'ಛಪಲ' ಎಫೆಕ್ಟ್ : ಇನ್ನೈದು ದಿನ ರಾಜ್ಯಾದ್ಯಂತ ಭಾರೀ ಮಳೆ
ಬೆಂಗಳೂರು, ನವೆಂಬರ್, 03: ಅರಬ್ಬಿ ಸಮುದ್ರದಲ್ಲಿನ ವಾಯುಭಾರ ಕುಸಿತ ಮತ್ತು ಅರೆಬಿಯನ್ ರಾಷ್ಟ್ರಗಳ ಸಮುದ್ರ ತೀರದಲ್ಲಿ ಎದ್ದಿರುವ 'ಛಪಲ' ಚಂಡಮಾರುತದ ಪರಿಣಾಮ ಮುಂದಿನ 4-5 ದಿನ ರಾಜ್ಯಾದ್ಯಂತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೋಮವಾರ ಚಿಕ್ಕಮಗಳೂರು ಜಿಲ್ಲೆಯ ತೊಂಡೆಭಾವಿಯಲ್ಲಿ, ಉತ್ತರ ಕನ್ನಡ ಜಿಲ್ಲೆ ಮಂಕಿಯಲ್ಲಿ ಅತಿಹೆಚ್ಚು ಮಳೆಯಾಗಿದೆ.
ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಭಾರೀ ಮಳೆ ಬೀಳಲಿದೆ. ಉತ್ತರ ಒಳನಾಡು ಹಾಗೂ ಉತ್ತರ ಕರ್ನಾಟಕದ ಕೆಲವೆಡೆ ಚದುರಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.[ಮಳೆ ಹಾನಿ ಚಿತ್ರಗಳಲ್ಲಿ ನೋಡಿ]
ಪಕ್ಕದ ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಕರಾವಳಿಯಲ್ಲಿ ಸುಳಿಗಾಳಿ ಏದ್ದಿದೆ ಪರಿಣಾಮ ಏಕಾಏಕಿ ಮಳೆ ಆರಂಭವಾಗಿದೆ. ಅಕ್ಟೋಬರ್ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು ನವೆಂಬರ್ ತಿಂಗಳ ಆರಂಭದಲ್ಲಿಯೇ ವರುಣ ಆರ್ಭಟಿಸತೊಡಗಿದ್ದಾನೆ.[ಚಂಡಮಾರುತಗಳ ಚೆಂದದ ಹೆಸರಿನ ರಹಸ್ಯ]
ತೊಯ್ದ ಬೆಂಗಳೂರು
ಸೋಮವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಆರಂಭವಾದ ಮಳೆ ತಡರಾತ್ರಿವರೆಗೂ ಸುರಿಯಿತು. ಜಲಕಂಟೇಶ್ವರ ದೇವಾಲಯಕ್ಕೆ ನೀರು ನುಗ್ಗಿತ್ತು. ಎಂಜಿ ರಸ್ತೆ, ಬಸವನಗುಡಿ, ಮೆಜೆಸ್ಟಿಕ್, ಮಾರುಕಟ್ಟೆ ಭಾಗದಲ್ಲಿ ವ್ಯಾಪಕ ಮಳೆ ಸುರಿದ ಪರಿಣಾಮ ನಾಗರಿಕರು ಪರಿತಪಿಸುವಂತಾಗಿತ್ತು.

ಅಕ್ಟೋಬರ್‌ನಲ್ಲಿ ಕಡಿಮೆ ಮಳೆ
ಈ ಸಾಲಿನ ಅಕ್ಟೋಬರ್ ತಿಂಗಳಲ್ಲಿ ಸರಾಸರಿಗಿಂತ ಕಡಿಮೆ ಮಳೆ ದಾಖಲಾಗಿದೆ. ವಾಡಿಕೆ ಪ್ರಕಾರ, ಅಕ್ಟೋಬರ್‌ನಲ್ಲಿ ಸರಾಸರಿ 137 ಮಿ.ಮೀ ಮಳೆಯಾಗಬೇಕು. ಆದರೆ ಈ ಬಾರಿ 92 ಮಿ.ಮೀ ಮಾತ್ರ ಮಳೆ ಸುರಿದಿದೆ. ಆದರೆ ನವೆಂಬರ್ ಆರಂಭದಲ್ಲಿಯೇ ವರುಣ ಆರ್ಭಟಿಸತೊಡಗಿದ್ದಾಬೆ.

ಬೆಂಗಳೂರು ಅಸ್ತವ್ಯಸ್ತ
ಸೋಮವಾರ ಬೆಂಗಳೂರಲ್ಲಿ ಧಾರಾಕರ ಮಳೆ ಸುರಿಯಿತು. ಶಾಂತಿನಗರ, ರಿಚ್ ಮಂಡ್ ವೃತ್ತ, ಬನಶಂಕರಿ, ಜಯನಗರ, ದೊಮ್ಮಲೂರು, ಮೆಜೆಸ್ಟಿಕ್ ಮತ್ತು ಕೆ.ಆರ್.ಮಾರ್ಕೆಟ್ ಸುತ್ತಮುತ್ತ ಸಾಕಷ್ಟು ಮಳೆ ಸುರಿದ ಪರಿಣಾಮ ವಾಹನ ಸವಾರರು ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡರು.

ಮಳೆಗೆ ಕಾರಣವೇನು
ರಾಜ್ಯಕ್ಕೆ ಈಶಾನ್ಯ ಮಾನ್ಸೂನ್ ಮಾರುಗಳ ಆಗಮನವಾಗಿದ್ದು, ಇನ್ನೂ 5 ದಿನಗಳ ಕಾಲ ಭಾರೀ ಮಳೆಯಾಗುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಮಳೆ ಸುರಿದಿದೆ.
ಪುತ್ತೂರು 71.5 ಮಿ.ಮೀ, ಕುಂದಾಪುರ 70.1 ಮಿ.ಮೀ, ಶಿವಮೊಗ್ಗ 63.5 ಮಿ.ಮೀ. ತುಮಕೂರು 54 ಮಿ.ಮೀ, ಉತ್ತರ ಕನ್ನಡ 52.5 ಮಿ.ಮೀ, ಚಿಕ್ಕಬಳ್ಳಾಪುರ 47 ಮಿ.ಮೀ. ಮಳೆಯಾಗಿದೆ.












Click it and Unblock the Notifications