Karnataka Rain: ಯುಗಾದಿ ಸಂಭ್ರಮ ಹೆಚ್ಚಿಸಿದ ಮಳೆ; ರಾಜ್ಯದ ಹಲವೆಡೆ ವರ್ಷಧಾರೆ
ಕರ್ನಾಟಕದ ಜನರಿಗೆ ಯುಗಾದಿ ಹಬ್ಬ ಡಬಲ್ ಖುಷಿ ತಂದಿದೆ. ಒಂದು ಕಡೆ ಹಬ್ಬದ ಸಂಭ್ರಮವಾದರೆ ಮತ್ತೊಂದೆಡೆ ಹಬ್ಬದ ದಿನವೇ ರಾಜ್ಯದ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.
ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳು ಅಲ್ಲಲ್ಲಿ ಉತ್ತಮವಾಗಿ ಮಳೆಯಾಗಿದ್ದು ಸಂತಸ ಹೆಚ್ಚಿಸಿತ್ತು. ಯುಗಾದಿ ಬಳಿಕ ರಾಜ್ಯದಲ್ಲಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಕೂಡ ಹೇಳಿತ್ತು, ಅದರಂತೆ ಹಲವು ಜಿಲ್ಲೆಗಳಲ್ಲಿ ಹಬ್ಬದ ದಿನ ಮಳೆಯಾಗಿದೆ.

ಹಾವೇರಿ ಜಿಲ್ಲೆಯಲ್ಲಿ ಹಬ್ಬದ ದಿನ ಮಳೆಯಾಗಿದ್ದು ಖುಷಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲೂ ಕೂಡ ಯುಗಾದಿ ಹಬ್ಬದ ದಿನ ಮಳೆ ಸುರಿದಿದ್ದು, ಜನರ ಖುಷಿ ಡಬಲ್ ಆಗಿದೆ. ಶಿಕಾರಿಪುರ ತಾಲೂಕಿನ ಅಡಗಂಟಿ ಗ್ರಾಮದಲ್ಲಿ ಮಳೆಯಾಗಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳ್ಳಿ, ನ್ಯಾಮತಿ ಭಾಗದಲ್ಲಿ ಕೂಡ ಹಬ್ಬದ ದಿನ ಮಳೆಯಾಗಿದ್ದು ಜನರ ಹಬ್ಬದ ಸಂಭ್ರಮ ಹೆಚ್ಚಿಸಿದೆ.
Adaganti village, Shikaripua taluk of Shimoga district ☔️☔️
— Naveen Reddy (@navin_ankampali) April 9, 2024
Credits - Praveen pic.twitter.com/opocpYc7ZT
ಕುಣಿದು ಕುಪ್ಪಳಿಸಿದ ಜನತೆ
ವಿಜಯನಗರ ಜಿಲ್ಲೆಯಲ್ಲೂ ಮಳೆಯಾಗಿದ್ದು, ಜನರ ಖುಷಿ ಹೆಚ್ಚಾಗಿದೆ. ಉಚ್ಚೆಂಗಮ್ಮ ಜಾತ್ರೆ ವೇಳೆ ಕೆಲ ಕಾಲ ಮಳೆಯಾಗಿದ್ದು, ಬಿಸಿಲಿನಿಂದ ಬೇಸತ್ತಿದ್ದ ಜನ ಮಳೆ ಬಂದ ತಕ್ಷಣ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬಸವಪಟ್ಟಣದಲ್ಲಿ ಕೂಡ ಮಳೆಯಾಗಿದೆ.
Rain reported in Haveri today evening.
— ರವಿ ಕೀರ್ತಿ ಗೌಡ (@ravikeerthi22) April 9, 2024
Showers across parts of Ballari , Vijayapura , Haveri & Bidar district.#KarnatakaRains https://t.co/rQRyH2MUDE
ಏಪ್ರಿಲ್ 15ರವರೆಗೆ ರಾಜ್ಯದಲ್ಲಿ ಮಳೆ
ರಾಜ್ಯದಲ್ಲಿ ಏಪ್ರಿಲ್ 15ರವರೆಗೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಚದುರಿದಂತೆ ಮಳೆಯಾಗಲಿದೆ ಎಂದು ಮುನ್ಸೂಚನೆಯಲ್ಲಿ ತಿಳಿಸಿದೆ.
ಬೆಂಗಳೂರು ನಗರದಲ್ಲಿ ಕೂಡ ಈ ವಾರಾಂತ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಏಪ್ರಿಲ್ 13 ಅಥವಾ 14 ರಂದು ಬೆಂಗಳೂರಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಬಿಸಿಲಿನಿಂದ ಹೈರಾಣಾಗಿರುವ ಬೆಂಗಳೂರು ನಗರದ ಜನತೆಗೆ ಇದು ಸಂತಸದ ಸುದ್ದಿಯಾಗಿದೆ.
ಕೊಡಗು, ಚಿಕ್ಕಮಗಳೂರು, ಮೈಸೂರು, ಸೇರಿದಂತೆ ಹಲವು ಕಡೆಗಳಲ್ಲಿ ಈಗಾಗಲೆ ಮಳೆಯಾಗುತ್ತಿತ್ತು. ಹಬ್ಬದ ದಿನ ದಾವಣಗೆರೆ, ಹಾವೇರಿ, ಚಿತ್ರದುರ್ಗ, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಿದೆ. ಇದೇ ರೀತಿ ಮಳೆ ಮುಂದುವರೆಯಲಿ ಎಂದು ರಾಜ್ಯದ ಜನ ಪ್ರಾರ್ಥನೆ ಮಾಡುತ್ತಿದ್ದಾರೆ.
ಏಪ್ರಿಲ್ 13 ರಂದು ಅಶ್ವಿನಿ ಮಳೆ ಆರಂಭವಾಗಲಿದ್ದು, ರಾಜ್ಯದಲ್ಲಿ ಮಳೆಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಎಲ್ ನಿನೊ ಪರಿಣಾಮ ಕಡಿಮೆಯಾಗಿದ್ದು, ರಾಜ್ಯದಲ್ಲಿ ಈ ಬಾರಿ ವಾಡಿಕೆಯಂತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.












Click it and Unblock the Notifications