ಕರ್ನಾಟಕ ಪೊಲೀಸರಿಗೆ ಸಿಹಿಸುದ್ದಿ: ಗೃಹ ನಿರ್ಮಾಣ ಮುಂಗಡದ ಮೊತ್ತ ಹೆಚ್ಚಳ
ಬೆಂಗಳೂರು, ಸೆಪ್ಟೆಂಬರ್ 01: ಕರ್ನಾಟಕದ ಪೊಲೀಸ್ ಸಿಬ್ಬಂದಿಗೆ ಸಿಹಿಸುದ್ದಿಯೊಂದಿದೆ. 7ನೇ ವೇತನ ಆಯೋಗದ ವರದಿ ಅನ್ವಯ ವೇತನ, ಭತ್ಯೆ ಹೆಚ್ಚಳದ ಬಳಿಕ ಗೃಹ ನಿರ್ಮಾಣ ಮುಂಗಡದ ಮೊತ್ತವನ್ನು ಹೆಚ್ಚಿಸಿರುವ ಬಗ್ಗೆ ಆದೇಶವನ್ನು ಹೊರಡಿಸಲಾಗಿದೆ. ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಅವರ ಕಛೇರಿ, ಕರ್ನಾಟಕ ರಾಜ್ಯ, ಬೆಂಗಳೂರು ಈ ಕುರಿತು ಆದೇಶವನ್ನು ಹೊರಡಿಸಿದ್ದು, ವಿವರಣೆಯನ್ನು ಸಹ ನೀಡಿದೆ.
ಡಾ. ಎಂ. ಅಶ್ವಿನಿ, ಐ.ಪಿ.ಎಸ್. ಸಹಾಯಕ ಆರಕ್ಷಕ ಮಹಾ ನಿರೀಕ್ಷಕರು (ಕೇಂದ್ರಸ್ಥಾನ), ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೋಲೀಸ್ ಅವರ ಪರವಾಗಿ ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ. ಸರ್ಕಾರದ ನಡಾವಳಿ ಆದೇಶ ಸಂಖ್ಯೆ: ಆಇ 01 ಮುಕಮು 2023, ದಿನಾಂಕ 6/8/2024 ಉಲ್ಲೇಖ ಮಾಡಿದ್ದಾರೆ.

ಈ ಆದೇಶ ರಾಜ್ಯ ಸಿವಿಲ್ ಸೇವೆಯ ಅಧಿಕಾರಿ ಮತ್ತು ನೌಕರಿಗರ ಹಾಗೂ ಕರ್ನಾಟಕ ವೃಂದಕ್ಕೆ ಸೇರಿ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಖಿಲ ಭಾರತ ಸೇವಾ ಅಧಿಕಾರಿಗಳಿಗೆ ಗೃಹ ನಿರ್ಮಾಣ ಮುಂಗಡದ ಮೊತ್ತವನ್ನು ಹೆಚ್ಚಿಸಿರುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.
ಆದೇಶದ ವಿವರ : ಈ ವಿಷಯಕ್ಕೆ ಸಂಬಂಧಿಸಿದಂತೆ, ರಾಜ್ಯ ಸಿವಿಲ್ ಸೇವೆಯ ಅಧಿಕಾರಿ ಮತ್ತು ನೌಕರಿಗರ ಹಾಗೂ ಕರ್ನಾಟಕ ವೃಂದಕ್ಕೆ ಸೇರಿ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಖಿಲ ಭಾರತ ಸೇವಾ ಅಧಿಕಾರಿಗಳಿಗೆ ಗೃಹ ನಿರ್ಮಾಣ ಮುಂಗಡದ ಮೊತ್ತವನ್ನು ಉಲ್ಲೇಖಿತ ಸರ್ಕಾರದ ಆದೇಶದಲ್ಲಿ ಈ ಕೆಳಕಂಡಂತೆ ಹೆಚ್ಚಿಸಿ ಆದೇಶಿಸಿದೆ ಎಂದು ತಿಳಿಸಿದೆ.
* ರಾಜ್ಯ ಸಿವಿಲ್ ಸೇವೆಯ 'ಎ' ಗುಂಪಿನ ಅಧಿಕಾರಿಗಳಿಗೆ ಅವರು ಪಡೆಯುತ್ತಿರುವ 70 ತಿಂಗಳ (ಮೂಲ ವೇತನ + ತುಟ್ಟಿ ಭತ್ಯೆ) ಯನ್ನು ರೂ. 65 ಲಕ್ಷಗಳ ಮಿತಿಯೊಳಗೆ ಮತ್ತು ರಾಜ್ಯ ಸಿವಿಲ್ ಸೇವೆಯ ಇತರೆ ಅಧಿಕಾರಿಗಳು ಮತ್ತು ನೌಕರರಿಗೆ 70 ತಿಂಗಳ (ಮೂಲ ವೇತನ + ತುಟ್ಟಿ ಭತ್ಯೆ) ಯನ್ನು ಗರಿಷ್ಠ ರೂ. 40 ಲಕ್ಷಗಳ ಮಿತಿಯೊಳಗೆ ನಿಗದಿಪಡಿಸಿ ಆದೇಶಿಸಲಾಗಿದೆ.
* ಕರ್ನಾಟಕ ವೃಂದಕ್ಕೆ ಸೇರಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಖಿಲ ಭಾರತ ಸೇವೆ ಅಧಿಕಾರಿಗಳು ರಾಜ್ಯ ಸಿವಿಲ್ ಸೇವೆಯ 'ಎ' ಗುಂಪಿನ ಅಧಿಕಾರಿಗಳಂತೆ ಅವರ 70 ತಿಂಗಳ (ಮೂಲ ವೇತನ + ತುಟ್ಟಿ ಭತ್ಯೆ) ಯನ್ನು ಗರಿಷ್ಟ ರೂ. 65 ಲಕ್ಷಗಳ ಮಿತಿಗೊಳಪಟ್ಟು ಗೃಹ ನಿರ್ಮಾಣ/ ಗೃಹ ಖರೀದಿ ಮುಂಗಡದ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ.
* ಸದರಿ ಗೃಹ ನಿರ್ಮಾಣ/ ಗೃಹ ಖರೀದಿ ಮುಂಗಡಕ್ಕೆ ಸಂಬಂಧಿಸಿದಂತೆ ಷರತ್ತು ಮತ್ತು ನಿಬಂಧನೆಗಳು ಅನ್ವಯವಾಗುತ್ತವೆ. ಗೃಹ ನಿರ್ಮಾಣ/ ಗೃಹ ಖರೀದಿ ಮುಂಗಡದ ಮೇಲಿನ ಬಡ್ಡಿದರವನ್ನು ವಾರ್ಷಿಕ ಶೇ. 8.5 ಏಕರೂಪ ಬಡ್ಡಿದರಕ್ಕೆ ನಿಗದಿಪಡಿಸಿದೆ.
* ಸರ್ಕಾರಿ ಆದೇಶ ಸಂಖ್ಯೆ: ಆಇ 48 ಮಕಮು 1994, ದಿನಾಂಕ 21-10-1994ರಲ್ಲಿ ಗೃಹ ನಿರ್ಮಾಣ/ ಗೃಹ ಖರೀದಿ ಮುಂಗಡವನ್ನು ಮಂಜೂರು ಮಾಡಲು ಅನುಸರಿಸಲಾಗುತ್ತಿರುವ ಷರತ್ತು ಮತ್ತು ನಿಬಂಧನೆಗಳು ಮುಂದುವರೆದು ಅನ್ವಯಿಸುತ್ತವೆ.
* ಕರ್ನಾಟಕ ಆರ್ಥಿಕ ಸಂಹಿತೆ 1958ರಲ್ಲಿ ಗೃಹ ನಿರ್ಮಾಣ/ ಗೃಹ ಖರೀದಿ ಮುಂಗಡಕ್ಕೆ ಸಂಬಂಧಿಸಿದಂತೆ ಇರುವ ಎಲ್ಲಾ ಅನುಚ್ಛೇದಗಳು ಅನ್ವಯಿಸುತ್ತವೆ.
* ಈ ವಿಷಯದಲ್ಲಿ ಸರ್ಕಾರವು ಆಗಿಂದಾಗ್ಗೆ ಹೊರಡಿಸುವ ಸೂಚನೆಗಳು/ ತಿದ್ದುಪಡಿಗಳು ಅನ್ವಯಿಸುತ್ತವೆ.
* ರಾಜ್ಯ ಸಿವಿಲ್ ಸೇವೆಯ ಅಧಿಕಾರಿ/ ನೌಕರರುಗಳಿಗೆ ಹಾಗೂ ಅಖಿಲ ಭಾರತೀಯ ಸೇವಾ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಗೃಹ ನಿರ್ಮಾಣ/ ಖರೀದಿ ಮುಂಗಡವನ್ನು ರಾಜ್ಯದ ಆಯವ್ಯಯದಿಂದ ಬಿಡುಗಡೆ ಮಾಡುವ ಪದ್ಧತಿಯು ಮುಂದುವರೆಯುತ್ತದೆ.
* ಕರ್ನಾಟಕ ಆರ್ಥಿಕ ಸಂಹಿತೆಗೆ ಸೂಕ್ತ ತಿದ್ದುಪಡಿಯನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು ಎಂದು ಆದೇಶ ಹೇಳಿದೆ.












Click it and Unblock the Notifications