ಬೆಂಗಳೂರು, ಚಿಕ್ಕಮಗಳೂರು, ಮಂಡ್ಯ ಜಿಲ್ಲೆಗಳಲ್ಲಿ ಭಾರಿ ಮಳೆ
ಬೆಂಗಳೂರು, ಅಕ್ಟೋಬರ್ 17: ರಾಜ್ಯಾದ್ಯಂತ ನೈಋತ್ಯ ಮುಂಗಾರು ಚುರುಕುಗೊಂಡಿದೆ, ಬೆಂಗಳೂರು, ಚಿಕ್ಕಮಗಳೂರು ಹಾಗೂ ಮಂಡ್ಯದಲ್ಲಿ ಭಾರಿ ಮಳೆಯಾಗುತ್ತಿದೆ.
ಮುಂದಿನ 28 ಗಂಟೆಗಳಲ್ಲಿ ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕದ ಕರಾವಳಿ ಸೇರಿದಂತೆ ಇನ್ನಿತರೆ ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈಗಾಗಲೇ ಕಳೆದ ಎರಡು ದಿನಗಳ ಹಿಂದೆ ರಾಜ್ಯದ ಕರಾವಳಿ ಭಾಗಗಳಲ್ಲಿ ಅಕ್ಟೋಬರ್ 18,19ರಂದು ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿತ್ತು. ಅದರಂತೆ ಒಂದು ದಿನ ಮುಂಚಿತವಾಗಿಯೇ ಮಳೆ ಮತ್ತೆ ಆರಂಭವಾಗಿದೆ. ಬೆಂಗಳೂರಿನ ಕಾರ್ಪೊರೇಷನ್, ಮಲ್ಲೇಶ್ವರ, ವಿಧಾನಸೌಧ, ವಿಜಯನಗರ, ಕೆಂಗೇರಿ, ಮತ್ತಿಕೆರೆ, ಮೈಸೂರು ರಸ್ತೆ, ಜಯನಗರ ಸೇರಿದಂತೆ ವಿವಿಧ ಕಡೆ ಮಳೆಯಾಗಿದೆ.

ಇನ್ನು ಮಂಡ್ಯ ಹಾಗೂ ಚಿಕ್ಕಮಗಳೂರಿನಲ್ಲಿಯೂ ಮಳೆ ಚುರುಕಾಗಿದೆ. ಭಾರಿ ಮಳೆಗೆ ಕೊಪ್ಪ ತಾಲೂಕಿನ ಹುಡ್ಲುಗದ್ದೆ ಗ್ರಾಮದಲ್ಲಿ ಭೂಕುಸಿತ ಉಂಟಾಗಿದ್ದು, ಗ್ರಾಮದ 30 ಕಡೆ ಧರೆ ಬಿರುಕುಬಿಟ್ಟಿದೆ. ಭೂಕುಸಿತದಿಂದಾಗಿ 70 ಅಡಿಯಷ್ಟು ಆಳಕ್ಕೆ ಭೂಮಿ ಸರಿದಿದೆ. ಇನ್ನು ಮಂಡ್ಯದಲ್ಲೂ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗಿನಲ್ಲೂ ಮಳೆ ಆರಂಭವಾಗಿದೆ.
ತೆಲಂಗಾಣ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ವಿಜಯಪುರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಗಳಿವೆ.
ಇನ್ನೆರೆಡು ದಿನಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಮಾತ್ರವಲ್ಲದೇ ಬೆಂಗಳೂರು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮತ್ತು ಉತ್ತರ ಒಳನಾಡಿನ ಕೆಲ ಪ್ರದೇಶಗಳಲ್ಲಿ ಮಳೆ ಬೀಳುವ ಸಾಧ್ಯತೆಗಳಿವೆ.
ರಾಜ್ಯದ ಕರಾವಳಿ ಪ್ರದೇಶದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಹಗುರದಿಂದ ಕೂಡಿದ ಭಾರಿ ಮಳೆ ಗುಡುಗು-ಸಿಡಿಲು ಸಹಿತ ಸುರಿಯುವ ನಿರೀಕ್ಷೆ ಇದೆ. ವಿಶೇಷವಾಗಿ ಮಲೆನಾಡಿನ ಜಿಲ್ಲೆಗಳಲ್ಲಿ ದಟ್ಟ ಮೋಡವಿದ್ದು, ಭಾರಿ ಮಳೆ ಬೀಳಲಿದೆ. ತಮಿಳುನಾಡಿನಲ್ಲಿ ದಟ್ಟಮೋಡಗಳು ಕವಿದಿದ್ದು, ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲೂ ಉತ್ತಮ ಮಳೆ ಬೀಳುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.












Click it and Unblock the Notifications