ಬಂಧನ ಭೀತಿಯಿಂದ ಪಾರಾದ ನಟ, ನಿರ್ದೇಶಕ ಉಪೇಂದ್ರ
ಬೆಂಗಳೂರು, ಆಗಸ್ಟ್ 18: ಜಾತಿ ನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ನಟ, ನಿರ್ದೇಶಕ ಉಪೇಂದ್ರ ವಿರುದ್ಧ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡನೇ ಎಫ್‌ಐಆರ್‌ಗೂ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದರಿಂದಾಗಿ ಸದ್ಯಕ್ಕೆ ಉಪೇಂದ್ರ ಸೇಫ್ ಆಗಿದ್ದಾರೆ. 2 ಎಫ್‌ಐಆರ್‌ಗಳಿಗೆ ತಡೆ ಆಗಿರುವುದರಿಂದ ಬಂಧನ ಭೀತಿಯಿಂದ ಪಾರಾಗಿದ್ದಾರೆ.
ಕರ್ನಾಟಕ ರಣಧೀರ ಪಡೆ ಸಂಘಟನೆ ರಾಜ್ಯಾಧ್ಯಕ್ಷ ಭೈರಪ್ಪ ಹರೀಶ್ ಕುಮಾರ್ ನೀಡಿದ ದೂರಿನ ಮೇರೆಗೆ ಹಲಸೂರು ಗೇಟ್ ಠಾಣೆ ಪೊಲೀಸರು ದಾಖಲಿಸಿದ ಎಫ್‌ಐಆರ್ ರದ್ದು ಕೋರಿ ನಟ ಉಪೇಂದ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ಪೀಠ ಮಧ್ಯಂತರ ತಡೆ ನೀಡಿ ಆದೇಶ ಮಾಡಿದೆ.

ಹೈಕೋರ್ಟ್‌ನಲ್ಲಿ ನಡೆದ ವಾದ; ಎರಡೂ ಕಡೆ ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ಅರ್ಜಿದಾರರು ಯಾವುದೇ ಜಾತಿಯ ವ್ಯಕ್ತಿಯನ್ನು ಉದ್ದೇಶಿಸಿ ಹೇಳಿಕೆ ನೀಡಿಲ್ಲ. ಮೇಲಾಗಿ ಉದ್ದೇಶಪೂರ್ವಕವಾಗಿ ಅರ್ಜಿದಾರರು ಹೇಳಿಕೆ ನೀಡಿಲ್ಲ. ಇಂತಹ ಉದ್ದೇಶಪೂರ್ವಕವಲ್ಲದ ಹೇಳಿಕೆಯು ಜಾತಿ ನಿಂದನೆ ಆರೋಪದಡಿ ಬರುವುದಿಲ್ಲ ಎಂದು ಹೇಳಿತು.
ಅಲ್ಲದೆ, ಒಂದೇ ಆರೋಪಕ್ಕೆ ಎರಡೆರಡು ಎಫ್‌ಐಆರ್ ದಾಖಲಿಸಲಾಗಿದೆ. ಈಗಾಗಲೇ ಮೊದಲನೇ ಎಫ್‌ಐಆರ್‌ಗೆ ನ್ಯಾಯಾಲಯ ತಡೆ ಸಹ ನೀಡಲಾಗಿದೆ ಎಂದು ಅಭಿಪ್ರಾಯಪಟ್ಟು, ಹಲಸೂರು ಗೇಟ್ ಠಾಣಾ ಪೊಲೀಸರು ಉಪೇಂದ್ರ ವಿರುದ್ಧ ದಾಖಲಿಸಿರುವ ಎರಡನೇ ಎಫ್‌ಐಆರ್‌ಗೆ ಮಧ್ಯಂತರ ತಡೆ ನೀಡಿ ವಿಚಾರಣೆ ಮುಂದೂಡಿತು. ಇದೇ ಆರೋಪ ಸಂಬಂಧ ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಆ.14 ರಂದು ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಉಪೇಂದ್ರ ಪರವಾಗಿ ಹಿರಿಯ ವಕೀಲರು ಹಾಜರಾಗಿ, ಜಾತಿ ನಿಂದನೆ ಆರೋಪದ ಮೇಲೆ ಉಪೇಂದ್ರ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ 2ನೇ ಎಫ್‌ಐಆರ್ ದಾಖಲಾಗಿದೆ. ಆ ಎಫ್‌ಐಆರ್ ಅನ್ನು ರದ್ದುಪಡಿಸಲು ಈ ಅರ್ಜಿಯಲ್ಲಿ ಕೋರಲಾಗಿದೆ. ಹಿಂದೆ ಇದೇ ಪ್ರಕರಣ ಸಂಬಂಧ ಚನ್ನಮ್ಮನ ಕೆರೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಮೊದಲನೇ ಎಫ್‌ಐಆರ್‌ಗೆ ಈಗಾಗಲೇ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಒಂದೇ ಆರೋಪಕ್ಕೆ ಎರಡೆರಡು ಎಫ್‌ಐಆರ್ ದಾಖಲಿಸಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ವಾದ ಮಂಡಿಸಿದರು.
ಪ್ರಚಾರಕ್ಕಾಗಿ ದೂರು ಸಲ್ಲಿಕೆ: ಪ್ರಚಾರಕ್ಕಾಗಿ ಉಪೇಂದ್ರ ವಿರುದ್ಧ ದುರುದ್ದೇಶಪೂರಿತವಾಗಿ ದೂರು ನೀಡಿದ್ದಾರೆ. ಹಲಸೂರು ಪೊಲೀಸರಿಗೆ ದೂರು ನೀಡಿದ ದೂರುದಾರರು, ಠಾಣೆ ಮುಂದೆ ಕೇಕ್ ಕತ್ತರಿಸಿದ್ದಾರೆ. ರಾಜ್ಯದ ಸಚಿವರೊಬ್ಬರು ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ಆದರೆ, ಅವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ ಎಂದು ವಾದ ಮಂಡಿಸಿದರು.
ಕೇವಲ ಎನ್‌ಸಿಆರ್ (ಗಂಭೀರ ಸ್ವರೂಪವಲ್ಲದ ಪ್ರಕರಣ) ದಾಖಲಿಸಿದ್ದಾರೆ. ಆದರೆ, ಉಪೇಂದ್ರ ಅವರು ಚಿತ್ರನಟ ಎಂಬ ಕಾರಣಕ್ಕೆ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಉಪೇಂದ್ರ ಪರ ವಕೀಲರು ಕೋರ್ಟ್ ಗಮನ ಸೆಳೆದರು.
ಪೊಲೀಸರ ಪರ ಹಾಜರಾಗಿದ್ದ ರಾಜ್ಯ ಸರ್ಕಾರಿ ಅಭಿಯೋಜಕರು, ಉಪೇಂದ್ರ ಅವರ ಹೇಳಿಕೆಯಿಂದ ಸಮುದಾಯಗಳ ನಡುವೆ ವೈಷಮ್ಯ ಮೂಡಿದೆ. ಇದರಿಂದ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಬಾರದು ಎಂದು ನ್ಯಾಯಾಲಯವನ್ನು ಕೋರಿದರು.












Click it and Unblock the Notifications