Raichur Idol: ಗಡಿಯಲ್ಲಿ ಪತ್ತೆಯಾದ ವಿಗ್ರಹಗಳು ಶ್ರೀರಾಮನಿಗೆ ಹೋಲಿಕೆ: ತೆಲಂಗಾಣ ಖ್ಯಾತೆ?
ಬೆಂಗಳೂರು, ಫೆಬ್ರವರಿ 07: ಕರ್ನಾಟಕದ ರಾಯಚೂರು ಜಿಲ್ಲೆಯ ಕೃಷ್ಣಾ ನದಿಯಿಂದ ಪುರಾತನವಾದ ವಿಷ್ಣುವಿನ ವಿಗ್ರಹ ಮತ್ತು ಶಿವಲಿಂಗವು ಪತ್ತೆ ಆಗಿದ್ದು, ಸಂಬಂಧಿಸಿ ಇಲಾಖೆಯು ದೊರೆತ ವಿಗ್ರಹಗಳನ್ನು ಪತ್ತೆ ಮಾಡಿ ಸಂಶೋಧನೆ ಆರಂಭಿಸಿವೆ ಎಂದು ತಿಳಿದು ಬಂದಿದೆ.
ಕಲ್ಯಾಣ ಕರ್ನಾಟಕ ಜಿಲ್ಲೆಯಾದ ರಾಯಚೂರು-ತೆಲಂಗಾಣ ಗಡಿಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆಯೊಂದನ್ನು ನಿರ್ಮಿಸಲಾಗುತ್ತಿದೆ. ಈ ಸೇತುವೆ ಕಾಮಗಾರಿ ವೇಳೆ ಕೃಷ್ಣಾ ನದಿಯಲ್ಲಿ ದೇವರ ವಿಗ್ರಹಗಳು ಪತ್ತೆ ಆಗಿವೆ. ಶ್ರೀಕೃಷ್ಣನ ದಶಾವತಾರದ (ವಿಷ್ಣು) ವಿಗ್ರಹ ಹಾಗೂ ಶಿವನ ಲಿಂಗ ಪತ್ತೆ ಆಗಿದೆ. ಈ ವಿಗ್ರಹಗಳು ಅಂತಾರಾಜ್ಯ ಮಟ್ಟದಲ್ಲಿ ವಿವಾದದ ಕಿಡಿ ಹೊತ್ತಿಸಲಿದೆ ಎಂಬ ಅನುಮಾನ ಕಾಡುತ್ತಿದೆ.

ರಾಯಚೂರು ಜಿಲ್ಲೆಯ ದೇವಸೂಗೂರು ಗ್ರಾಮದ ಬಳಿ ನದಿಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ವೇಳೆ ಶತಮಾನಗಳಷ್ಟು ಹಳೆಯದಾದ ಹಿಂದೂ ದೇವರ ವಿಗ್ರಹಗಳು ಪತ್ತೆ ಆಗಿವೆ. ಸಿಬ್ಬಂದಿ ನದಿಯಿಂದ ವಿಗ್ರಹಗಳನ್ನು ಸುರಕ್ಷಿತವಾಗಿ ಹೊರತೆಗೆದು ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಲಾಗಿದೆ.
ರಾಜ್ಯದ ವಿರುದ್ಧ ತೆಲಂಗಾಣ ಖ್ಯಾತೆ?
ಈ ವಿಗ್ರಹಗಳು ನಮ್ಮವೆಂದು ಕರ್ನಾಟಕ ಹೇಳುತ್ತಿದ್ದರೆ, ಅತ್ತ ತೆಲಂಗಾಣ ರಾಜ್ಯ ತಮ್ಮವೆಂದು ಖ್ಯಾತೆ ತೆಗೆಯುವ ಸಾಧ್ಯತೆಗಳು ಇವೆ. ಈಗಾಗಲೇ ಈ ಕುರಿತು ಮಾತುಗಳು ಆ ರಾಜ್ಯದಲ್ಲಿ ಕೇಳಿ ಬರುತ್ತಿವೆ. ಅಧಿಕಾರಿಗಳ ಜಟಾಪಟಿಯಲ್ಲಿ ವಿಗ್ರಹ ರಕ್ಷಣೆಗೆ ಮುಂದಾಗಿಲ್ಲ ಎಂಬ ಆರೋಪಗಳನ್ನು ಅಧಿಕಾರಿಗಳು ಎದುರಿಸುತ್ತಿದ್ದಾರೆ.

ಸೇತುವೆ ನಿರ್ಮಾಣದ ಸ್ಥಳದಲ್ಲಿ ಈ ವಿಗ್ರಹಗಳು ಪತ್ತೆ ಆಗುತ್ತಿದ್ದಂತೆ ಸ್ಥಳೀಯರು ದೌಡಾಯಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಜನಜಂಗುಳಿ ಕಂಡು ಬಂದಿದೆ. ಸಿಕ್ಕ ವಿಗ್ರಹಗಳ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹೆಚ್ಚು ಹೆಚ್ಚು ಶೇರ್‌ಗಳು ಆಗುತ್ತಿವೆ.
ಅಯೋಧ್ಯೆ ಶ್ರಿರಾಮ ಮಂದಿರಕ್ಕೆ ಹೋಲಿಕೆ
ವಿಗ್ರಹ ಪತ್ತೆ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ವಿಗ್ರಹಗಳಲ್ಲಿ ಶ್ರೀಕೃಷ್ಣನ ದಶಾವತಾರ ಮತ್ತು ಶಿವಲಿಂಗ ವಿಗ್ರಹಗಳು ಇವೆ. ಉತ್ತರ ಪ್ರದೇಶದ ಶ್ರೀ ಅಯೋಧ್ಯೆಯ ರಾಮಮಂದಿರದಲ್ಲಿ ಇತ್ತೀಚೆಗೆ ಪ್ರತಿಷ್ಠಾಪಿಸಲಾದ ರಾಮಲಲ್ಲಾ ವಿಗ್ರಹದೊಂದಿಗೆ ಪತ್ತೆಯಾದ ವಿಗ್ರಹಗಳನ್ನು ಹೋಲಿಕೆ ಮಾಡುತ್ತಿದ್ದಾರೆ.
ಶತಮಾನಗಳಷ್ಟು ಹಳೇಯದಾದ ಈ ವಿಗ್ರಹವು ಹಲವಾರು ವಿಶಿಷ್ಟ ಲಕ್ಷಣಗಳನ್ನು ಹೊಂದಿರುವಂತೆ ಕಂಡು ಬರುತ್ತಿವೆ. ಸುತ್ತಲೂ ವಿಕಿರಣ ಸೆಳವು ಹೊಂದಿರುವ ಪೀಠದ ಮೇಲೆ ರಚಿಸಲಾಗಿದೆ. ಈ ಶಿಲ್ಪವು ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ರಾಮ, ಕೃಷ್ಣ, ಬುದ್ಧ ಮತ್ತು ಕಲ್ಕಿ ಸೇರಿದಂತೆ ವಿಷ್ಣುವಿನ ಹತ್ತು ಅವತಾರಗಳನ್ನು ಪ್ರತಿನಿಧಿಸುತ್ತದೆ. ಈ ಬಗ್ಗೆ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ ಉಪನ್ಯಾಸಕಿ ಡಾ ಪದ್ಮಜಾ ದೇಸಾಯಿ ಅವರು ಮಾಹಿತಿ ನೀಡಿದ್ದಾರೆ.
ವಿಗ್ರಹದ ನಿಂತಿರುವ ಭಂಗಿಯು ಆಗಮಗಳಲ್ಲಿ ಸೂಚಿಸಲಾದ ಮಾರ್ಗಸೂಚಿಗಳಿಗೆ ಸಂಕೀರ್ಣವಾಗಿದ್ದು, ಸುಂದರವಾಗಿ ರಚಿಸಲಾಗಿದೆ. ಹಿಂದೂ ದೇವಾಲಯಗಳ ವ್ಯಾಜ್ಯ ಪ್ರಕರಣಗಳಲ್ಲಿ ಹಿಂದುಗಳಿಗೆ ನಿರಂತವಾಗಿ ಜಯವಾಗುತ್ತಿದೆ. ಇದೀಗ ಈ ವಿಗ್ರಹಗಳು ಪತ್ತೆ ಸನಾತನ ಧರ್ಮ, ಹಿಂದುತ್ವ ಸಂಕೇತವಾಗಿವೆ ಎಂದು ಕೆಲವು ಹೇಳುತ್ತಿದ್ದಾರೆ.
ವಿಗ್ರಹಗಳು ಪತ್ತೆಯಾಗುತ್ತಿದ್ದಂತೆ ಸೇತುವೆ ನಿರ್ಮಾಣ ಸ್ಥಳದಲ್ಲಿ ಜನ ಸಾಗರ ಹರಿದು ಬರುತ್ತಿದೆ. ಮೂರ್ತಿಗಳಿಗೆ ಜನ ಕೈಮುಗಿದು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.












Click it and Unblock the Notifications