ಹಿಂದೂ ಕಾರ್ಯಕರ್ತರಿಗೆ ಜೀವ ಬೆದರಿಕೆ! ಪ್ರಭಾವಿಗಳ 'ಕೈ'ವಾಡ ಶಂಕಿಸಿದ ವಿಜಯೇಂದ್ರ
ಬೆಂಗಳೂರು, ಮೇ 05: ಮಂಗಳೂರಿನ ಬಜಪೆಯಲ್ಲಿ ಇತ್ತೀಚೆಗೆ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಬೆನ್ನಲ್ಲೆ ಕೆಲವು ಹಿಂದು ಕಾರ್ಯಕರ್ತರಿಗೆ ಜೀವ ಬೆದರಿಕೆ ಹಾಕಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿ ಬೆದರಿಕೆಗಳು ನಡೆದಿವೆ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಕಿಡಿ ಕಾರಿದ್ದಾರೆ. ರಾಜ್ಯದ ಕರಾವಳಿ ಪ್ರದೇಶದಲ್ಲಿ ಹಿಂದೂಗಳಿಗೆ ಆತಂಕ, ದುಗುಡ ತಪ್ಪುತ್ತಿಲ್ಲ ಎಂದು ಅವರು ವಿಷಾಧಿಸಿದ್ದಾರೆ.
ಮಂಗಳೂರಿನ ನಮ್ಮ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕಗ್ಗೊಲೆಯ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯನ್ನು ದಿಗ್ಭ್ರಮೆಗೊಳಿಸಿದೆ ಎಂದು ಸೋಮವಾರ ಟ್ವಿಟ್ ಮಾಡಿದ್ದಾರೆ. ರಾಜ್ಯದ ಜನರು ಮತೀಯ ಶಕ್ತಿಗಳ ಅಟ್ಟಹಾಸದಿಂದ ಆತಂಕದಲ್ಲಿದ್ದಾರೆ. ಇದರ ನಡುವೆಯೇ ಮತ್ತೊಬ್ಬ ಹಿಂದೂ ಕಾರ್ಯಕರ್ತ ಭರತ್ ಕುಮ್ಡೇಲು ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದರು.

ಸುಹಾಶ್ ಶೆಟ್ಟಿ ಕೊಲೆ ಹಿಂದೆ ಕಾಣದ ಕೈಗಳು..
ಕಾಂಗ್ರೆಸ್ ಸರ್ಕಾರ ಮಾತ್ರ ತನ್ನ ನೈತಿಕ ಜವಾಬ್ದಾರಿಯನ್ನು ಮರೆತು ವರ್ತಿಸುತ್ತಿದೆ. ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತೆಗೆದುಕೊಳ್ಳಲು ಯಾವುದೇ ಕಾನೂನು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಅವರು ದೂರಿದರು. ರಾಜ್ಯದ ಗೃಹ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗುವಂತೆ ಕಾಣದ ಪ್ರಭಾವಿ 'ಕೈ' ಗಳು ಕೆಲಸ ಮಾಡುತ್ತಿವೆ. ಇದಕ್ಕೆ ಸುಹಾಸ್ ಶೆಟ್ಟಿ ಕೊಲೆ ಹಾಗೂ ನಂತರ ಕಾರ್ಯಕರ್ತರಿಗೆ ಒಡ್ಡುತ್ತಿರುವ ಜೀವ ಬೆದರಿಕೆಗಳ ಪ್ರಕರಣಗಳಿಂದ ಸ್ಪಷ್ಟವಾಗುತ್ತಿದೆ ಎಂದು ಅವರು ಹರಿಹಾಯ್ದಿದ್ದಾರೆ.
ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ ಪೂಂಜಾ ಅವರು ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನ ಹಾಗೂ ಬ್ರಹ್ಮಕಲಶೋತ್ಸವದ ಕುರಿತು ಭಾವುಕವಾಗಿ ಮಾತನಾಡಿರುವುದನ್ನೇ ಆಧರಿಸಿ ನೀಡಲಾಗಿರುವ ದೂರಿಗೆ FIR ದಾಖಲಿಸಲಾಗಿದೆ. ಈ ಮೂಲಕ ಸರ್ಕಾರ ಯಾರ ಪರ ಇದೆ ಎನ್ನುವುದು ಸ್ಪಷ್ಟವಾಗುತ್ತಿದೆ. ಸದ್ಯ ಶಾಸಕರ ಮೇಲೆ ದ್ವೇಷ ಭಾಷಣದ ಹೆಸರಿನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಜನಪ್ರತಿನಿಧಿಗಳಿಗೇ ರಕ್ಷಣೆ ಇಲ್ಲ...
ರಾಜ್ಯದ ಕರಾವಳಿ ಪ್ರದೇಶದಲ್ಲಿ ಜನಪ್ರತಿನಿಧಿಗಳಿಗೇ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಪೊಲೀಸರ ನಡೆ, ಸರ್ಕಾರದ ಧೋರಣೆ ಇದೇ ರೀತಿ ಮುಂದುವರೆದರೆ ಕರ್ನಾಟಕ ಬಿಜೆಪಿಯು ಜನಪರವಾದ ಹೋರಾಟ ಮತ್ತಷ್ಟು ತೀವ್ರಸ್ವರೂಪ ಪಡೆಯಲಿದೆ ಎಂದು ಅವರು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸುಹಾಸ್ ಹತ್ಯೆ ಬಳಿಕ ಕೇವಲ ಭಜರಂಗ ದಳ ಮುಖಂಡ ಭರತ್ ಕಮ್ಡೇಲ್ ಅವರಿಗೆ ಮಾತ್ರವಲ್ಲದೇ ವಿಶ್ವ ಹಿಂದೂ ಪರಿಷತ್ (ವಿಹಿಂಪ) ಮುಖಂಡ ಶರಣ್ ಪಂಪ್‌ವೆಲ್ ಅವರಿಗೂ ಜೀವ ಬೆದರಿಕೆ ಹಾಕಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹೀಗೆ ಬಹಿರಂಗವಾಗಿ ಹತ್ಯೆ ಮಾಡುವ ಸಂದೇಶ, ಪೋಸ್ಟ್‌ಗಳು ಹರಿದಾಡುತ್ತಿವೆ. ಇನ್ನಷ್ಟು ಜನ ನೆತ್ತರು ಹರಿಯುವ ಮೊದಲು ಸರ್ಕಾರ, ಪೊಲೀಸ್ ಇಲಾಖೆ ಅಗತ್ಯೆ ಎಚ್ಚರಿಕೆ ವಹಿಸಬೇಕಿದೆ.
ಭರತ್ ಕಮ್ಡೇಲ್ ಖಡಕ್ ಪ್ರತಿಕ್ರಿಯೆ
ಇನ್ನು ಬೆದರಿಕೆ ಕರೆಗಳು ಬಂದ ಬೆನ್ನಲ್ಲೆ ಭರತ್ ಕಮ್ಡೇಲ್ ಅವರ ಪ್ರತಿಕ್ರಿಯೆಯ ವಿಡಿಯೋ ವೈರಲ್ ಆಗಿದೆ. ಬೆದರಿಕೆ ಹಾಕುವವರು ಮುಂದೆ ಬಂದು ನಿಲ್ಲಲಿ. ನಾವು ಪ್ರಚಾರ ಗಿಟ್ಟಿಸಿಕೊಂಡು, ಭಾಷಣೆ ಮಾಡಿ, ಕೇವಲ ಮಾಧ್ಯಮ ಮುಂದೆ ಪ್ರಚಾರ ಮಾಡಿ ಈ ವರೆಗೆ ಬಂದಿಲ್ಲ. ನಾವು ಎಲ್ಲ ಕೆಲಸ ಮಾಡಿಕೊಂಡು ಬಂದಿದ್ದೇವೆ ಎಂದು ಬೆದರಿಕೆ ಹಾಕಿದವರಿಗೆ ತಿರುಗೇಟು ನೀಡಿದ್ದಾರೆ.












Click it and Unblock the Notifications