ಸುಳ್ಳು ಮಾಹಿತಿ, ನಕಲಿ ಸುದ್ದಿಗಳಿಂದ ಧರ್ಮಸ್ಥಳದ ಪವಿತ್ರ ಪರಂಪರೆಗೆ ಧಕ್ಕೆ
ಕರ್ನಾಟಕದ ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಧರ್ಮಸ್ಥಳದ ಮಂಜುನಾಥೇಶ್ವರ ದೇಗುಲವು ತನ್ನದೇ ಆದ ಪವಿತ್ರ ಪರಂಪರೆಯನ್ನು ಹೊಂದಿದೆ. 800 ವರ್ಷಗಳಷ್ಟು ಹಳೆಯದಾದ ದೇಗುಲವು ನ್ಯಾಯ, ಸೇವೆ ಹಾಗೂ ದಾಸೋಹಕ್ಕೆ ಖ್ಯಾತಿ ಪಡೆದಿದೆ. ಇಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ್ದ ಪೌರ ಕಾರ್ಮಿಕನೊಬ್ಬ ಕಳೆದ ಜುಲೈ 3 ರಂದು ಪೊಲೀಸರಿಗೆ ದೂರು ನೀಡಿದ್ದು ವ್ಯಾಪಕ ಚರ್ಚೆಗೆ ನಾಂದಿ ಹಾಡಿತು.
ಆರು ಪುಟಗಳ ದೂರನ್ನು ಹೊಂದಿದ್ದ ವ್ಯಕ್ತಿಯು ದಕ್ಷಿಣ ಕನ್ನಡದ ಪೊಲೀಸ್ ವರಿಷ್ಠಾಧಿಕಾರಿ ಮುಂದೆ ಬಂದು ಕೆಲವು ಆರೋಪಗಳನ್ನು ಮಾಡಿರುವುದು ಆಘಾತಕಾರಿಯಾಗಿವೆ. 1995 ಮತ್ತು 2014 ರ ಅವಧಿಯಲ್ಲಿ ನೂರಾರು ಕೊಲೆಗಳು ಇಲ್ಲಿ ನಡೆದಿವೆ. ಅದರಲ್ಲಿ ಮಹಿಳೆಯರು, ಯುವತಿಯರಿದ್ದು, ಯಾರಿಗೂ ಗೊತ್ತಾಗದಂತೆ ಮುಚ್ಚಿಹಾಕಲು ತಿಳಿಸಲಾಯಿತು ಎಂದು ಆ ವ್ಯಕ್ತಿ ಆರೋಪಿಸಿದ್ದಾನೆ.

ಈತ ಹೇಳುತ್ತಿರುವುದು ಸೂಕ್ಷ್ಮಾತಿಸೂಕ್ಷ್ಮ ಸಂಗತಿಯಾಗಿದೆ. ಇದು ಇಂದಿನ ಸಾಮಾಜಿಕ ಮಾಧ್ಯಮದ ಯುಗದಲ್ಲಿ ವೇಗವಾಗಿ ಪ್ರಚಾರ ಪಡೆಯಿತು. ಧರ್ಮಸ್ಥಳ ಮೇಲಿನ ಆರೋಪ ಕುರಿತು ವಿಡಿಯೊಗಳು, ಪೋಸ್ಟ್‌ಗಳು ಮತ್ತು ಕಟ್ಟುಕತೆಗಳು ಹರಿದಾಡಿದವು.
ಆನ್‌ಲೈನ್‌ನಲ್ಲಿ ವ್ಯಕ್ತಿಯ ಆರೋಪಗಳನ್ನು ಬಿಚ್ಚಿಡಲಾಗಿತು. ಯೂಟ್ಯೂಬರ್‌ಗಳು ನಾಟಕೀಯ ಶೈಲಿಯಲ್ಲಿ ವ್ಯಕ್ತಿಯ ಆರೋಪಗಳನ್ನು ವಿಶ್ಲೇಷಿಸಿದರು. ಇತ್ತ ಕೆಲ ಪ್ರಭಾವಿಗಳು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಗಳನ್ನು ಮಾಡಿದರು. ಇನ್ನು ಕೆಲವು ಮಾಧ್ಯಮಗಳು ವಿಶೇಷ ತನಿಖಾ ತಂಡದ ರಚನೆಗೂ ಮೊದಲೇ ಧರ್ಮಸ್ಥಳ ಪ್ರಕರಣದ ವಿಚಾರದಲ್ಲಿ ನಿರ್ಣಯ ಹಂತಕ್ಕೆ ಬಂದು ಬಿಟ್ಟಿದ್ದನ್ನು ನಾವಿಲ್ಲಿ ಗಮನಿಸಬಹುದು.
ಇದೆಲ್ಲ ಬೆಳವಣಿಗೆ ನಡುವೆ ಸತ್ಯಾಂಶಗಳು ವಿಭಿನ್ನವಾದ ಕಥೆಯನ್ನೇ ಹೇಳ ಹೊರಟಿವೆ. ಎಂಟು ಶತಮಾನಗಳಷ್ಟು ಹಳೆಯದಾದ ಧರ್ಮಸ್ಥಳ ದೇವಸ್ಥಾನ ದಾನ, ಶಿಕ್ಷಣ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡು ಬಂದಿದೆ. ಇದೆಲ್ಲ ಪರಂಪರೆ ಅರಿತ ಅನೇಕ ಮುಖ್ಯವಾಹಿನಿಯ ಕನ್ನಡ ಸಂಪಾದಕರು ಮತ್ತು ವರದಿಗಾರರು ದೇವಾಲಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ದೇವಸ್ಥಾನ ಪರಂಪರೆ ಹಾಗೂ ಜನರ ಧಾರ್ಮಿಕ ಭಾವನೆಗೆ ಅಪಖ್ಯಾತಿಗೊಳಿಸದೇ ಪ್ರಕರಣ ಪರಿಶೀಲಿಸಿದ್ದಾರೆ. ಸಂಯಮದಿಂದ ನಡೆದುಕೊಳ್ಳುತ್ತಿದ್ದಾರೆ. ಯಾವುದೇ ವಿಡಿಯೋ, ಫೋಟೋ, ಹೇಳಿಕೆ ನಂಬದೇ ಎಸ್‌ಐಟಿ ತನಿಖೆಯನ್ನು ನಂಬಿದ್ದಾರೆ.
ಧಾರ್ಮಿಕ ಭಾವನೆಗೆ ಧಕ್ಕೆ ತರುವುದು ಒಬ್ಬ ವ್ಯಕ್ತಿಯ ಆರೋಪಕ್ಕಿಂತ ದೊಡ್ಡದಾಗಿದೆ. ಇದನ್ನು ಎಲ್ಲರು ಮನಗಾಣಬೇಕು. ಕೆಲವು ಕಾರ್ಯಕರ್ತರು, ಪತ್ರಕರ್ತರು, ರಾಜಕೀಯ ಪ್ರೇರಿತ ಗುಂಪುಗಳು ಸಾಮಾಜಿಕ ಜಾಲತಾಣಗಳಲ್ಲಿ ಪುರಾವೆಗಳಿಲ್ಲದೆ ಆರೋಪಗಳನ್ನು ಸೃಷ್ಟಿಸುತ್ತಿದ್ದಾರೆ.
ತನಿಖೆಗೂ ಮೊದಲೇ ಇಲ್ಲದ್ದನ್ನು ಹೇಳುವದರ ಬಗ್ಗೆ ನಾವೆಲ್ಲರು ಜಾಗೃತಿ ವಹಿಸಬೇಕಿದೆ. ಧರ್ಮಸ್ಥಳದ ಬಗ್ಗೆ ವಾಸ್ತವ ಸಂಗತಿಗೆ ಬದಲಾಗಿ ಕಪೋಲಕಲ್ಪಿತ, ಊಹೆಯ ಸಂಗತಿಗಳನ್ನು ಹೆಚ್ಚಾಗಿ ಪ್ರಚಾರ ಮಾಡಲಾಗುತ್ತಿದೆ. ದೇಗುಲಕ್ಕೆ ಸಂಬಂಧವೇ ಇಲ್ಲದೇ ಪ್ರಕರಣಗಳಲ್ಲಿ (ನ್ಯಾಯಾಲಯ ಖುಲಾಸೆ ಮಾಡಿದರೂ ಸಹಿತ) ದಶಕಗಳ ಹಿಂದಿನ ಘಟನೆಗಳನ್ನು ಕೆದಕಿ ಆರೋಪಿಸಲಾಗುತ್ತಿದೆ.
ಸರ್ಕಾರವೇ ರಚಿಸಿದ ಎಸ್‌ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿರುವ ಹೊತ್ತಿನಲ್ಲಿ ಕೆಲವರು ತಮ್ಮದೇ ಅದ ನಿರೂಪಣೆಯಲ್ಲಿ ತೊಡಗಿಕೊಂಡಿದ್ದಾರೆ. ಮತ್ತೊಂದೆಡೆ ಚಿಕ್ಕಮಗಳೂರು, ಕೊಪ್ಪಳ, ಯಾದಗಿರಿ, ಮೈಸೂರು, ಕಲಬುರಗಿ ಮುಂತಾದ ಪಟ್ಟಣಗಳಲ್ಲಿ ಸಾವಿರಾರು ಭಕ್ತರು, ವಿವಿಧ ಮುಖಂಡರು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ಧರ್ಮಸ್ಥಳ ಪಾವಿತ್ರ್ಯಗೆ ಧಕ್ಕೆ ತರುತ್ತಿರುವುದನ್ನು ಖಂಡಿಸಿದ್ದಾರೆ. ಹಿಂದೂ ದೇಗುಲವನ್ನು ಬೆಂಬಲಿಸಿ ಮೆರವಣಿಗೆ ನಡೆಸಿದ್ದಾರೆ. ಈ ಮೆರವಣಿಗೆಗಳಲ್ಲಿನ ಫಲಕಗಳು ಕೇವಲ ಹೋರಾಟಕ್ಕೆ ಸಿಮೀತವಾಗದೇ ದೇವವಸ್ಥಾನದ ಪರಂಪರೆ, ಜನರ ಧಾರ್ಮಿಕ ನಂಬಿಕೆ ಹೊತ್ತಿವೆ. ಜೊತೆಗೆ ವೈರಲ್ ಫೋಟೋ, ವಿಡಿಯೋ, ತಪ್ಪು ಮಾಹಿತಿ, ಕಥೆ ಹೇಳುತ್ತಿರುವವರನ್ನು ಖಂಡಿಸಿವೆ.
ಧರ್ಮಸ್ಥಳ ಕುರಿತ ಇಂದಿನ ಸಂಗತಿಗಳು, ಆರೋಪಗಳು ಸತ್ಯಕ್ಕೆ ಹೊರತಾಗಿವೆ. ಇದು ಧರ್ಮಸ್ಥಳವನ್ನು ಅಗ್ನಿಪರೀಕ್ಷೆ ನೂಕಿದಂತಿದೆ. ಆರೋಪಗಳು ಪಕ್ಷಪಾತವಾಗಿವೆ. ಅವು ಜನರ ನಂಬಿಕೆಗೆ ಹಾನಿ ಉಂಟು ಮಾಡುವಂತವುಗಳಾಗಿವೆ. ಶತಮಾನಗಳಿಂದ ಸಮಾಜದಲ್ಲಿ ಬದಲಾವಣೆ ತಂದ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತರುವ ಪ್ರಯತ್ನ ಇದಾಗಿದೆ. ಆದರೆ ಹೊರ ಬರುವ ಸತ್ಯ ಇದೆಲ್ಲ ಗೊಂದಲ, ಆರೋಪ, ಅನುಮಾನಗಳನ್ನು ಮೀರಿಸಲಿದೆ. ದೇವಾಲಯ, ಇಲ್ಲಿನ ಜನರು, ಧಾರ್ಮಿಕ ನಂಬಿಕೆಯನ್ನು ಸಮರ್ಥಿಸಿಕೊಳ್ಳುವ ನಿರ್ಣಯ ಹೊರಬರಲಿದೆ.












Click it and Unblock the Notifications