Karnataka Rains: ಒಳನಾಡು ಜಿಲ್ಲೆಗಳಲ್ಲಿ ಮಳೆ ಅಬ್ಬರ ಶುರು, ಇಂದಿನಿಂದ 5 ದಿನ ಭರ್ಜರಿ ಮಳೆ
ಬೆಂಗಳೂರು, ಅಕ್ಟೋಬರ್ 05: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆ ಅಬ್ಬರ ಶುರುವಾಗಿದೆ. ಕರಾವಳಿ ಮತ್ತು ಮಲೆನಾಡಿಗೆ ಹೆಚ್ಚು ಸೀಮಿತವಾಗಿದ್ದ ಮಳೆ ಆರ್ಭಟ ಇದೀಗ ಒಳನಾಡು ಜಿಲ್ಲೆಗಳಿಗೂ ವಿಸ್ತರಣೆ ಆಗಿದೆ. ಈ ಕಾರಣದಿಂದಲೇ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ದಾಖಲಾಗಿದೆ. ಇಂದಿನಿಂದ ಮುಂದಿನ 5 ದಿನಗಳ ಕಾಲ ಹಲವು ಜಿಲ್ಲೆಗಳಲ್ಲಿ ಗರಿಷ್ಠ 110 ಮಿಲಿ ಮೀಟರ್‌ಗೂ ಅಧಿಕ ಮಳೆ ಆಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಎಲ್ಲೆಲ್ಲೂ ಮಳೆಯ ವಾತಾವರಣ ಕಂಡು ಬರುತ್ತಿದೆ. ಕಳೆದ ವಾರದವರೆಗೂ ಉತ್ತರ ಕರ್ನಾಟಕದ ಭಾಗದಲ್ಲಿ ಮಳೆ ಚುರುಕಾಗಿತ್ತು. ಇಲ್ಲಿ ಸಹ ನಿರಂತರ ಮಳೆ ಸುರಿದು ಜನ ತತ್ತರಿಸುವಂತೆ ಮಾಡಿತ್ತು. ಇದೀಗ ದಕ್ಷಿಣ ಕರ್ನಾಟಕ (ಒಳನಾಡು) ಭಾಗದಲ್ಲಿ ಮಳೆ ಅಬ್ಬರ ಶುರುವಿಟ್ಟುಕೊಂಡಿದೆ.

5 ದಿನ ಅನೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಮುಂದಿನ ಐದು ದಿನಗಳಿಂದ ಒಂದು ವಾರದವರೆಗೆ ರಾಜ್ಯದ ವಿವಿಧೆಡೆ ಮಳೆ ಆರ್ಭಟಿಸಲಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ರಾಮನಗರ, ಮಂಡ್ಯ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೋಲಾರ, ಮಂಡ್ಯ, ಶಿವಮೊಗ್ಗ, ತುಮಕೂರು, ವಿಜಯನಗರ, ಕೊಡಗು, ಜಿಲ್ಲೆಗಳಲ್ಲಿ ಹೆಚ್ಚು ದಿನ ಭಾರೀ ಮಳೆ ಬರಲಿದೆ. ಹೀಗಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಮೇಲಿನ ಜಿಲ್ಲೆಗಳಲ್ಲಿ ಒಂದೆರಡು ಜಿಲ್ಲೆಗಳಲ್ಲಿ ದಿನ ಬಿಟ್ಟು ದಿನ ಮಳೆ ಬರಲಿದೆ. ಉಳಿದಂತೆ ಕರಾವಳಿ ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಆಗಾಗ ಸಾಧಾರಣದಿಂದ ಉತ್ತಮ ಮಳೆ ಆಗುವ ಸಾಧ್ಯತೆ ಇದೆ.

ಮುಂದಿನ ಒಂದು ವಾರ ಮಾತ್ರ ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಮಳೆ ಇನ್ನಿಲ್ಲದಂತೆ ಸುರಿಯಲಿದೆ. ಕೆರೆ ಕಟ್ಟೆ, ಹಳ್ಳ ಕೊಳ್ಳಗಳು ತುಂಬಿ ಹರಿಯುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯದ ಜಲಾಶಯಗಳು ಭರ್ತಿ ಆಗಿವೆ. ಹಿಂಗಾರು ಬಿತ್ತನೆಗೆ ಸಜ್ಜಾಗಿರುವ ರೈತರಿಗೆ ಸಂಭವನೀಯ ಮಳೆ ಪೂರಕವಾಗಲಿದೆ.
ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ
ಕಳೆದ 24 ಗಂಟೆಗಳಲ್ಲಿ ರಾಜ್ಯದ ಕೊಪ್ಪಳ ಮತ್ತು ವಿಜಯನಗರದಲ್ಲಿ ತಲಾ 40 ಮಿಲಿ ಮೀಟರ್ ಮಳೆ ಆಗಿದೆ. ಉಳಿದಂತೆ ದಕ್ಷಿಣ ಕನ್ನಡ 30 ಮಿ.ಮೀ, ಕಲಬುರಗಿ 30 ಮಿ.ಮೀ, ವಿಜಯಪುರ 30 ಮಿ.ಮೀ, ಬರಗೂರು, ಮಾಗಡಿ ತಲಾ 20 ಮಿ.ಮೀ. ಮಳೆ ದಾಖಲಾಗಿದೆ. ಉತ್ತರ ಕನ್ನಡ, ಗದಗ, ತುಮಕೂರು, ಬೆಂಗಳೂರು ನಗರ, ಚಾಮಜರಾನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಾಧಾರಣ ಮಳೆ ಆಗಿದೆ ಎಂದು ಐಎಂಡಿ ವರದಿ ತಿಳಿಸಿದೆ.
ರಾಜ್ಯದಲ್ಲಿ ಮುಂದಿನ ಮೂರು ದಿನ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಜನರಿಗೆ ಈಗ ಮಳೆಗಾಲ ಎದುರಿಸುತ್ತಿದ್ದಾರೆ ಎಂಬ ವಾತಾವರಣ ನಿರ್ಮಾಣವಾಗಿದೆ.












Click it and Unblock the Notifications