HD Kumaraswamy: ಕರಿಯಾ ಕುಳ್ಳ ಅನ್ಕೊಂಡು ಓಡಾಡಲು ನಾವೇನ್..! ಜಮೀರ್ ವಿರುದ್ಧ ಕುಮಾರಸ್ವಾಮಿ ಸ್ಪೋಟಕ ಹೇಳಿಕೆ!
ಬೆಂಗಳೂರು ನವೆಂಬರ್ 15: ನನ್ನ ಜೀವಮಾನದಲ್ಲೇ ಇಂತಹ ಪದ ಬಳಕೆ ನಾನು ಮಾಡಿಲ್ಲ. ಜಮೀರ್ ಅವರಿಗೆ ಯಾವುತ್ತೂ ಕೂಡ 'ಕುಳ್ಳ' ಅಂತ ನಾನು ಕರೆದಿಲ್ಲ. ಜಮೀರ್ ಅವರ ಮಾತು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ಮಾಡಿದರು. ಜೊತೆಗೆ ಚನ್ನಪಟ್ಟಣದಲ್ಲಿ ನಿಖಿಲ್ ಗೆಲುವಿಗೂ ಜಮೀರ್ ಅಹ್ಮದ್ ಮಾತಿಗೂ ಸಂಬಂಧವಿಲ್ಲ ಎಂದಿದ್ದಾರೆ.
ಚನ್ನಪಟ್ಟಣ ಉಪಚುನಾವಣೆಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು ನವೆಂಬರ್ 23ಕ್ಕೆ ಫಲಿತಾಂಶ ಹೊರಬೀಳಲಿದೆ. ಫಲಿತಾಂಶಕ್ಕೂ ಮೊದಲೇ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಅವರು ಸೋಲಿನ ಸುಳಿವು ನೀಡಿದ್ದಾರೆ. ಇದಕ್ಕೆ ಕಾರಣ ಸಚಿವ ಜಮೀರ್ ಅಹ್ಮದ್ ಹೇಳಿಕೆ ಅಂತಲೂ ಹೇಳಿಕೊಂಡಿದ್ದಾರೆ. ಆದರೆ ಜಮೀರ್ ಅಹ್ಮದ್ ಅವರು ಕುಮಾರಸ್ವಾಮಿ ಅವರನ್ನು 'ಕರಿಯಾ' ಅಂದಿದ್ದು ಇದೇ ಮೊದಲಲ್ಲ ಈ ಹಿಂದೆ ಹಲವಾರು ಬಾರಿ ಹೇಳಿದ್ದಾರೆ ಎಂದು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ. ಅಲ್ಲದೆ ಹೆಚ್‌ಡಿ ಕುಮಾರಸ್ವಾಮಿ ಹಾಗೂ ಜಮೀರ್ ಅಹ್ಮದ್ ಆಪ್ತ ಸ್ನೇಹಿತರು. ಜಮೀರ್ 'ಕುಳ್ಳ' ಹೆಚ್‌ಡಿಕೆ 'ಕಾಲಿಯಾ' ಅಂತ ಇಬ್ಬರೂ ಕೂಡ ಪರಸ್ಪರ ಹೇಳಿರುವುದು ಇದೆ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ. ಆದರೆ ಇದನ್ನ ಹೆಚ್‌ಡಿ ಕುಮಾರಸ್ವಾಮಿ ಅಲ್ಲಗಳಿದಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್‌ಡಿ ಕುಮಾರಸ್ವಾಮಿ ಅವರು, 'ನನ್ನ ಜೀವಮಾನದಲ್ಲೇ ಇಂತಹ ಪದ ಬಳಕೆ ನಾನು ಮಾಡಿಲ್ಲ. ಜಮೀರ್ ಅವರಿಗೆ ಯಾವುತ್ತೂ ಕೂಡ 'ಕುಳ್ಳ' ಅಂತ ನಾನು ಕರೆದಿಲ್ಲ. ಜಮೀರ್ ಅವರ ಮಾತು ಅವರ ಸಂಸ್ಕೃತಿಯನ್ನು ತೋರಿಸುತ್ತದೆ' ಎಂದಿದ್ದಾರೆ.
ನವೆಂಬರ್ 23ರವರೆಗೂ ಕಾಯೋಣ. ಆಮೇಲೆ ಇದರ ಬಗ್ಗೆ ಮಾತನಾಡೋಣ. ಆ ತಾಯಿ ಮುಂದೆ ನಿಂತು ಮಾತನಾಡುತ್ತಿದ್ದೇವೆ. ಒಂದು ಬಾರಿ ನಮ್ಮ ಈಗಿನ ವಿಧಾನ ಪರಿಷತ್‌ನ ಸ್ಪೀಕರ್ ನನ್ನನ್ನು ಹೇ ಕುಮಾರ ಅಂತ ಸಂಭೋದನೆ ಮಾಡಿದ್ರು. ಆಗ ಹೊಡಿಯಲಿಕ್ಕೆ ಹೋದ ಗಿರಾಕಿ. ಹೀಗಿರುವಾಗ ನಾನು ಇವರ ಬಳಿ 'ಕರಿಯಾ' ಅನಿಸಿಕೊಂಡು, ಇವರಿಗೆ ಕುಳ್ಳ ಅನ್ಕೊಂಡು ಇರಲು ನಾನೇನು....! ಆ ರೀತಿಯ ವಾತಾವರಣದಲ್ಲಿ ಬಂದಿರೋನಾ ನಾನು? ಇಲ್ಲಿ ಅವರ ಮಾತುಗಳು ಅವರ ಸಂಸ್ಕೃತಿ ತೋರಿಸುತ್ತದೆ ಎಂದು ಹೆಚ್‌ಡಿಕೆ ಆಕ್ರೋಶ ಹೊರಪಡಿಸಿದ್ದಾರೆ.

ಜಮೀರ್ ಮಾತಿಗೆ ಜೈಲಿಗೆ ಹಾಕಿ...
ಈ ಹಿಂದೆ ಜಮೀರ್ ನನ್ನ ಜೊತೆ ಚೆನ್ನಾಗಿದ್ದರು. ಹಾಗಂತ ಈ ರೀತಿ ನಾನು ಯಾವುತ್ತೂ ಮಾತನಾಡಿಲ್ಲ. ಈ ಸರ್ಕಾರಕ್ಕೆ ಮಾನಾ ಮರ್ಯಾದೆ ಇದ್ದರೆ ಜಮೀರ್ ಅವರ ಮಾತಿನಿಂದ ಅವರನ್ನು ಜೈಲಿಗೆ ಹಾಕಲಿ. ಆದರೆ ಅವರು ಯಾವ ರೀತಿ ಡಿಫೈನ್ ಮಾಡಿಕೊಂಡಿದ್ದಾರೆ ಅನ್ನೋದನ್ನು ನಾನು ನೋಡಿದ್ದೇನೆ.
ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಗೃಹ ಸಚಿವರು ಯಾವ ರೀತಿ ಜಮೀರ್ ಹೇಳಿಕೆಯನ್ನು ಡಿಫೈನ್ ಮಾಡಿಕೊಂಡಿದ್ದಾರೆ ನಾನು ನೋಡಿದ್ದೇನೆ. ಅಮಾಯಕರನ್ನು ಜೈಲಿಗೆ ಹಾಕುವ ನೀವು ಮಾನ ಮರ್ಯಾದೆ ಇದ್ದರೆ ಜಮೀರ್ ಅವರನ್ನು ಜೈಲಿಗೆ ಹಾಕಿ ಎಂದು ವಾಗ್ದಾಳಿ ಮಾಡಿದರು. ನನ್ನ ಜೀವನದಲ್ಲಿ ಯಾವುತ್ತೂ ಕೂಡ ಕುಳ್ಳ ಅನ್ನೋ ಪದಬಳಕೆ ಮಾಡಿಲ್ಲ. ಜಮೀರ್ ಹೇಳಿಕೆಗೂ ನಿಖಿಲ್ ಗೆಲುವಿಗೂ ಸಂಬಂಧ ಇಲ್ಲ. ಅದು ಜಮೀರ್ ಸಂಸ್ಕೃತಿಯನ್ನು ತೋರಿಸಿದೆ ಎಂದು ಹೇಳಿದರು.












Click it and Unblock the Notifications