
ಹಿಜಾಬ್ ನಿರ್ಬಂಧ ವಿವಾದ: ಜಡ್ಜ್‌ಗಳಿಗೆ ಬೆದರಿಕೆಯೊಡ್ಡಿದ್ದ ಆರೋಪಿಗಳಿಗೆ ಸಿಕ್ತು ಜಾಮೀನು
ಬೆಂಗಳೂರು. ಅ.25. ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿದ್ದ ಜಡ್ಜ್ ಗಳಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಹೈಕೋರ್ಟ್ ಷರತ್ತಿನ ಜಾಮೀನು ಮಂಜೂರು ಮಾಡಿದೆ.
ಹಾಗಾಗಿ ತಿರುವೆಳ್ಳೂರಿನ ಜಮಾಲ್ ಮೊಹಮದ್ ಉಸ್ಮಾನಿ (44) ಹಾಗೂ ಮನ್ನಾಡಿಯ ರಹಮತುಲ್ಲಾ (37) ಜಾಮೀನು ಸಿಕ್ಕಿದೆ. ಆರೋಪಿಗಳಿಬ್ಬರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಕೆ. ಸೋಮಶೇಖರ್ ಹಾಗೂ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಅವರಿದ್ದ ಪೀಠ ಮಾನ್ಯ ಮಾಡಿದೆ.
ಷರತ್ತುಗಳೇನು?
ಆರೋಪಿಗಳು ತಲಾ 1 ಲಕ್ಷ ರೂ. ಮೊತ್ತದ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಶ್ಯೂರಿಟಿ ಒದಗಿಸಬೇಕು. ವಿಚಾರಣೆಯ ಎಲ್ಲ ದಿನಗಳಂದು ಆರೋಪಿಗಳು ವಿಚಾರಣಾ ಕೋರ್ಟ್ ಮುಂದೆ ಹಾಜರಾಗಬೇಕು. ತನಿಖೆಗೆ ಸಹಕರಿಸಬೇಕು, ತನಿಖೆಯ ಹಂತದಲ್ಲಿ ತನಿಖಾಧಿಕಾರಿಗಳು ಸೂಚಿಸಿದಾಗಲೆಲ್ಲ ಅವರ ಮುಂದೆ ಹಾಜರಾಗಬೇಕು, ಸಾಕ್ಷ್ಯ ನಾಶಪಡಿಸಬಾರದು ಎಂಬ ಷರತ್ತುಗಳ್ನು ವಿಧಿಸಿರುವ ಹೈಕೋರ್ಟ್, ಆರೋಪಿಗಳಿಬ್ಬರಿಗೂ ಜಾಮೀನು ನೀಡಿದೆ.
ಏನಿದು ಪ್ರಕರಣ?
ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧ ಪ್ರಶ್ನಿಸಿ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಗಳ ಸುದೀರ್ಘ ವಿಚಾರಣೆ ನಡೆಸಿದ್ದ ಅಂದಿನ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಹಾಗೂ ಜೆ.ಎಂ. ಖಾಜಿ ಅವರಿದ್ದ ಪೀಠ, ಹಿಜಾಬ್ ಇಸ್ಲಾಂನ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂಬ ತೀರ್ಮಾನಕ್ಕೆ ಬಂದಿತ್ತಲ್ಲದೆ, ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧವನ್ನು ಎತ್ತಿಹಿಡಿದು ಮಾ.15ರಂದು ತೀರ್ಪು ಪ್ರಕಟಿಸಿತ್ತು.
ಹೈಕೋರ್ಟ್ ತೀರ್ಪು ವಿರೋಧಿಸಿ ಹಲವು ಸಂಘಟನೆಗಳು ಹಲವು ಕಡೆ ಪ್ರತಿಭಟನೆ ನಡೆಸಿದ್ದವು. ಈ ಸಂದರ್ಭದಲ್ಲಿ ತಮಿಳುನಾಡು ತವ್ಹೀದ್ ಜಮಾತ್ (ಟಿಎನ್‌ಟಿಜೆ) ಆಡಿಟಿಂಗ್ ಸಮಿತಿಯ ಸದಸ್ಯ ರಹಮತುಲ್ಲಾ, ಜಾರ್ಖಂಡ್‌ನಲ್ಲಿ ನ್ಯಾಯಾಧೀಶ ಉತ್ತಮ್ ಆನಂದ್ ಅವರು ವಾಯು ವಿಹಾರದಲ್ಲಿದ್ದಾಗ ಕೊಲೆ ಮಾಡಿದ ರೀತಿಯಲ್ಲೇ ಹಿಜಾಬ್ ತೀರ್ಪು ನೀಡಿದ ನ್ಯಾಯಾಧೀಶರನ್ನು ಹತ್ಯೆ ಮಾಡಬೇಕು ಎಂದು ಮದುರೈನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಹೇಳಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಆಗ ಆರೋಪಿಗಳು ತೀರ್ಪು ಟೀಕಿಸಿ ಜಡ್ಜ್ ಗಳಿಗೆ ಬೆದರಿಕೆ ಹಾಕಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಇಬ್ಬರ ವಿರುದ್ಧ ಬೆಂಗಳೂರಿನ ವಿಧಾನಸೌಧ ಠಾಣೆಯಲ್ಲಿ ಐಪಿಸಿ ಹಾಗೂ ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯ (ಯುಎಪಿಎ) ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿತ್ತು.
ಮತ್ತೊಂದೆಡೆ, ಹೈಕೋರ್ಟ್ ನ್ಯಾಯಮೂರ್ತಿಗಳು, ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದ ಟಿಎನ್‌ಟಿಜೆ ವಕ್ತಾರ ಜಮಾಲ್ ಮೊಹಮದ್ ಉಸ್ಮಾನಿಯನ್ನು ತಂಜಾವೂರು ಪೊಲೀಸರು ಬಂಧಿಸಿದ್ದರು. ಆದರೆ ಅಧೀನ ಕೋರ್ಟ್ ಇವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.