Lok sabha Election 2024: ಲೋಕಸಭೆ ಸೇರಿದಂತೆ ಸಾಲು ಸಾಲು ಚುನಾವಣೆಗೆ ದಳಪತಿಗಳು ಪ್ಲಾನ್; ತಯಾರಿ ಹೇಗಿದೆ ಗೊತ್ತಾ?
ಬೆಂಗಳೂರು, ಸೆಪ್ಟೆಂಬರ್ 07: ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಜೆಡಿಎಸ್ ಲೋಕಸಭಾ ಚುನಾವಣೆಗೆ ಕೆಲ ತಿಂಗಳು ಮಾತ್ರ ಬಾಕಿ ಉಳಿದಿದ್ದು, ಪಕ್ಷ ಸಂಘಟನೆ ಸೇರಿದಂತೆ ರಾಜ್ಯಾದ್ಯಂತ ಪ್ರವಾಸಕ್ಕೆ ದಳಪತಿಗಳು ಪ್ಲಾನ್ ಮಾಡಿದ್ದಾರೆ.
ಹೌದು, ಈ ಕುರಿತು ಬುಧವಾರ ಪಕ್ಷದ ಕಚೇರಿಯಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್ ಡಿ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಪ್ರಮುಖರ ಸಭೆ ನಡೆಸಿದ್ದು, ಸಭೆಯಲ್ಲಿ ರಾಜ್ಯದ ಜನರು ಎದುರಿಸುತ್ತಿರುವ ಸಮಸ್ಯೆಗಳು, ಸಂಘಟನೆ ಹಾಗೂ ಮುಂಬರುವ ಲೋಕಸಭೆ ಚುನಾವಣೆ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಿದ್ದಾರೆ.

ಇನ್ನೂ ಮುಂಬರುವ ಲೋಕಸಭೆ, ಬಿಬಿಎಂಪಿ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಿಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಇದೇ ತಿಂಗಳು 10 ರಂದು ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ ಜೆಡಿಎಸ್ ಪಕ್ಷದ ಬೃಹತ್ ಸಂಘಟನಾ ಸಮಾವೇಶದ ಬಗ್ಗೆ ಚರ್ಚೆ ನಡೆಸಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಸೋತೆವು ಎಂದು ಸುಮ್ಮನಿದ್ದರೆ ಆಗುವುದಿಲ್ಲ. ಛಲದಿಂದ ಕೆಲಸ ಮಾಡಿದರೆ ಜನರು ಮೆಚ್ಚಿಕೊಳ್ಳುತ್ತಾರೆ. ಎಲ್ಲರೂ ಸೇರಿ ಪಕ್ಷವನ್ನು ಕಟ್ಟೋಣ ಎಂದು ಮುಖಂಡರಿಗೆ ಹುರಿದುಂಬಿಸಿದರು.
ಹೆಚ್ ಡಿ ದೇವೇಗೌಡರು, ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಎಲ್ಲಾ ಶಾಸಕರು, ಜಿಲ್ಲಾ ಮುಖಂಡರು ಸಭೆ ಸೇರಿದ್ದೆವು. ಪಕ್ಷ ಸಂಘಟನೆ ಮಾಡಿ ರಾಜ್ಯದಲ್ಲಿ ಬಲಿಷ್ಠ ಪ್ರಾದೇಶಿಕ ಪಕ್ಷ ಕಟ್ಟಲು ನಿರ್ಧಾರ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೇ ಸೆಪ್ಟೆಂಬರ್ 10 ರಂದು ಪ್ರಮುಖ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಸಭೆ ಯಶಸ್ವಿ ಮಾಡುವ ಬಗ್ಗೆ ಹಿರಿಯ ನಾಯಕರು ಸೂಚನೆಗಳನ್ನು ನೀಡಿದರು. ನಂತರ ಜಿ ಟಿ ದೇವೇಗೌಡ ಅವರ ನೇತೃತ್ವದಲ್ಲಿ ಮಾಡಿರೋ ಕೋರ್ ಕಮಿಟಿ ರಾಜ್ಯ ಪ್ರವಾಸ ಮಾಡಬೇಕು. ಎಲ್ಲಾ 28 ಲೋಕಸಭಾ ಕ್ಷೇತ್ರಗಳಿಗೆ ತೆರಳಿ ಪ್ರಮುಖರ ಅಭಿಪ್ರಾಯ ಪಡೆಯಲಾಗುವುದು. ಕುಮಾರಸ್ವಾಮಿ ಅವರ ಆರೋಗ್ಯ ಸುಧಾರಿಸಿದೆ. ಮುಂದಿನ ತಿಂಗಳು ಅವರೂ ಪ್ರವಾಸದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೆ, ರಾಜ್ಯದಲ್ಲಿನ ರಾಜಕೀಯ ಬೆಳವಣಿಗಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು. ಎಲ್ಲ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲಾಯಿತು. ಜಿಲ್ಲಾವಾರು ಮುಖಂಡರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಂದರು ನಾಯಕರು ಮಾಹಿತಿ ನೀಡಿದರು. ಪಕ್ಷದ ಸುದೀರ್ಘ ಸಭೆಯಲ್ಲಿ ಪಾಲ್ಗೊಂಡ ಕುಮಾರಸ್ವಾಮಿ ಅವರು, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡಿ, ಮುಖಂಡರಿಗೆ ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದರು.
ಇನ್ನೂ ಪಕ್ಷ ಬಲಿಷ್ಟವಾಗಿದೆ. ಅದನ್ನು ದುರ್ಬಲಗೊಳಿಸುವ ದುಷ್ಪ್ರಯತ್ನಕ್ಕೆ ಅವಕಾಶ ನೀಡುವುದಿಲ್ಲ. ನಾನು ಬದುಕುವುದರ ಒಳಗಾಗಿ ಈ ಪಕ್ಷ ಅಧಿಕಾರಕ್ಕೆ ಬರುತ್ತದೆ. ಅದನ್ನು ನೋಡಿಯೇ ನೋಡುತ್ತೇನೆ. ಈ ಪ್ರಾದೇಶಿಕ ಪಕ್ಷವನ್ನು ಉಳಿಸಿಕೊಳ್ಳಲು ಅವಿರತವಾಗಿ ಹೋರಾಟ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಶಪಥ ಮಾಡಿದ್ದಾರೆ ಎನ್ನಲಾಗಿದೆ.
ಈ ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿ, ಜಿಟಿ ದೇವೇಗೌಡರು ಹಾಗೂ ಬಂಡೆಪ್ಪ ಕಾಷೆಂಪೂರ ಮತ್ತು ಟಿ.ಎ.ಶರವಣ ಅವರು, ಸಭೆಯಲ್ಲಿ ಕಾವೇರಿ ವಿಚಾರ ಕೂಡ ಚರ್ಚೆಯಾಯಿತು. ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಈಗಾಗಲೇ ಹೋರಾಟ ನಡೆಸಲಾಗಿದೆ. ಮಂಡ್ಯ ಜಿಲ್ಲೆಯ ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಹೋರಾಟದಲ್ಲಿ ಭಾಗಿಯಾಗಿದ್ದಾರೆ. ರಾಜ್ಯ ಮಟ್ಟಕ್ಕೆ ಈ ಹೋರಾಟವನ್ನು ವಿಸ್ತರಣೆ ಮಾಡಲಾಗುವುದು. ಈ ಸರಕಾರದಿಂದ ರಾಜ್ಯದ ಕಾವೇರಿ ಹಿತ ಕಾಯಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಈ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರು, ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣ, ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್, ಬಂಡೆಪ್ಪ ಕಾಶೆಂಪೂರ, ಮಾಜಿ ಸಂಸದ ಕುಪೆಂದ್ರ ರೆಡ್ಡಿ, ಹೆಚ್.ಕೆ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಎಲ್ಲಾ ಹಾಲಿ ಶಾಸಕರು, ಮಾಜಿ ಶಾಸಕರು, ಹಿರಿಯ ಮುಖಂಡರು ಹಾಗೂ ಜಿಲ್ಲಾ ಅಧ್ಯಕ್ಷರು ಹಾಜರಿದ್ದರು.












Click it and Unblock the Notifications