ಕರ್ನಾಟಕದಲ್ಲಿ ಭಾರಿ ಮಳೆ, ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಬೆಂಗಳೂರು, ಏಪ್ರಿಲ್ 24: ಕೊರೊನಾ ಸೋಂಕು ಹರಡದಂತೆ ಲಾಕ್ಡೌನ್ ವಿಧಿಸಿರುವ ನಡುವೆಯೂ ಸೋಂಕು ಹೆಚ್ಚಾಗುತ್ತಲೇ ಇದೆ. ಈ ನಡುವೆ ಇನ್ನು ಮುರ್ನಾಲ್ಕು ದಿನಗಳ ಕೊರೊನಾ ಜೊತೆಗೆ ಭಾರಿ ಮಳೆಯ ವಿರುದ್ಧವೂ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಪಟ್ಟಣಗಳು ಸೆಣೆಸಬೇಕಿವೆ.
Recommended Video
ಏಪ್ರಿಲ್ 23ರಂದು ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆಯಂತೆ, ರಾಜ್ಯದಲ್ಲಿ ಕೊಡಗು, ಹಾಸನ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಈ ಜಿಲ್ಲೆಗಳು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ ಬೀಳಲಿದೆ.
ಮಡಿಕೇರಿಯಲ್ಲಿ ಗುರುವಾರ ಸಂಜೆ ಗುಡುಗು ಸಿಡಿಲು ಆರ್ಭಟದ ಮಳೆ ಸುರಿದಿದೆ. ತುಮಕೂರಿನಲ್ಲಿ ಜೋರು ಮಳೆ ದಾಖಲಾಗಿದೆ. ಏಪ್ರಿಲ್ 28ರ ತನಕ ದಕ್ಷಿಣ ಒಳನಾಡು, ಕರಾವಳಿ ಭಾಗದಲ್ಲಿ ಭಾರಿ ಮಳೆ, ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆ ನಿರೀಕ್ಷೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಯಂತ್ರಣ ಕೇಂದ್ರದ ನಿರ್ದೇಶಕ ಡಾ. ಜಿ.ಎಸ್ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.

ಶಿವಮೊಗ್ಗದ ಅರಸಾಳು, ಹುಂಚದಕಟ್ಟೆಯಲ್ಲಿ 80 ಮಿಮಿ, ಚಿಕ್ಕಮಗಳೂರಿನ ಕಳಸದಲ್ಲಿ 10 ರಿಂದ 20 ಮಿಲಿ ಮೀಟರ್ ಮಳೆ ಬೀಳುವ ಮುನ್ಸೂಚನೆಯನ್ನು ಇಲಾಖೆ ನೀಡಿದೆ.
ಈ ನಡುವೆ ಮಾರ್ಚ್ ತಿಂಗಳಿನಲ್ಲಿ ಬಿಸಿಲಿನಿಂದ ಬೆಂದ ಉತ್ತರ ಕರ್ನಾಟಕ ಭಾಗಕ್ಕೆ ಏಪ್ರಿಲ್ ತಿಂಗಳಿನಲ್ಲೂ ಬಿಸಿಲಿನ ತಾಪ ಕಾಡಲಿದೆ. ಸರಾಸರಿ 34 ರಿಂದ 36 ಡಿಗ್ರಿ ಸೆಲ್ಸಿಯಸ್ ಇದ್ದ ತಾಪಮಾನ ಈಗ 40 ಡಿ. ಸೆಲ್ಸಿಯಸ್ ಗೆ ತಲುಪಿದೆ. ಕಲಬುರಗಿಯಲ್ಲಿ ಅತ್ಯಧಿಕ 42 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬಳ್ಳಾರಿ, ಗದಗ, ರಾಯಚೂರು, ವಿಜಯಪುರ,ಬೀದರ್, ಕೊಪ್ಪಳ, ಚಿತ್ರದುರ್ಗ, ದಾವಣಗೆರೆ, ಮೈಸೂರು, ಮಂಡ್ಯ ಕೂಡಾ ಹೆಚ್ಚು ತಾಪಮಾನ ಕಂಡಿವೆ. ಅಕಾಲಿಕ ಮಳೆಯಿಂದಾಗಿ ದಕ್ಷಿಣ ಒಳನಾಡಿನ 8-10 ಜಿಲ್ಲೆಗಳಲ್ಲಿ ತಂಪಾದ ವಾತಾವರಣ ಉಂಟಾದರೂ, ಉತ್ತರ ಒಳನಾಡಿನಲ್ಲಿ ಬಿಸಿಲಿನ ತಾಪಮಾನ ಮುಂದುವರೆಯಲಿದೆ ಎಂದು ಇಲಾಖೆ ಹೇಳಿದೆ.












Click it and Unblock the Notifications