ಕರ್ನಾಟಕ ವಿಧಾನಸಭೆಯಲ್ಲಿ ಸಚಿವರ ಹಾಜರಾತಿ: ನಿರುತ್ಸಾಹ ತೋರಿಸಿದ ನಾಯಕರು- ದತ್ತಾಂಶ ತಿಳಿಯಿರಿ
ನಮ್ಮ ಜನ, ನಮ್ಮ ರಾಜ್ಯದ ಅಭಿವೃದ್ಧಿ, ರೈತರ ಪರ ಶ್ರಮ, ಸಬ್ ಕೆ ಸಾತ್ ಸಬ್ಕಾ ವಿಕಾಸ್ ಎನ್ನುವ ಪಕ್ಷಗಳ ಜನಪ್ರತಿನಿಧಿಗಳು ರಾಜ್ಯದ ಅಭಿವೃದ್ಧಿ ಕಾರ್ಯದಲ್ಲಿ ಎಷ್ಟು ಗಂಭೀರವಾಗಿದ್ದಾರೆ? ಈ ಪ್ರಶ್ನೆಗೆ ಎಡಿಆರ್ ಸಾರ್ವಜನಿಕಗೊಳಿಸಿದ ಮಾಹಿತಿ ಉತ್ತರ ನೀಡಿದೆ.
ಸಾಮಾನ್ಯವಾಗಿ ಜನರ ಸಮಸ್ಯೆಗಳನ್ನು ತಿಳಿಯಲು ಪರಸ್ಪರ ಚರ್ಚೆ ಮೂಲಕ ಪರಿಹಾರವನ್ನು ಕಂಡುಕೊಳ್ಳಲು ಅಧಿವೇಶನಗಳನ್ನ ನಡೆಸಲಾಗುತ್ತದೆ. ಈ ಮೂಲಕ ಜನರಿಗೆ ಜನನಾಯಕರು ಹತ್ತಿರವಾಗುತ್ತಾರೆ. ಜನರ ಸಮಸ್ಯೆಗಳನ್ನು ಆಕ್ಕಿಳಿದು ಯೋಚಿಸಿ ಅದಕ್ಕೆ ಸಮರ್ಥವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಧಿವೇಶನಗಳು ಸಹಾಯಕವಾಗಿವೆ. ಹೀಗಾಗಿ ರಾಜ್ಯದ ಅಭಿವೃದ್ಧಿಗೆ ಈ ಅಧಿವೇಶನಗಳು ಮುಖ್ಯ ಪಾತ್ರವನ್ನು ವಹಿಸುತ್ತವೆ.

ಆದರೆ ರಾಜ್ಯದಲ್ಲಿ ಕಳೆದ ಐದು ವರ್ಷದಲ್ಲಿ ನಡೆದ ಅಧಿವೇಶನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಚಿವರು, ಶಾಸಕರು, ಸಂಸದರು ಗೈರಾಗಿರುವುದು ಕಂಡು ಬಂದಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಾರ್ವಜನಿಕಗೊಳಿಸಿದ ಮಾಹಿತಿ ನಿಜಕ್ಕೂ ಮತದಾರರಿಗೆ ಅತ್ಯಂತ ಮಹತ್ವದ ಮಾಹಿತಿಯನ್ನು ನೀಡಿದೆ. ಬಿಜೆಪಿ ಸರ್ಕಾರದಲ್ಲಿ 25 ಸಚಿವರು ಸೇರಿದಂತೆ 44 ಶಾಸಕರು ಕಳೆದ ಐದು ವರ್ಷಗಳಲ್ಲಿ ನಡೆದ 150 ಅಧಿವೇಶನಗಳಲ್ಲಿ ಅರ್ಧದಷ್ಟು ಸಹ ಹಾಜರಾಗಿಲ್ಲ ಎಂದು ಎಡಿಆರ್ ವರದಿ ತೋರಿಸುತ್ತದೆ.
1.5 ವರ್ಷಗಳ ಕಾಂಗ್ರೆಸ್-ಜೆಡಿ(ಎಸ್) ಸಮ್ಮಿಶ್ರ ಸರ್ಕಾರ ಹಾಗೂ ಬಿಜೆಪಿ ಸರ್ಕಾರವನ್ನು ಒಳಗೊಂಡ ಐದು ವರ್ಷಗಳ ಆಡಳಿತದಲ್ಲಿ ಅಧಿವೇಶನಗಳಿಗೆ ಶಾಸಕರ ಹಾಜರಾತಿಗೆ ಸಂಬಂಧಿಸಿದಂತೆ ಆರ್‌ಟಿಐ ಮೂಲಕ ಮತ್ತು ಸಾರ್ವಜನಿಕ ಡೊಮೇನ್‌ನಿಂದ ಪಡೆದ ಡೇಟಾವನ್ನು ಎಡಿಆರ್ ಬಿಡುಗಡೆ ಮಾಡಿದೆ.

ಈ ವರದಿ ಪ್ರಕಾರ ಕಳೆದ ಐದು ವರ್ಷಗಳಲ್ಲಿ ನಡೆದ 150 ಅಧಿವೇಶನಗಳಲ್ಲಿ ಅರ್ಧದಷ್ಟು ಸಹ ಜನನಾಯಕರು ಹಾಜರಾಗಿಲ್ಲ. ಕೇವಲ 24% ರಷ್ಟು ಮಾತ್ರ ಕರ್ನಾಟಕ ಸಚಿವರು ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿ ತೋರಿಸುತ್ತದೆ. ಹಾಗಾದರೆ ಕಳೆದ ಐದು ವರ್ಷಗಳಲ್ಲಿ ಅಧಿವೇಶನಗಳಿಗೆ ಹೆಚ್ಚು ಗೈರಾದ ಜನಪ್ರತಿನಿಧಿಗಳು ಯಾರು? ಅದರ ಸಂಪೂರ್ಣ ವಿವರ ಇಲ್ಲಿದೆ.
ಅಧಿವೇಶನಗಳಿಗೆ ಹೆಚ್ಚು ಗೈರಾದ ಜನಪ್ರತಿನಿಧಿಗಳು
ವಿ ಸುನೀಲ್ ಕುಮಾರ್ (ಶೇ 3), ರಮೇಶ್ ಜಾರಕಿಹೊಳಿ (ಶೇ 7), ಡಾ ಕೆ ಸುಧಾಕರ್ (ಶೇ 10) ಅಧಿವೇಶನಗಳಿಗೆ ಹಾಜರಾತಿ ಹೊಂದಿದ ಮೊದಲ ಮೂರು ಶಾಸಕರು. ಆನಂದ್ ಸಿಂಗ್, ಬಿ ಸಿ ಪಾಟೀಲ್ ಮತ್ತು ನಾರಾಯಣಗೌಡ, ಬಿ ಎ ಬಸವರಾಜ್, ಪ್ರಭು ಚವ್ಹಾಣ್, ವಿಶ್ವೇಶ್ವರ ಹೆಗಡೆ ಕಾಗೇರಿ, ಡಾ ಅಶ್ವಥ್ ನಾರಾಯಣ್ ಸಿ ಎನ್, ಕೆ ಗೋಪಾಲಯ್ಯ, ಶಿವರಾಮ ಹೆಬ್ಬಾರ್ ಮತ್ತು ಎಸ್ ಟಿ ಸೋಮಶೇಖರ್ ಶೇ 19 ಕ್ಕಿಂತ ಕಡಿಮೆ ಹಾಜರಾತಿ ಹೊಂದಿದ್ದಾರೆ.

ಇನ್ನೂ 74 ಕಾಂಗ್ರೆಸ್ ಶಾಸಕರ ಪೈಕಿ ಒಂಬತ್ತು ಸದಸ್ಯರು ಕಳಪೆ ಹಾಜರಾತಿ ಹೊಂದಿದ್ದಾರೆ. ಅಜಯ್ ಸಿಂಗ್ (ಶೇ 21), ಶ್ರೀನಿವಾಸ್ ಮಾನೆ (ಶೇ 26) ಮತ್ತು ಜಿ ಪರಮೇಶ್ವರ (ಶೇ 28) ಮೊದಲ ಮೂರು ಕಳಪೆ ಪ್ರದರ್ಶನ ನೀಡಿದರೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶೇಕಡಾ 30 ರಷ್ಟು ಮಾತ್ರ ಅಧಿವೇಶನಗಳಿಗೆ ಹಾಜರಾಗಿದ್ದಾರೆ.
27 ಜೆಡಿಎಸ್ ಸದಸ್ಯರ ಪೈಕಿ ನಾಲ್ವರು ಕಳಪೆ ಹಾಜರಾತಿ ಹೊಂದಿದ್ದಾರೆ. ಎಂಸಿ ಮನಗೂಲಿ (ಶೇ 11), ಎಚ್ ಡಿ ಕುಮಾರಸ್ವಾಮಿ (ಶೇ 29) ಮತ್ತು ಅನಿತಾ ಕುಮಾರಸ್ವಾಮಿ (ಶೇ 45) ಅಧಿವೇಶನಗಳಿಗೆ ಹಾಜರಾತಿಯನ್ನು ಹೊಂದಿದ್ದಾರೆ.
'ಅಧಿವೇಶನಗಳಿಗೆ ಹಾಜರಾಗದಿರುವವರು ಸದನದಲ್ಲಿ ಇರಲು ಯೋಗ್ಯರಲ್ಲ'
ಎಡಿಆರ್ ರಾಜ್ಯ ಸಂಯೋಜಕಿ ಕಾತ್ಯಾಯಿನಿ ಚಾಮರಾಜ್ ಅವರು ಸಚಿವರ ಗೈರುಹಾಜರಿಯಿಂದ ಕಷ್ಟವಾಗುತ್ತಿದೆ. "ಸಭೆಯ ಕಾರ್ಯಚಟುವಟಿಕೆಗೆ ಎಲ್ಲಾ ಸದಸ್ಯರ ಹಾಜರಾತಿ ಮತ್ತು ಸಕ್ರಿಯ ಭಾಗವಹಿಸುವಿಕೆ ಪೂರ್ವಾಪೇಕ್ಷಿತವಾಗಿದೆ. ಆದರೆ ಮಂತ್ರಿಗಳ ಗೈರುಹಾಜರಿಯು ಕಳವಳವನ್ನುಂಟು ಮಾಡಿದೆ. ಇದು ಅಧಿಕಾರದಲ್ಲಿರುವ ಎಲ್ಲಾ ಪಕ್ಷಗಳಿಗೆ ಅನ್ವಯಿಸುತ್ತದೆ. ಏಕೆಂದರೆ ಮಂತ್ರಿಗಳು ಆ ಅಧಿಕಾರವನ್ನು ಹೊಂದಿದ್ದಾರೆ ಮತ್ತು ಅವರ ಕಾರ್ಯಗಳಿಗೆ ಉತ್ತರಿಸಬೇಕಾಗುತ್ತದೆ" ಎಂದು ಅವರು ಹೇಳಿದರು.
ಈ ಹಿಂದೆ ಎಡಿಆರ್‌ನ ಕೆಲಸವು ಚುನಾವಣಾ ಪ್ರಕ್ರಿಯೆಯಲ್ಲಿ ಸ್ವಲ್ಪ ಮಟ್ಟದ ಪಾರದರ್ಶಕತೆಯನ್ನು ತರಲು ಸಹಾಯ ಮಾಡಿದೆ ಎಂದು ಅವರು ಹೇಳಿದರು. ಅವರು ಶಾಸಕರ ಭಾಗವಹಿಸುವಿಕೆಯನ್ನು ಕಡ್ಡಾಯಗೊಳಿಸಲು ನ್ಯಾಯಾಲಯಗಳ ಮೊರೆ ಹೋಗಿದ್ದಾರೆ. "ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ನಿರೀಕ್ಷಿಸಲಾಗುವುದಿಲ್ಲ. ಅಧಿವೇಶನಗಳಿಗೆ ಹಾಜರಾಗದಿರುವವರು ಸದನದಲ್ಲಿ ಇರಲು ಯೋಗ್ಯರಲ್ಲ ಎಂದು ನಾವು ನ್ಯಾಯಾಲಯದ ಮಧ್ಯಸ್ಥಿಕೆಯನ್ನು ಕೋರುತ್ತೇವೆ" ಎಂದು ಅವರು ಹೇಳಿದರು.












Click it and Unblock the Notifications