HD Kumaraswamy: ಪಂಚಮಸಾಲಿ ಹೋರಾಟರ ಮೇಲೆ ಲಾಠಿಚಾರ್ಜ್; ಬೆಳಗಾವಿ ಕೊತ-ಕೊತ: ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ
ನವದೆಹಲಿ, ಡಿಸೆಂಬರ್ 10: ಬೆಳಗಾವಿಯಲ್ಲಿ ಸುವರ್ಣಸೌಧ ಬಳಿ ಪ್ರತಿಭಟನೆ ನಡೆಸಲು ಬಂದ ಪಂಚಮಸಾಲಿ ಸಮುದಾಯದ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ ಹಾಗೂ ಮುಖಂಡರ ಮೇಲೆ ಲಾಠಿ ಪ್ರಹಾರ ನಡೆಸಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು, ಪಂಚಮಸಾಲಿ ಬಂಧುಗಳ ಹೋರಾಟವನ್ನು ಹತ್ತಿಕ್ಕಲು ರಾಜ್ಯ ಕಾಂಗ್ರೆಸ್ ಸರಕಾರ 'ಅಡಾಲ್ಫ್ ಹಿಟ್ಲರ್ ಮಾರ್ಗ'ವನ್ನು ಆಯ್ಕೆ ಮಾಡಿಕೊಂಡಿರುವುದು ಅತ್ಯಂತ ದುರದೃಷ್ಟಕರ. ಸಂತರು, ಪಂಚಮಸಾಲಿ ಸಮುದಾಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಬಸವ ಮೃತ್ಯುಂಜಯ ಮಹಾಸ್ವಾಮೀಜಿಗಳನ್ನು ಅತ್ಯಂತ ಹೇಯವಾಗಿ ನಡೆಸಿಕೊಂಡಿರುವುದು ನನಗೆ ಅತೀವ ನೋವುಂಟು ಮಾಡಿದೆ. ಇದು 'ಶಿಲಾಯುಗ ಕಾಲ'ದ ಮನಃಸ್ಥಿತಿಯ ಸರಕಾರ ಎಂದು ಹರಿಹಾಯ್ದಿದ್ದಾರೆ.

ತಮ್ಮ ಬೇಡಿಕೆಗಳ ಬಗ್ಗೆ ಪೂಜ್ಯ ಸ್ವಾಮೀಜಿ ಅವರು, ಸಮುದಾಯದ ಪ್ರಮುಖರು ನಿರಂತರವಾಗಿ ಸರಕಾರಕ್ಕೆ ಮನವಿ ಮಾಡುತ್ತಲೇ ಇದ್ದರು. ಆದರೂ ಸರಕಾರ ಕಿವುಡಾಗಿತ್ತು, ನಿರ್ಲಕ್ಷ್ಯ ವಹಿಸಿತ್ತು. ಶಾಂತಿಯುತವಾಗಿ ಪ್ರತಿಭಟಿಸಲು ಬಂದ ಸ್ವಾಮೀಜಿಗಳು, ಸಮುದಾಯದ ನಾಯಕರು, ಜನತೆಯ ಮೇಲೆ ದಬ್ಬಾಳಿಕೆ ನಡೆಸಿ ಪೊಲೀಸ್ ವಶಕ್ಕೆ ತೆಗೆದುಕೊಂಡ ಕ್ರಮ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರಕಾರವೇ ಶಾಂತಿ ಕದಡುವ ದುಷ್ಪ್ರಯತ್ನ ಮಾಡಿದರೆ ಅದಕ್ಕೆ ಸರಕಾರವೇ ಪೂರ್ಣ ಹೊಣೆ. ಕೂಡಲೇ ಪೂಜ್ಯ ಸ್ವಾಮೀಜಿ ಅವರ ಹಾಗೂ ಸಮುದಾಯದ ಕ್ಷಮೆ ಕೇಳಬೇಕು ಹಾಗೂ ಅವರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ತುರ್ತು ಕ್ರಮ ವಹಿಸಬೇಕು ಎಂದಿರುವ ಅವರು, ಸಿದ್ದರಾಮಯ್ಯ ಅವರನ್ನು ಸರ್ವಾಧಿಕಾರಿ ಎಂದು ಕರೆದು ಅವರ ಸರ್ಕಾರವನ್ನು ತುಘಲಕ್ ಸರ್ಕಾರ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಎಸ್ ಎಂ ಕೃಷ್ಣರವರ ನಿಧನಕ್ಕೆ ಸಂತಾಪ
ಅತ್ಯಂತ ವಿದ್ಯಾವಂತರು, ಸುಶಿಕ್ಷಿತರು ಆಗಿದ್ದ ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರಾದ ಎಸ್.ಎಂ.ಕೃಷ್ಣ ಅವರ ನಿಧನ ನನಗೆ ವೈಯಕ್ತಿಕವಾಗಿ ನೋವು ತಂದಿದೆ. ಅವರು ಅಜಾತಶತ್ರುವಾಗಿದ್ದರು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕಂಬನಿ ಮಿಡಿದಿದ್ದಾರೆ.
ಹಲವಾರು ಸಲ ಕೃಷ್ಣ ಅವರನ್ನು ನಾನು ಭೇಟಿಯಾಗಿದ್ದೇನೆ. ನಾನು ಮೊದಲು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಅವರು ರಾಜ್ಯಸಭೆ ಸದಸ್ಯರಾಗಿದ್ದರು. ಮಾಜಿ ಸಚಿವರಾಗಿದ್ದ ಹೆಚ್.ಎನ್.ನಂಜೇಗೌಡರ ಮನೆಯಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದಿದ್ದು ಈಗಲೂ ನೆನಪಿದೆ. ಮಂಡ್ಯ ಲೋಕಸಭೆ ಚುನಾವಣೆಗೆ ಎನ್ಡಿಎ ಅಭ್ಯರ್ಥಿಯಾದ ಮೇಲೆ ಸದಾಶಿವನಗರದ ಅವರ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದೆ. ಎರಡು ಬಾರಿ ಸಿಎಂ ಆಗಿದ್ದಾಗ ಅವರ ಅರ್ಶೀವಾದ ಪಡೆದಿದ್ದೇನೆ. ಎಂಬ ಅಂಶವನ್ನು ನೆನಪು ಮಾಡಿಕೊಂಡರು.
ದೇಶಕ್ಕೆ, ರಾಜ್ಯಕ್ಕೆ ಅವರು ದೊಡ್ಡ ಮಟ್ಟದ ಕೊಡುಗೆ ನೀಡಿದ್ದಾರೆ. ರಾಜ್ಯದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅವರು ಗಣನೀಯವಾಗಿ ಕೆಲಸ ಮಾಡಿದ್ದಾರೆ. ಅವರು ನಾಡಿಗೆ ಸಲ್ಲಿಸಿರುವ ಸೇವೆಯನ್ನು ನಾವು ಮರೆಯಲು ಸಾಧ್ಯವಿಲ್ಲ. ಮಾದರಿ ರಾಜಕಾರಣಿ. ಅವರ ಅಗಲಿಕೆ ನನಗೆ ನೋವು ತಂದಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಕೃಷ್ಣ ಅವರ ರಾಜಕೀಯದ ಸುದೀರ್ಘ ಪಯಣ ಸ್ಫೂರ್ತಿದಾಯಕ. ಬಹುಶಃ ಎಲ್ಲಾ ರಾಜಕಾರಣಿಗಳಿಗೂ ಅಷ್ಟು ಸುದೀರ್ಘ ರಾಜಕೀಯ ಅವಕಾಶ ಸಿಗುವುದು ಕಷ್ಟ. ಅವರಿಗೆ ನಾವು ಸಕಾಲೀನರಲ್ಲ, ನಾವು ಕಿರಿಯರು. ಅವರಿಂದ ಹಲವು ರೀತಿಯಲ್ಲಿ ಮಾರ್ಗದರ್ಶನ ಪಡೆದಿದ್ದೇನೆ. ಬೆಂಗಳೂರು ನಗರ ಅಭಿವೃದ್ಧಿ, ಐಟಿ ಬಿಟಿ ಕೊಡುಗೆ ಅಪಾರ. ನಮ್ಮ ರಾಜ್ಯದ ಇತಿಹಾಸದಲ್ಲಿ ಕೃಷ್ಣ ಅವರು ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ. ದೇವೇಗೌಡರು, ಕೃಷ್ಣ ಅವರು ಬೇರೆ ಬೇರೆ ರಾಜಕೀಯ ಹಾದಿಯಿಂದ ಬಂದವರು. ಇಬ್ಬರಲ್ಲೂ ಮುಕ್ತವಾಗಿ ಚರ್ಚೆ ಮಾಡುವ ದಿನಗಳನ್ನು ನಾನು ಕಂಡಿದ್ದೇನೆ. ಇಬ್ಬರು ಕೂಡ ಪರಸ್ಪರ ಗೌರವ, ವಿಶ್ವಾಸದಿಂದ ಇದ್ದರು ಎಂದು ತಿಳಿಸಿದರು.












Click it and Unblock the Notifications