ನಾನು ಈಗ 24*7 ರಾಜಕಾರಣಿ; ಸಿನಿಮಾ ಮಾಡೋದನ್ನು ಬಂದ್ ಮಾಡಿದ್ದೇನೆ: ನಿಖಿಲ್ ಕುಮಾರಸ್ವಾಮಿ
ಮಂಡ್ಯ, ಜೂನ್ 07: ನಾನು ಈಗ 24*7 ರಾಜಕಾರಣಿ, ಸಿನಿಮಾ ಮಾಡೋದನ್ನು ಬಂದ್ ಮಾಡಿದ್ದೇನೆ. 2019ರ ನನ್ನ ಸೋಲು ಸೋಲಾಗಿರಲಿಲ್ಲ. ನಮ್ಮಲ್ಲಾದ ತಪ್ಪುಗಳಿಂದ ಹಿನ್ನಡೆ ಆಯ್ತು. ಮಂಡ್ಯ ಜನ ನನಗೆ ಹೃದಯದಲ್ಲಿ ಸ್ಥಾನ ನೀಡಿದ್ದಾರೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು
ಈ ಕುರಿತು ಮಂಡ್ಯದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕುಮಾರಣ್ಣ ಸಿಎಂ ಆಗಿದ್ದಾಗ ರಾಜ್ಯಕ್ಕೆ ಕೊಟ್ಟ ಕೊಡುಗೆ ಅಪಾರ. ಕುಮಾರಣ್ಣ ಸ್ಪರ್ಧೆಗೆ ಕಾರ್ಯಕರ್ತರ ಆಪೇಕ್ಷೆ ಇತ್ತು. ಮಹಿಳೆಯರು, ರೈತರು, ಹಿರಿಯರು ಎಲ್ಲಾ ವರ್ಗದವರು ಕುಮಾರಣ್ಣ ಅವ್ರನ್ನ ಹೆಚ್ಚಿನ ಅಂತರದಲ್ಲಿ ಆಯ್ಕೆ ಮಾಡಿದ್ದಾರೆ. ಮುಂದಿನ 5 ವರ್ಷ ಪ್ರಮಾಣಿಕ ಕೆಲಸ ಮಾಡ್ತಾರೆ ಎಂದರು.

ಶೀಘ್ರದಲ್ಲೇ ಚೆನ್ನಪಟ್ಟಣದಲ್ಲಿ ಅಲ್ಲಿನ ಜನರಿಗೆ ಕೃತಜ್ಞತೆ ಸಲ್ಲಿಸಲಾಗುವುದು. ನಂತರ ಮಂಡ್ಯದಲ್ಲಿ ಸಭೆ ನಡೆಸಿ ಜನರಿಗೆ ಕೃತಜ್ಞತಾ ಸಭೆ ನಡೆಸಿ ಮತದಾರರಿಗೆ ಕೃತಜ್ಞತೆ ಸಲ್ಲಿಸಲಾಗುವುದು, ಸುಮಲತಾ ಅಂಬರೀಶ್ ಅವರು ಚುನಾವಣೆ ವೇಳೆ ವೇದಿಕೆ ಹಂಚಿಕೊಳ್ಳಲಾಗದಿದ್ದರೂ ಕುಮಾರಣ್ಣನ ಗೆಲುವಿಗೆ ಸಹಕಾರ ನೀಡಿದ್ದಾರೆ. ನನಗೆ ಪಕ್ಷ ಕಟ್ಟುವ ಜವಾಬ್ದಾರಿ ನೀಡಿದ್ದು ಮುಂದಿನ ರಾಜ್ಯಾದ್ಯಂತ ಸಂಚರಿಸಿ ಪಕ್ಷ ಸಂಘಟನೆ ಮಾಡುತ್ತೇನೆ, ಮುಂದೆ ಸಂಪೂರ್ಣ ರಾಜಕಾರಣಿಯಾಗಿರುತ್ತೇನೆ.
ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿ ರಾಜ್ಯಕ್ಕೆ ಕೊಟ್ಟಿರೊ ಕೊಡುಗೆ ಅಪಾರ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕುಮಾರಣ್ಣ ನಿಲ್ಲಬೇಕು ಎಂಬ ಜನರ ಅಪೇಕ್ಷೆ ಮೇರೆಗೆ ನಿಂತು, ಎಲ್ಲಾ ವರ್ಗದ ಜನರು ಕುಮಾರಣ್ಣಗೆ ಆಶೀರ್ವಾದ ಮಾಡಿದ್ದಾರೆ.
ಇನ್ನು ಐದು ವರ್ಷ ಕುಮಾರಣ್ಣ ಜನಪರ ಕೆಲಸ ಮಾಡುತ್ತಾರೆ. ಎಂಟು ವಿಧಾನಸಭಾ ಕ್ಷೇತ್ರದ ಜನರಿಗೆ ಕೃತಜ್ಞತೆ ಹೇಳ್ತೇನೆ, ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನವರು ಗಂಡಸ್ತನದ ಬಗೆಗೆ ಮಾತಾಡ್ತಿದ್ದರು. ಈಗ ಜನ ಉತ್ತರ ಕೊಟ್ಟಿದ್ದಾರೆ. ಜನಪ್ರತಿನಿಧಿಗಳು ಬಹಳ ಜವಾಬ್ದಾರಿಯುತವಾಗಿ ಮಾತನಾಡಬೇಕು. ಅಧಿಕಾರದಲ್ಲಿದ್ದಾಗ ಏನು ಬೇಕಾದ್ರು ಮಾತನಾಡಬಹುದು ಎಂಬ ಉದ್ದಟತನ ಬಿಡಬೇಕು ಎಂದು ಹೇಳಿದರು.
ಕುಮಾರಸ್ವಾಮಿ ಕೇಂದ್ರ ಸಚಿವರನ್ನಾಗಿ ಮಾಡುವ ವಿಚಾರವಾಗಿ ಮಾತನಾಡಿ, ಈ ನಾಡನ್ನು ಕಟ್ಟಲು ಕೇಂದ್ರದ ನಾಯಕರು ಕುಮಾರಣ್ಣನ ಬಳಕೆ ಮಾಡ್ಕೊತ್ತಾರೆ ಅನ್ನೊ ನಂಬಿಕೆ ಇದೆ. ಕುಮಾರಣ್ಣ ಚುನಾವಣೆಗೆ ಮೊದಲಾಗಲಿ ಚುನಾವಣೆ ನಂತ್ರವಾಗಲಿ ಇಂತಹುದೇ ಖಾತೆ ಬೇಕು ನನಗೆ ಮಂತ್ರಿ ಬೇಕು ಎಂಬ ಬೇಡಿಕೆ ಇಟ್ಟಿಲ್ಲ, ಕುಮಾರಣ್ಣ ಎರಡು ಬಾರಿ ಸಿ ಎಂ ಆಗಿದ್ದಾರೆ. ಅವರದ್ದೇ ಆದ ಸೇವೆ ಸಲ್ಲಿಸಿದ್ದಾರೆ. ಮೂರು ಬಾರಿ ಸಂಸದರಾಗಿದ್ದಾರೆ ಈ ಅನುಭವದ ಆಧಾರದ ಮೇಲೆ ಕೇಂದ್ರದ ನಾಯಕರು ಸ್ಥಾನ ಕೊಡಬಹುದು.
ಚನ್ನಪಟ್ಟಣದಲ್ಲಿ ಉಪ ಚುನಾವಣೆಗೆ ಯಾರು ಸ್ಪರ್ಧೆ ಮಾಡಬೇಕು ಎಂಬ ವಿಚಾರವಾಗಿ ಮಾತನಾಡಿ, ಮೈತ್ರಿ ಧರ್ಮಪಾಲನೆ ಬಗೆಗೆ ಕೇಂದ್ರದ ನಾಯಕರು ನಿರ್ಧಾರ ಮಾಡ್ತಾರೆ. ಚುನಾವಣೆ ಎಂದ ಮೇಲೆ ತಂತ್ರ ಪ್ರತಿತಂತ್ರಗಳು ಕಾಮನ್. ಇದಕ್ಕೆಲ್ಲಾ ಇನ್ನೂ 6 ತಿಂಗಳು ಕಾಲವಾಕಾಶ ಇದೆ ಚರ್ಚೆ ಮಾಡೋಣ. ಕಾವೇರಿ ನದಿ ನೀರಿನ ವಿವಾದ ಬಗೆಹರಿಸಲು, ಮೇಕೆದಾಟು ಯೋಜನೆ ಪೂರ್ಣಗೊಳಿಸಲ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ.












Click it and Unblock the Notifications