Karnataka Rains : ಕರ್ನಾಟಕದ ವಿವಿಧ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅ.18 ಜೋರು ಮಳೆ ಸಾಧ್ಯತೆ: IMD
ಬೆಂಗಳೂರು, ಅಕ್ಟೋಬರ್ 17: ಕರ್ನಾಟಕ ರಾಜ್ಯದಲ್ಲಿ ಮಂಗಳವಾರ ಅಕ್ಟೋಬರ್ 18ರಂದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗುಡುಗು ಮಿಂಚು ಸಹಿತ ಮಳೆ ಆಗಲಿದೆ. ಕೆಲವು ರಸ್ತೆಗಳಲ್ಲಿ ಜೋರು ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಂಗಳವಾರ ವಿವಿಧ ಹೆದ್ದಾರಿ ಅನುಸರಿಸಿ ಮಂಗಳೂರು, ಮೈಸೂರು, ಬೆಳಗಾವಿ ಇನ್ನಿತರೆಡೆ ಹೋಗುವ ಪ್ರಯಾಣಿಕರು ಮುನ್ಸೂಚನೆ ಗಮನಿಸಿ ತೆರಳಿದರೆ ಉತ್ತಮ. ಇಲ್ಲವಾದರೆ ಸೂಕ್ತ ಮುಂಜಾಗ್ರತೆ ವಹಿಸಿ ಸಾಗುವ ಅಗತ್ಯವಿದೆ.
ಕರ್ನಾಟಕ ಮಳೆ ಮುನ್ಸೂಚನೆ ವರದಿ ಪ್ರಕಾರ ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಇರುವ ಎಕ್ಸ್‌ಪ್ರೆಸ್ ವೇಯಲ್ಲಿ ಮಂಗಳವಾರ ಹಗುರದಿಂದ ಸಾಧಾರಣವಾಗಿ ಮಳೆ ಬೀಳಲಿದೆ. ಇದೇ ರೀತಿ ಬೆಂಗಳೂರು-ಮಂಗಳೂರು ಹೆದ್ದಾರಿ ರಸ್ತೆಯಲ್ಲೂ ಆಗಾಗ ಸಾಮಾನ್ಯವಾಗಿ ಮಳೆ ಆಗಬಹುದು. ಹೀಗಾಗಿ ಈ ಮಾರ್ಗಗಳಲ್ಲಿ ಸಂಚರಿಸುವವರಿಗೆ ಅಷ್ಟಾಗಿ ಸಂಚಾರ ತೊಂದರೆ ಆಗದು ಎನ್ನಲಾಗಿದೆ.

ಬೆಂಗಳೂರು- ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ವರ್ಷಧಾರೆ ದಾಖಲಾಗಿದೆ. ಇದರಲ್ಲಿ ಬೆಂಗಳೂರಿನಿಂದ ಚಿತ್ರದುರ್ಗದವರೆಗೆ ಕೆಲವು ಸ್ಥಳಗಳಲ್ಲಿ ಮಾತ್ರ ಹಗುರ ಮಳೆ ಯಾದರೆ, ಚಿತ್ರದುರ್ಗದಿಂದ ಬೆಳಗಾವಿ ವರೆಗೆ ಬಹಳಷ್ಟು ಕಡೆಗಳಲ್ಲಿ ಗಾಳಿ, ಗುಡುಗು ಸಹಿತ ವ್ಯಾಪಕವಾಗಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಕಲಬುರಗಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲೂ ಸಹ ಆಗಾಗ ಜಿಟಿ ಜಿಟಿ ಮಳೆ ಸುರಿದು ಸಂಚಾರಕ್ಕೆ ತುಸು ತೊಂದರೆ ಕೊಡಲಿದೆ. ಬೆಂಗಳೂರಿನಿಂದ ಚಿತ್ರದುರ್ಗವರೆಗೆ ಕಡಿಮೆ ಪ್ರದೇಶದಲ್ಲಿ ಬೀಳುವ ಮಳೆಯು ಚಿತ್ರದುರ್ಗದಿಂದ ಕಲಬುರಗಿವರೆಗೆ ಅನೇಕ ಸ್ಥಳಗಳಲ್ಲಿ ಹೆಚ್ಚು ಸುರಿಯುವ ಲಕ್ಷಣಗಳು ಕಂಡು ಬಂದಿವೆ.

ಇಷ್ಟು ಹೆದ್ದಾರಿಗಳ ಪೈಕಿ ಕಾರವಾರ ಭಾಗದಲ್ಲಿ ಅಧಿಕ ಉಷ್ಣಾಂಶ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಂಭವವಿದೆ. ಹೆದ್ದಾರಿಗಳಲ್ಲಿ ಕೆಲವೊಮ್ಮೆ ಬಿಸಿಲಿನ ದರ್ಶನವಾದರೂ ಮಳೆಯ ವಾತಾವರಣವೇ ಇಡಿ ದಿನ ಮುಂದುವರಿಯಲಿದೆ. ಇದರ ಹೊರತು ಯಾವುದೇ ಗಂಭೀರ ಬದಲಾವಣೆಗಳು ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications