ಕೊರೊನಾ 2ನೇ ಡೋಸ್ ಲಸಿಕೆಗಳಿಗೆ ಏನು ಮಾಡುತ್ತೀರಿ; ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ
ಬೆಂಗಳೂರು, ಮೇ 20: ರಾಜ್ಯದಲ್ಲಿ ಕೊರೊನಾ ಸೋಂಕಿನ ವಿರುದ್ಧ ಮೊದಲನೇ ಡೋಸ್ ಲಸಿಕೆ ಪಡೆದ ನಾಗರಿಕರಿಗೆ ಎರಡನೇ ಡೋಸ್ ಲಸಿಕೆಗೆ ಆದ್ಯತೆ ನೀಡಿ ಸೂಕ್ತ ನೀತಿ ನಿಯಮಗಳನ್ನು ರೂಪಿಸಿ ಎಂದು ಗುರುವಾರ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಮೇ 25ರ ಒಳಗೆ ಈ ಕುರಿತು ರೂಪಿಸಿದ ನೀತಿಯನ್ನು ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಬೇಕು ಎಂದು ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಹಾಗೂ ಅರವಿಂದ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ. ಇದೇ ಸಂದರ್ಭ, ರಾಜ್ಯದಲ್ಲಿ ಕೊರೊನಾ ಲಸಿಕೆ ಅಭಾವ ಉಂಟಾಗಿರುವ ಕುರಿತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಮುಂದೆ ಓದಿ...

"60 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಸಿಗುತ್ತಿಲ್ಲ"
ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟವರಿಗೂ ಲಸಿಕೆ ದೊರೆಯುತ್ತಿಲ್ಲ. 45 ವರ್ಷ ಮೇಲ್ಪಟ್ಟವರಿಗೆ ಖಾಸಗಿಯವರು ಲಸಿಕೆ ನೀಡಲು ಅವಕಾಶವಿದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಲಸಿಕೆ ಅಭಾವ ಗಂಭೀರ ವಿಷಯ. ಆರೋಗ್ಯ ಹಕ್ಕು ಜೀವಿಸುವ ಹಕ್ಕು ಕೂಡ ಹೌದು. ಈ ವಿಷಯದಲ್ಲಿ ಆರ್ಟಿಕಲ್ 14ರ ಉಲ್ಲಂಘನೆಯೂ ಆಗುತ್ತಿದೆ ಎಂದು ಹೇಳಿದೆ. ಲಸಿಕೆಗಳ ಕೊರತೆ ಇದ್ದ ಸಂದರ್ಭ ರಾಜ್ಯ ಸರ್ಕಾರ ಸೂಕ್ತ ನೀತಿ ನಿಯಮಗಳನ್ನು ರೂಪಿಸಬೇಕು ಎಂದಿದ್ದು, ಮುಂದಿನ ಮಂಗಳವಾರದ ಒಳಗೆ ಇದನ್ನು ಪ್ರಸ್ತುತಪಡಿಸಬೇಕು ಎಂದು ಆದೇಶಿಸಿದೆ.

"ಲಸಿಕೆಗಳಿಗೆ ಏನು ಮಾಡುತ್ತೀರಿ?"
ರಾಜ್ಯದಲ್ಲಿ ಕೊರೊನಾ ಲಸಿಕೆಗಳ ಅಭಾವ ಎದುರಾಗಿರುವ ಪರಿಸ್ಥಿತಿ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ನಿರ್ದೇಶನವನ್ನು ನ್ಯಾಯಾಲಯ ನೀಡಿದೆ. ರಾಜ್ಯ ಸರ್ಕಾರದ ಮಾಹಿತಿ ಪ್ರಕಾರ 58,34,050 ಫಲಾನುಭವಿಗಳು ಎರಡನೇ ಡೋಸ್ ಲಸಿಕೆಯನ್ನು ಪಡೆಯಬೇಕಿದೆ. 4 ರಿಂದ 6 ವಾರಗಳ ಒಳಗೆ ಕೊವ್ಯಾಕ್ಸಿನ್ ಎರಡನೇ ಡೋಸ್ ಪಡೆಯಬೇಕಿದ್ದು, ಸದ್ಯಕ್ಕೆ 97,440 ಡೋಸ್‌ಗಳ ಲಸಿಕೆಗಳು ಮಾತ್ರ ಲಭ್ಯವಿವೆ. ಇನ್ನುಳಿದ ಲಸಿಕೆಗಳಿಗೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದೆ.

ಕೇಂದ್ರ, ರಾಜ್ಯ ಸರ್ಕಾರ ಸ್ಪಷ್ಟತೆ ಹೊಂದಿರಬೇಕು ಎಂದ ಕೋರ್ಟ್
ಈ ಹಿಂದೆ ಕೋವಿಶೀಲ್ಡ್ ಲಸಿಕೆಯ ಡೋಸ್‌ಗಳ ನಡುವಿನ ಅಂತರವು 6-8 ವಾರಗಳಿದ್ದು, ತಜ್ಞರ ಸಮಿತಿ ಸಲಹೆ ಮೇರೆಗೆ ಈ ಅವಧಿಯನ್ನು 12-16 ವಾರಗಳಿಗೆ ಇಳಿಸಲಾಗಿದೆ ಎಂದು ನ್ಯಾಯಾಲಯ ಮಾಹಿತಿ ನೀಡಿದೆ. ಖಾಸಗಿ ಕೇಂದ್ರಗಳು 45 ವರ್ಷ ಕೆಳಗಿನವರಿಗೆ ಮೊದಲ ಡೋಸ್ ಲಸಿಕೆ ನೀಡುತ್ತಿರುವುದಾಗಿಯೂ ತಿಳಿಸಿದೆ. ಈ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಪಷ್ಟತೆ ಹೊಂದಿರಬೇಕು ಎಂದು ತಿಳಿಸಿದೆ.

ಆಮ್ಲಜನಕ ಪೂರೈಕೆ ಕುರಿತು ಪ್ರಸ್ತಾಪ
ಇದೇ ಸಂದರ್ಭ ರಾಜ್ಯದಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಹಾಗೂ ಆಮ್ಲಜನಕದ ಸರಬರಾಜಿನ ಕುರಿತು ಪ್ರಸ್ತಾಪಿಸಿ, ಇನ್ನೂ ರಾಜ್ಯದ ಅವಶ್ಯಕತೆಗೆ ತಕ್ಕಂತೆ ಆಮ್ಲಜನಕ ಪೂರೈಕೆಯಾಗಿಲ್ಲ ಎಂದು ಹೇಳಿದೆ. ಮೇ 17-18ಕ್ಕೆ ರಾಜ್ಯಕ್ಕೆ ನಿಗದಿಯಾಗಿದ್ದ ಆಮ್ಲಜನಕ ದೊರೆತಿಲ್ಲ ಎಂದು ಹೇಳಿ, ಜಿಲ್ಲಾ ಮಟ್ಟದಲ್ಲಿ ಈ ಕುರಿತು ಅಂಕಿ ಅಂಶಗಳನ್ನು ನೀಡುವಂತೆ ಕೇಳಿದೆ.












Click it and Unblock the Notifications