ಭಾರಿ ಮಳೆ; ರಾಜ್ಯದ ಈ ಜಲಾಶಯ ಬಹುತೇಕ ಭರ್ತಿ
ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ಜಲಾಶಯಗಳ ಒಳಹರಿವು ಹೆಚ್ಚಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೂಡ ವ್ಯಾಪಕ ಮಳೆಯಾಗುತ್ತಿದ್ದು, ತುಂಗಾ ಜಲಾಶಯ ಬಹುತೇಕ ಭರ್ತಿಯಾಗುವ ಹಂತ ತಲುಪಿದೆ.
ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಶಿವಮೊಗ್ಗದ ಗಾಜನೂರಿನಲ್ಲಿರುವ ತುಂಗಾ ಜಲಾಶಯ ಬಹುತೇಕ ಭರ್ತಿಯಾಗಿದೆ. ಯಾವುದೇ ಕ್ಷಣದಲ್ಲಿ ಜಲಾಶಯದಿಂದ ನೀರನ್ನು ಹೊರಬಿಡುವ ಸಾಧ್ಯತೆ ಇದೆ.

ಮಂಗಳವಾರ ತುಂಗಾ ಜಲಾಶಯದ ಒಳಹರಿವು 3,339 ಕ್ಯೂಸೆಕ್ ಇದ್ದರೆ, 334 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ತುಂಗಾ ಜಲಾಶಯದ ಗರಿಷ್ಠ ನೀರಿನ ಮಟ್ಟ 588.24 ಅಡಿಯಾಗಿದ್ದು, ಇಂದು ಜಲಾಶಯದ ನೀರಿನ ಮಟ್ಟ 588.02 ಅಡಿ ಇತ್ತು.
ರಾಜ್ಯದ ಜಲಾಶಯಗಳಿಗೆ ನೀರು
ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದಲ್ಲಿ ಭಾರಿ ಮಳೆಯಾಗುತ್ತಿದ್ದು,
ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಕೃಷ್ಣ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳು ತುಂಬಿ ಹರಿಯುತ್ತಿವೆ. ಬ್ಯಾರೇಜ್‌ಗಳು ಭರ್ತಿಯಾಗುತ್ತಿದ್ದು ಜಲಾಶಯಗಳಿಗೆ ಒಳಹರಿವು ಹೆಚ್ಚಾಗುತ್ತಿದೆ.
ದಕ್ಷಿಣ ಒಳನಾಡಿನ ಪ್ರದೇಶದಲ್ಲಿ ಕೂಡ ಉತ್ತಮ ಮಳೆಯಾಗುತ್ತಿರುವ ಕಾರಣ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಹಾರಂಗಿ ಜಲಾಶಯದ ಒಳಹರಿವು 520 ಕ್ಯೂಸೆಕ್ಸ್ ಇದ್ದರೆ ಹೊರ ಹರಿವು 200 ಕ್ಯೂಸೆಕ್ಸ್ ಇದೆ. 8.50 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 3.12 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಹೇಮಾವತಿ ಜಲಾಶಯದ ಒಳಹರಿವು 1376 ಕ್ಯೂಸೆಕ್ಸ್ ಇದ್ದರೆ, ಹೊರಹರಿವು 250 ಕ್ಯೂಸೆಕ್ಸ್ ಆಗಿದೆ. 37.10 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 10.14 ಟಿಎಂಸಿ ಅಡಿ ನೀರಿದೆ.
ಕೆಆರ್ ಎಸ್ ಜಲಾಶಯದಲ್ಲಿ 13.38 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, 1759 ಕ್ಯೂಸೆಕ್ಸ್ ಒಳಹರಿವು ಇದ್ದು, 450 ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದೆ. ಕಬಿನಿ ಜಲಾಶಯದ ಒಳಹರಿವು 2263 ಕ್ಯೂಸೆಕ್ಸ್ ಇದ್ದು, 300 ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದೆ.












Click it and Unblock the Notifications