ಕಣ್ಣಿಗೆ ಕಾಣದಷ್ಟು ದೂರ ಹೋದರೂ ಕೈಬೀಸುತ್ತಿದ್ದ ಅಪ್ಪ-ಅಮ್ಮ: ಮಗಳನ್ನು ಬೀಳ್ಕೊಟ್ಟ ಪೋಷಕರ ಕ್ಯೂಟ್ ವಿಡಿಯೋ ವೈರಲ್!
ಅಪ್ಪ-ಅಮ್ಮ ಮತ್ತು ಮಕ್ಕಳ ನಡುವಿನ ಬಾಂಧವ್ಯವೇ ಒಂದು ಅದ್ಭುತ ಅಲ್ಲವೇ?. ಅದರಲ್ಲೂ ಮಕ್ಕಳು ಓದಿಗೆಂದೋ, ಉದ್ಯೋಗ ಅರಸಿಯೋ ಅಥವಾ ಮದುವೆಯಾಗಿ ಬೇರೆ ಊರಿಗೆ ಹೋಗುವಾಗ ರೈಲ್ವೆ ನಿಲ್ದಾಣದಲ್ಲೋ ಅಥವಾ ಬಸ್ ನಿಲ್ದಾಣದಲ್ಲೋ ಪೋಷಕರು ಬಿಟ್ಟು ಬರುವ ಆ ಕ್ಷಣ ನಿಜಕ್ಕೂ ಅತ್ಯಂತ ಭಾವುಕವಾಗಿರುತ್ತದೆ. ಕಣ್ಣೀರು ಹಾಕುತ್ತಾ, ಕೈಬೀಸುತ್ತಾ ಮಗ ಅಥವಾ ಮಗಳನ್ನ ಬೀಳ್ಕೊಡುವ ಪೋಷಕರ ಪ್ರೀತಿಯನ್ನು ಹಾಗೂ ಆ ಕ್ಷಣದಲ್ಲಿ ಅವರು ಅನುಭವಿಸುವ ತಳಮಳವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.
ಇದೀಗ ಇಂಥದ್ದೇ ಒಂದು ಮುದ್ದಾದ, ಕಣ್ತುಂಬಿಕೊಳ್ಳುವಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರ ಹೃದಯ ಗೆದ್ದಿದೆ. ಅಪ್ಪ-ಅಮ್ಮನ ನಿಷ್ಕಲ್ಮಶ ಪ್ರೀತಿಯನ್ನ ಎತ್ತಿ ತೋರಿಸುವ ಈ ದೃಶ್ಯ ಎಲ್ಲರ ಕಣ್ಣಂಚು ಒದ್ದೆಯಾಗುವಂತೆ ಮಾಡಿದೆ.

ರೈಲ್ವೆ ನಿಲ್ದಾಣದಲ್ಲಿ ಪೋಷಕರ ಭಾವುಕ ವಿದಾಯ
ಖುಷಿ ಸೋಲಂಕಿ ಎಂಬ ಯುವತಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ರೈಲು ಹತ್ತಿ ತನ್ನ ಊರಿಗೆ ಹೊರಟಿದ್ದ ಖುಷಿ ಅವರನ್ನ ಬೀಳ್ಕೊಡಲು ಅವರ ತಂದೆ-ತಾಯಿ ಇಬ್ಬರೂ ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು. ಖುಷಿ ರೈಲಿನ ಕಿಟಕಿಯ ಬಳಿ ಕುಳಿತು, ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ತನ್ನ ಪೋಷಕರನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಲು ಶುರು ಮಾಡಿದ್ದಾರೆ.
ರೈಲು ನಿಧಾನವಾಗಿ ಮುಂದಕ್ಕೆ ಚಲಿಸಲು ಪ್ರಾರಂಭಿಸಿದಾಗ, ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ತಂದೆ-ತಾಯಿ ಇಬ್ಬರೂ ಮುಖದಲ್ಲಿ ನಗು ಬೀರುತ್ತಾ ಮಗಳಿಗೆ ಕೈಬೀಸಿದ್ದಾರೆ. ಕೇವಲ ಕೈಬೀಸುವುದು ಮಾತ್ರವಲ್ಲ, ತಂದೆ ಕೂಡಲೇ ತನ್ನ ಮೊಬೈಲ್ ತೆಗೆದು ಮಗಳು ಹೋಗುತ್ತಿರುವ ದೃಶ್ಯವನ್ನ, ಮಗಳು ಕಿಟಕಿಯಲ್ಲಿ ಕುಳಿತಿರುವ ಸುಂದರ ಕ್ಷಣವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಮುಂದಾಗಿದ್ದಾರೆ.
ತಾಯಿ ಮಾತ್ರ ಮಗಳನ್ನೇ ಕಣ್ತುಂಬಿಕೊಳ್ಳುತ್ತಾ, ಮುಗುಳು ನಗುತ್ತಾ ಕೈಬೀಸುತ್ತಿರುವುದನ್ನ ಈ ವಿಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದು.
ನಾನು ನಿಜಕ್ಕೂ ಶ್ರೀಮಂತೆ ಎಂದ ಖುಷಿ ಸೋಲಂಕಿ
ರೈಲು ನಿಧಾನವಾಗಿ ವೇಗವನ್ ಪಡೆದುಕೊಂಡು ಪ್ಲಾಟ್‌ಫಾರ್ಮ್‌ನಿಂದ ದೂರ ಹೋಗುತ್ತಿದ್ದರೂ, ಪೋಷಕರು ಮಾತ್ರ ಮಗಳು ಕಣ್ಣಿಗೆ ಕಾಣುವವರೆಗೂ ಕೈಬೀಸುತ್ತಲೇ ಇದ್ದಾರೆ. ಅಷ್ಟು ದೂರ ಹೋದರೂ ಕಿಟಕಿಯ ಮೂಲಕವೇ ಮಗಳನ್ನ ನೋಡುವ ಅವರ ಆ ಕಾತರ, ಅವರ ಮುಖದಲ್ಲಿದ್ದ ಆ ನಗು ನಿಜಕ್ಕೂ ಎಂಥವರನ್ನೂ ಭಾವುಕರನ್ನಾಗಿಸುತ್ತದೆ.
ಕಣ್ಣಿಗೆ ಕಾಣದಷ್ಟು ದೂರ ರೈಲು ಹೋದಾಗ ಮಾತ್ರ ಅವರು ಕೈಬೀಸುವುದನ್ನ ನಿಲ್ಲಿಸುತ್ತಾರೆ. ಈ ಮುದ್ದಾದ ವಿಡಿಯೋವನ್ನ ಖುಷಿ ಸೋಲಂಕಿ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಒಂದು ಸುಂದರವಾದ ಕ್ಯಾಪ್ಶನ್ ಕೂಡ ನೀಡಿದ್ದಾರೆ. "ನನ್ನ ಪೋಷಕರು ನನ್ನನ್ನು ಈ ರೀತಿ ಬೀಳ್ಕೊಡುವುದರಿಂದ ನಾನು ಜಗತ್ತಿನಲ್ಲೇ ಅತಿ ದೊಡ್ಡ ಶ್ರೀಮಂತೆ" ಎಂದು ಬರೆದುಕೊಂಡಿದ್ದಾರೆ.
ಅವರ ಈ ಕ್ಯಾಪ್ಶನ್ ವಿಡಿಯೋ ಸೌಂದರ್ಯವನ್ನ ಮತ್ತಷ್ಟು ಹೆಚ್ಚಿಸಿದೆ. ಕೇವಲ ಒಂದು ವಾಕ್ಯದಲ್ಲಿ ಆಕೆ ತನ್ನ ಪೋಷಕರ ಮೇಲಿರುವ ಪ್ರೀತಿಯನ್ನ ಅದ್ಭುತವಾಗಿ ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರ ಹೃದಯ ಗೆದ್ದ ವೈರಲ್ ವಿಡಿಯೋ
ಈ ಕ್ಯೂಟ್ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಲಕ್ಷಾಂತರ ವೀಕ್ಷಣೆಗಳನ್ನ ಹಾಗೂ ಲೈಕ್ಸ್ ಪಡೆದುಕೊಂಡಿದೆ. ನೆಟ್ಟಿಗರು ಈ ವಿಡಿಯೋ ನೋಡಿ ಫುಲ್ ಫಿದಾ ಆಗಿದ್ದಾರೆ. "ಇಂದು ಸೋಶಿಯಲ್ ಮೀಡಿಯಾದಲ್ಲಿ ನಾನು ನೋಡಿದ ಒಂದೊಳ್ಳೆ ವಿಡಿಯೋ ಇದು", "ತಾಯಿಯ ನಗು ಮತ್ತು ಅಪ್ಪ ಕ್ಯಾಮೆರಾದಲ್ಲಿ ವಿಡಿಯೋ ಮಾಡುತ್ತಿರುವುದು ನೋಡಲು ತುಂಬಾ ಖುಷಿಯಾಗುತ್ತದೆ", "ಪೋಷಕರ ಪ್ರೀತಿಯೇ ನಿಜವಾದ ಸಂಪತ್ತು" ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
ಇನ್ನು ಕೆಲವರು, "ನನ್ನ ಅಪ್ಪ-ಅಮ್ಮ ಕೂಡ ನಾನು ಊರಿಗೆ ಹೋಗುವಾಗ ಹೀಗೆಯೇ ಮಾಡುತ್ತಿದ್ದರು, ಈ ವಿಡಿಯೋ ನನ್ನ ಹಳೆಯ ದಿನಗಳನ್ನ ನೆನಪಿಸಿತು" ಎಂದು ತಮ್ಮ ನೆನಪುಗಳನ್ನು ಮೆಲುಕು ಹಾಕಿದ್ದಾರೆ. "ಕೆಲವೊಮ್ಮೆ ಸಣ್ಣ ಸಣ್ಣ ವಿದಾಯಗಳು ಅತ್ಯಂತ ಆಳವಾದ ಪ್ರೀತಿಯನ್ನ ವ್ಯಕ್ತಪಡಿಸುತ್ತವೆ" ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಅದೆಷ್ಟೇ ವಯಸ್ಸಾದರೂ, ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಪೋಷಕರ ಪಾಲಿಗೆ ಮಕ್ಕಳು ಯಾವಾಗಲೂ ಮಕ್ಕಳೇ ಆಗಿರುತ್ತಾರೆ ಎಂಬುದಕ್ಕೆ ಈ ವಿಡಿಯೋ ಒಂದು ಒಳ್ಳೆ ಉದಾಹರಣೆ. ಪ್ರತಿಯೊಬ್ಬರ ಜೀವನದಲ್ಲೂ ತಂದೆ-ತಾಯಿಯ ಸ್ಥಾನವನ್ನ ಬೇರೆ ಯಾರೂ ತುಂಬಲು ಸಾಧ್ಯವಿಲ್ಲ.
ದೂರದ ಊರಿಗೆ ಹೋಗುವಾಗ ಅವರ ಕಣ್ಣಲ್ಲಿ ಮೂಡುವ ಆ ಸಣ್ಣ ನೀರಹನಿ, ಮುಖದಲ್ಲಿರುವ ಆತಂಕ ಎಲ್ಲವೂ ಅವರ ನಿಷ್ಕಲ್ಮಶ ಪ್ರೀತಿಯ ಪ್ರತೀಕ. ಇಂತಹ ಅಪರೂಪದ ಕ್ಷಣಗಳು ಜೀವನದ ಒಂದೊಳ್ಳೆ ನೆನಪಾಗಿ ಸದಾ ಕಾಲ ಉಳಿಯುತ್ತವೆ.


Click it and Unblock the Notifications
