ಎಚ್. ಡಿ. ರೇವಣ್ಣಗೆ ಜಾಮೀನು?, ಜೈಲು?; ಇಂದು ಆದೇಶ
ಬೆಂಗಳೂರು, ಮೇ 04: ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಮಾಜಿ ಸಚಿವ, ಹೊಳೆನರಸೀಪುರ ಕ್ಷೇತ್ರದ ಜೆಡಿಎಸ್ ಶಾಸಕ ಎಚ್. ಡಿ. ರೇವಣ್ಣಗೆ ಜಾಮೀನೋ?, ಜೈಲೋ? ಎಂಬುದು ಶನಿವಾರ ನಿರ್ಧಾರವಾಗಲಿದೆ.
ಮೊದಲು ದಾಖಲಾಗಿದ್ದ ಲೈಂಗಿಕ ಕಿರುಕುಳ ಪ್ರಕರಣದ ಜತೆಗೆ ಮಹಿಳೆಯೊಬ್ಬರ ಅಪಹರಣದ ಪ್ರತ್ಯೇಕ ಎಫ್ಐಆರ್‌ಗೆ ಸಂಬಂಧಿಸಿದಂತೆ ಶಾಸಕ ಎಚ್. ಡಿ. ರೇವಣ್ಣ ಸಲ್ಲಿಸಿದ್ದ ಮಧ್ಯಂತರ ಜಾಮೀನು ಮಂಜೂರಾತಿ ಕೋರಿಕೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ ವಿಚಾರಣೆ ನಡೆಸಿ, ಆದೇಶ ಪ್ರಕಟಿಸುವುದಾಗಿ ತಿಳಿಸಿದೆ.

ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿಯನ್ನು ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಶುಕ್ರವಾರ ಮಧ್ಯಾಹ್ನದ ಕಲಾಪದಲ್ಲಿ ವಿಚಾರಣೆ ನಡೆಸಿದರು.
ನೇರ ಆರೋಪವೇ ಇಲ್ಲ: ರೇವಣ್ಣ ಪರ ವಾದ ಮಂಡಿಸಿದ ಹೈಕೋರ್ಟ್‌ನ ಹಿರಿಯ ವಕೀಲ ಮೂರ್ತಿ ಡಿ. ನಾಯಕ್ ಅವರು, "ಎರಡನೇ ಎಫ್‌ಐಆರ್‌ನಲ್ಲಿ ಎಲ್ಲೂ ರೇವಣ್ಣನವರ ವಿರುದ್ಧ ನೇರ ಆರೋಪ ಇಲ್ಲ. ಎರಡನೇ ಆರೋಪಿ ಸತೀಶ್ ಬಾಬಣ್ಣನವರ ಮೇಲೆ ಮಾತ್ರವೇ ಇದೆ. ಮಹಿಳೆಯನ್ನು ಸತೀಶ್ ಬಾಬಣ್ಣ ಬಂದು ಕರೆದುಕೊಂಡು ಹೋದರು ಎಂದು ಮಾತ್ರವೇ ಹೇಳಲಾಗಿದೆಯೇ ಹೊರತು ರೇವಣ್ಣನವರು ಹೇಳಿದ್ದಕ್ಕೆ ಕರೆದುಕೊಂಡು ಹೋಗಿದ್ದು ಎಂದು ಎಲ್ಲೂ ತಿಳಿಸಿಲ್ಲ. ಅಂತೆಯೇ, ಎಫ್‌ಐಆರ್‌ನಲ್ಲಿ ಮಹಿಳೆಯ ಹೆಸರನ್ನೂ ಕಾಣಿಸಿಲ್ಲ. ರೇವಣ್ಣನವರ ವಿರುದ್ಧ ಕೇವಲ ಹೇಳಿದ ಕೇಳಿದ ಎಂಬಂತಹ ಆಧಾರರಹಿತ ಅಂಶವಿದೆ" ಎಂದರು.
ಪ್ರಾಸಿಕ್ಯೂಷನ್ ಪರ ವಕೀಲರು ಇವತ್ತು ಬೆಳಗ್ಗೆಯಷ್ಟೇ ನಾವು ರೇವಣ್ಣ ವಿರುದ್ಧ ಯಾವುದೇ ಗುರುತರ ಅಂದರೆ ಜಾಮೀನು ಪಡೆಯಬಹುದಾದಂತಹ ಕಲಂಗಳನ್ನು ಅನ್ವಯಿಸಿಲ್ಲ ಎಂದು ಹೇಳಿದ್ದ ಕಾರಣಕ್ಕೆ ನಮ್ಮ ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿಯನ್ನು ವಾಪಸು ಪಡೆದಿದ್ದೇವೆ.
ಆದರೆ, ಅವರು ಪುನಃ ಮತ್ತೊಂದು ನೋಟಿಸ್ ನೀಡಿದ್ದಾರೆ. ಈ ನಡೆಯನ್ನು ಗಮನಿಸಿದರೆ ಅರ್ಜಿದಾರರನ್ನು ಬಂಧಿಸಬಹುದೆಂಬ ಆತಂಕವಿದೆ. ಆದ್ದರಿಂದ, ತುರ್ತಾಗಿ ಮಧ್ಯಂತರ ಜಾಮೀನು ನೀಡಬೇಕು. ಅರ್ಜಿದಾರರು ಸಂಪೂರ್ಣವಾಗಿ ತನಿಖೆಗೆ ಸಹಕರಿಸಲು ಸಿದ್ಧರಿದ್ದಾರೆ ಎಂದು ಮನವಿ ಮಾಡಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, "ಈ ಪ್ರಕರಣವೂ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡ ಪ್ರಕರಣವೇ ಆಗಿರುವುದರಿಂದ ಮುಖ್ಯ ಪ್ರಕರಣದ ಮೇಲೆಯೇ ಸಂಪೂರ್ಣ ವಾದ ಆಲಿಸಿ ಅಂತಿಮ ಆದೇಶ ಪ್ರಕಟಿಸುತ್ತೇನೆ" ಎಂದರು.
ಪ್ರತಿವಾದಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಶನಿವಾರ ಬೆಳಗ್ಗೆಗೆ ಮುಂದೂಡಿದರು.












Click it and Unblock the Notifications