ದಾವಣಗೆರೆಯಲ್ಲಿ ಹೆಲಿಕಾಪ್ಟರ್ ಆಂಬುಲೆನ್ಸ್ ಸೇವೆಗೆ ಚಾಲನೆ
ದಾವಣಗೆರೆ, ಮೇ 06: ರಾಜ್ಯದಲ್ಲೇ ಮೊದಲ ಬಾರಿಗೆ ಹೆಲಿಕಾಪ್ಟರ್ ಆಂಬುಲೆನ್ಸ್ ಸೇವೆಯ ಯೋಜನೆಗೆ ಗುರುವಾರ ಚಾಲನೆ ನೀಡಲಾಯಿತು. ಅಪಘಾತಗಳಲ್ಲಿ ಗಾಯಗೊಂಡ ಮತ್ತು ತುರ್ತು ಚಿಕಿತ್ಸೆ ಅವಶ್ಯವಿರುವ ಹೃದ ಯರೋಗಿಗಳಿಗೆ ತ್ವರಿತವಾಗಿ ಆಸ್ಪತ್ರೆಗೆ ದಾಖಲಿಸಲು ಬೆಂಗಳೂರಿನ ಏವಿಯೇಟರ್ ಸಂಸ್ಥೆಯು ಏರ್ ಆಂಬುಲೆನ್ಸ್ ಸೇವೆ ಆರಂಭಿಸುತ್ತಿದೆ.
ದಾವಣಗೆರೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾ ಶಂಕರ ಎಸ್. ಗುಳೇದ ಅವರು ಏರ್ ಆಂಬ್ಯುಲೆನ್ಸ್ ಯೋಜನೆಗೆ ಚಾಲನೆ ನೀಡಿದರು.[ಜನ ಸಾಮಾನ್ಯರಿಗೂ ಏರ್ ಆಂಬುಲೆನ್ಸ್ ಸೌಲಭ್ಯ]
ಆಂಬುಲೆನ್ಸ್ ಸೇವೆಗೆ 'ಏರ್‌ಬಸ್ ಎಚ್1' ಕಾಪ್ಟರ್ ಬಳಕೆ ಮಾಡಲಾಗುವುದು. ಕಾಪ್ಟರ್‌ನಲ್ಲಿ ರೋಗಿಗೆ ಪ್ರಥಮ ಚಿಕಿತ್ಸೆ ನೀಡಲು ಇಬ್ಬರು ಪ್ಯಾರಾ ಮೆಡಿಕಲ್ ಸಿಬ್ಬಂದಿ, ಇಬ್ಬರು ಪೈಲಟ್ ಗಳು ಕಾರ್ಯನಿರ್ವಹಿಸಲಿದ್ದಾರೆ. ಅತ್ಯಾಧು ನಿಕ ಗುಣಮಟ್ಟದ ಐಸಿಯು ಮತ್ತು ವೈದ್ಯಕೀಯ ಉಪಕರಣಗಳು ಹೆಲಿಕಾಪ್ಟರ್‌ನಲ್ಲಿ ಲಭ್ಯ ಇರಲಿವೆ ಎಂದು ತಿಳಿಸಿದರು.

ಏವಿಯೇಟರ್ಸ್ ಆಂಬುಲೆನ್ಸ್ ಸಂಸ್ಥೆ ಮೊದಲ ಹಂತವಾಗಿ ಚಂದಾದಾರರ ನೋಂದಣಿ ಆರಂಭಿಸಿದ್ದು, ಇದೇ ವರ್ಷದ ಕೊನೆಯಲ್ಲಿ ಸೇವೆ ಆರಂಭಿಸಲಿದೆ. ಕುಕ್ಕವಾಡ ಸಮೀಪ ಸಂಸ್ಥೆಯ ಕಚೇರಿ ಆರಂಭಿಸಿ ಸೇವೆ ನೀಡುವ ಉದ್ದೇಶ ಇದೆ ಎಂದು ಸಂಸ್ಥೆಯ ಸಿಬ್ಬಂದಿ ತಿಳಿಸಿದರು. ಏವಿಯೇಟರ್ಸ್ ಸಂಸ್ಥೆಯ ಸಂಸ್ಥಾಪಕ ಕ್ಯಾಪ್ಟನ್ ಅರುಣ್ ಶರ್ಮ ಉಪಸ್ಥಿತರಿದ್ದರು.
ಪತಿ, ಪತ್ನಿ, 18ವರ್ಷದೊಳಗಿನ ಎರಡು ಮಕ್ಕಳನ್ನು ಒಳಗೊಂಡ ಒಂದು ಕುಟುಂಬ ಪ್ರತಿ ವರ್ಷ ಕಂಪನಿಗೆ 17,999 ರೂ. ಪಾವತಿಸಬೇಕು. ಯೊಜನೆಯ ಸದಸ್ಯತ್ವ ಪಡೆದ ಕುಟುಂಬದವರಿಗೆ ವರ್ಷದಲ್ಲಿ 3 ಬಾರಿ ಹೆಲಿಕಾಪ್ಟರ್ ಅಗತ್ಯವಿದ್ದರೂ ನೀಡಲಾಗುವುದು ಎನ್ನುತ್ತಾರೆ ಕಂಪನಿಯ ಅಧಿಕಾರಿಗಳು. ಏವಿಯೇಟರ್ಸ್ ಏರ್ ರೆಸ್ಕ್ಯೂ ಕಂಪನಿ ಅಮೆರಿಕದ ಏರ್ಮೆಡಿಕಲ್ ಗ್ರೂಪ್ ಆಫ್ ಹೋಲ್ಡಿಂಗ್ ಕಂಪನಿಯೊಂದಿಗೆ ಸಹಭಾಗಿತ್ವ ಪಡೆದಿದೆ.












Click it and Unblock the Notifications