ತೆಲುಗಿನವರು ಕೊಡದ ಅವಕಾಶ ಕನ್ನಡಿಗರು ಕೊಟ್ರು, ಡಬ್ಬಿಂಗ್‌ ಮಾಡ್ತಿದ್ದವನು ನೂರಾರು ಸಿನಿಮಾಗಳ ಸ್ಟಾರ್ ಆದೆ: ನಟ ರವಿಶಂಕರ್‌

ಸ್ಯಾಂಡಲ್‌ವುಡ್‌ನ 'ಆರ್ಮುಗಂ' ಎಂದೇ ಖ್ಯಾತರಾಗಿರುವ, ತಮ್ಮ ಅಬ್ಬರದ ಧ್ವನಿ ಹಾಗೂ ಖಡಕ್ ನಟನೆಯಿಂದ ಕನ್ನಡಿಗರ ಮನಗೆದ್ದಿರುವ ನಟ ರವಿಶಂಕರ್, ಚಿತ್ರರಂಗದಲ್ಲಿ ಬರೋಬ್ಬರಿ 108 ಸಿನಿಮಾಗಳ ಮೈಲಿಗಲ್ಲು ತಲುಪಿದ್ದಾರೆ. ಈ ಸುದೀರ್ಘ ಹಾಗೂ ಯಶಸ್ವಿ ಪ್ರಯಾಣದ ಬಗ್ಗೆ ಸಂದರ್ಶನವೊಂದರಲ್ಲಿ ರವಿಶಂಕರ್‌ ಭಾವುಕರಾಗಿ ಮಾತನಾಡಿರುವ ವಿಡಿಯೋ ವೈರಲ್‌ ಆಗಿದೆ. ಅಲ್ಲೇ ಹುಟ್ಟಿ ಬೆಳೆದರೂ ತೆಲುಗಿನವರು ಕೊಡದ ಅವಕಾಶ ನನಗೆ ಕನ್ನಡಿಗರು ಕೊಟ್ಟರು ಎಂದು ನೆನೆದಿದ್ದಾರೆ.

ಪ್ರಕಾಶ್‌ ರಾಜ್‌ ಪಾತ್ರ ನನಗೆ ಕೊಟ್ರು

ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ರವಿಶಂಕರ್, "ಅದು 2010ರ ಸಮಯ. ಅಲ್ಲಿಯವರೆಗೆ ತೆಲುಗು ಚಿತ್ರರಂಗದಲ್ಲೇ ಇದ್ದರೂ, ಅಲ್ಲಿ ಸಾವಿರಾರು ಸಿನಿಮಾಗಳಿಗೆ ಡಬ್ಬಿಂಗ್‌ ಮಾಡಿದ್ದೆ. ಎಲ್ಲ ಖಡಕ್‌ ವಿಲನ್‌ಗಳಿಗೆ ನನ್ನ ಧ್ವನಿಯೇ ಇರುತ್ತಿತ್ತು. ಆದರೆ ನನಗೆ ಇಂತಹದೊಂದು ದೊಡ್ಡ ಅವಕಾಶ ಸಿಕ್ಕಿರಲಿಲ್ಲ. ಆಗ ಕನ್ನಡ ಚಿತ್ರರಂಗದಿಂದ ನನಗೆ ಕರೆ ಬಂತು ಮತ್ತು ಒಂದು ಪಾತ್ರ ಮಾಡಬೇಕೆಂದು ಹೇಳಿದರು. ಆ ಪಾತ್ರವನ್ನು ಮೂಲ ತೆಲುಗು ಸಿನಿಮಾದಲ್ಲಿ ಖ್ಯಾತ ನಟ ಪ್ರಕಾಶ್ ರಾಜ್ ಮಾಡಿದ್ದರು. ಆದರೆ, ನನ್ನನ್ನು ಕೇವಲ ಡಬ್ಬಿಂಗ್ ಮಾಡುವುದಕ್ಕೋಸ್ಕರ ಕರೆಯುತ್ತಿದ್ದಾರೆ ಎಂದಷ್ಟೇ ನಾನು ಭಾವಿಸಿದ್ದೆ" ಎಂದು ರವಿಶಂಕರ್‌ ಆ ದಿನಗಳನ್ನು ನೆನೆದಿದ್ದಾರೆ. ತಮಗೆ ಬ್ರೇಕ್ ನೀಡಿದ ಕಿಚ್ಚ ಸುದೀಪ್ ಅವರ 'ಕೆಂಪೇಗೌಡ' ಚಿತ್ರದ ಆಸಕ್ತಿದಾಯಕ ಕಥೆಯನ್ನು ನೆನಪಿಸಿಕೊಂಡಿದ್ದಾರೆ.

Ravi Shankar

"ಚಿತ್ರತಂಡದವರು ಬಂದು ಇಲ್ಲ ಸರ್, ಸುದೀಪ್ ಅವರು ನಿಮ್ಮನ್ನು ಭೇಟಿಯಾಗಬೇಕು, ಬನ್ನಿ ಎಂದು ಕರೆದರು. ನಾನು ಹೋಗುವಾಗಲೂ ಪ್ರಕಾಶ್ ರಾಜ್ ಅವರ ಅಣ್ಣನೋ ಅಥವಾ ತಮ್ಮನ ಪಾತ್ರ ಇರಬೇಕು ಅಂದುಕೊಂಡಿದ್ದೆ. ಆದರೆ ಅವರು ನೇರವಾಗಿ ತೆಲುಗಿನಲ್ಲಿ ಪ್ರಕಾಶ್ ರಾಜ್ ಮಾಡಿದ ಆ ಮೇನ್ ವಿಲನ್ ಪಾತ್ರವನ್ನೇ ನೀವು ಮಾಡಬೇಕು ಅಂದಾಗ ನನಗೆ ನಂಬಲು ಸಾಧ್ಯವಾಗಲಿಲ್ಲ. ಆಶ್ಚರ್ಯದಿಂದ ನಾನು ಅವರಿಗೆ, 'ನೀವು ಸಾಯಿಕುಮಾರ್ (ರವಿಶಂಕರ್ ಅವರ ಅಣ್ಣ) ಅನ್ಕೊಂಡು ತಪ್ಪಾಗಿ ನನ್ನನ್ನ ಕರೀತಿದ್ದೀರಾ?' ಅಂತಲೂ ಕೇಳಿಬಿಟ್ಟಿದ್ದೆ. ಆದರೆ ಅವರು ಇಲ್ಲ ಸರ್, ಈ ಪಾತ್ರಕ್ಕೆ ನೀವೇ ಬೇಕು ಎಂದು ಧೈರ್ಯ ತುಂಬಿದರು" ಎಂದು ರವಿಶಂಕರ್ ಹೇಳಿದ್ದಾರೆ.

Karuppu ಬ್ಲಾಕ್‌ಬಸ್ಟರ್ ಸಕ್ಸಸ್: ಕ್ಯಾಮೆರಾಮನ್‌ಗೆ ದುಬಾರಿ ಬ್ಯಾಟ್‌ಮ್ಯಾನ್ ಎಡಿಷನ್‌ ಕಾರ್ ಗಿಫ್ಟ್ ಕೊಟ್ಟ ನಟ ಸೂರ್ಯ
Karuppu ಬ್ಲಾಕ್‌ಬಸ್ಟರ್ ಸಕ್ಸಸ್: ಕ್ಯಾಮೆರಾಮನ್‌ಗೆ ದುಬಾರಿ ಬ್ಯಾಟ್‌ಮ್ಯಾನ್ ಎಡಿಷನ್‌ ಕಾರ್ ಗಿಫ್ಟ್ ಕೊಟ್ಟ ನಟ ಸೂರ್ಯ

ಟರ್ನಿಂಗ್ ಪಾಯಿಂಟ್ ಆದ 'ಆರ್ಮುಗಂ' ಪಾತ್ರ

ಮುಂದೆ 'ಕೆಂಪೇಗೌಡ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಯಿತು. ಅದರಲ್ಲಿ ರವಿಶಂಕರ್ ಮಾಡಿದ 'ಆರ್ಮುಗಂ' ಪಾತ್ರ ಇಡೀ ಕರ್ನಾಟಕದಲ್ಲೇ ಭಾರಿ ಸಂಚಲನ ಸೃಷ್ಟಿಸಿತು. "ಅಂದು ಸಿಕ್ಕ ಆ ಒಂದು ಅವಕಾಶ ನನ್ನ ಬದುಕಿನ ಟರ್ನಿಂಗ್ ಪಾಯಿಂಟ್ ಆಯಿತು. ಇವತ್ತು ನಾನು 108 ಸಿನಿಮಾಗಳನ್ನು ಮಾಡಿದ್ದೀನಿ ಅಂದರೆ, ಅದಕ್ಕೆ ಕನ್ನಡಿಗರು ನನ್ನ ಮೇಲಿಟ್ಟ ನಂಬಿಕೆಯೇ ಕಾರಣ" ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. "ಕರ್ನಾಟಕ ನನ್ನನ್ನು ನಂಬಿತು. ಜೈ ಕರ್ನಾಟಕ, ಜೈ ಭುವನೇಶ್ವರಿ" ಎಂದು ರವಿಶಂಕರ್ ಹೇಳಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಕನ್ನಡದಲ್ಲೇ ಗೆದ್ದ ಸಹೋದರರು

ರವಿಶಂಕರ್ ಅವರು ಕೇವಲ ನಟರಾಗಿ ಅಷ್ಟೇ ಅಲ್ಲ, ಅದಕ್ಕಿಂತ ಮುಂಚೆ ಸೌತ್ ಇಂಡಸ್ಟ್ರಿಯ ಅತ್ಯಂತ ಬೇಡಿಕೆಯ ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದರು. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಪ್ರದೀಪ್ ರಾವತ್ (ಸೈಯ್, ಗಜಿನಿ ಖಳನಾಯಕ), ಆಶಿಶ್ ವಿದ್ಯಾರ್ಥಿ, ಸೋನು ಸೂದ್ ಸೇರಿದಂತೆ ಹಲವು ಪರಭಾಷಾ ಖಳನಾಯಕರ ಪಾತ್ರಗಳಿಗೆ ಧ್ವನಿ ನೀಡಿದ್ದು ಇದೇ ರವಿಶಂಕರ್. ಬರೋಬ್ಬರಿ 4,000ಕ್ಕೂ ಹೆಚ್ಚು ಸಿನಿಮಾಗಳಿಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ ಹೆಗ್ಗಳಿಕೆ ಇವರದ್ದಾಗಿದ್ದು, ಅತ್ಯುತ್ತಮ ಡಬ್ಬಿಂಗ್‌ಗಾಗಿ ಹಲವು ನಂದಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

Ravi Shankar

'ಕೆಂಪೇಗೌಡ' ಚಿತ್ರದ 'ಆರ್ಮುಗಂ ಕೋಟೆ... ಆರ್ಮುಗಂ ಸಾಮ್ರಾಜ್ಯ...' ಎಂಬ ಡೈಲಾಗ್ ಇಂದಿಗೂ ಸ್ಯಾಂಡಲ್‌ವುಡ್‌ನ ಸಾರ್ವಕಾಲಿಕ ಅತ್ಯುತ್ತಮ ವಿಲನ್ ಡೈಲಾಗ್‌ಗಳಲ್ಲಿ ಒಂದಾಗಿದೆ. ಈ ಒಂದೇ ಒಂದು ಪಾತ್ರ ರವಿಶಂಕರ್ ಅವರನ್ನು ಕರ್ನಾಟಕದ ಮನೆಮಾತಾಗಿಸಿತು. ಅಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿದ್ದ ವಿಲನ್ ಪಾತ್ರಗಳ ಶೈಲಿಯನ್ನೇ ಇದು ಬದಲಾಯಿಸಿತು. ಕನ್ನಡ ಚಿತ್ರರಂಗದಲ್ಲಿ 'ಅಗ್ನಿ ಐಪಿಎಸ್' ಸಿನಿಮಾ ಮೂಲಕ ಅಬ್ಬರಿಸಿದ್ದ 'ಡೈಲಾಗ್ ಕಿಂಗ್' ಸಾಯಿಕುಮಾರ್ ಅವರ ಸ್ವಂತ ತಮ್ಮನೇ ಈ ಪಿ.ರವಿಶಂಕರ್.

ಅಣ್ಣನ ಧ್ವನಿಯಷ್ಟೇ ಗಂಭೀರ ಹಾಗೂ ಖಡಕ್ ಧ್ವನಿ ಇವರಿಗೂ ಇರುವುದರಿಂದಲೇ, ಆರಂಭದಲ್ಲಿ ಸುದೀಪ್ ಅವರು ತಮ್ಮನ್ನು 'ಸಾಯಿಕುಮಾರ್' ಅಂದುಕೊಂಡು ತಪ್ಪಾಗಿ ಕರೆದಿದ್ದಾರೆ ಎಂದು ರವಿಶಂಕರ್ ಭಾವಿಸಿದ್ದರು. ಕನ್ನಡದಲ್ಲಿ ಕೇವಲ ಖಳನಾಯಕನ ಪಾತ್ರಗಳಿಗಷ್ಟೇ ಸೀಮಿತವಾಗದ ರವಿಶಂಕರ್, ಆನಂತರ 'ಅಧ್ಯಕ್ಷ', 'ರಾಂಬೋ 2', 'ವಿಕ್ಟರಿ' ಮುಂತಾದ ಸಿನಿಮಾಗಳಲ್ಲಿ ಅದ್ಭುತ ಕಾಮಿಡಿ ನಟನೆಯ ಮೂಲಕವೂ ಕನ್ನಡಿಗರನ್ನು ನಗಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+