HDK: ಸಕ್ಕರೆ ನಾಡು ಮಂಡ್ಯ ಜನರಿಗೆ ಗುಡ್‌ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ, ಎಚ್.ಡಿ ಕುಮಾರಸ್ವಾಮಿ ಹೇಳಿದ್ದೇನು ?
HDK: ಕೇಂದ್ರ ಸರ್ಕಾರವು ಮಂಡ್ಯದ ಜನರಿಗೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಸಕ್ಕರೆನಾಡಿನ ಜನತೆಯ ದೀರ್ಘ ಕಾಲದ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಮಂಡ್ಯದಲ್ಲಿ 'ಆಧಾರ್ ಸೇವಾ ಕೇಂದ್ರ' (4 ಇಸಿಎಂಪಿ ಕಿಟ್ಸ್ ಒಳಗೊಂಡ) ಸ್ಥಾಪಿಸಲು ಭಾರತ ಸರಕಾರವು ಅನುಮೋದನೆ ನೀಡಿದೆ ಎಂಬ ವಿಷಯವನ್ನು ಹಂಚಿಕೊಳ್ಳಲು ನನಗೆ ಬಹಳ ಸಂತೋಷವಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಈಚೆಗೆ ಮಂಡ್ಯದಲ್ಲಿ ಆಧಾರ್ ಸೇವಾ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಎಚ್.ಡಿ ಕುಮಾರಸ್ವಾಮಿ ಅವರು ಪತ್ರ ಬರೆದಿದ್ದರು.
'ಡಿಜಿಟಲ್ ಇಂಡಿಯಾ'ವನ್ನು ಬಲಪಡಿಸುವ ಹಾಗೂ ತಳಮಟ್ಟದಲ್ಲಿ ಸಮರ್ಥ, ಸುಲಭವಾಗಿ ಲಭ್ಯವಿರುವ ಮತ್ತು ತಂತ್ರಜ್ಞಾನ ಆಧರಿತ ಸಾರ್ವಜನಿಕ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಇದು ಮತ್ತೊಂದು ಮಹತ್ವದ ಹೆಜ್ಜೆ. ಮಂಡ್ಯ ಜಿಲ್ಲೆಗೆ ಆಧಾರ್ ಸೇವಾ ಕೇಂದ್ರ ವರದಾನವಾಗಲಿದೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಇದೀಗ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರಾದ ಅಶ್ವಿನ್ ವೈಷ್ಣವ್ ಅವರು ಮಂಡ್ಯದಲ್ಲಿ ಆಧಾರ್ ಸೇವಾ ಕೇಂದ್ರ ಸ್ಥಾಪಿಸುವ ಬಗ್ಗೆ ನನಗೆ ಪತ್ರ ಮುಖೇನ ತಿಳಿಸಿದ್ದಾರೆ. ಈ ಕೇಂದ್ರದ ಸ್ಥಾಪನೆಯಿಂದ ಮಂಡ್ಯ ಮತ್ತು ಸುತ್ತಮುತ್ತಲ ಪ್ರದೇಶದ ಜನರಿಗೆ ಆಧಾರ್ ನೋಂದಣಿ ಹಾಗೂ ಮಾಹಿತಿ ನವೀಕರಣ ಸೇವೆ ಪಡೆಯುವುದು ಅತ್ಯಂತ ಸುಲಭವಾಗಲಿದೆ.
ರಾಷ್ಟ್ರದ ಜನತೆಗೆ ನಾಗರೀಕ ಸೇವೆಗಳನ್ನು ಸುಲಭ ಮತ್ತು ಸರಳವಾಗಿ ಒದಗಿಸುವ ನಿಟ್ಟಿನಲ್ಲಿ ದೃಢ ಸಂಕಲ್ಪ, ಸ್ಪಷ್ಟ ದೂರದೃಷ್ಟಿ ಹೊಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಹಾಗೆಯೇ, ಈ ಪ್ರಮುಖ ಉಪಕ್ರಮವನ್ನು ಸಾಕಾರಗೊಳಿಸುವಲ್ಲಿ ತ್ವರಿತ ಬೆಂಬಲ ಮತ್ತು ಸಕಾರಾತ್ಮಕ ಸ್ಪಂದನೆ ನೀಡಿದ ಕೇಂದ್ರ ಸಚಿವರಾದ ಅಶ್ವಿನ್ ವೈಷ್ಣವ್ ಅವರಿಗೂ ಧನ್ಯವಾದ ಎಂದು ಎಚ್.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದ ಎಚ್.ಡಿ ಕುಮಾರಸ್ವಾಮಿ
ಇನ್ನು ಈಚೆಗೆ ಕೇಂದ್ರ ಸರ್ಕಾರಕ್ಕೆ ಎಚ್.ಡಿ ಕುಮಾರಸ್ವಾಮಿ ಅವರು ಪತ್ರ ಬರೆದಿದ್ದರು. ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ಆಧಾರ್ ದಾಖಲಾತಿ ಮತ್ತು ನವೀಕರಣ ಸೇವೆಗಳ ಲಭ್ಯತೆಗೆ ಸಂಬಂಧಿಸಿದ ಸಾರ್ವಜನಿಕ ಕಾಳಜಿಯ ವಿಷಯದ ಬಗ್ಗೆ ನಿಮ್ಮ ಗಮನ ಸೆಳೆಯಲು ನಾನು ಬಯಸುತ್ತೇನೆ. ಇತ್ತೀಚಿನ ಬದಲಾವಣೆಯ ನಂತರ ಜಿಲ್ಲೆಯಲ್ಲಿ ಸೇವಾ ಮೂಲಸೌಕರ್ಯದಲ್ಲಿ ದೊಡ್ಡ ಕೊರತೆ ಉಂಟಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದ್ದು, ಅದರ ಪರಿಣಾಮವನ್ನು ಜಿಲ್ಲೆಯ ಜನರು ಈಗ ಅನುಭವಿಸುತ್ತಿದ್ದಾರೆ. ಇತ್ತೀಚಿನ ವರೆಗೂ ಮಂಡ್ಯವು ಬಹು ಕೇಂದ್ರಗಳ ಮೂಲಕ ಆಧಾರ್ ಸೇವೆಗಳಿಗೆ ಅವಕಾಶ ನೀಡಲಾಗುತ್ತಿತ್ತು.
ಪ್ರಸ್ತುತ ಜಾರಿಯಲ್ಲಿರುವ ವ್ಯವಸ್ಥೆಯಿಂದ ECMP (Enrollment Client Multi-Platform) ಕಿಟ್‌ಗಳನ್ನು ಹೊಂದಿರುವ ಸಂಪೂರ್ಣ ಕಾರ್ಯನಿರ್ವಹಣೆಯ ಆಧಾರ್ ಸೇವಾ ಕೇಂದ್ರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದರ ಪರಿಣಾಮವಾಗಿ, ಜಿಲ್ಲೆಯ ಜನರ ದಿನನಿತ್ಯದ ಹಾಗೂ ತುರ್ತು ಆಧಾರ್ ಸಂಬಂಧಿತ ಸೇವೆಗಳ ಅಗತ್ಯಗಳಿಗೆ ತ್ವರಿತವಾಗಿ ಸ್ಪಂದಿಸುವ ಸಾಮರ್ಥ್ಯವು ಗಮನಾರ್ಹವಾಗಿ ಕುಂಠಿತಗೊಂಡಿದೆ ಎಂದು ಕೇಂದ್ರ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಎಚ್.ಡಿ ಕುಮಾರಸ್ವಾಮಿ ಅವರು ವಿವರಿಸಿದ್ದರು.


Click it and Unblock the Notifications
