MLA Vinay Kulkarni: ಸಿ.ಪಿ.ಯೋಗೇಶ್ವರ, ಲಕ್ಷ್ಮಣ ಸವದಿ ಸಚಿವ ಸ್ಥಾನ? ನಾನು ಕೂಡ ಆಕಾಂಕ್ಷಿ ಎಂದ ವಿನಯ್ ಕುಲಕರ್ಣಿ
ಧಾರವಾಡ, ನವೆಂಬರ್ 30: ಸಚಿವ ಸ್ಥಾನಕ್ಕೆ ಸಿ.ಪಿ.ಯೋಗೇಶ್ವರ ಮತ್ತು ಲಕ್ಷ್ಮಣ ಸವದಿ ಅವರ ವಿಚಾರದಲ್ಲಿ ಹೈಕಮಾಂಡ ತೀರ್ಮಾನ ಮಾಡಲಿದೆ. ಆದರೆ ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇನ್ನು 15 ದಿನಗಳಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಸಚಿವ ಸಂಪುಟ ವಿಸ್ತರಣೆ ಶೀಘ್ರವೇ ನಡೆಯಲಿದ್ದು, ಈ ಕುರಿತು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಇನ್ನು ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು, ಈ ಕುರಿತು ಚರ್ಚಿಸಲು ಸಭಾಪತಿಗಳ ಬಳಿ ಸಮಯ ಕೇಳಿದ್ದೇವೆ. ಹೋರಾಟದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಬಿಜೆಪಿ ಸರ್ಕಾರ ಇದ್ದಾಗಲು ಕೂಡ ಸ್ವಾಮೀಜಿ ಹೋರಾಟ ಮಾಡಿದ್ದಾರೆ. ಸ್ವಾಮೀಜಿ ನ್ಯಾಯ ಸಿಗುವರೆಗೂ ಹೋರಾಟ ಮಾಡುತ್ತಾರೆ. ನಮ್ಮ ಸರ್ಕಾರ ಇದ್ದರು ನಾವು ಬೇಡ ಎಂದು ಹೇಳಲು ಆಗಲ್ಲ. ಅವರು ಇಡೀ ಪಂಚಮಸಾಲಿ ಸಮುದಾಯಕ್ಕೆ 2ಎ ಕೇಳುತ್ತಿದ್ದಾರೆ. ನಮ್ಮ ಸಮಾಜಕ್ಕೆ ಮೀಸಲಾತಿ ನೀಡಿ ಎಂಬುದು ನಮ್ಮ ಒತ್ತಾಯ ಇದೆ ಎಂದರು.
ಇದೇ ವೇಳೆ ಕೆಲ ಶಾಸಕರಿಗೆ ಮಂತ್ರಿ ಮಾಡುವ ಆಸೆ ತೋರಿಸಿ ಹೋರಾಟದಿಂದ ದೂರ ಮಾಡಿದ್ದಾರೆ ಎಂಬ ಸ್ವಾಮೀಜಿ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕ ವಿನಯ್, ನಾನು ಮಾತ್ರ ಹೋರಾಟಕ್ಕೆ ಹೋಗುವೆ. ನಾನು ಹುಟ್ಟ ಹೋರಾಟಗಾರನಿದ್ದೇನೆ. ಕೆಲವರು ಮಂತ್ರಿ ಆಸೆಯಿಂದ ಮಾತನಾಡುವ ಬಗ್ಗೆ ನನಗೆ ಗೊತ್ತಿಲ್ಲ. ಹೋರಾಟಕ್ಕೆ ಬರುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಪಂಚಮಸಾಲಿ ಹೋರಾಟವನ್ನು ಸರ್ಕಾರ ಹತ್ತಿಕ್ಕುತ್ತಿದೆ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದರು.
ಇನ್ನೂ ಇದೇ ವೇಳೆ ಕೆಪಿಸಿಸಿ ಅದ್ಯಕ್ಷ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು, ಮೂವರು ಆಕಾಂಕ್ಷಿಗಳಿದ್ದಾರೆ. ಇದು ಮಾಧ್ಯಮದ ಚರ್ಚೆಯಷ್ಟೇ, ಡಿಕೆ ಶಿವಕುಮಾರ್ ಅವರು ಸಚಿವರು ಇರುವ ಕಾರಣ ಕೆಲಸ ಮಾಡಲು ಕಷ್ಟವಾಗುತ್ತಿದೆ. ಹೀಗಾಗಿ ಅಧ್ಯಕ್ಷರ ಬದಲಾವಣೆಯಾಗುತ್ತಿದೆ. ನಾವು ಹೇಳಿದವರು ಅಧ್ಯಕ್ಷರಾಗಲ್ಲ, ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಹೇಳಿದರು.
ನನಗೆ ಸಚಿವ ಸ್ಥಾನ ಕೊಟ್ಟೇ ಕೊಡ್ತಾರೆ: ಪುಟ್ಟರಂಗಶೆಟ್ಟಿ
ಸಚಿವ ಸಂಪುಟ ಸೇರಲು ಹಲವು ಶಾಸಕರು ಹಾತೊರೆಯುತ್ತಿದ್ದು, ಈಗ ಶಾಸಕ ಪುಟ್ಟರಂಗಶೆಟ್ಟಿ ಕೂಡ ತಾನು ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮನಸ್ಸಿನಲ್ಲಿ ನಾನು ಇದ್ದೇನೆ, ಸಚಿವ ಸ್ಥಾನ ಕೊಟ್ಟೆ ಕೊಡ್ತಾರೆ ಎಂದು ಶಾಸಕ ಹಾಗೂ ಎಂಎಸ್ಐಎಲ್ ನಿಗಮದ ಅಧ್ಯಕ್ಷ ಪುಟ್ಟರಂಗಶೆಟ್ಟಿ ಹೇಳಿಕೆ ನೀಡಿದರು.
136 ಸೀಟು ಗೆದ್ದು ಸಂಪುಟ ರಚನೆ ವೇಳೆ ನನ್ನ ಹೆಸರಿತ್ತು. ನನಗೆ ಕಳೆದ ಬಾರಿಯೇ ಸಚಿವ ಸ್ಥಾನ ಕೊಡಬೇಕು ಅಂತಾ ತೀರ್ಮಾನವಾಗಿತ್ತು, ಕಾರಣಾಂತರದಿಂದ ಸಚಿವ ಸ್ಥಾನ ತಪ್ಪಿತ್ತು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ವರ್ಷ ಉಪ ಸಭಾಪತಿ ಆಗಲೂ ಹೇಳಿದ್ದರು. ನಾನು ಉಪ ಸಭಾಪತಿ ಸ್ಥಾನ ನಿರಾಕರಿಸಿದ್ದೆ, ಒಂದು ವರ್ಷ ಕಾಲ ಸುಮ್ಮನಿರಲೂ ಹೇಳಿದ್ದರು, ಈ ಬಾರಿ ಸಂಪುಟ ಪುನರ್ ರಚನೆ ಆದರೆ ಸಚಿವ ಸ್ಥಾನ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಾತಿವಾರು,ಜಿಲ್ಲಾವಾರು ನೋಡಿದರೂ ಕೂಡ ನಂಗೆ ಸಚಿವ ಸ್ಥಾನ ಕೊಡಬೇಕು, ನಾನು ಕೂಡ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ, ಮಲ್ಲಿಕಾರ್ಜುನ ಖರ್ಗೆ,ಡಿಕೆ ಶಿವಕುಮಾರ್, ಸಿಎಂ ಎಲ್ಲರ ಮೇಲೆ ನಂಬಿಕೆಯಿದೆ, ಈ ಬಾರಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಪುಟ್ಟರಂಗಶೆಟ್ಟಿ ಹೇಳಿದರು.












Click it and Unblock the Notifications