ಪ್ರತಿ ಟನ್ ಕಬ್ಬಿಗೆ ₹3,300: 07 ಗಂಟೆಯ ಸಭೆಯಲ್ಲಿ ಐತಿಹಾಸಿಕ ನಿರ್ಧಾರ: ಎಂಬಿ ಪಾಟೀಲ್ ಹೇಳಿದ್ದೇನು?
ಬೆಂಗಳೂರು, ನವೆಂಬರ್ 08: ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರದ ದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಸತತ 7 ಗಂಟೆಗಳ ಕಾಲ ನಡೆದ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತರ ಪ್ರತಿನಿಧಿಗಳ ಸಭೆಯಲ್ಲಿ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ ಸಚಿವ ಎಂಬಿ ಪಾಟೀಲ್ ಅವರು ಹೇಳಿದರು.
ಕರ್ನಾಟಕ ರಾಜ್ಯದಲ್ಲಿ ಕಬ್ಬು ಬೆಳೆಗಾರರು ಕೆಲವು ದಿನಗಳಿಂದ ನ್ಯಾಯ ಸಮ್ಮತ ಬೆಲೆಗೆ ಆಗ್ರಹಿಸಿ ಹೋರಾಟ ತೀವ್ರಗೊಳಿಸಿದ್ದರು. ಬೆಳಗಾವಿ ಹಾಗೂ ಇನ್ನಿತರ ಕಡೆಗಳಲ್ಲಿ ರೈತರ ಪ್ರತಿಭಟನೆ ಮತ್ತೊಂದು ಹಂತಕ್ಕೆ ತಲುಪಿತ್ತು. ಇದೀಗ ಸರ್ಕಾರ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಬೆಳಗಾವಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ 11.25 ಇಳುವರಿ ಬರುವ ಪ್ರತಿ ಟನ್ ಕಬ್ಬಿಗೆ ₹3,200 ಕೊಡುವ ನಿರ್ಧಾರಕ್ಕೆ ಕಾರ್ಖಾನೆ ಮಾಲೀಕರು ಒಪ್ಪಿಗೆ ಸೂಚಿಸಿದ್ದರು. ಪ್ರತಿ ಟನ್ ಕಬ್ಬಿಗೆ ₹3,300- ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳು ತಲಾ ₹50 ಸೇರಿಸಿ ನೀಡಲಿದ್ದಾರೆ. ಎಲ್ಲ ಜಿಲ್ಲೆಗಳ ಇಳುವರಿಗೆ ರೂ.100 ಹೆಚ್ಚಳ ಅನ್ವಯವಾಗಲಿದೆ ಎಂದು ಹೇಳುವ ಮೂಲಕ ರೈತರಿಗೆ ಖುಷಿ ಸುದ್ದಿ ಶುಕ್ರವಾರ ನೀಡಿದರು.
ರೈತರ ಮತ್ತು ಕಾರ್ಖಾನೆಗಳ ನಡುವೆ ಸಮತೋಲನ ಸಾಧಿಸಬೇಕು. ಕೇಂದ್ರ ಸರ್ಕಾರದ ಅಸಮರ್ಪಕ ಎಫ್ಆರ್‌ಪಿ ವಿರುದ್ಧ ಒಗ್ಗಟ್ಟಿನ ಧ್ವನಿ ಎತ್ತಲು ನಿರ್ಧಾರ ಕೈಗೊಳ್ಳಲಾಗಿದೆ. ನಾಡಿನ ರೈತರ ಹಿತಾಸಕ್ತಿಯೇ ನಮ್ಮ ಸರ್ಕಾರದ ಆದ್ಯತೆ ಎಂದು ತಿಳಿಸಿದರು.
ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವ ಸಂಬಂಧ ನಡೆದ ಏಳು ಗಂಟೆಗಳ ನಿರಂತರ ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಲಾಯಿತು. ನಾವು ನಾಡಿನ ರೈತರ ಹಿತವನ್ನೇ ಮುಖ್ಯವಾಗಿಸಿಕೊಂಡು ದೃಢ ನಿರ್ಧಾರಕ್ಕೆ ಬಂದಿದ್ದೇವೆ. ಪ್ರತಿ ಟನ್ ಕಬ್ಬಿಗೆ ₹3,300 ಕೊಡಲು ನಿರ್ಧರಿಸಿದ್ದೇವೆ. ಸರ್ಕಾರ ಮತ್ತು ಕಾರ್ಖಾನೆ ಮಾಲೀಕರು ತಲಾ ₹50 ಸೇರಿಸಿ ರೈತರಿಗೆ ಟನ್ ಗೆ ₹3,300 ಕೊಡಲಾಗುವುದು ಎಂದು ಘೋಷಿಸಿದರು.
ರಾಜ್ಯದಲ್ಲಿ 81 ಸಕ್ಕರೆ ಕಾರ್ಖಾನೆಗಳಿವೆ. ಇವುಗಳಲ್ಲಿ 11 ಸಹಕಾರಿ ಕಾರ್ಖಾನೆಗಳು, ಒಂದು ಕಾರ್ಖಾನೆ ಮಾತ್ರ ಸರ್ಕಾರಿ ಸೌಮ್ಯದ್ದು. ಉಳಿದವೆಲ್ಲಾ ಖಾಸಗಿ ಸಕ್ಕರೆ ಕಾರ್ಖಾನೆಗಳಾಗಿವೆ. ಅಕ್ಟೋಬರ್ 30ರಿಂದ ಬೆಳಗಾವಿ ರೈತರು ಕೇಂದ್ರ ಸರ್ಕಾರದ ಎಫ್ಆರ್‌ಪಿ ದರ ವಿರೋಧಿಸಿ ಇನ್ನೂ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಪ್ರತಿಭಟನಾ ನಿರತ ರೈತ ಮುಖಂಡರ ಜೊತೆಗೆ ಬೆಳಗಾವಿ ಜಿಲ್ಲಾಧಿಕಾರಿಗಳು ಮಾತುಕತೆ ನಡೆಸಿದ್ದರು. ಆದರೆ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಸಚಿವರನ್ನು ಮಾತುಕತೆಗೆ ಕಳುಹಿಸಿದ್ದೆ.
10.25 ಇಳುವರಿ ಇರುವ ಕಬ್ಬಿಗೆ 3,100 ರೂ, 11.25 ಇಳುವರಿ ಕಬ್ಬಿಗೆ 3,200 ರೂ. ಕೊಡುವುದಾಗಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಭಟನಾ ರೈತರು ಒಪ್ಪಿಲ್ಲ. ಕಾನೂನು ಸಚಿವರಾದ ಹೆಚ್.ಕೆ.ಪಾಟೀಲ್, ಸಕ್ಕರೆ ಸಚಿವರಾದ ಶಿವಾನಂದ ಪಾಟೀಲರು ಮಾತುಕತೆ ನಡೆಸಿದರೂ ರೈತರು ಒಪ್ಪಿಲ್ಲ. ಬಳಿಕ ಕ್ಯಾಬಿನೆಟ್ ನಲ್ಲಿ ಚರ್ಚಿಸಿ, "ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರ ಜೊತೆ ಚರ್ಚೆ ನಡೆಸುವ ಜೊತೆಗೆ ಸಮಸ್ಯೆ ಸೃಷ್ಟಿಸಿರುವ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಗಿತ್ತು.
ಕ್ಯಾಬಿನೆಟ್ ತೀರ್ಮಾನದಂತೆ ಇಂದು ಬೆಳಗ್ಗೆಯಿಂದ ಸತತ 7 ಗಂಟೆ ಕಾಲ ಸಭೆ ನಡೆಸಿದ್ದೇವೆ. ಈ ವೇಳೆ ಕಾರ್ಖಾನೆ ಮಾಲೀಕರು ಮತ್ತು ರೈತರು ತಮ್ಮ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಕೇಂದ್ರದಿಂದ ಆಗುತ್ತಿರುವ ತೊಂದರೆ ಬಗ್ಗೆ ಚರ್ಚಿಸಲು ಕೇಂದ್ರಕ್ಕೆ ನಿಯೋಗ ಹೋಗಲು ತೀರ್ಮಾನಿಸಿದ್ದೇವೆ. ಇದಕ್ಕೆ ಮಾಲೀಕರುಗಳೂ ಒಪ್ಪಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.












Click it and Unblock the Notifications