Hookah Ban: ಹುಕ್ಕಾ ಪ್ರಿಯರಿಗೆ ಬಿಗ್ ಶಾಕ್: ರಾಜ್ಯದಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಹುಕ್ಕಾ ಮಾರಾಟ, ಬಳಕೆ ನಿಷೇಧ
ಬೆಂಗಳೂರು, ಫೆಬ್ರವರಿ 08: ಕರ್ನಾಟಕದಲ್ಲಿ ಎಲ್ಲಾ ಬಗೆಯ ಹುಕ್ಕಾ ಉತ್ಪನ್ನಗಳ ಮಾರಾಟ, ಬಳಕೆ, ಸ್ವಾಧೀನ ಮತ್ತು ಅವುಗಳ ಜಾಹೀರಾತಿನ ಮೇಲೆ ಬುಧವಾರದಿಂದ ಜಾರಿಗೆ ಬರುವಂತೆ ಆರೋಗ್ಯ ಇಲಾಖೆಯು ತಕ್ಷಣದ ನಿಷೇಧವನ್ನು ಹೊರಡಿಸಿದೆ.
ಕರ್ನಾಟಕ ಆರೋಗ್ಯ ಇಲಾಖೆಯು ಹುಕ್ಕಾ ಮಾರಾಟ ಮತ್ತು ಸೇವನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿ ಬುಧವಾರ ಅಧಿಸೂಚನೆ ಹೊರಡಿಸಿದೆ. 'ಸಾರ್ವಜನಿಕ ಆರೋಗ್ಯ'ವನ್ನು ರಕ್ಷಿಸುವ ದೃಷ್ಟಿಯಿಂದ, ರಾಜ್ಯ ಅಗ್ನಿ ನಿಯಂತ್ರಣ ಮತ್ತು ಅಗ್ನಿ ಸುರಕ್ಷತೆ ಕಾನೂನುಗಳ ಉಲ್ಲಂಘನೆಯನ್ನು ಉಲ್ಲೇಖಿಸಿ ಸರ್ಕಾರವು ಹುಕ್ಕಾ ಬಾರ್‌ಗಳಲ್ಲಿ ಹುಕ್ಕಾ ಮಾರಾಟವನ್ನು ನಿಷೇಧಿಸಿದೆ.

ಕಳೆದ ವರ್ಷ ಕೋರಮಂಗಲದ ಹುಕ್ಕಾ ಬಾರ್‌ನಲ್ಲಿ ಅಗ್ನಿಶಾಮಕ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸದ ಬೆಂಕಿ ಅವಘಡದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇನ್ನು, ಹುಕ್ಕಾ ಬಾರ್‌ಗಳು ಹರ್ಪಿಸ್, ಕ್ಷಯ, ಹೆಪಟೈಟಿಸ್ ಮತ್ತು ಕೋವಿಡ್ -19 ನಂತಹ ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಅಪಾಯ ಉಂಟುಮಾಡುತ್ತದೆ ಎಂದೂ ಉಲ್ಲೇಖಿಸಿದೆ.
ಸರ್ಕಾರವು ತನ್ನ ಆದೇಶದಲ್ಲಿ, "ಹುಕ್ಕಾ ಬಾರ್ ರಾಜ್ಯದಲ್ಲಿ ಅಗ್ನಿ ಅವಘಡವಗಳಿಗೆ ಕಾರಣವಾಗಿದೆ ಮತ್ತು ರಾಜ್ಯದ ಅಗ್ನಿ ನಿಯಂತ್ರಣ ಮತ್ತು ಅಗ್ನಿ ಸುರಕ್ಷತೆ ಕಾನೂನುಗಳನ್ನು ಉಲ್ಲಂಘಿಸುತ್ತವೆ. ಹೋಟೆಲ್‌ಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಹುಕ್ಕಾ ಸೇವನೆಯು ಆಹಾರ ಪದಾರ್ಥಗಳನ್ನು ಸಾರ್ವಜನಿಕ ಬಳಕೆಗೆ ಅಸುರಕ್ಷಿತವಾಗಿಸುತ್ತದೆ. ಇದು ಸಾರ್ವಜನಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು" ಎಂದಿದೆ.
ಎಲ್ಲಾ ರೀತಿಯ ಹುಕ್ಕಾ ಬ್ಯಾನ್
ಸಾಮಾನ್ಯವಾಗಿ, ಹುಕ್ಕಾ ತಂಬಾಕು ಅಥವಾ ನಿಕೋಟಿನ್ ಎಂದು ಕರೆಯಲ್ಪಡುವ ಹುಕ್ಕಾ ಉತ್ಪನ್ನಗಳ ಮಾರಾಟ, ಬಳಕೆ ಮತ್ತು ಜಾಹೀರಾತು - ನಿಕೋಟಿನ್ ಮುಕ್ತ ತಂಬಾಕು ಮುಕ್ತ, ಸುವಾಸನೆ, ಸುವಾಸನೆಯಿಲ್ಲದ ಹುಕ್ಕಾ ಮೊಲಾಸಸ್, ಶಿಶಾ ಮತ್ತು ಇತರ ರೀತಿಯ ಹೆಸರುಗಳು ಮತ್ತು ಅದರ ಉತ್ಪಾದನೆ, ಸಂಗ್ರಹಣೆ, ವ್ಯಾಪಾರ ರಾಜ್ಯದಲ್ಲಿ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ತಕ್ಷಣವೇ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ.

ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ COTPA (ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಕಾಯ್ದೆ) 2003, ಮಕ್ಕಳ ಆರೈಕೆ ಮತ್ತು ಸಂರಕ್ಷಣಾ ಕಾಯ್ದೆ 2015, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006, ಕರ್ನಾಟಕ ವಿಷ (ಸ್ವಾಧೀನ ಮತ್ತು ಮಾರಾಟ) ನಿಯಮಗಳು 2015 ಮತ್ತು ಭಾರತೀಯ ದಂಡ ಸಂಹಿತೆ ಮತ್ತು ಅಗ್ನಿ ನಿಯಂತ್ರಣ ಮತ್ತು ಅಗ್ನಿ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ರಾಜ್ಯ ಸರ್ಕಾರ ಆದೇಶಿಸಿದೆ.
ಹುಕ್ಕಾದಿಂದ ಸಾಂಕ್ರಾಮಿಕ ಕಾಯಿಲೆ ಹರಡುವಿಕೆ
ಹುಕ್ಕಾವನ್ನು ಮೊಹರು ಮಾಡಿದ ಕಂಟೇನರ್‌ನಲ್ಲಿ ನಳಿಕೆ ಅಥವಾ ಪೈಪ್ ಸಾಧನದ ಮೂಲಕ ಮೌಖಿಕವಾಗಿ ಸೇವಿಸಲಾಗುತ್ತದೆ. ಹುಕ್ಕಾ ಸೇವನೆಯಿಂದ ಹರ್ಪಿಸ್, ಕ್ಷಯ, ಹೆಪಟೈಟಿಸ್, ಕೋವಿಡ್ -19 ಮತ್ತು ಇತರ ಕಾಯಿಲೆಗಳಂತಹ ಸಾಂಕ್ರಾಮಿಕ ರೋಗಗಳು ಬಾಯಿಯ ಮೂಲಕ ಹರಡುತ್ತದೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.
45 ನಿಮಿಷಗಳ ಕಾಲ ಹುಕ್ಕಾ ಸೇದುವುದು 100 ಸಿಗರೇಟ್ ಸೇದುವುದಕ್ಕೆ ಸಮ ಮತ್ತು ಆರೋಗ್ಯಕ್ಕೆ ಹಾನಿಕಾರಕ ಎಂದು ಸರ್ಕಾರವು ಅಧ್ಯಯನಗಳನ್ನು ಉಲ್ಲೇಖಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಹುಕ್ಕಾ ಒಂದು ವ್ಯಸನಕಾರಿ ವಸ್ತುವಾಗಿದ್ದು, ಇದು ಹೆಚ್ಚಿನ ಪ್ರಮಾಣದ ನಿಕೋಟಿನ್ ಅಥವಾ ತಂಬಾಕು ಮತ್ತು ಮೊಲಾಸಸ್ ಅಥವಾ ರಾಸಾಯನಿಕ ಕಾರ್ಬನ್ ಮಾನಾಕ್ಸೈಡ್ ಅನ್ನು ಹೊಂದಿರುವ ಸುವಾಸನೆ ಪದಾರ್ಥಗಳನ್ನು ಒಳಗೊಂಡಿರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಅಪಾಯಕಾರಿಯಾಗಿದೆ.
ಹುಕ್ಕಾ ಬಾರ್ ನಿಷೇಧದ ಬಗ್ಗೆ ಸೂಚನೆ ನೀಡಿದ್ದ ಸಚಿವ ಜಿ ಪರಮೇಶ್ವರ
2023 ರಲ್ಲಿ ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ, ಕರ್ನಾಟಕದ ಗೃಹ ಸಚಿವ ಜಿ ಪರಮೇಶ್ವರ ಅವರು ರಾಜ್ಯದಲ್ಲಿ ಹುಕ್ಕಾ ಬಾರ್‌ಗಳನ್ನು ನಿಯಂತ್ರಿಸಲು ರಾಜ್ಯವು ಶೀಘ್ರದಲ್ಲೇ ಕಾನೂನನ್ನು ತರುವುದಾಗಿ ಘೋಷಿಸಿದ್ದರು. "ಹುಕ್ಕಾ ಬಾರ್‌ಗಳು ಮತ್ತು ಇತರ ಮಾದಕ ವಸ್ತುಗಳ ಮಾರಾಟವನ್ನು ತಡೆಯಲು ಸರ್ಕಾರವು ಕಠಿಣ ಕ್ರಮಗಳನ್ನು ಪ್ರಾರಂಭಿಸುತ್ತದೆ. ರಾಜ್ಯದಲ್ಲಿ ಹುಕ್ಕಾ ಬಾರ್‌ಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಿದೆ" ಎಂದು ಸಚಿವರು ಹೇಳಿದ್ದಾರೆ.
2023 ರಲ್ಲಿ ವಿಧಾನಸಭೆಯಲ್ಲಿ ಮಂಡಿಸಲಾದ ಮಾಹಿತಿಯ ಪ್ರಕಾರ, ಕಳೆದ ನಾಲ್ಕು ವರ್ಷಗಳಲ್ಲಿ 100 ಕ್ಕೂ ಹೆಚ್ಚು ಪ್ರಕರಣಗಳು ಹುಕ್ಕಾ ಬಾರ್‌ಗಳ ವಿರುದ್ಧ ದಾಖಲಾಗಿವೆ. 2020 ರಲ್ಲಿ 18 ಪ್ರಕರಣಗಳು, 2021 ರಲ್ಲಿ 25 ಪ್ರಕರಣಗಳು, 2022 ರಲ್ಲಿ 38 ಪ್ರಕರಣಗಳು ಮತ್ತು 2023 ರಲ್ಲಿ 25 ಪ್ರಕರಣಗಳು ದಾಖಲಾಗಿವೆ.












Click it and Unblock the Notifications