ರಾಜ್ಯಕ್ಕೆ ಮತ್ತೆ ಧಾರಾಕಾರ ಮಳೆ ಮುನ್ಸೂಚನೆ: 'ಆರೆಂಜ್ ಅಲರ್ಟ್'
ಬೆಂಗಳೂರು ಆಗಸ್ಟ 01: ಹವಾಮಾನದಲ್ಲಿ ಉಂಟಾಗುತ್ತಿರುವ ಏರುಪೇರುಗಳಿಂದಾಗಿ ಕರ್ನಾಟಕದಲ್ಲಿ ಮತ್ತೆ ಮುಂಗಾರು ಹೆಚ್ಚಾಗುವ ಮುನ್ಸೂಚನೆ ನೀಡಿದೆ. ಹೀಗೆಂದು ತಿಳಿಸಿರುವ ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಅಧಿಕಾರಿಗಳು ಹಲವು ಜಿಲ್ಲೆಗಳಿಗೆ ಅತೀ ಭಾರಿ ಮಳೆ ಎಚ್ಚರಿಕೆ ನೀಡಿದೆ.
ರಾಜ್ಯಕ್ಕೆ ಆಗಸ್ಟ್ 6ರವರೆಗೆ ಅತೀ ಭಾರಿ ಮಳೆ ಆಗಲಿದೆ. ಈ ಪೈಕಿ ಮೊದಲ ದಿನವಾದ ಮಂಗಳವಾರ ಕರಾವಳಿ, ದಕ್ಷಿಣ ಒಳನಾಡು (ಮಲೆನಾಡು) ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಆಗಲಿದೆ.
ನಂತರದ ನಾಲ್ಕು ದಿನ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಗುಡುಗ ಸಹಿತ ಧಾರಾಕಾರ ಮಳೆ ಬೀಳಲಿದೆ. ಹೀಗಾಗಿ ಇಷ್ಟು ಜಿಲ್ಲೆಗಳಿಗೆ ಆಗಸ್ಟ 6ರವರೆಗೆ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ. ಉಳಿದಂತೆ ಉತ್ತರ ಒಳನಾಡಿನ ಕಲಬುರಗಿ, ರಾಯಚೂರು, ಹಾವೇರಿ, ಬಳ್ಳಾರಿ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಾಮರಾಜನಗರ, ತುಮಕೂರು, ರಾಮನಗರದಲ್ಲಿ ದಿನ ಬಿಟ್ಟು ದಿನ ಭಾರಿ ಮಳೆ ಸುರಿಯಲಿದ್ದು, ಇವುಗಳಿಗೆ 'ಯೆಲ್ಲೋ ಅಲರ್ಟ್' ಕೊಡಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಎಲ್ಲೆಲ್ಲಿ ಎಷ್ಟು ಮಳೆ ಬಿದ್ದಿದೆ
ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಯಲ್ಲಿ ಕೊಡಗು, ತುಮಕೂರು, ಕೋಲಾರ, ಗದಗ ಜಿಲ್ಲೆಗಳಲ್ಲಿ ಹೆಚ್ಚು ಮಳೆ ದಾಖಲಾಗಿದೆ. ವೈ.ಎನ್. ಹೊಸಕೋಟೆ, ಸಂಪಾಜೆ ಗಳಲ್ಲಿ 11ಸೆಂ.ಮೀ.ಮಳೆ ದಾಖಲಾಗಿದೆ. ಇನ್ನು ಭಾಗಮಂಡಲದಲ್ಲಿ 9ಸೆಂ.ಮೀ, ನಾಪೋಕ್ಲು 8ಸೆಂ.ಮೀ, ಮುಳಬಾಗಿಲು 7ಸೆಂ.ಮೀ, ಮಾಗಡಿ, ಕುಗಣಿಲ್, ಕೋಲಾರದಲ್ಲಿ ತಲಾ 5ಸೆಂ.ಮೀ, ಚಾಮರಾಜನಗರ ಸೋಮವಾರ ಪೇಟೆ, ತೋಂಡೆಬಾವಿ, ಶ್ರವಣಬೆಳಗೊಳ, ಹಿರಿಯೂರುಗಳಲ್ಲಿ ತಲಾ 4ಸೆಂ.ಮೀ. ಮಳೆ ದಾಖಲಾಗಿದೆ. ಉಳಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಉತ್ತಮ ಮಳೆ ದಾಖಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ವರದಿ ತಿಳಿಸಿದೆ.

ಬೆಂಗಳೂರಿಗೆ ಭಾರಿ ಮಳೆ ಮುನ್ಸೂಚನೆ ಇದೆ
ರಾಜ್ಯ ರಾಜಧಾನಿ ಬೆಂಗಳೂರಿಗೆ ಆಗಸ್ಟ್ 2 ಮತ್ತು 5ರಂದು ಗುಡಗು ಸಹಿತ ಭಾರಿ ಮಳೆ ಆಗಲಿದ್ದು, ಆ ಎರಡು ದಿನ ಬೆಂಗಳೂರಿಗೆ 'ಯೆಲ್ಲೋ ಅಲರ್ಟ್' ಎಚ್ಚರಿಕೆ ನೀಡಲಾಗಿದೆ. ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಇದೇ ವೇಳೆ ಹಲವು ಪ್ರದೇಶಗಳಲ್ಲಿ ಜೋರು ಮಳೆ ಆಗಲಿದೆ. ಸೋಮವಾರ ಮೋಡ ಮುಸುಕಿನ ವಾತಾವರಣ ಕಂಡು ಬಂದಿದ್ದು ತಡರಾತ್ರಿ ಮಳೆ ಸುರಿಯವ ಸಾಧ್ಯತೆ ಇದೆ. ನಗರದಲ್ಲಿ ಮಳೆ ನಿಗದಿತ ದಿನಗಳಲ್ಲಿ ಉಷ್ಣಾಂಶ ಕಡಿಮೆ ಇರಲಿದೆ. ಆಗ ಗರಿಷ್ಠ 30ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 20ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಬಹುದು ಎಂದು ಕರ್ನಾಟಕ ರಾಜ್ಯ ನೈಸಗಿರ್ಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮಳೆ ವರದಿ ತಿಳಿಸಿದೆ.











Click it and Unblock the Notifications