HSRP: ಈ ಕಾರಣಗಳಿಂದ ಹೆಚ್‌ಎಸ್‌ಆರ್‌ಪಿ ಗಡುವು ವಿಸ್ತರಣೆ?
ಬೆಂಗಳೂರು, ಮೇ 04: ಸಾರಿಗೆ ಇಲಾಖೆ ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಮೇ 31ರ ಗಡುವು ನೀಡಿದೆ. ಗಡುವು ಮುಗಿದ ಬಳಿಕ ನಂಬರ್ ಪ್ಲೇಟ್ ಇಲ್ಲದಿದ್ದರೆ ದಂಡ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದೆ. ಆದರೂ ಸಹ ಲಕ್ಷಾಂತರ ವಾಹನಗಳಿಗೆ ಇನ್ನೂ ನಂಬರ್ ಪ್ಲೇಟ್ ಅಳವಡಿಕೆ ಮಾಡಿಲ್ಲ.
ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ವಾಹನಗಳ ಮಾಲೀಕರು ಆನ್‌ಲೈನ್ ಮೂಲಕ ನೋಂದಣಿ ಮಾಡಬೇಕಿದೆ. ಸಾರಿಗೆ ಇಲಾಖೆಗೆ ಈ ಕುರಿತು ಸಾಕಷ್ಟು ಪ್ರಚಾರವನ್ನು ನೀಡುತ್ತಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ನೋಂದಣಿ ನಡೆಯುತ್ತಿಲ್ಲ.

ಕಳೆದ 8 ತಿಂಗಳಿನಲ್ಲಿ ರಾಜ್ಯದಲ್ಲಿ ಸುಮಾರು 35 ಲಕ್ಷ ವಾಹನಗಳಿಗೆ ಮಾತ್ರ ಹೆಚ್ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿದೆ. ಮೇ 31ರ ಅಂತಿಮ ಗಡುವು ನೀಡಿದ್ದರೂ ಸಹ ಸಾವಿರಾರು ಸರ್ಕಾರಿ ವಾಹನಗಳು ಸೇರಿದಂತೆ ಲಕ್ಷಾಂತರ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಕೆ ಬಾಕಿ ಇದೆ.
ಗಡುವು ವಿಸ್ತರಣೆ ನಿರೀಕ್ಷೆ?: ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ ಹೆಚ್ಚು ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿದೆ. ಸರ್ಕಾರ ಮತ್ತೆ ಗಡುವು ವಿಸ್ತರಣೆ ಮಾಡಲಿದೆ ಎಂಬ ಲೆಕ್ಕಾಚಾರದಲ್ಲಿ ಇನ್ನೂ ಹಲವು ಜನರು ಕಾಯುತ್ತಿದ್ದಾರೆ. ಆದರೆ ಸಾರಿಗೆ ಇಲಾಖೆ ಇನ್ನೂ ಗಡುವು ವಿಸ್ತರಣೆ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ.
ಸರ್ಕಾರದ ಮಟ್ಟದಲ್ಲಿ ಗಡುವು ವಿಸ್ತರಣೆ ಮಾಡುವ ತೀರ್ಮಾನ ಮಾಡಬೇಕಿದೆ. ಸದ್ಯ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಜೂನ್ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಜೂನ್ 6ರಂದು ನೀತಿ ಸಂಹಿತೆ ತೆರವುಗೊಂಡ ಬಳಿಕ ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಸರ್ಕಾರ ಗಡುವು ವಿಸ್ತರಣೆ ಮಾಡಬಹುದು ಎಂಬುದು ಲೆಕ್ಕಾಚಾರವಾಗಿದೆ.
ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಹೆಚ್‌ಎಸ್‌ಆರ್‌ಪಿ ನೋಂದಣಿ ಪ್ರಮಾಣ ಕಡಿಮೆ ಆಗಿತ್ತು. ಆದರೆ ಏಪ್ರಿಲ್ 26ರಂದು 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಮುಗಿದ ಬಳಿಕ ಹೆಚ್ಚಿನ ಜನರು ನೋಂದಣಿಗೆ ಆಸಕ್ತಿ ತೋರಿಸುತ್ತಿದ್ದಾರೆ. ಆದರೆ ಇನ್ನೂ ಸಾವಿರಾರು ವಾಹನಗಳು ಬಾಕಿ ಇದೆ. ಆದ್ದರಿಂದ ಗಡುವು ವಿಸ್ತರಣೆ ನಿರೀಕ್ಷೆ ಇದೆ.
ಹಳೆಯ ವಾಹನಗಳ ಕೆಲವು ಕಂಪನಿಗಳು ಮುಚ್ಚಿರುವುದು, ಡೀಲರ್‌ಗಳ ಕೊರತೆ, ತಾಲೂಕು, ಗ್ರಾಮೀಣ ಮಟ್ಟದಲ್ಲಿ ಹೆಚ್ಎಸ್ಆರ್‌ಪಿ ಬಗ್ಗೆ ಮಾಹಿತಿಯ ಕೊರತೆ ಇರುವ ಕಾರಣ ಜನರು ನೋಂದಣಿಯನ್ನು ಮಾಡಿಲ್ಲ. ಆದ್ದರಿಂದ ಸಾರಿಗೆ ಇಲಾಖೆ ಮತ್ತೆ ಗಡುವು ವಿಸ್ತರಣೆ ಮಾಡಿ, ವಾಹನ ಸವಾರರಿಗೆ ಅನುಕೂಲ ಮಾಡಿಕೊಡುವ ಸಾಧ್ಯತೆ ಇದೆ.
ವಾಹನ ಸವಾರರು ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ಅನ್ನು ಅಧಿಕೃತ ಕಂಪನಿಗಳಿಂದ ಪಡೆಬೇಕು. ಆದರೆ ಸುಮಾರು 10 ರಿಂದ 15 ಕಂಪನಿಗಳು ಈಗ ಭಾರತದಲ್ಲಿಯೇ ಇಲ್ಲ. ಇಂತಹ ವಾಹನಗಳ ಮಾಲೀಕರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ. ಅಲ್ಲಿಂದ ಉತ್ತರದ ನಿರೀಕ್ಷೆಯಲ್ಲಿದ್ದೇವೆ. ಇಂಥಹವರು ಮೇ 31ರೊಳಗೆ ನಂಬರ್ ಪ್ಲೇಟ್ ಅಳವಡಿಕೆ ಮಾಡುವುದು ಕಷ್ಟ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಮೇ ಅಂತ್ಯದ ತನಕ ಹೆಚ್‌ಎಸ್ಆರ್‌ಪಿ ನೋಂದಣಿ ನಿರೀಕ್ಷಿತ ಮಟ್ಟದಲ್ಲಿ ನಡೆಯದಿದ್ದರೆ ಸಾರಿಗೆ ಇಲಾಖೆ ತಾಲೂಕು ಮಟ್ಟದಲ್ಲಿ ವಿಶೇಷ ಅಭಿಯಾನಗಳನ್ನು ನಡೆಸುವ ಮೂಲಕ ನಂಬರ್ ಪ್ಲೇಟ್ ಬದಲಿಸುವ ಕಾರ್ಯಾಚರಣೆಯನ್ನು ಆರಂಭಿಸುವ ಚಿಂತನೆಯನ್ನು ಸಹ ನಡೆಸಲಾಗಿದೆ.











Click it and Unblock the Notifications