Steel Research Cetre: ಬೆಂಗಳೂರಿನಲ್ಲಿ ಉಕ್ಕು ಸಂಶೋಧನಾ ಕೇಂದ್ರ ಸ್ಥಾಪನೆ; ಸಚಿವ ಎಚ್‌ಡಿಕೆ ಸೂಚನೆ
ರಾಷ್ಟ್ರೀಯ ಉಕ್ಕು ನೀತಿ (ಎನ್‌ಎಸ್‌ಪಿ) 2017ಕ್ಕೆ ಅನುಗುಣವಾಗಿ 2030-31ರ ವೇಳೆಗೆ ಕಚ್ಚಾ ಉಕ್ಕಿನ ಉತ್ಪಾದನಾ ಸಾಮರ್ಥ್ಯವನ್ನು 300 ಮಿಲಿಯನ್ ಟನ್‌ಗಳಿಗೆ ಹೆಚ್ಚಿಸಲು ಉಕ್ಕು ಸಚಿವಾಲಯವು ಕೆಲಸ ಮಾಡಬೇಕು ಎಂದು ಉಕ್ಕು ಮತ್ತು ಭಾರೀ ಕೈಗಾರಿಕೆಗಳ ನೂತನ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
ದೆಹಲಿಯಲ್ಲಿ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವರಾಗಿ ಅಧಿಕಾರ ಇಲ್ಲಿ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕುಮಾರಸ್ವಾಮಿ ಅವರು ಎರಡೂ ಸಚಿವಾಲಯಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಸಭೆಯಲ್ಲಿ, ನಿಷ್ಕ್ರಿಯಗೊಂಡ ಅಥವಾ ನಿಷ್ಕ್ರೀಯವಾಗಿರುವ ಕಬ್ಬಿಣ ಮತ್ತು ಉಕ್ಕಿನ ವಲಯದ ಸಾರ್ವಜನಿಕ ವಲಯದ ಉದ್ಯಮಗಳ ಪುನರುಜ್ಜೀವನದ ಕುರಿತು ಸಚಿವರು ಚರ್ಚಿಸಿದರು.
ಕಾರ್ಖಾನೆಗಳ ಪುನುಶ್ಚೇತನಕ್ಕೆ ಸರ್ಕಾರ ಕೈಗೊಳ್ಳಬೇಕಾದ ಕಾರ್ಯತಂತ್ರಗಳೊಂದಿಗೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುದುರೆಮುಖದಲ್ಲಿರುವ ಕಬ್ಬಿಣದ ಅದಿರಿನ ನಿಕ್ಷೇಪ ವಿಶ್ವದಲ್ಲೇ ಅತ್ಯುನ್ನತ ಗುಣಮಟ್ಟದ್ದಾಗಿದೆ ಎಂದು ಅಧಿಕಾರಿಗಳು ಈ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಉಕ್ಕು ಸಂಶೋಧನಾ ಕೇಂದ್ರ
ಬೆಂಗಳೂರಿನಲ್ಲಿ ಉಕ್ಕು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಅಧಿಕಾರಿಗಳಿಗೆ ಸೂಚಿಸಿದ ಕುಮಾರಸ್ವಾಮಿ, ಇಂತಹ ಸಂಸ್ಥೆಯು ಉಕ್ಕು ಕ್ಷೇತ್ರದಲ್ಲಿ ಇತ್ತೀಚಿನ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಪಡೆಯಲು ಉದ್ಯಮಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿದರು.
ಉಕ್ಕು ಉತ್ಪಾದನೆ ಹೆಚ್ಚಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು. ಚೀನಾದೊಂದಿಗೆ ಸ್ಪರ್ಧಿಸುವ ದೃಷ್ಟಿಯಿಂದ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರ 'ಮೇಕ್ ಇನ್ ಇಂಡಿಯಾ'ವನ್ನು ಬೆಂಬಲಿಸುವುದು, ಉತ್ಪಾದನೆಯನ್ನು ಹೆಚ್ಚಿಸುವುದು, ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ಭಾರತವನ್ನು ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡಲು ಕೊಡುಗೆ ನೀಡಬೇಕು ಎಂದು ಹೇಳಿದರು.
ರಾಜ್ಯದ ಜನರ ನಿರೀಕ್ಷೆ
ಎಚ್‌ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾಗುತ್ತಿದ್ದಂತೆ ರಾಜ್ಯದ ಜನರ ನಿರೀಕ್ಷೆಗಳು ಹೆಚ್ಚಾಗಿವೆ. ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಕಾರ್ಖಾನೆಗಳನ್ನು ತಂದು ನಿರುದ್ಯೋಗ ಸಮಸ್ಯೆ ಕಡಿಮೆ ಮಾಡಬೇಕು ಎಂದು ಜನ ಒತ್ತಾಯಿಸಿದ್ದಾರೆ.
ಭದ್ರಾವತಿ ಕಬ್ಬಿಣ ಕಾರ್ಖಾನೆಯನ್ನು ಮತ್ತೆ ಆರಂಭಿಸಲು ಎಚ್‌ಡಿಕೆ ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಟೆಸ್ಲಾ ಕಾರು ನಿರ್ಮಾಣ ಕಾರ್ಖಾನೆಯನ್ನು ಕರ್ನಾಟಕಕ್ಕೆ ತರುವ ಬಗ್ಗೆ ಎಚ್‌ಡಿಕೆ ಆಸಕ್ತಿ ಹೊಂದಿದ್ದಾರೆ.












Click it and Unblock the Notifications