ಡಿಕೆ ಶಿಕುಮಾರ್ ಯಾವ ಕಷ್ಟಪಟ್ಟು ಇಷ್ಟು ಆಸ್ತಿ ಸಂಪಾದಿಸಿದ್ದಾರೆ? - ಕಲ್ಲು ಬಂಡೆ ಕುರಿತು ಬಾಂಬ್ ಸಿಡಿದ ಕುಮಾರಸ್ವಾಮಿ
ಬೆಂಗಳೂರು, ಏಪ್ರಿಲ್ 15: ಬೆಂಗಳೂರಿನ ಸುತ್ತಮುತ್ತ 1000 ಎಕರೆ ಕುಮಾರಸ್ವಾಮಿಗೆ ಜಮೀನು ಇದೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ಕುರಿತು ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯ ಲೋಕಸಭಾ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ.
ಈ ಕುರಿತು ಕುಮಾರಸ್ವಾಮಿ ಅವರು ಮಾತನಾಡಿ, ನನ್ನದು ಬಿಡದಿಯ ಬಳಿ 45-48 ಎಕರೆ ಭೂಮಿ ಇದೆ. ಸಿನಿಮಾದಲ್ಲಿ ದುಡಿದ ದುಡ್ಡಿನಲ್ಲಿ ಅದನ್ನು ಖರೀದಿ ಮಾಡಿದ್ದು. ರಾಜಕೀಯಕ್ಕೆ ಬರುವುದಕ್ಕೆ ಮೊದಲೇ ಈ ಜಾಮೀನು ಖರೀದಿ ಮಾಡಿದ್ದೇನೆ. ನಾನು ತೋಟದಲ್ಲಿ ರೆಸಾರ್ಟ್ ಮಾಡಿಲ್ಲ. ಬಂದು ನೋಡಪ್ಪ. ಕಲ್ಲಂಗಡಿ, ಬಾಳೆ, ಕೊಬ್ಬರಿ ಬೆಳೆದಿದ್ದೇನೆ. ಎಲ್ಲಾ ವಿಡಿಯೋ ಇದೆಯಪ್ಪ. ದೇವೇಗೌಡರು ವಿರೋಧ ಪಕ್ಷದಲ್ಲಿ ಇದ್ದಾಗಲೂ ನಿಕ್ಕರ್ ಹಾಕಿಕೊಂಡು ಶನಿವಾರ, ಭಾನುವಾರ ತೋಟದ ಕೆಲಸ ಮಾಡುತ್ತಿದ್ದರು ಎಂದರು.

ಡಿ.ಕೆ.ಶಿವಕುಮಾರ್ ಯಾವ ಕಷ್ಟಪಟ್ಟು ಆಸ್ತಿ ಸಂಪಾದನೆ ಮಾಡಿದ್ದಾರೆ? ಕಲ್ಲು ಬಂಡೆ ಕದ್ದು ವಿದೇಶಕ್ಕೆ ಸಾಗಿಸಿರೋದೇ ಅವರ ಕೆಲಸ. ಹೇಳಿದರೆ ಆ ವ್ಯಕ್ತಿಯ ಬಗ್ಗೆ ಕಂತೆ ಕಂತೆ ಹೇಳಬಹುದು. ಅವರಿಗೆ ನನ್ನದೇ ಆಪತ್ತು. ಅದಕ್ಕೆ ನನ್ನ ವಿರುದ್ದ ಮಾತಾಡ್ತಿದ್ದಾರೆ. 8 ಒಕ್ಕಲಿಗರಿಗೆ ಸೀಟು ಕೊಟ್ಟಿದ್ದೀನಿ ಅಂತಾರೆ. ಕೊಟ್ಟು ಏನ್ ಆಯ್ತು. ಸಿಎಂ ಆಗೋ ಅವಕಾಶ ಇದೆ, ಆಶೀರ್ವಾದ ಮಾಡಿ ಅಂದರು. ಈಗ ಒಂದು ಸಾರಿ ಪೇಪರು ಪೆನ್ನು ಕೊಟ್ಟು ತಮಿಳುನಾಡಿಗೆ ನೀರು ಹೋಗ್ತಿಲ್ಲವಾ? ಈಗ ಮತ್ತೆ ಪೆನ್ನು ಪೇಪರ್ ಕೊಡಬೇಕಾ? ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಪಾರ್ಟ್ಮೆಂಟ್ ನಿವಾಸಿಗಳನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದು, ಹೊಸ ಅಪಾರ್ಟ್ಮೆಂಟ್ ಅಕ್ಯೂಪೆನ್ಸಿ ಸರ್ಟಿಫಿಕೇಟ್ ಬೇಕಾದರೆ, NOC ಬೇಕಾದರೆ ನನ್ನ ತಮ್ಮನಿಗೆ ಮತ ಹಾಕಿ ಎಂದು ಬ್ಲಾಕ್ ಮೇಲ್ ಮಾಡಿದ್ದಾರೆ. ವೋಟು ಕೊಟ್ಟರೆ ಕಾವೇರಿ ನೀರು ಬಿಡ್ತೀನಿ ಎಂದು ಧಮ್ಕಿ ಹಾಕಿದ್ದಾರೆ ಎಂದು ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಮೇಲೆ ಆರೋಪ ಮಾಡಿದರು.
ಗಂಡಸ್ತನ ಹೇಳಿಕೆ ಗಮನಕ್ಕೆ ಬರಲಿಲ್ಲವೇ?
ಮದ್ದೂರಿನಲ್ಲಿ ನಿಮ್ಮ ಶಾಸಕರೊಬ್ಬರು ಗಂಡಸ್ತನ ಬಗ್ಗೆ ಹೇಳಿಕೆ ನೀಡಿದ್ದರು. ನಮ್ಮ ಪಕ್ಷದ ಮಾಜಿ ಶಾಸಕರನ್ನು ಅವಹೇಳನ ಮಾಡಿದ್ದರು. ನಿಮ್ಮ ಪದ ಬಳಕೆ ನಿಮ್ಮ ಗಮನಕ್ಕೆ ಬರಲಿಲ್ಲವೇ? ನಾನು ತಡೆಯದೇ ಇದ್ದಿದ್ದರೆ ಆ ವ್ಯಕ್ತಿಯ ಮನೆಗೆ ಜನರನ್ನು ನುಗ್ಗಿಸುತ್ತಿದ್ದರು. ಇತ್ತೀಚೆಗೆ ಶಾಮನೂರು ಶಿವಶಂಕರಪ್ಪ ಅವರು, ಮಹಿಳೆಯರು ಅಡುಗೆ ಮನೆಯಲ್ಲಿ ಇರಲು ಲಾಯಕ್ಕು ಎಂದು ಹೇಳಿದ್ದರಲ್ಲವೇ? ಇದೆಲ್ಲಾ ನಿಮ್ಮ ಗಮನಕ್ಕೆ ಬಂದಿಲ್ಲವೇ? ಯಾರಿಗೆ ಯಾವ ಶಿಕ್ಷೆ ಕೊಟ್ಟಿದ್ದೀಯಪ್ಪಾ? ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ದೇವೇಗೌಡರನ್ನು ಪ್ರಧಾನಿ ಮಾಡಿದ್ದು ನಾವು ಅಂತಾರೆ ಸಿದ್ದರಾಮಯ್ಯ. ಅದೇ ದೇವೇಗೌಡರನ್ನು ಪ್ರಧಾನಿ ಸ್ಥಾನದಿಂದ ಯಾಕೆ ಇಳಿಸಿದಿರಿ? ಸಿದ್ದರಾಮಯ್ಯ ಅವರೇ ಉತ್ತರ ಕೊಡಿ. ಇವತ್ತು ನಮ್ಮ-ಬಿಜೆಪಿ ಸಂಬಂಧದ ಬಗ್ಗೆ ಮಾತನಾಡುತ್ತೀರಿ. ನಾಯಿ ಹಸಿದಿತ್ತು, ಅನ್ನ ಹಳಸಿತ್ತು ಎನ್ನುತ್ತೀರಿ. 2018ರಲ್ಲಿ ನಮ್ಮ ಮನೆಗೆ ನೀವು ಬಂದಾಗ ನೀವು ನಾಯಿ ಸ್ಥಾನದಲ್ಲಿ ಇದ್ದೀರಾ? ಅಥವಾ ಹಳಸಿದ ಅನ್ನದ ಸ್ಥಾನದಲ್ಲಿ ಇದ್ದೀರಾ? ಅನ್ನಕ್ಕೆ ನಾನಂತೂ ಅಪಮಾನ ಮಾಡುವುದಿಲ್ಲ ಎಂದು ಪ್ರಶ್ನಿಸಿದರು.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ವಿಧಾನಸಭೆ ಕಲಾಪದಲ್ಲಿ ಏನು ಹೇಳಿದ್ದರು ಎನ್ನುವುದು ನಿಮಗೆ ಗೊತ್ತಿರಬೇಕಲ್ಲವೇ ಶಿವಕುಮಾರ್? ಅವರು ಹೇಳಿದ್ದನ್ನು ಮರೆತಿದ್ದೀರಾ ಹೇಗೆ? ರಮೇಶ್ ಕುಮಾರ್ ಅವರು ಸದನದಲ್ಲಿ ಆನಂದ ಪಡೆಯಿರಿ ಅಂತ ಹೇಳಿದ್ದರು ಅಲ್ಲವಾ? ಅವರು ಯಾಕಾಗಿ ಈ ಮಾತು ಹೇಳಿದರು ಎನ್ನುವುದು ಗೊತ್ತಿರಬೇಕಲ್ಲವೇ ನಿಮಗೆ? ಇಂಥ ನಿಮ್ಮಿಂದ ನಾನು ಗೌರವ ಕೊಡುವುದನ್ನು ಕಲಿಯಬೇಕೇ ರಮೇಶ್ ಕುಮಾರ್ ಹೇಳಿಕೆ ಪ್ರಸ್ತಾಪಿಸಿ ಡಿಕೆಶಿ ಮೇಲೆ ವಾಗ್ದಾಳಿ ನಡೆಸಿದರು ಮಾಜಿ ಮುಖ್ಯಮಂತ್ರಿಗಳು.












Click it and Unblock the Notifications