Santro Ravi Case : ಸಿಐಡಿಯಿಂದ ಸ್ಯಾಂಟ್ರೊ ರವಿ ಪ್ರಕರಣದ ತನಿಖೆಗೆ ಆಕ್ಷೇಪ!
ಬೆಂಗಳೂರು, ಜನವರಿ 16; ಸ್ಯಾಂಟ್ರೊ ರವಿ ವಿರುದ್ಧದ ಎಲ್ಲಾ ಪ್ರಕರಣಗಳ ತನಿಖೆಯನ್ನು ಕರ್ನಾಟಕ ಸರ್ಕಾರ ಸಿಐಡಿಗೆ ವರ್ಗಾವಣೆ ಮಾಡಿದೆ. ಮೈಸೂರಿನ ಕೋರ್ಟ್ ಜನವರಿ 25ರ ತನಕ ಸ್ಯಾಂಟ್ರೊ ರವಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.
ಸೋಮವಾರ ಡಿಜಿ & ಐಜಿಪಿ ಸ್ಯಾಂಟ್ರೊ ರವಿ ವಿರುದ್ಧದ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಆದೇಶ ಹೊರಡಿಸಿದ್ದಾರೆ. ಇಷ್ಟು ದಿನ ಪ್ರಕರಣದ ತನಿಖೆಯನ್ನು ಮೈಸೂರಿನ ವಿಜಯನಗರ ಠಾಣೆ ಪೊಲೀಸರು ನಡೆಸುತ್ತಿದ್ದರು.
ಸಿಐಡಿ ತನಿಖೆ ಬಗ್ಗೆ ಕೆ. ಆರ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿ ಪರ ವಕೀಲ ಹರೀಶ್ ಪ್ರಭು ಹೇಳಿಕೆ ನೀಡಿದ್ದಾರೆ, "ಸ್ಯಾಂಟ್ರೊ ರವಿ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಸಿಐಡಿಗೆ ವಹಿಸಲು ಸರ್ಕಾರ ನಿರ್ದೇಶನ ನೀಡಿದೆ. ಆದರೆ ಕೌಟುಂಬಿಕ ಕಲಹ ಪ್ರಕರಣವನ್ನು ಸಿಐಡಿ ತನಿಖೆ ಮಾಡುವ ಸಾಧ್ಯತೆ ಇಲ್ಲ" ಎಂದು ಹೇಳಿದ್ದಾರೆ.

"ಸಂತ್ರಸ್ತೆ ಹಾಗೂ ಆಕೆಯ ತಾಯಿ 10 ಲಕ್ಷ ರೂ. ಸಾಲ ಪಡೆದಿದ್ದರು. ಈ ಸಾಲದ ಹಣವನ್ನು ವಾಪಸ್ ನೀಡದೆ ಸುಳ್ಳು ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿದ ನಂತರವೂ ಪ್ರಕರಣ ವಾಪಸ್ ಪಡೆಯಲು ಮತ್ತೆ ಹಣದ ಬೇಡಿಕೆ ಇಟ್ಟಿದ್ದಾರೆ. ಇಲ್ಲವಾದರೆ ಜಾತಿ ನಿಂದನೆ ಪ್ರಕರಣ ಹಾಕುವುದಾಗಿ ಬೆದರಿಸಿದ್ದಾರೆ. ಈ ಬಗ್ಗೆ ಆರ್. ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ" ಎಂದರು.
ಹಣಕಾಸಿನ ವ್ಯವಹಾರದ ಬಗ್ಗೆ ಮಾತನಾಡಿದ ವಕೀಲರು, "ಹಣಕಾಸಿನ ವ್ಯಾಜ್ಯವನ್ನು ವಿಜೃಂಭಿಸಿ ಹೇಳಲಾಗಿದೆ. ಅದನ್ನು ಬೇರೆ ರೀತಿಯಾಗಿ ಬಿಂಬಿಸಲಾಗಿದೆ. ಸ್ಟೇಟಸ್ ಹಾಕಿಕೊಂಡಿರುವುದನ್ನೇ ದೊಡ್ಡ ತಪ್ಪು ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ" ಎಂದು ಹರೀಶ್ ಪ್ರಭು ತಿಳಿಸಿದ್ದಾರೆ.
ದಾಖಲೆಯನ್ನು ನೀಡಿಲ್ಲ; ಮೈಸೂರಿನ ವಿಜಯನಗರ ಠಾಣೆಯಲ್ಲಿ ಸ್ಯಾಂಟ್ರೊ ರವಿ ವಿರುದ್ಧ ಆತನ 2ನೇ ಪತ್ನಿ ದೂರು ನೀಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸ್ಯಾಂಟ್ರೊ ರವಿ ಬಂಧನವಾಗಿದೆ.
ವಕೀಲ ಹರೀಶ್ ಪ್ರಭು ಮಾತನಾಡಿ, "ದೂರು ನೀಡಿದ ಮಹಿಳೆ ಮಂಜುನಾಥ್ ಅವರನ್ನು ವಿವಾಹವಾಗಿಲ್ಲ. ವಿವಾಹವಾಗಿದ್ದರೆ ಇದುವರೆಗೂ ಯಾಕೆ ಸಾಕ್ಷ್ಯಾಧಾರ ಸಲ್ಲಿಕೆ ಮಾಡಿಲ್ಲ?" ಎಂದು ಪ್ರಶ್ನೆ ಮಾಡಿದರು.
"ಸ್ಯಾಂಟ್ರೊ ರವಿ ವಿರುದ್ಧದ ಎಲ್ಲಾ ಪ್ರಕರಣಗಳ ತನಿಖೆಯನ್ನು ಸಿಐಡಿ ನಡೆಸಲು ಸರ್ಕಾರ ನಿರ್ದೇಶಿಸಿದೆ. ಕೌಟುಂಬಿಕ ಕಲಹ ಪ್ರಕರಣವನ್ನು ಸಿಐಡಿ ತನಿಖೆ ನಡೆಸಲು ಸಾಧ್ಯವಿಲ್ಲ. ವರ್ಗಾವಣೆ ಸೇರಿದಂತೆ ಬೇರೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಹೀಗಾಗಿ ಯಾವ ಕಾರಣಕ್ಕೆ ಸಿಐಡಿಗೆ ವಹಿಸಲು ಮುಂದಾಗಿದ್ದಾರೆ ತಿಳಿದಿಲ್ಲ" ಎಂದರು.
ಅಭಿನಂದನೆ ಸಲ್ಲಿಸುತ್ತೇನೆ: ಸ್ಯಾಂಟ್ರೊ ರವಿ ವಿರುದ್ಧದ ಪ್ರಕರಣಗಳ ತನಿಖೆಯನ್ನು ಸಿಐಡಿಗೆ ವಹಿಸುವುದನ್ನು ಸ್ವಾಗತಿಸುತ್ತೇನೆ ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾರೆ. ನಾನು ನ್ಯಾಯ ಸಿಗುವ ತನಕ ಹೋರಾಟ ಮುಂದುವರೆಸುತ್ತೇನೆ. ಸ್ಯಾಂಟ್ರೊ ರವಿ ಜೊತೆ ವಿವಾಹವಾಗಿರುವುದಕ್ಕೆ ದಾಖಲೆಗಳಿವೆ, ವಿವಾಹ ಆಮಂತ್ರಣ ಪತ್ರದ ಜೊತೆ ಎಲ್ಲಾ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಸೋಮವಾರ ಮೈಸೂರಿನ ಕೋರ್ಟ್‌ನಲ್ಲಿ ಸ್ಯಾಂಟ್ರೊ ರವಿ ಪರ ವಕೀಲರು ಮಾತನಾಡಿ, 'ಸ್ಯಾಂಟ್ರೊ ರವಿ ಅವರಿಗೆ ಜೀವ ಭಯವಿದೆ. ಹಲವು ಪ್ರಕರಣದಲ್ಲಿ ಅವರನ್ನು ಸಿಕ್ಕಿ ಹಾಕಿಸುವ ಪ್ರಯತ್ನ ನಡೆಯುತ್ತಿದೆ. ನ್ಯಾಯಾಲಯ ಬಂಧನಕ್ಕೆ ಕಾರಣವಾದ ಐಪಿಸಿ 376, 498ಕ್ಕೆ ಸಂಬಂಧಿಸಿದಂತೆ ಮಾತ್ರ ವಾದವನ್ನು ಪರಿಗಣಿಸಬೇಕು. ಆರೋಪಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ, ನ್ಯಾಯಾಲಯ ಒಪ್ಪಿಗೆ ನೀಡಿದರೆ ಈಗಲೇ ಜಾಮೀನು ಅರ್ಜಿ ಸಲ್ಲಿಸುತ್ತೇನೆ" ಎಂದರು.












Click it and Unblock the Notifications