ಹಿಜಾಬ್ ಅರ್ಜಿ ವಿಚಾರಣೆಯನ್ನು ಫೆ.17ಕ್ಕೆ ಮುಂದೂಡಿದ ಹೈಕೋರ್ಟ್
ಬೆಂಗಳೂರು, ಫೆಬ್ರವರಿ 16: ಹಿಜಾಬ್ ಧರಿಸಲು ಅವಕಾಶ ನೀಡಲು ರಾಜ್ಯ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಬುಧವಾರ ಕೂಡ ತ್ರಿಸದಸ್ಯ ಪೀಠದಲ್ಲಿ ನಡೆಯಿತು. ಇದೇ ವೇಳೆ ಅರ್ಜಿ ಪರ ಮತ್ತು ವಿರುದ್ದವಾಗಿ ವಕೀಲರ ವಾದ ಪ್ರತಿವಾದವನ್ನು ನ್ಯಾಯಾಮೂರ್ತಿಗಳು ಕೇಳಿಸಿಕೊಂಡರು. ಇದೇ ವೇಳೆ ನ್ಯಾಯಪೀಠದತ್ತ ಎರಡು ಕಡೆಗಳ ವಕೀಲರು ಕೆಲವು ಮಹತ್ವದ ಮಾಹಿತಿಗಳನ್ನು ತಿಳಿಸಿದರು. ಇದೇ ವೇಳೆ ನ್ಯಾಯಾಪೀಠವು ಹಿಜಾಬ್ ವಿಚಾರಣೆ ಗುರುವಾರ ಮಧ್ಯಾಹ್ನ 2:30ಕ್ಕೆ ಮುಂದೂಡಿಕೆ ಮಾಡಿತು.
ಕೋರ್ಟ್‌ನಲ್ಲಿ ನಡೆದ ವಾದ-ಪ್ರತಿವಾದವೇನು?
ಸಮವಸ್ತ್ರದ ಜತೆ ಹಿಜಾಬ್‌ಗೆ ಅನುಮತಿ ವಿಚಾರವಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್ ತ್ರಿಸದಸ್ಯ ಪೀಠದಲ್ಲಿ ಸತತ ಐದನೇ ದಿನವಾದ ಇಂದು ಮತ್ತೆ ಆರಂಭವಾಗಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ರ ವಿಸ್ತೃತ ಪೀಠ ವಿಚಾರಣೆ ಆರಂಭಿಸಿದ್ದು, ಇಂದೇ ಅಂತಿಮ ತೀರ್ಪು ಪ್ರಕಟವಾಗುತ್ತಾ ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದೆ.
ಹೈಕೋರ್ಟ್ ವಿಚಾರಣೆಯನ್ನು ಎಲ್ಲರೂ ನೋಡುತ್ತಿದ್ದಾರೆ. ಹೀಗಾಗಿ ಶೀಘ್ರ ವಾದ ಮಂಡನೆ ಪೂರ್ಣಗೊಳಿಸಲು ಸೂಚಿಸಿ ವಕೀಲ ಸುಭಾಷ್ ಝಾ ರಿಂದ ಹೈಕೋರ್ಟ್‌ಗೆ ಮನವಿ ಮಾಡಿದೆ. ಒಂದು ಅರ್ಜಿಗೆ ಒಬ್ಬರೇ ವಾದಿಸಬೇಕು. ಒಂದೇ ವಾದವನ್ನು ಪುನರಾವರ್ತನೆ ಮಾಡಬಾರದು. ಎಲ್ಲಾ ಮಧ್ಯಂತರ ಅರ್ಜಿ ವಿಚಾರಣೆ ಅಗತ್ಯವಿಲ್ಲ. ಈ ಅರ್ಜಿಗಳಿಂದ ಕೋರ್ಟ್ ಸಮಯ ವ್ಯರ್ಥವಾಗುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ತಿಳಿಸಿದ್ದಾರೆ.

ಹಿಜಾಬ್ ಅರ್ಜಿದಾರರ ಪರ ಹಿರಿಯ ವಕೀಲ ರವಿವರ್ಮಕುಮಾರ್ ವಾದ ಮಂಡನೆ ಆರಂಭಸಿ, ಒಮ್ಮೆ ನಿಗದಿಪಡಿಸಿದ ಸಮವಸ್ತ್ರವನ್ನು 5 ವರ್ಷ ಬದಲಿಸಬಾರದು. ಬದಲಿಸುವ ಮುನ್ನ 1 ವರ್ಷಕ್ಕೆ ಮುನ್ನ ಪೋಷಕರಿಗೆ ನೋಟಿಸ್ ನೀಡಬೇಕೆಂಬ ನಿಯಮವಿದೆ ಎಂದು ವಾದದ ವೇಳೆ ಶಿಕ್ಷಣ ಕಾಯ್ದೆ ಉಲ್ಲೇಖಿಸಿದ ರವಿವರ್ಮಕುಮಾರ್, ಹಿಜಾಬ್ ವಿಚಾರದಲ್ಲೂ 1 ವರ್ಷ ಮೊದಲೇ ನೋಟಿಸ್ ನೀಡಬೇಕಿತ್ತು ಎಂದಿದ್ದಾರೆ.
ಶಿಕ್ಷಣ ಪಠ್ಯಕ್ರಮ ನಿಗದಪಡಿಸಲು ಪೋಷಕರು, ಶಿಕ್ಷಕರ ಸಮಿತಿ ರಚಿಸಲು ಕಾಯ್ದೆಯಲ್ಲಿ ಅವಕಾಶವಿದೆ. ನಿನ್ನೆ ನೀವು ಹೇಳಿದ ಅಂಶವನ್ನು ನೋಟ್ ಮಾಡಿದ್ದೇವೆ. ಶಾಲೆಯ ಪ್ರಾಸ್ಪೆಕ್ಟಸ್‌ನಲ್ಲಿ ಈ ವರ್ಷದ ಶಿಕ್ಷಣದ ಮಾಹಿತಿ ನೀಡಲಾಗಿದೆ. ಪಿಯು ಕಾಲೇಜಿನಲ್ಲಿ ಈ ಸಾಲಿಗೆ ಸಮವಸ್ತ್ರ ನಿಗದಿಪಡಿಸಿಲ್ಲ. 2020-21ರಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಈ ಮಾರ್ಗಸೂಚಿಯಲ್ಲಿ ಸಮವಸ್ತ್ರ ನಿಗದಿಪಡಿಸಿಲ್ಲ, ಯಾರು ಈ ಮಾರ್ಗಸೂಚಿ ಹೊರಡಿಸಿದ್ದಾರೆಂದು ಮಾಹಿತಿಯಿಲ್ಲ. ಇದನ್ನು ಮಾರ್ಗಸೂಚಿ ಎಂದು ಕರೆಯುವುದು ಹೇಗೆ ಇದು ಸರ್ಕಾರಿ ದಾಖಲೆಯೇ? ಯಾರು ಮಾರ್ಗಸೂಚಿ ನೀಡಿದ್ದಾರೆ ಎಂದು ಸಿಜೆ ಪ್ರಶ್ನಿಸಿದರು.
ನೀವು ಈ ಮಾರ್ಗಸೂಚಿ ಆಧರಿಸಿ ವಾದ ಮಂಡಿಸುತ್ತೀರಾ? ಹಾಗಿದ್ದರೆ ಅದರ ಕಾನೂನುಬದ್ದತೆ ಬಗ್ಗೆ ತಿಳಿಸಿ ಎಂದು ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನಿಸಿದ್ದಾರೆ. ಈ ವೇಳೆ ಉತ್ತರಿಸಿದ ರವಿವರ್ಮಕುಮಾರ್, ಇಲ್ಲ ಇದು ಆದೇಶವಲ್ಲ ನಾನು ಇದನ್ನು ಹೇಳಿಕೆಯಾಗಷ್ಟೇ ನೀಡುತ್ತಿದ್ದೇನೆ. ಇಲಾಖೆ ಏನು ಹೇಳಿದೆ ಎಂಬುದಕ್ಕಷ್ಟೇ ಈ ದಾಖಲೆ ನೀಡುತ್ತಿದ್ದೇನೆ, ಹಿಜಾಬ್ ಧರಿಸಿದ ಕಾರಣಕ್ಕೆ ವಿದ್ಯಾರ್ಥಿಗಳ ಮೇಲೆ ಕ್ರಮ ಸರಿಯಲ್ಲ. ಶಿಕ್ಷಣ ಕಾಯ್ದೆಯಡಿಯಲ್ಲಿ ಸಮವಸ್ತ್ರ ನಿಗದಿಪಡಿಸಿಲ್ಲ. ಹಿಜಾಬ್ ಗೆ ಯಾವುದೇ ನಿರ್ಬಂಧ ಹೇರಲಾಗಿಲ್ಲ ಎಂದು ತಿಳಿಸಿದರು.
ವಕೀಲ ರವಿವರ್ಮಕುಮಾರ್ ಅವರ ವಾದಕ್ಕೆ ಉತ್ತರಿಸಿ ನಿರ್ಬಂಧ ವಿಧಿಸಿಲ್ಲವೆಂದು ಲೈಸೆನ್ಸ್ ಇರುವ ಶಸ್ತ್ರಾಸ್ತ್ರ ಕೊಂಡೊಯ್ಯಬಹುದೇ? ಎಂದು ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ ಮಾಡಿದ್ದಾರೆ. ಅದೇ ರೀತಿ ನಿಮ್ಮ ವಾದ ಬೇರೆ ಬೇರೆ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಬಹುದು ಎಂದು ನ್ಯಾ.ದೀಕ್ಷಿತ್ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ವಕೀಲ ಹಿಜಾಬ್‌ಗೆ ಕಾನೂನುರೀತ್ಯಾ ನಿರ್ಬಂಧವಿಲ್ಲದಿದ್ದಾಗ ಸರ್ಕಾರ ಏಕೆ ಅಡ್ಡಿಪಡಿಸುತ್ತಿದೆ. ಸರ್ಕಾರದ ಆದೇಶದಲ್ಲಿ ಹಿಜಾಬ್‌ಗೆ ನಿರ್ಬಂಧ ವಿಧಿಸಲಾಗಿದೆ. ಸಮಾನತೆ, ಒಗ್ಗಟ್ಟಿನ ಭಾವನೆಗೆ ಹಿಜಾಬ್ ಅಡ್ಡಿಯೆಂದು ಸರ್ಕಾರ ಹೇಳುತ್ತಿದೆ ಎಂದು ಮರು ವಾದಿಸಿದ್ದಾರೆ.
ಹಿಜಾಬ್, ಕೇಸರಿ ಶಾಲು ನಿರ್ಬಂಧಿಸಿದ ಆದೇಶ ಓದುತ್ತಿರುವ ರವಿವರ್ಮಕುಮಾರ್, ಕಾಲೇಜು ಅಭಿವೃದ್ದಿ ಸಮಿತಿಗೆ ಸಮವಸ್ತ್ರ ನಿಗದಿ ಅಧಿಕಾರ ನೀಡಲಾಗಿದೆ. ಶಿಕ್ಷಣ ಕಾಯ್ದೆಯಡಿ ಕೆಲವು ಪ್ರಾಧಿಕಾರಗಳಿಗೆ ಮಾತ್ರ ಅಧಿಕಾರವಿದೆ. ಸರ್ಕಾರದ ಅಧೀನದಲ್ಲಿರುವ ಅಧಿಕಾರಿಗೆ ಮಾತ್ರ ಅಧಿಕಾರ ನೀಡಬಹುದು. ಗೆಜೆಟ್ ನೋಟಿಫಿಕೇಷನ್ ಮೂಲಕ ಮಾತ್ರ ಅಧಿಕಾರ ಹಸ್ತಾಂತರಿಸಬಹುದು. ಆದರೆ ಕಾಲೇಜು ಅಭಿವೃದ್ಧಿ ಸಮಿತಿ ಪ್ರಾಧಿಕಾರವಲ್ಲ ಎಂದರು.
Recommended Video
ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಮೂಲಕ ಆದೇಶ ಹೊರಡಿಸಲಾಗಿದ್ದು, ಸುತ್ತೋಲೆಯ ಮೂಲಕ ಕಾಲೇಜು ಅಭಿವೃದ್ಧಿ ಸಮಿತಿ ರಚಿಸಲಾಗಿದೆ. ಸರ್ಕಾರದ ಅನುದಾನ ಬಳಸಿಕೊಳ್ಳುವುದು, ಶಿಕ್ಷಣದ ಗುಣಮಟ್ಟ ಕಾಪಾಡುವುದು, ಮೂಲಭೌತ ಸೌಕರ್ಯ ಕಲ್ಪಿಸುವುದು ಕಾಲೇಜು ಅಭಿವೃದ್ಧಿ ಸಮಿತಿ ಕರ್ತವ್ಯವಾಗಿದೆ ಎಂದು ವಕೀಲ ರವಿವರ್ಮಕುಮಾರ್ ವಾದಿಸಿದರು. ಸಮವಸ್ತ್ರ ಶಿಕ್ಷಣದ ಗುಣಮಟ್ಟದ ವ್ಯಾಪ್ತಿಗೆ ಬರುವುದಿಲ್ಲವೇ? ಶಿಸ್ತು, ಸಮಾನತೆ ಸಾಧಿಸುವುದೂ ಗುಣಮಟ್ಟವೆಂದು ಪರಿಗಣಿಸಬಹುದೇ? ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಶ್ನಿಸಿದ್ದಾರೆ.
ಸಮವಸ್ತ್ರದ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳ ಪ್ರಶ್ನೆಗೆ ಉತ್ತರಿಸಿದ ವಕೀಲ ರವಿವರ್ಮಕುಮಾರ್, ಇಲ್ಲ, ಇದಕ್ಕೆಂದೇ ಶಿಕ್ಷಣ ಕಾಯ್ದೆಯಲ್ಲಿ ಪ್ರತ್ಯೇಕ ಪ್ರಾಧಿಕಾರವಿದೆ. ಕಾಲೇಜು ಅಭಿವೃದ್ದಿ ಸಮಿತಿ ಪೊಲೀಸ್ ಅಧಿಕಾರ ಬಳಸುತ್ತಿದೆ. ಸಮಿತಿಗೆ ಸಮವಸ್ತ್ರ ನಿಗದಿಪಡಿಸುವ ಅಧಿಕಾರವಿಲ್ಲ ಎಂದಿದ್ದಾರೆ.
ಸಮಿತಿ ಪೊಲೀಸ್ ಅಧಿಕಾರ ಬಳಸುತ್ತಿದೆ ಎಂದು ಹೇಳಲಾಗದು. ಈ ಬಗ್ಗೆ ಸುಪ್ರೀಂಕೋರ್ಟ್ ತೀರ್ಪಿದ್ದರೆ ಕೊಡಿ ನಾನು ಒಪ್ಪುತ್ತೇನೆ ಎಂದು ನ್ಯಾ.ಕೃಷ್ಣ ದೀಕ್ಷಿತ್ ಹೇಳಿದ್ದಾರೆ. ಮರು ವಾದ ಮಂಡಿಸಿ, ಸಮಿತಿ ಶಾಸಕರ ನೇತೃತ್ವದಲ್ಲಿ ಕೆಲಸ ಮಾಡುತ್ತಿದೆ, ಈ ಸಮಿತಿ ಯಾರಿಗೂ ಉತ್ತರದಾಯಿಯಾಗಿಲ್ಲ. ಇದು ಪ್ರಜಾಪ್ರಭುತ್ವದ ಕಲ್ಪನೆಗೆ ವಿರುದ್ಧವಾಗಿದೆ ಎಂದು ಹಿರಿಯ ವಕೀಲ ರವಿವರ್ಮಕುಮಾರ್ ವಾದ ಮಂಡಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿಗೆ ಸರ್ಕಾರದ ಅಧಿಕಾರ ಹಸ್ತಾಂತರವೇ ಕಾನೂನುಬಾಹಿರವಾಗಿದ್ದು, ವಸತಿ ಯೋಜನೆಯ ಫಲಾನುಭವಿ ಗುರುತಿಸಲು ಶಾಸಕರಿಗೆ ಅಧಿಕಾರ ನೀಡಲಾಗಿತ್ತು. ಈ ಬಗ್ಗೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದಾಗ ಸರ್ಕಾರದ ಆದೇಶಕ್ಕೆ ತಡೆ ಸಿಕ್ಕಿದೆ. ಶಾಸಕರಾದವರಿಗೆ ಆಡಳಿತಾಧಿಕಾರ ನೀಡಬಾರದು. ನೀಡಿದರೆ ಅದು ಪ್ರಜಾಪ್ರಭುತ್ವದ ಮರಣಶಾಸನ ಆಗಲಿದೆ. ಯಾರೇ ಶಾಸಕರಾದರೂ ಅವರು ಪಕ್ಷದ ಪ್ರತಿನಿಧಿಯಾಗಿರುತ್ತಾರೆ. ಪಕ್ಷಕ್ಕೆ ಶಾಲೆಯ ಉಸ್ತುವಾರಿ ನೀಡುವುದು ಸರಿಯಲ್ಲ. ವಿದ್ಯಾರ್ಥಿಗಳ ಯೋಗ ಕ್ಷೇಮವನ್ನು ಶಾಸಕರು ನೋಡಿಕೊಳ್ಳಬಾರದು ಎಂದು ಹಿಜಾಬ್ ಅರ್ಜಿದಾರರ ಪರ ವಕೀಲ ರವಿವರ್ಮಕುಮಾರ್ ವಾದ ಮಂಡಿಸಿದರು.
ಸರ್ವೆ ವರದಿಯೊಂದರ ಪ್ರಕಾರ ಶೇ.56ರಷ್ಟು ಹಿಂದೂಗಳು ಧಾರ್ಮಿಕ ಪೆಂಡೆಂಟ್ ಧರಿಸುತ್ತಾರೆ, ಶೇ.84 ಮುಸ್ಲಿಮರು ಗಡ್ಡ, ಟೋಪಿ ಧರಿಸುತ್ತಾರೆ. ಸಿಖ್ಖರಲ್ಲೂ ಶೇ.66ರಷ್ಟು ಜನ ಗಡ್ಡ ಬಿಡುತ್ತಾರೆ ಎಂದಿದ್ದಾರೆ. ಇದಕ್ಕೆ ಹೈಕೋರ್ಟ್ ದಾಖಲೆ ಕೇಳಿದೆ.
ಸರ್ವೆಯ ವರದಿ ಅಧಿಕೃತವಾಗಿದ್ದರೆ ಮಾತ್ರ ಪರಿಗಣಿಸಬಹುದು ಎಂದು ನ್ಯಾ.ಕೃಷ್ಣ ದೀಕ್ಷಿತ್ ಹೇಳಿದ್ದಾರೆ. ಈ ವೇಳೆ ವಾದ ಮುಂದುವರೆಸಿದ ವಕೀಲ ರವಿವರ್ಮಕುಮಾರ್, ನಾನು ಈ ವರದಿಯ ಅಂಶಗಳನ್ನು ಪರಿಗಣಿಸಲು ಕೇಳುತ್ತಿಲ್ಲ. ಎಲ್ಲಾ ಧರ್ಮದವರೂ ಧಾರ್ಮಿಕ ಗುರುತು ಬಳಸುತ್ತಾರೆ. ಹಿಜಾಬ್‌ಗೆ ಮಾತ್ರ ತಾರತಮ್ಯ ಧೋರಣೆ ಏಕೆ? ಬಳೆ ಧರಿಸುವುದು ಧಾರ್ಮಿಕ ಗುರುತು ಅಲ್ಲವೇ, ಹಿಜಾಬ್ ಗೆ ಮಾತ್ರ ನಿರ್ಬಂಧ ವಿಧಿಸಿರುವುದೇಕೆ? ಎಂದು ವಕೀಲರು ಪ್ರಶ್ನಿಸಿದ್ದಾರೆ.
ಬಳೆ ಧರಿಸುವುದು ಧಾರ್ಮಿಕ ಗುರುತು ಅಲ್ಲವೇ? ಹೀಗಿದ್ದಾಗ ಹಿಜಾಬ್‌ಗೆ ಮಾತ್ರ ನಿರ್ಬಂಧ ವಿಧಿಸಿರುವುದೇಕೆ? ಮುಸ್ಲಿಂ ವಿದ್ಯಾರ್ಥಿನಿಯಾದ ಕಾರಣಕ್ಕೇ ನಿರ್ಬಂಧ ವಿಧಿಸಲಾಗಿದೆ.
ಹಿಂದೂ ಯುವತಿಯರು ಬಿಂದಿ, ಬಳೆ ತೊಡುತ್ತಾರೆ. ಕ್ರಿಶ್ಚಿಯನ್ ವಿದ್ಯಾರ್ಥಿನಿಯರು ಕ್ರಾಸ್ ತೊಡುತ್ತಾರೆ. ಸಿಖ್ ವಿದ್ಯಾರ್ಥಿಗಳು ಟರ್ಬನ್ ತೊಡುತ್ತಾರೆ. ಸರ್ಕಾರ ಅದ್ಯಾವುದಕ್ಕೂ ನಿರ್ಬಂಧ ವಿಧಿಸಿಲ್ಲ. ಅದು ಯಾಕೆ ಎನ್ನುವಂತಹ ಪ್ರಶ್ನೆಗಳು ಸಂವಿಧಾನ ರಚನೆಯಾದ ಕ್ಷಣದಿಂದಲೂ ಇವೆ. ಧಾರ್ಮಿಕ ಕಾರಣಕ್ಕೆ ತಾರತಮ್ಯ ಮಾಡುವಂತಿಲ್ಲ. ಉತ್ತರಪ್ರದೇಶ, ರಾಜಸ್ಥಾನ ಹೈಕೋರ್ಟ್‌ನ ತೀರ್ಪುಗಳಿವೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದಾರೆ.
ನವತೇಜ್ ಸಿಂಗ್ ಪ್ರಕರಣ ಉಲ್ಲೇಖಿಸಿದ ವಕೀಲ ರವಿವರ್ಮಕುಮಾರ್, ವೈವಿಧ್ಯತೆಯಲ್ಲಿ ಏಕತೆ ಇರುವುದನ್ನು ಪರಿಗಣಿಸಬೇಕು. ಶಿಕ್ಷಣದ ಹಕ್ಕಿನ ಕಾಯ್ದೆಯನ್ನೂ ಪ್ರಶ್ನಿಸಲಾಗಿತ್ತು. ಮುಸ್ಲಿಂ ವಿದ್ಯಾರ್ಥಿನಿಯರ ಸಂಖ್ಯೆಯೇ ಕಡಿಮೆಯಿದೆ. ಸರ್ಕಾರದ ಇಂತಹ ಆದೇಶಗಳಿಂದ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಹಿನ್ನಡೆಯಾಗಿದೆ. ಸರ್ಕಾರದ ಆದೇಶ ರದ್ದುಪಡಿಸಲು ಮನವಿ ಮಾಡಿ ರವಿವರ್ಮಕುಮಾರ್ ವಾದ ಮಂಡನೆ ಮುಕ್ತಾಯಗೊಳಿಸಿದ್ದಾರೆ.
ಬಾಂಬೆಯ ಹಿರಿಯ ವಕೀಲ ಯೂಸುಫ್ ಮುಕ್ಕಲಾ ಹೈಕೋರ್ಟ್‌ನಲ್ಲಿ ವಾದವನ್ನು ಆರಂಭಿಸಿದರು. ಆರಂಭದಲ್ಲಿಯೇ ಹಿಜಾಬ್ ನಿರ್ಬಂಧ ನಿರಂಕುಶ ಆದೇಶವಾಗಿದೆ ಎಂದ ಅವರು, ತ್ರಿವಳಿ ತಲಾಖ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ, ಸರ್ಕಾರದ ಆದೇಶ ನಿರಂಕುಶವೆಂದು ಹೇಳಬಯಸುತ್ತೇನೆ ಎಂದಿದ್ದಾರೆ.
ಹುಡುಗಿ ಕನ್ನಡಕ ಹಾಕಿದರೂ ನಿರ್ಬಂಧಿಸುತ್ತೀರಾ? ಎಂದ ವಕೀಲರು, ಸರ್ಕಾರದ ಕ್ರಮ ನ್ಯಾಯಬದ್ದವಾಗಿಲ್ಲ. ಆದೇಶಕ್ಕೂ ಮುನ್ನ ಪೋಷಕರ ನಿಲುವು ಕೇಳಬೇಕಿತ್ತು. ಆದೇಶಕ್ಕೂ ಮುನ್ನ ಪೋಷಕರು, ಶಿಕ್ಷಕರ ಸಮಿತಿಯನ್ನೂ ಕೇಳಿಲ್ಲ. ಇತರೆ ಮಕ್ಕಳ ಆಕ್ಷೇಪದ ಕಾರಣಕ್ಕೂ ಇಂತಹ ನಿರ್ಬಂಧ ಸರಿಯಲ್ಲ ಎಂದು ಯೂಸುಫು ಮುಕ್ಕಲಾ ವಾದ ಮಂಡಿಸಿದ್ದಾರೆ.
ಸಂವಿಧಾನದಲ್ಲಿ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ನೀಡಿದೆ. ಸಮವಸ್ತ್ರದ ಹೆಸರಲ್ಲಿ ಬೇರೆಯವರ ಹಕ್ಕನ್ನು ಕಿತ್ತುಕೊಳ್ಳುವಂತಿಲ್ಲ. ನನ್ನ ಶಿಕ್ಷಣದ ಹಕ್ಕನ್ನು ಸರ್ಕಾರ ಕಿತ್ತುಕೊಳ್ಳುವಂತಿಲ್ಲ. ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸುವುದು ಹಕ್ಕೆಂದು ತಿಳಿದಿದ್ದಾರೆ. ಈ ಹಕ್ಕನ್ನು ಸರ್ಕಾರ ಗೌರವಿಸಬೇಕು.
ಯೂಸುಫ್ ಅವರ ವಾದ ಕೇಳಿದ ಸಿಜೆ ನೀವು ಇನ್ನೂ ಏನನ್ನಾದರೂ ಹೇಳುವುದಕ್ಕಿದೆಯೇ ಎಂದಿದ್ದಾರೆ. ಈ ವೇಳೆ ಅವರು ನಾಳೆ ಸ್ವಲ್ಪ ಸಮಯ ನೀಡಿದರೆ ವಾದ ಮುಗಿಸುತ್ತೇನೆ ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ನೀವು ಲಿಖಿತ ವಾದಮಂಡನೆ ಸಲ್ಲಿಸಿ ಪರಿಶೀಲಿಸುತ್ತೇವೆ ಎಂದು ಸಿಜೆ ಹೇಳಿದ್ದಾರೆ. ನಂತರ ಅವರು ಮಧ್ಯಪ್ರದೇಶ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿ ಯೂಸುಫ್ ಮುಕ್ಕಲಾ ವಾದಮಂಡನೆ ಮುಕ್ತಾಯಗೊಳಿಸಿದರು.












Click it and Unblock the Notifications