Heat wave: ರಾಜ್ಯದಲ್ಲಿ ಹೆಚ್ಚಲಿದೆ ಬಿಸಿಲ ಧಗೆ, ಬಿಸಿಗಾಳಿಯ ಎಚ್ಚರಿಕೆ; ಈ ಜಿಲ್ಲೆಗಳಲ್ಲಿ ಮುಂದಿನ ಏಳು ದಿನ ಮಳೆ ಸಾಧ್ಯತೆ
ಕರ್ನಾಟಕದಾದ್ಯಂತ ಮುಂದಿನ ಕೆಲವು ದಿನಗಳ ಕಾಲ ತಾಪಮಾನದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ 23ರಿಂದ 25ರ ಅವಧಿಯಲ್ಲಿ ರಾಜ್ಯದ ಹವಾಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆಗಳಿಲ್ಲದಿದ್ದರೂ, ತಾಪಮಾನವು ಕ್ರಮೇಣ ಹೆಚ್ಚಾಗುತ್ತಾ ಹೋಗಲಿದೆ. ವಿಶೇಷವಾಗಿ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬಿಸಿಗಾಳಿ (Heat wave) ಬೀಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.
ಕರಾವಳಿ ಕರ್ನಾಟಕದ ಭಾಗಗಳಲ್ಲಿ ಮುಂದಿನ ಐದು ದಿನಗಳ ಕಾಲ ಅತಿಯಾದ ಸೆಕೆಯಿಂದ ಕೂಡಿದ ವಾತಾವರಣವಿರಲಿದೆ. ರಾಜ್ಯದ ಉಳಿದ ಭಾಗಗಳಲ್ಲೂ ಮುಂದಿನ ಐದು ದಿನಗಳವರೆಗೆ ಉಷ್ಣಾಂಶ ಏರಿಕೆಯಾಗುವ ಪ್ರವೃತ್ತಿ ಕಂಡುಬರಲಿದೆ. ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಏಪ್ರಿಲ್ 18ರ ಬೆಳಿಗ್ಗೆಯವರೆಗೆ ಆಕಾಶವು ಮುಖ್ಯವಾಗಿ ಶುಭ್ರವಾಗಿರಲಿದೆ. ಮುಂದಿನ 48 ಗಂಟೆಗಳ ಕಾಲ ನಗರದಲ್ಲಿ ಗರಿಷ್ಠ ತಾಪಮಾನವು 37 ಡಿಗ್ರಿ ಮತ್ತು ಕನಿಷ್ಠ ತಾಪಮಾನವು 23 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಂಭವವಿದೆ. ಇದು ಸಾಮಾನ್ಯ ತಾಪಮಾನಕ್ಕಿಂತ ಸುಮಾರು 2ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿರಲಿದ್ದು, ನಗರವಾಸಿಗಳು ಎಂದಿಗಿಂತ ಹೆಚ್ಚಿನ ಬಿಸಿಲ ಅನುಭವ ಪಡೆಯಲಿದ್ದಾರೆ.

ಅಧಿಕ ತಾಪಮಾನ ದಾಖಲು
ಕಳೆದ 24 ಗಂಟೆಗಳಲ್ಲಿ ಕರ್ನಾಟಕದಾದ್ಯಂತ ತಾಪಮಾನದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಪ್ರಮುಖವಾಗಿ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 1.6 ಡಿಗ್ರಿಯಿಂದ 3 ಡಿಗ್ರಿ ಸೆಲ್ಸಿಯಸ್‌ವರೆಗೆ ಹೆಚ್ಚಾಗಿದೆ. ರಾಜ್ಯದ ಒಟ್ಟಾರೆ ಗರಿಷ್ಠ ತಾಪಮಾನವು 32.6-42.1 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ದಾಖಲಾಗಿದೆ ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ.
ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಕಲಬುರಗಿ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ದಕ್ಷಿಣ ಒಳನಾಡಿನ ಬೆಂಗಳೂರು, ಚಿತ್ರದುರ್ಗ ಹಾಗೂ ಮೈಸೂರು ಜಿಲ್ಲೆಗಳಲ್ಲೂ ಗರಿಷ್ಠ ತಾಪಮಾನ ಏರಿಕೆಯಾಗಿದೆ. ಉಳಿದ ಭಾಗಗಳಲ್ಲಿ ತಾಪಮಾನವು ಸಹಜ ಸ್ಥಿತಿಯಲ್ಲಿದ್ದು, ಕಳೆದ ಒಂದು ದಿನದಲ್ಲಿ ಯಾವುದೇ ದೊಡ್ಡ ಬದಲಾವಣೆಗಳು ಕಂಡುಬಂದಿಲ್ಲ.
ಎಲ್ಲೆಲ್ಲಿ ಮಳೆ
ಮುಂದಿನ ಏಳು ದಿನಗಳ ಕಾಲ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆ ಮತ್ತು ತಾಪಮಾನದ ಏರಿಳಿತದ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಕರ್ನಾಟಕದ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಏಪ್ರಿಲ್ 16ರಿಂದ 20ರವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಏಪ್ರಿಲ್ 21 ಮತ್ತು 22 ರಂದು ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಇದರ ನಡುವೆಯೂ ಕರಾವಳಿ ಭಾಗದಲ್ಲಿ ಸೆಕೆಯಿಂದ ಕೂಡಿದ ವಾತಾವರಣ ಮುಂದುವರಿಯಲಿದೆ.
ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳದಲ್ಲಿ ಆರಂಭದ ಮೂರು ದಿನಗಳ ಕಾಲ ಗುಡುಗು ಸಹಿತ ಹಗುರ ಮಳೆಯಾಗುವ ಮುನ್ಸೂಚನೆ ಇದೆ. ರಾಯಚೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಬಹುದು. ಆದರೆ, ವಿಜಯಪುರ, ಕಲಬುರಗಿ, ಬೀದರ್ ಮತ್ತು ಬಾಗಲಕೋಟೆ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಏಪ್ರಿಲ್ 18ರವರೆಗೆ ಬಿಸಿಗಾಳಿ (Heat wave) ಮುಂದುವರಿಯಲಿದ್ದು, ಜನಜೀವನದ ಮೇಲೆ ಪರಿಣಾಮ ಬೀರಲಿದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನವಿರಲಿದೆ.
ದಕ್ಷಿಣ ಒಳನಾಡಿನಲ್ಲೂ ವರುಣನ ಸಿಂಚನವಾಗುವ ಸಾಧ್ಯತೆಯಿದ್ದು, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ, ಏಪ್ರಿಲ್ 18ರಿಂದ ಕೊಡಗು ಮತ್ತು ಹಾಸನ ಜಿಲ್ಲೆಗಳಿಗೂ ಮಳೆ ವಿಸ್ತರಿಸಲಿದ್ದು, ಏಪ್ರಿಲ್ 19ರಂದು ಮೈಸೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಗುಡುಗು ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಿಂದಾಗಿ ಬಿಸಿಲಿನ ತಾಪದಿಂದ ಅಲ್ಪ ಮಟ್ಟದ ನೆಮ್ಮದಿ ಸಿಗುವ ನಿರೀಕ್ಷೆಯಿದೆ.
ಈಶಾನ್ಯ ಮಧ್ಯಪ್ರದೇಶದಿಂದ ಮನ್ನಾರ್ ಕೊಲ್ಲಿಯವರೆಗೆ ವಿದರ್ಭ, ಮರಾಠವಾಡ, ಒಳ ಕರ್ನಾಟಕ ಮತ್ತು ತಮಿಳುನಾಡು ಮೂಲಕ ಹಾದುಹೋಗುವ ಉತ್ತರ-ದಕ್ಷಿಣ ಟ್ರಫ್ (trough) ಸಕ್ರಿಯವಾಗಿದೆ. ಇದು ಸಮುದ್ರ ಮಟ್ಟದಿಂದ 1.5 ಕಿಮೀ ಎತ್ತರದವರೆಗೆ ವ್ಯಾಪಿಸಿದೆ. ಇದರೊಂದಿಗೆ ಉತ್ತರ ಒಳನಾಡಿನ ಮೇಲೆ 0.9 ಕಿಮೀ ಎತ್ತರದಲ್ಲಿದ್ದ ಸುಳಿಗಾಳಿಯು ಈ ಟ್ರಫ್‌ನೊಂದಿಗೆ ವಿಲೀನಗೊಂಡಿದೆ. ಅಲ್ಲದೆ, ಕರ್ನಾಟಕ ಮತ್ತು ಮಹಾರಾಷ್ಟ್ರದ ಪಕ್ಕದ ಪ್ರದೇಶಗಳಲ್ಲಿ ಸಮುದ್ರ ಮಟ್ಟದಿಂದ 3.1 ರಿಂದ 5.8 ಕಿಮೀ ಎತ್ತರದಲ್ಲಿ ಆಂಟಿ-ಸೈಕ್ಲೋನಿಕ್ ಪರಿಚಲನೆ ಮುಂದುವರಿದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.












Click it and Unblock the Notifications