Karnataka Rain: ನದಿಗಳಿಗೆ ಜೀವಕಳೆ, ಜಲಾಶಯಗಳಿಗೆ ಹರಿದುಬರುತ್ತಿದೆ ನೀರು
ಜೂನ್‌ನಲ್ಲಿ ಮುಂಗಾರು ಕೈಕೊಟ್ಟ ನಂತರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿತ್ತು. ಆದರೆ ಜುಲೈನಲ್ಲಿ ಹಲವು ಜಿಲ್ಲೆಗಳಲ್ಲಿ ಮಳೆ ಚುರುಕುಗೊಂಡಿದ್ದು ಜನರಲ್ಲಿ ನೆಮ್ಮದಿ ತಂದಿದೆ. ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಜುಲೈ 10 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಬಹುನಿರೀಕ್ಷಿತ ಮುಂಗಾರು ಮಳೆ ರಾಜ್ಯಕ್ಕೆ ಆಗಮಿಸಿದ್ದು, ರೈತ ಸಮುದಾಯದಲ್ಲಿ ಸಂತಸ ಮೂಡಿಸಿದೆ.

ಬೆಂಗಳೂರಿನಲ್ಲಿ ಕೂಡ ಗುರುವಾರ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇದ್ದು, ಹಲವು ಕಡೆಗಳಲ್ಲಿ ತುಂತುರು ಮಳೆಯಾಗುತ್ತಿದೆ. ಕೆಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದ್ದು, ರಸ್ತೆಗಳು ಜಲಾವೃತವಾಗಿದ್ದು ಟ್ರಾಫಿಕ್ ಸಮಸ್ಯೆಗೆ ಕಾರಣವಾಯಿತು.
ಕರಾವಳಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ
ಇನ್ನು ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಭಾರಿ ಮಳೆಯಿಂದಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಸ್ವರ್ಣಧಾರ, ನೇತ್ರಾವತಿ, ಕಮಲಶಿಲೆ, ಕುಬ್ಜಾ ನದಿಗಳು ತುಂಬಿಹರಿಯುತ್ತಿವೆ. ಸಮುದ್ರ ಅಬ್ಬರಿಸುತ್ತಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಭಾರಿ ಮಳೆಯಿಂದಾಗಿ ಕರಾವಳಿ ಜಿಲ್ಲೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಗಾಳಿ ಸಹಿತ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ.
ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ರಾಯಚೂರು, ಚಿಕ್ಕಮಗಳೂರು, ದಾವಣಗೆರೆ, ಕೊಡಗು, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಮೈಸೂರು, ರಾಮನಗರ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರದಲ್ಲೂ ಮಳೆಯಾಗುವ ನಿರೀಕ್ಷೆಯಿದೆ.
ಮೈದುಂಬಿಕೊಳ್ಳುತ್ತಿರುವ ನದಿಗಳು, ಜಲಾಶಯಗಳಿಗೆ ಜೀವಕಳೆ
ಮಳೆ ತಡವಾದ ಕಾರಣ ರಾಜ್ಯದ ಬಹುತೇಕ ಜಲಾಶಯಗಳು ಖಾಲಿಯಾಗಿದ್ದವು. ಈಗ ಮಳೆ ಚುರುಕುಗೊಂಡಿದ್ದು ಎಲ್ಲಾ ನದಿಗಳು ಮೈದುಂಬಿಕೊಳ್ಳುತ್ತಿದ್ದು ಜಲಾಶಯಗಳಿಗೆ ಜೀವ ಕಳೆ ಬರುತ್ತಿದೆ. ಕೆಆರ್ ಎಸ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 10.17 ಟಿಎಂಸಿ ತಲುಪಿದೆ. ಕಳೆದ ವರ್ಷ ಈ ಬಾರಿ 34.06 ಟಿಎಂಸಿ ನೀರು ಇತ್ತು. ಸದ್ಯ ಒಳಹರಿವು 1,249 ಕ್ಯೂಸೆಕ್ ಇದೆ.
ಆಲಮಟ್ಟಿ ಅಣೆಕಟ್ಟೆಯಲ್ಲಿ ಕಳೆದ ವರ್ಷ 50.04 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದರೆ 19.24 ಟಿಎಂಸಿ ನೀರು ದಾಖಲಾಗಿದೆ. ತುಂಗಭದ್ರಾ ಅಣೆಕಟ್ಟಿನಲ್ಲಿ 259 ಕ್ಯೂಸೆಕ್ ನೀರಿನ ಒಳಹರಿವು ಇದ್ದು ಮಳೆಯ ನಂತರ 3.07 ಟಿಎಂಸಿ ನೀರನ್ನು ಹೊಂದಿದೆ. ಕಳೆದ ವರ್ಷ ಇದೇ ವೇಳೆ ಅಣೆಕಟ್ಟೆಯಲ್ಲಿ 50.7 ಟಿಎಂಸಿ ನೀರು ಇತ್ತು.
ಲಿಂಗನಮಕ್ಕಿ ಅಣೆಕಟ್ಟೆಗೆ 9,237 ಕ್ಯೂಸೆಕ್ ನೀರು ಹರಿದುಬರುತ್ತಿದೆ, ಕಬಿನಿ ಜಲಾಶಯಕ್ಕೆ 3,431 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನಿರಂತರ ಮಳೆಯಾಗುತ್ತಿದೆ. ಭದ್ರಾ ಅಣೆಕಟ್ಟೆಗೆ 2,397 ಕ್ಯೂಸೆಕ್, ಹಾರಂಗಿ ಅಣೆಕಟ್ಟೆಗೆ 1,518 ಕ್ಯೂಸೆಕ್ ಮತ್ತು ಸೂಪಾ ಅಣೆಕಟ್ಟೆಗೆ 1,736 ಕ್ಯೂಸೆಕ್ ನೀರು ಒಳಹರಿವು ಇದೆ.
ವಾರಾಹಿ ಅಣೆಕಟ್ಟು, ಮಲಪ್ರಭಾ ಅಣೆಕಟ್ಟುಗಳಿಗೆ ಇನ್ನೂ ನೀರಿನ ಒಳಹರಿವು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications