Hookah Bars: 'ಹೂಕ್ಕಾ ಬಾರ್' ನಿಷೇಧ ಮಸೂದೆ ಪರಿಚಯಿಸಿದ ಸರ್ಕಾರ
ಬೆಂಗಳೂರು, ಫೆಬ್ರವರಿ 21: ಕರ್ನಾಟಕ ರಾಜ್ಯ ಸರ್ಕಾರ ಕಳೆದ ವರ್ಷ ಘೋಷಿಸಿದಂತೆ ಇಂದಿನ ವಿಧಾನಸಭಾ ಅಧಿವೇಶನದಲ್ಲಿ 'ಹುಕ್ಕಾ ಬಾರ್'ಗಳನ್ನು ನಿಷೇಧಿಸುವ ಮಸೂದೆಯನ್ನು ಪರಿಚಯಿಸಿದೆ. ಈ ಮೂಲಕ ನಿಯಮ ಉಲ್ಲಂಘಿಸುವವರಿಗೆ ಕಠಿಣ ಕ್ರಮಗಳನ್ನು ಇದೇ ವೇಳೆ ವಿವರಿಸಿದೆ.
ಕರ್ನಾಟಕ ರಾಜ್ಯ ಸರ್ಕಾರವು ಮಂಗಳವಾರ ವಿಧಾನಸಭೆಯಲ್ಲಿ ಹುಕ್ಕಾ ಬಾರ್‌ಗಳನ್ನು ನಿಷೇಧಿಸುವ ಮಸೂದೆ ಮಂಡಿಸಿದೆ. ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳು (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ನಿಯಂತ್ರಣ, ಉತ್ಪಾದನೆ, ಸರಬರಾಜು ಮತ್ತು ವಿತರಣೆ) (ಕರ್ನಾಟಕ ತಿದ್ದುಪಡಿ) ಮಸೂದೆ 2003 ರ ಕೇಂದ್ರ ಕಾಯಿದೆಯನ್ನು ತಿದ್ದುಪಡಿ ಮಾಡಲಾಗಿದೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಮಸೂದೆ ಮಂಡಿಸಿದರು. ಹುಕ್ಕಾ ಬಾರ್ ಬ್ಯಾನ್ ಕುರಿತು ಕಾಯ್ದೆ ನಿಯಮ ಉಲ್ಲಂಘಿಸಿದರೆ ಒಂದರಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ ಎಂಬುದನ್ನು ಅವರು ಸದನಕ್ಕೆ ಮಾಹಿತಿ ನೀಡಿದರು.
ಶಿಕ್ಷೆ: ಗರಿಷ್ಠ 3 ವರ್ಷ ಜೈಲು 1 ಲಕ್ಷ ರೂ.ದಂಡ
ತಿದ್ದುಪಡಿ ಮಾಡಲಾದ ಕಾನೂನು ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆಯನ್ನು ಮತ್ತು 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದರ ಮೇಲೆ ನಿಷೇಧ ಹೇರುತ್ತದೆ. ಉಲ್ಲಂಘಿಸುವವರಿಗೆ ಶಿಕ್ಷೆ ವಿಧಿಸಬಹುದಾಗಿದೆ.
ಮಸೂದೆ ವ್ಯಾಪ್ತಿಯಲ್ಲಿ ವಿಭಾಗ 4A ಯ ನಿಬಂಧನೆಗಳನ್ನು ಉಲ್ಲಂಘಿಸುವವರಿಗೆ ಒಂದರಿಂದ ಮೂರು ವರ್ಷಗಳವರೆಗೆ ಶಿಕ್ಷೆ ಜತೆಗೆ ಒಂದು ಲಕ್ಷ ರೂ.ವರೆಗೆ ದಂಡ ವಿಧಿಸಬಹುದು. ಹುಕ್ಕಾ ಬಾರ್ ಬಳಕೆದಾರರಿಗೆ 1,000 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಹುಕ್ಕಾ ಬಾರ್- ಮಾಧಕ ವಸ್ತು ಮಾರಾಟ ನಿಷೇಧ
ಕರ್ನಾಟಕದಲ್ಲಿ ಹುಕ್ಕಾ ಬಾರ್‌ಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ. ಗೃಹ ಸಚಿವರು ಕಳೆದ ವರ್ಷ ಡಿಸೆಂಬರ್ 2023ರಲ್ಲಿ ರಾಜ್ಯದಲ್ಲಿ ಹುಕ್ಕಾ ಬಾರ್‌ಗಳನ್ನು ನಿಷೇಧಿಸುವ ನಿರ್ಧಾರ ಬಗ್ಗೆ ಘೋಷಿಸಿದ್ದರು. ಹುಕ್ಕಾ ಬಾರ್‌ಗಳು ಮತ್ತು ಇತರ ಮಾದಕ ವಸ್ತುಗಳ ಮಾರಾಟ ತಡೆಗೆ ಸರ್ಕಾರವು ಕಠಿಣ ಕ್ರಮ ಜರುಗಿಸಲಿದೆ ಎಂದು ಗೃಹ ಸಚಿವರು ಹೇಳಿದರು.
ಫೆಬ್ರವರಿ 7 ರಂದು ನಿಷೇಧ ಆದೇಶ
ಹೊಸ ಶಾಸನವು ಹುಕ್ಕಾ ಬಾರ್‌ಗಳನ್ನು ನಿಷೇಧಿಸುವ ಇತರ ರಾಜ್ಯಗಳ ಕಾನೂನುಗಳ ಸಾಲಿನಲ್ಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಸಮಾಲೋಚಿಸಿ ಕರಡು ಸಿದ್ಧಪಡಿಸಲಾಗಿದೆ. ಇದೇ ಫೆಬ್ರವರಿ 7 ರಂದು ಗೃಹ ಇಲಾಖೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಹುಕ್ಕಾ ಮಾರಾಟ ಮತ್ತು ಸೇವನೆ ನಿಷೇಧಿಸಿತ್ತು.
'ಹುಕ್ಕಾ ಬಾರ್ ಬೆಂಕಿಯ ಅಪಾಯಗಳಿಗೆ ಕಾರಣವಾಗಿದೆ ಮತ್ತು ರಾಜ್ಯದ ಅಗ್ನಿ ನಿಯಂತ್ರಣ ಮತ್ತು ಅಗ್ನಿ ಸುರಕ್ಷತೆ ಕಾನೂನುಗಳನ್ನು ಉಲ್ಲಂಘಿಸುತ್ತದೆ. ಹೋಟೆಲ್‌ಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಹುಕ್ಕಾ ಸೇವನೆಯು ಸಾರ್ವಜನಿಕ ಬಳಕೆಗೆ ಆಹಾರ ಪದಾರ್ಥಗಳನ್ನು ಅಸುರಕ್ಷಿತಗೊಳಿಸುತ್ತದೆ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
ಹುಕ್ಕಾ ತಂಬಾಕು ಅಥವಾ ನಿಕೋಟಿನ್-ಒಳಗೊಂಡಿರುವ, ನಿಕೋಟಿನ್-ಮುಕ್ತ, ತಂಬಾಕು-ಮುಕ್ತ, ಸುವಾಸನೆಯ, ಸುವಾಸನೆಯಿಲ್ಲದ ಹುಕ್ಕಾ ಮೊಲಾಸಸ್, ಶಿಶಾ ಮತ್ತು ಇತರ ರೀತಿಯ ಹೆಸರುಗಳು ಎಂದು ಕರೆಯಲ್ಪಡುವ ಹುಕ್ಕಾ ಉತ್ಪನ್ನಗಳ ಮಾರಾಟ, ಬಳಕೆ ಮತ್ತು ಜಾಹೀರಾತು ಮತ್ತು ಉತ್ಪಾದನೆ, ಸಂಗ್ರಹಣೆ, ವ್ಯಾಪಾರವನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.












Click it and Unblock the Notifications