HD Kumaraswamy: ಡಿಕೆ ಶಿವಕುಮಾರ್ ನೆಟ್ಟು ಬೋಲ್ಟ್ ಹೇಳಿಕೆಗೆ ಹೆಚ್‌ಡಿ ಕುಮಾರಸ್ವಾಮಿ ಕಿಡಿ
ಬೆಂಗಳೂರು ಮಾರ್ಚ್ 2: ಡಿಸಿಎಂ ಡಿಕೆ ಶಿವಕುಮಾರ್ ಅವರ ನೆಟ್ಟು ಬೋಲ್ಟ್ ಹೇಳಿಕೆಗೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಕನಕಪುರದ ಬಂಡೆ ಹೇಳಿಕೆಗೆ ಪ್ರಸ್ತುತ ವಿಪಕ್ಷಗಳು ಆಕ್ರೋಶ ಹೊರ ಹಾಕಿವೆ. ಸಿನಿಮಾ ಕಲಾವಿದರ ನೆಟ್ಟು-ಬೋಲ್ಟ್ ಸರಿ ಮಾಡುವುದಾಗಿ ಹೇಳಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆಯ ವಿರುದ್ಧ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಿಮಗೆ ಅಧಿಕಾರ ಕೊಟ್ಟಿದ್ದು ನೆಟ್ಟು ಬೋಲ್ಟ್ ಸರಿ ಮಾಡಲು ಅಲ್ಲ. ಅದನ್ನು ಸರಿ ಮಾಡಲು ಬೇರೆಯವರು ಇದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರ ವಿರುದ್ಧ ಹೆಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.

ಫಿಲ್ಮ ಫೆಸ್ಟಿವಲ್‌ಗೆ ಸಾಕಷ್ಟು ನಟ ನಟಿಯರು ಗೈರಾಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿಕೆ ಶಿವಕುಮಾರ್ ಅವರು ಸಿನಿಮಾ ಕಲಾವಿದರ ನೆಟ್ಟು-ಬೋಲ್ಟ್ ಸರಿ ಮಾಡುವುದಾಗಿ ಹೇಳಿದ್ದರು. ಈ ಹೇಳಿಕೆಗೆ ಆಕ್ರೋಶಗೊಮಡ ಹೆಚ್‌ಡಿ ಕುಮಾರಸ್ವಾಮಿ ಅವರು ಡಿಕೆ ಶಿವಕುಮಾರ್ ಅವರು ನೆಟ್ಟು ಬೋಲ್ಟ್ ಸರಿ ಮಾಡಲು ಯಾರು? ಇವರು ಯಾರು ಅದನ್ನು ಹೇಳಲು? ಎಂದು ಪ್ರಶ್ನೆ ಮಾಡಿದ್ದಾರೆ.
ಜಗದೀಶ್ ಶೆಟ್ಟರ್ ಕಿಡಿ
ಇನ್ನೂ ಬೆಳಗಾವಿ ಬಿಜೆಪಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತೀವ್ರವಾಗಿ ಖಂಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಸಂಸದ ಜಗದೀಶ್ ಶೆಟ್ಟರ್, "ತಮ್ಮ ಮೇಕೆದಾಟು ಪಾದಯಾತ್ರೆ ವೇಳೆ ಸಿನಿಮಾ ಕಲಾವಿದರು ಕೈಜೋಡಿಸಿರಲಿಲ್ಲ ಎಂಬ ಕಾರಣಕ್ಕೆ ಈಗ ಡಿಕೆ ಶಿವಕುಮಾರ್ ಅವರು ಸಿನಿಮಾ ಕಲಾವಿದರ ವಿರುದ್ಧ ಮಾತನಾಡುತ್ತಿದ್ದಾರೆ.." ಎಂದು ಗಂಭೀರ ಆರೋಪ ಮಾಡಿದರು.
ಶಾಸಕ ಮುನಿರತ್ನ ಆಕ್ರೋಶ
ನಿಮ್ಮ ಹತ್ರ ಕೆಲಸ ಮಾಡೋರಿಗೆ ಸರಿ ಮಾಡಿ, ನಿಮ್ಮ ತೋಟದಲ್ಲಿ ಕೆಲಸ ಮಾಡೋರಿಗೆ ಸರಿ ಮಾಡಿ ಕನ್ನಡ ಚಿತ್ರರಂಗವೇನು ನಿಮ್ಮ ಮನೆ ಆಸ್ತಿಯೇನು? ಎಂದು ಶಾಸಕ ಮುನಿರತ್ನ ವಾಗ್ದಾಳಿ ನಡೆಸಿದರು. ಕನ್ನಡ ಚಿತ್ರರಂಗದ ಕಲಾವಿದರ ವಿರುದ್ಧ ಡಿಕೆ ಶಿವಕುಮಾರ ಹೇಳಿಕೆ ವಿಚಾರ ಸಂಬಂಧ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುನಿರತ್ನ ಅವರು, ಕನ್ನಡ ಚಿತ್ರರಂಗವೇನು ಡಿಕೆ ಶಿವಕುಮಾರದ್ದೇ? ಅದಕ್ಕೊಂದು ಇತಿಹಾಸವಿದೆ. ಅದು ಯಾರ ಸ್ವತ್ತಲ್ಲ, ಯಾರ ಮುಲಾಜಿನಲ್ಲಿಲ್ಲ ಎಂದು ತಿರುಗೇಟು ನೀಡಿದರು.

ಆರ್ ಅಶೋಕ್ ವಾಗ್ದಾಳಿ
ಅನುದಾನ ಬೇಕಾದರೆ ಶಾಸಕರು ತಮ್ಮ ಬಳಿ ತಗ್ಗಿ-ಬಗ್ಗಿ ನಡೆಯಬೇಕು ಎಂದು ದರ್ಪ ಮೆರೆದಿದ್ದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಾಹೇಬರು ಈಗ ಕನ್ನಡ ಸಿನಿಮಾ ಕಲಾವಿದರಿಗೆ ಬಹಿರಂಗ ವೇದಿಕೆಯಲ್ಲಿ ಧಮ್ಕಿ ಹಾಕಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ಕಾಂಗ್ರೆಸ್ ಪಕ್ಷದ ರಾಜಕೀಯ ಪಾದಯಾತ್ರೆಗೆ ಸಿನಿಮಾ ಕಲಾವಿದರು ಬರುವುದು ಬಿಡುವುದು ಅವರವರ ವಿವೇಚನೆಗೆ ಬಿಟ್ಟಿದ್ದು. ಕಾಂಗ್ರೆಸ್ ಪಕ್ಷಕ್ಕೆ ನಡೆದುಕೊಳ್ಳುವ ಕಲಾವಿದರಿಗೆ ಮನ್ನಣೆ ಸಿಗುತ್ತದೆ, ಇಲ್ಲವಾದರೆ ಸಿಗುವುದಿಲ್ಲ ಎನ್ನುವ ನಿಮ್ಮ ಮಾತು ನಿಮ್ಮ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಕೆ ಶಿವಕುಮಾರ್ ಹೇಳಿದ್ದೇನು?
ಫಿಲ್ಮ ಫೆಸ್ಟಿವಲ್‌ಗೆ ಚಾಲನೆ ನೀಡಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, 'ಇದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮನೆ ಕಾರ್ಯಕ್ರಮವಲ್ಲ. ಇದು ಇಂಡಸ್ಟ್ರಿ ಕಾರ್ಯಕ್ರಮ. ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಬರಲಿಲ್ಲ ಅಂದರೆ ಯಾರು ಬರುತ್ತಾರೆ? ಯಾಕಾಗಿ ಫಿಲ್ಮ ಫೆಸ್ಟಿವಲ್ ಮಾಡಬೇಕು? ನನ್ನದು ಎಚ್ಚರಿಕೆ ಅಂತಾಗಲಿ, ಆದೇಶ ಅಂತನಾದರೂ ಆಗಲಿ. ಇದು ನನ್ನ ಕಾರ್ಯಕ್ರಮವಲ್ಲ. ನಿಮ್ಮ ಕಾರ್ಯಕ್ರಮ. ನಾವು ಪರ್ಮೀಷನ್ ಕೊಡಬೇಡ ಅಂದರೆ ಅಲ್ಲಿ ಆ ಕಲಾವಿದನದ್ದು ಸಿನಿಮಾನೇ ನಡೆಯೋದಿಲ್ಲ. ನಮಗೂ ಗೊತ್ತಿದೆ. ಯಾರಿಗೆ ಎಲ್ಲೆಲ್ಲಿ ನೆಟ್ಟು ಬೋಲ್ಟ್ ಟೈಟ್ ಮಾಡಬೇಕು ಅನ್ನೋದು ನನಗೆ ಗೊತ್ತಿದೆ' ಎಂದು ಹೇಳಿದ್ದರು. ಈ ಹೇಳಿಕೆಗೆ ಈಗ ಭಾರೋ ವಿರೋಧ ವ್ಯಕ್ತವಾಗಿದೆ.












Click it and Unblock the Notifications