ಪ್ರೇಮಲತಾ, ದಿವಾಕರ್ ಶಾಸ್ತ್ರಿಗೆ ಜಾಮೀನು ಮಂಜೂರು
ಹೊನ್ನಾವರ, ಸೆ.16: ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಗಳು ನಡೆಸುವ 'ರಾಮಕಥಾ' ಕಾರ್ಯಕ್ರಮಕ್ಕೆ ತೆರಳಬಾರದು ಎಂದು ಕಲಾವಿದರಿಗೆ ಬೆದರಿಕೆ ಹಾಕಿರುವ ಪ್ರಕರಣದ ಆರೋಪಿಗಳಾದ ಗಾಯಕಿ ಪ್ರೇಮಲತಾ ದಿವಾಕರ್ ದಂಪತಿಗೆ ಜಾಮೀನು ಮಂಜೂರಾಗಿದೆ.
ಹೊನ್ನಾವರದ ಜೆಎಂಎಎಫ್ಸಿ ನ್ಯಾಯಾಲಯ ದಂಪತಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಿ ಮಂಗಳವಾರ ಷರತ್ತುಬದ್ಧ ಜಾಮೀನು ನೀಡಿದೆ.ಪ್ರತಿ ತಿಂಗಳ 2ನೇ ಶನಿವಾರ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕಬೇಕು. ತನಿಖಾಧಿಕಾರಿ ಕರೆದಾಗ ವಿಚಾರಣೆಗೆ ಹಾಜರಾಗಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ನಾಶ ಪಡಿಸಬಾರದು, ಜಾಮೀನು ಪಡೆಯಲು 10 ಸಾವಿರ ರು ವೈಯಕ್ತಿಕ ಬಾಂಡ್ ಸಲ್ಲಿಸಬೇಕು ಎಂದು ಷರತ್ತು ವಿಧಿಸಲಾಗಿದೆ.

ರಾಘವೇಶ್ವರ ಭಾರತೀ ಸ್ವಾಮಿಗಳ ರಾಮಕಥಾ ಮತ್ತು ಚಾತುರ್ಮಾಸ್ಯ ಕಾರ್ಯಕ್ರಮ ಹೊನ್ನಾವರ ತಾಲೂಕು ಕೆಕ್ಕಾರು ಮಠದಲ್ಲಿ ನಡೆದಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಗೀತಕಾರರಾದ ಡಾ. ಗಜಾನನ ಶರ್ಮಾ, ಗಾಯಕಿ ಶಂಕರಿ ಮೂರ್ತಿ ಬಾಳಿಲ ಮತ್ತು ಗಾಯಕಿ ದೀಪಿಕಾ ಅವರಿಗೆ ಆರೋಪಿಗಳು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿತ್ತು. [ಸಿಐಡಿ ತನಿಖೆ ಸ್ವಾಗತಿಸಿದ ಶ್ರೀಮಠ]
ದಿವಾಕರ ಶಾಸ್ತ್ರೀ, ಪೇಮಲತಾ ದಂಪತಿಗಳ ವಿರುದ್ಧ ಶ್ರೀಮಠದ ಕಾರ್ಯದರ್ಶಿ ಚಂದ್ರಶೇಖರ್ ಎಂಬುವವರು ಹೊನ್ನಾವರದ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ದಂಪತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ದಂಪತಿಗಳು ನ್ಯಾಯಾಂಗ ಬಂಧನ ಶಿಕ್ಷೆ ಅನುಭವಿಸುತ್ತಿದ್ದರು.
ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಗಳು ಬಂಧನ ಭೀತಿಯಿಂದ ತಾತ್ಕಾಲಿಕ ಮುಕ್ತಿ ಪಡೆದಿದ್ದಾರೆ. ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಬೆದರಿಕೆ ಪ್ರಕರಣದ ಆರೋಪ ಎದುರಿಸುತ್ತಿರುವ ರಾಘವೇಶ್ವರ ಭಾರತಿಗಳ ತನಿಖೆಗೆ ಹೈಕೋರ್ಟ್ ಮಂಗಳವಾರ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.[ರಾಘವೇಶ್ವರಶ್ರೀಗಳಿಗೆ ಸದ್ಯಕ್ಕೆ ಬಂಧನ ಭೀತಿ ಇಲ್ಲ]
ಚಾರ್ತುಮಾಸದ ಕೊನೆಯ ದಿನ ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಶ್ರೀಗಳು ತಮ್ಮ ಮೇಲೆ ಕೇಳಿ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಭಕ್ತರ ಎದುರು ಮನಬಿಚ್ಚಿ ಮಾತನಾಡಿದ್ದರು[ಪೂರ್ಣ ವಿವರ ಇಲ್ಲಿ ಓದಿ]












Click it and Unblock the Notifications