Honey trap: ಹನಿಟ್ರ್ಯಾಪ್ ಮಾಯಾಂಗನೆ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗ
ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿರುವ ಹನಿಟ್ರ್ಯಾಪ್ ವಿಚಾರದ ಬಗ್ಗೆ ದೇಶವ್ಯಾಪಿ ಚರ್ಚೆಯಾಗುತ್ತಿದೆ. ನಿನ್ನೆವರೆಗೆ ಗಾಳಿ ಸುದ್ದಿಯಾಗಿದ್ದ ಈ ವಿಚಾರವು ಬಳಿಕ ಖುದ್ದು ಕಾಂಗ್ರೆಸ್ ಸಚಿವ ಕೆ.ಎನ್.ರಾಜಣ್ಣ ಅವರ ಹೇಳಿಕೆ ಬಳಿಕ ಸಂಚಲನ ಸೃಷ್ಟಿಸಿದೆ. ನನ್ನ ಮೇಲೂ ಹನಿಟ್ರ್ಯಾಪ್ ಯತ್ನ ನಡೆದಿತ್ತು ಎನ್ನುವ ರಾಜಣ್ಣ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಇದಾದ ಬಳಿಕ ರಾಜ್ಯದೆಲ್ಲೆಡೆ ಇದೇ ವಿಚಾರದ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೀಗ ಹನಿಟ್ರ್ಯಾಪ್ ಆರೋಪ ಸಂಬಂಧ ಆ ಮಾಯಾಂಗನೆ ಬಗ್ಗೆಯೂ ಕೆಲ ಮಾಹಿತಿ ಹೊರಬರುತ್ತಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ..
ರಾಜ್ಯ ಸರ್ಕಾರದ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಅವರು ಗುರುವಾದ ಸದನದಲ್ಲೇ ಈ ವಿಚಾರ ಪ್ರಸ್ತಾಪಿಸಿದರು. ನನ್ನ ಮೇಲೆ ಎರಡು ಬಾರಿ ಹನಿಟ್ರ್ಯಾಪ್ ಯತ್ನ ನಡೆದಿತ್ತು ಎಂದು ಹೇಳಿಕೊಂಡರು. ಅಲ್ಲದೆ 48 ರಾಜಕೀಯ ನಾಯಕರ ಸಿ.ಡಿ, ಪೆನ್‌ಡ್ರೈವ್ ತಯಾರಾಗಿದೆ ಎಂದೂ ಅವರು ಸ್ಫೋಟಕ ಮಾಹಿತಿ ಬಿಚ್ಚಿಟ್ಟರು. ಆದರೆ ಈ ಬಗ್ಗೆ ಅವರು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಿಲ್ಲ. ಈ ವಿಚಾರ ಹೊರಬಂದ ಬಳಿಕ ಹನಿಟ್ರ್ಯಾಪ್ ನಡೆದಿದ್ದು ಹೇಗೆ? ಎಂಬ ಬಗ್ಗೆ ಹಲವು ಸಂಗತಿಗಳು ಸದ್ದು ಮಾಡುತ್ತಿವೆ.

ಸಚಿವ ಕೆ.ಎನ್.ರಾಜಣ್ಣ ಅವರಿಗೆ ಹನಿಟ್ರ್ಯಾಪ್ ಮಾಡಲು ಯತ್ನಿಸಿದ್ದ ಗ್ಯಾಂಗ್ ಹಾಗೂ ಆ ಮಾಯಾಂಗನೆ ಯಾರು ಎಂಬ ಕುರಿತು ಕೆಲ ವಿಚಾರಗಳು ಕೇಳಿಬರುತ್ತಿವೆ. ವರದಿಗಳ ಪ್ರಕಾರ ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿರುವ ಸಚಿವ ರಾಜಣ್ಣ ಅವರ ಸರ್ಕಾರಿ ಬಂಗಲೆಯಲ್ಲೇ ಈ ಹನಿಟ್ರ್ಯಾಪ್ ಯತ್ನ ನಡೆದಿತ್ತು ಎಂದು ಹೇಳಲಾಗುತ್ತಿದೆ. ಈ ಸರ್ಕಾರಿ ಬಂಗಲೆ ಹನಿಟ್ರ್ಯಾಪ್ ತಂಡದ ಚೆಲುವೆ ಎರಡು ಬಾರಿ ಭೇಟಿ ನೀಡಿದ್ದರು ಎಂದು ತಿಳಿದುಬಂದಿದೆ.
ಜಯಮಹಲ್ ರಸ್ತೆಯು ಸದಾ ಜನಸಂಚಾರವಿರುವ ಮುಖ್ಯರಸ್ತೆ. ಇಲ್ಲೇ ಅದೂ ಸಚಿವರ ಸರ್ಕಾರಿ ಬಂಗಲೆಯಲ್ಲೇ ಹನಿಟ್ರ್ಯಾಪ್‌ಗೆ ಬಲೆ ಬೀಸಲಾಗಿತ್ತು ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಆ ಮಾಯಾಂಗನೆ ಸತತ ಎರಡು ಬಾರಿ ಇಲ್ಲಿಗೆ ಭೇಟಿ ನೀಡಿದ್ದು, ಐಷಾರಾಮಿ ಕಾರಿನಲ್ಲಿ ಬಂದಿರುವುದಾಗಿ ಹೇಳಲಾಗುತ್ತಿದೆ. ಆಕೆಯೊಂದಿಗೆ ಒಂದು ತಂಡ ಕೂಡ ಜೊತೆಯಲ್ಲೇ ಬಂದಿತ್ತು ಎನ್ನಲಾಗಿದೆ. ಹನಿಟ್ರ್ಯಾಪ್ ಹುಡುಗಿ ಒಂದು ಗ್ಯಾಂಗ್ ಕಟ್ಟಿಕೊಂಡು ಜಯಮಹಲ್ ರಸ್ತೆಗೆ ಬಂದಿದ್ದು, ಜೊತೆಗೆ ಗ್ಯಾಂಗ್ ಕೂಡ ಇತ್ತು. ಆದರೆ, ಇವರ ಪ್ಲ್ಯಾನ್ ಸಕ್ಸಸ್ ಆಗಲಿಲ್ಲ ಎಂದು ತಿಳಿದುಬಂದಿದೆ.

ಇನ್ನು ಕೆಎನ್ ರಾಜಣ್ಣ ಅವರ ಸರ್ಕಾರಿ ಬಂಗಲೆಯಲ್ಲಿ ಸಿಸಿಟಿವಿ ಕ್ಯಾಮರಾಗಳು ಕೂಡ ಇದ್ದು, ಆ ಹನಿಟ್ರ್ಯಾಪ್ ಮಾಡಲು ಬಂದಿದ್ದ ಹುಡುಗಿ ಹಾಗೂ ಮತ್ತವರ ಗ್ಯಾಂಗ್ ಯಾರು ಎಂಬುದು ಬಹುಶಃ ಇದರಲ್ಲಿ ರೆಕಾರ್ಡ್ ಆಗಿರುವ ಸಾಧ್ಯತೆಯೂ ಇದೆ. ಹೀಗಾಗಿ ಅವರನ್ನು ಪತ್ತೆ ಹಚ್ಚುವುದು ಸುಲಭ ಎಂದು ಹೇಳಲಾಗುತ್ತಿದೆ. ಸಚಿವರಿಗೆ ಖೆಡ್ಡಾ ತೋಡಲು ಸಜ್ಜಾಗಿದ್ದ ಈ ಗ್ಯಾಂಗ್‌ನ ಹಿಂದೆ ಇರೋದು ಯಾರು ಎಂಬುದು ಕೂಡ ಬಯಲಿಗೆ ಬರಲಿದೆ.
ನನ್ನ ಮೇಲೂ ಹನಿಟ್ರ್ಯಾಪ್ ಪ್ರಯತ್ನ ಆಗಿತ್ತು. ಇದರ ಬಗ್ಗೆ ನಾನು ದೂರು ಕೊಡುತ್ತೇನೆ, ಗೃಹ ಸಚಿವರು ಇದರ ಬಗ್ಗೆ ತನಿಖೆ ನಡೆಸಿ ಎಂದು ರಾಜಣ್ಣ ಕೇಳಿಕೊಂಡಿದ್ದಾರೆ. ಕರ್ನಾಟಕ ರಾಜ್ಯವು ಇದೀಗ ಸಿಡಿ, ಪೆನ್‌ಡ್ರೈವ್ ಫ್ಯಾಕ್ಟರಿ ಆಗಿದೆ ಎಂದು ಜನ ಹೇಳ್ತಿದ್ದಾರೆ. ತುಮಕೂರಿನ ಪ್ರಭಾವಿ ಸಚಿವರು ಹನಿಟ್ರ್ಯಾಪ್‌ನಲ್ಲಿ ಸಿಲುಕಿಕೊಂಡಿದ್ದಾರೆ. ತುಮಕೂರು ಭಾಗದಲ್ಲಿ ಇರೋದು ನನ್ನ ಬಿಟ್ಟರೆ, ಗೃಹಸಚಿವರಾದ ಜಿ.ಪರಮೇಶ್ವರ್ ಮಾತ್ರ ಎಂದು ರಾಜಣ್ಣ ಹೇಳಿದ್ದಾರೆ.

ಪರಿಶಿಷ್ಟ ಸಮುದಾಯದ ಸಚಿವರೇ ಟಾರ್ಗೆಟ್: ಅಶೋಕ್
ಹನಿಟ್ರ್ಯಾಪ್ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ ಕೂಡ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಒಬ್ಬ ಹಾಲಿ ಸಚಿವರು ತಮ್ಮ ಮೇಲೆ ಎರೆಡೆರಡು ಬಾರಿ ಹನಿಟ್ರ್ಯಾಪ್ ಪ್ರಯತ್ನ ಆಗಿದೆ, ಅದಕ್ಕೆ ತಮ್ಮ ಬಳಿ ಪುರಾವೆಯೂ ಇದೆ ಎಂದು ಸ್ವತಃ ಅವರೇ ವಿಧಾನಸಭೆ ಕಲಾಪದಲ್ಲಿ ಬಹಿರಂಗವಾಗಿ ಒಪ್ಪಿಕೊಂಡು ತನಿಖೆಗೆ ಆಗ್ರಹ ಮಾಡಿರುವುದು ಅತ್ಯಂತ ಗಂಭೀರವಾದ ವಿಷಯ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪರಿಶಿಷ್ಟ ಸಮುದಾಯಕ್ಕೆ ಸೇರಿದ ಸರ್ಕಾರದ ಒಬ್ಬ ಹಿರಿಯ ಸಚಿವರು ಹಾಗೂ ಅವರ ಕುಟುಂಬ ಸದಸ್ಯರ ಮೇಲೆ ಹನಿಟ್ರ್ಯಾಪ್ ಪ್ರಯತ್ನ ಮಾಡುತ್ತಿರುವವರು ಯಾರು? ಈ ಹನಿಟ್ರ್ಯಾಪ್ ಹಿಂದಿರುವ ಉದ್ದೇಶವಾದರೂ ಏನು? ಹನಿಟ್ರ್ಯಾಪ್ ಬಗ್ಗೆ ಆರೋಪ ಮಾಡಿರುವ ಸಚಿವ ರಾಜಣ್ಣ ಅವರು, ಈ ಬಗ್ಗೆ ತನಿಖೆ ಆಗಬೇಕು ಎಂದು ಅವರ ಮನವಿಗೆ ದನಿಗೂಡಿಸಿರುವ ಸಚಿವ ಸತೀಶ್ ಜಾರಕಿಹೊಳಿ ಅವರು ಹಾಗೂ ಸಚಿವ ಮಹದೇವಪ್ಪನವರು, ಎಲ್ಲರೂ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಹಿರಿಯ ಸಚಿವರು. ಹಾಗಾದರೆ ಈ ಹನಿಟ್ರ್ಯಾಪ್ ಹಿಂದೆ ಪರಿಶಿಷ್ಟ ಸಮುದಾಯದ ಸಚಿವರನ್ನು ರಾಜಕೀಯವಾಗಿ ತುಳಿಯುವ, ತೇಜೋವಧೆ ಮಾಡುವ ಹುನ್ನಾರ ಅಡಗಿದೆಯೇ? ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಹನಿಟ್ರ್ಯಾಪ್ ಮೂಲಕ ಸರ್ಕಾರದ ಒಂದು ವಿಕೆಟ್ ಉರುಳಿಸುವುದು ಇದರ ಹಿಂದಿರುವ ಉದ್ದೇಶ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿಕೆಟ್ ಉರುಳಿಸಲು ಹತಾಶೆಯಿಂದ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿದಿರುವವರು ಯಾರು? ಅವರ ಇದರಿಂದ ಸಾಧಿಸಲು ಹೊರಟಿರುವುದಾದರೂ ಏನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಒಂದು ನಿಷ್ಪಕ್ಷಪಾತ, ಪಾರದರ್ಶಕ ತನಿಖೆಯ ಅಗತ್ಯ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.
ಅಭಿವೃದ್ಧಿಗೆ ದುಡ್ಡಿಲ್ಲದೆ ಈಗಾಗಲೇ ಮನಿಟ್ರ್ಯಾಪ್‌ನಲ್ಲಿ ಸಿಲುಕಿರುವ ಕಾಂಗ್ರೆಸ್ ಸರ್ಕಾರದಲ್ಲಿ ಈಗ ಹನಿಟ್ರ್ಯಾಪ್ ಸದ್ದು ಜೋರಾಗಿದೆ. ತಮ್ಮ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ ಎಂದು ಸದನದಲ್ಲಿ ಆರೋಪಿಸಿರುವ ಸಹಕಾರ ಸಚಿವ ಕೆಎನ್ ರಾಜಣ್ಣ ಅವರು ತನಿಖೆಗೆ ಆಗ್ರಹಿಸಿದ್ದಾರೆ. ರಾಜಣ್ಣನವರ ಆರೋಪಕ್ಕೆ ದನಿಗೂಡಿಸಿರುವ ಮತ್ತಿಬ್ಬರು ಹಿರಿಯ ಸಚಿವರಾದ ಜಾರಕಿಹೊಳಿ ಹಾಗೂ ಎಚ್‌ಸಿ ಮಹದೇವಪ್ಪ ಅವರು ಸಹ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಇದಕ್ಕೆ ಸ್ಪಂದಿಸಿರುವ ಗೃಹ ಸಚಿವ ಪರಮೇಶ್ವರ್ ಅವರು ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಆದರೆ, ಕನ್ನಡಿಗರಿಗೆ ಕಾಡುತ್ತಿರುವ ಯಕ್ಷ ಪ್ರಶ್ನೆ ಏನಪ್ಪಾ ಅಂದ್ರೆ, ಹನಿಟ್ರ್ಯಾಪ್ ಜಾಲದ ಬಗ್ಗೆ ಬಹಿರಂಗವಾಗಿ ದನಿ ಎತ್ತಿರುವ ಸಚಿವರೆಲ್ಲರೂ ಸಿಎಂ ಸಿದ್ದರಾಮಯ್ಯ ಅವರ ಬಣದಲ್ಲಿ ಗುರಿತಿಸಿಕೊಂಡಿರುವವರು ಎನ್ನುವುದು ಕಾಕತಾಳೀಯವೋ ಅಥವಾ ಇದರ ಹಿಂದೆ ರಾಜಕೀಯ ಷಡ್ಯಂತ್ರವೇನಾದರೂ ಇದೆಯೋ? ಕಾಲವೇ ಎಲ್ಲದಕ್ಕೂ ಉತ್ತರಿಸಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications