ನಿರುದ್ಯೋಗದ ನೆಪ ಹೇಳಿ ಜೀವನಾಂಶದಿಂದ ಪತಿ ತಪ್ಪಿಸಿಕೊಳ್ಳಲಾಗದು
ಬೆಂಗಳೂರು, ಜೂನ್ 05: ಇನ್ನು ಮುಂದೆ ನಿರುದ್ಯೋಗದ ನೆಪ ಹೇಳಿ ಯಾವುದೇ ಪತಿ, ತನ್ನ ಪರಿತ್ಯಕ್ತ ಪತ್ನಿಗೆ ಜೀವನಾಂಶ ಪಾವತಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಏಕೆಂದರೆ ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶದಂತೆ ದುಡಿಯುವ ಶಕ್ತಿ ಇರುವ ಪತಿ ಯಾವುದೇ ಕಾರಣಕ್ಕೂ ಪತ್ನಿಗೆ ನೀಡಬೇಕಾದ ಜೀವನಾಂಶದಿಂದ ತಪ್ಪಿಸಿಕೊಳ್ಳಲಾಗದು.
ಹೈಕೋರ್ಟ್, ಪತ್ನಿಗೆ ಮಾಸಿಕ 7 ಸಾವಿರ, ಅಪ್ರಾಪ್ತ ಮಗುವಿಗೆ 3 ಸಾವಿರ ಪಾವತಿಸುವಂತೆ ಸೂಚಿಸಿ ಕೌಟುಂಬಿಕ ನ್ಯಾಯಾಲ ನೀಡಿದ ಮಧ್ಯಂತರ ಆದೇಶವನ್ನು ಎತ್ತಿಹಿಡಿದಿದೆ. ಅಲ್ಲದೇ, ನಿರುದ್ಯೋಗ ನೆಪ ಹೇಳಿ ಪತಿ ತನ್ನ ವಿಚ್ಚೇದಿತ ಪತ್ನಿ ಹಾಗೂ ಮಗುವಿಗೆ ಜೀವನಾಂಶ ನೀಡುವ ಜವಾಬ್ದಾರಿಯಿಂದ ಹಿಂದೆ ಸರಿಯುವಂತಿಲ್ಲ ಎಂದು ಹೇಳಿದೆ.

ಪ್ರಕರಣ ಸಂಬಂಧ ಬೆಳಗಾವಿ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಗೊಳಿಸುವಂತೆ ಕೋರಿ ಪತಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮುಗ್ದಮ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ದಂಪತಿಗಳು ಪರಸ್ಪರ ಬೇರೆಯಾಗಿದ್ದಾರೆ. ಇದೀಗ ಪತಿ ತಾನು ಕೆಲಸ ಮಾಡುತ್ತಿಲ್ಲ ಎಂದು ಪತ್ನಿ ಹಾಗೂ ಅಪ್ರಾಪ್ತ ಮಗವಿಗೆ ಜೀವನಾಂಶ ನೀಡುವ ಜವಬ್ದಾರಿಯಿಂದ ಹಿಂಜರಿಯುವುದು ಒಪ್ಪುವಂತದ್ದಲ್ಲ ಎಂದು ಹೇಳಿದೆ.
ಅಲ್ಲದೆ, ಪ್ರಸ್ತುತ ಹಣದುಬ್ಬರದಿಂದಾಗಿ ನಾವೆಲ್ಲರೂ ತತ್ತರಿಸಿ ಜನಸಮೂಹ ತತ್ತರಿಸಿ ಹೋಗಿದೆ. ಇದೇ ಕಾರಣದಿಂದ ಖಚ್ಚು, ವೆಚ್ಚವೂ ಗಣನೀಯವಾಗಿ ಏರಿಕೆಯಾಗಿದೆ. ಹಾಗಾಗಿ ಜೀವನ ನಿರ್ವಹಣೆ ಸುಲಭ ಮಾತಲ್ಲ. ಬೆಳಗಾವಿ ನಗರದ ಜೀವನಶೈಲಿ ಅನ್ವಯ ಪತ್ನಿಗೆ 7 ಸಾವಿರ ಹಾಗೂ ಅಪ್ರಾಪ್ತ ಮಗುವಿಗೆ 3 ಸಾವಿರ ಪಾವತಿಸುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ ಮಧ್ಯಂತರ ಸೂಕ್ತವಾಗಿದೆ ಎಂದು ತಿಳಿಸಿದೆ.
ಪ್ರಕರಣದ ಹಿನ್ನೆಲೆ: ದಂಪತಿಗಳಿಬ್ಬರು ವಿಚ್ಚೇಧನ ಪಡೆದು ಬೇರೆ ಬೇರೆಯಾದ ನಂತರ ಅರ್ಜಿದಾರರು ಉದ್ಯೋಗ ಕಳೆದುಕೊಂಡಿದ್ದರು. ಆದರೂ ಸಹ ಅರ್ಜಿದಾರರ ಕುಟುಂಬಸ್ಥರು ವಾಣಿಜ್ಯ ಮಳಿಗೆ ಹೊಂದಿರುವುದನ್ನು ಗಮನಿಸಿದ ಬೆಳಗಾವಿ ಕೌಟುಂಬಿಕ ನ್ಯಾಯಾಲಯ ಅರ್ಜಿದಾರರಿಗೆ ಪತ್ನಿಗೆ 7 ಸಾವಿರ ಹಾಗೂ ಅಪ್ರಾಪ್ತ ಮಗುವಿಗೆ 3 ಸಾವಿರ ಮಾಸಿಕ ಜೀವನಾಂಶ ಪಾವತಿಸುವಂತೆ ಮಧ್ಯಂತರ ಆದೇಶ ಹೊರಡಿಸಿತ್ತು. ಅದನ್ನು ರದ್ದುಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದರು.
ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಕೆಲಸ ಕಳೆದುಕೊಂಡು ನಿರುದ್ಯೋಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಜೀವನಾಂಶ ಪಾವತಿಸುವ ಸ್ಥಿತಿಯಲ್ಲಿ ಇಲ್ಲ. ಹಾಗಾಗಿ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಗೊಳಿಸುವಂತೆ ನ್ಯಾಯಪೀಠವನ್ನು ಮನವಿ ಮಾಡಿದರು. ಆದರೆ ನ್ಯಾಯಾಲಯ ಆ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.












Click it and Unblock the Notifications