಾರದಲ್ಲಿ ಅತ್ಯಂತ ದೊಡ್ಡ ಜವಾಬ್ದಾರಿ ಹುದ್ದೆಯಾಗಿದೆ. ಈ ಬಗ್ಗೆ ಯಾರೂ ನನ್ನ ಬಳಖಿ ಚರ್ಚಿಸಿಲ್ಲ ಎಂದು ದೆಹಲಿಯಲ್ಲಿ ಆರ್.ವಿ. ದೇಶಪಾಂಡೆ ಮಾತನಾಡಿದರು.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಆಯ್ಕೆಯನ್ನು ಕಾಂಗ್ರೆಸ್‌ನ ಹಲವು ಶಾಸಕರು ಸ್ವಾಗತಿಸಿದ್ದಾರೆ. ಅದೇ ರೀತಿ ಇದೀಗ ನೂತನ ಸಂಪುಟ ಸೇರುವವರ ಪಟ್ಟಿಯೂ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಜಿಲ್ಲಾವಾರು, ಜಾತಿವಾರು ಸಮೀಕರಣವನ್ನು ಬಳಸಿ ಸಚಿವ ಸಂಪುಟ ರಚಿಸುವ ಸಾಧ್ಯತೆ ಇದೆ.
ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ್ದ ಕರ್ನಾಟಕ ಸಿಎಂ ಆಯ್ಕೆ
ಕಳೆದ ಶನಿವಾರ, ಮೇ 13ರಂದು ಚುನಾವಣಾ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವಿನ ಪೈಪೋಟಿ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತು. ಸಿಎಂ ಸ್ಥಾನಕ್ಕೆ ಉಭಯ ನಾಯಕರು ದೆಹಲಿಯಲ್ಲಿ ವರಿಷ್ಠರ ಮುಂದೆ ಪಟ್ಟು ಬಿಗಿಗೊಳಿಸಿದ್ದರು.
ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಹೆಣೆದ 30:30 ಫಾರ್ಮಲಾಗೆ ಉಭಯ ನಾಯಕರು ಒಪ್ಪಿಗೆ ಸೂಚಿಸಿದರು. ಮೊದಲ 30 ತಿಂಗಳು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿದ್ದರೆ, ಉಳಿದ ಭಾಗದಲ್ಲಿ ಡಿ.ಕೆ. ಶಿವಕುಮಾರ್ ಸಿಎಂ ಆಗಲಿದ್ದಾರೆ.












Click it and Unblock the Notifications