ಟ್ವೀಟ್ ಮೂಲಕ ಉದ್ಧವ್ ಠಾಕ್ರೆಗೆ ತಿರುಗೇಟು ಕೊಟ್ಟ ಕುಮಾರಣ್ಣ
ಬೆಂಗಳೂರು, ಡಿಸೆಂಬರ್ 19; "ವಿಕೃತ ಮನಸ್ಸು ಯಾರದ್ದು ಎನ್ನುವುದು ಉದ್ಧವ್ ಠಾಕ್ರೆ ಅವರು ಅರ್ಥ ಮಾಡಿಕೊಂಡರೆ ಉತ್ತಮ. ನಿಮಗೆ ಶಿವಾಜಿ ಹೇಗೆ ಮುಖ್ಯರೋ, ನಮಗೆ ಸಂಗೊಳ್ಳಿ ರಾಯಣ್ಣ ಅವರು ಹಾಗೆಯೇ ಪೂಜ್ಯರು. ಈ ವಿಷಯ ನಿಮಗೆ ಅರ್ಥವಾಗಲಿಲ್ಲ, ಯಾಕೆ?" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ತಿರುಗೇಟು ನೀಡಿದರು.
ಭಾನುವಾರ ಎಚ್. ಡಿ. ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿದ್ದು, ಕರ್ನಾಟಕ ಸರ್ಕಾರದ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಕನ್ನಡಪರ ಹೋರಾಟಗಾರರ ಮೇಲೆ ರಾಜ್ಯ ಸರಕಾರ ಪ್ರತಾಪ ತೋರಿಸುವುದು ಬೇಡ" ಎಂದು ಸಹ ಹೇಳಿದ್ದಾರೆ.
ವಿಕೃತ ಮನಸ್ಸು ಯಾರದ್ದು ಎನ್ನುವುದು ಉದ್ಧವ್ ಠಾಕ್ರೆ ಅವರು ಅರ್ಥ ಮಾಡಿಕೊಂಡರೆ ಉತ್ತಮ. ನಿಮಗೆ ಶಿವಾಜಿ ಹೇಗೆ ಮುಖ್ಯರೋ, ನಮಗೆ ಸಂಗೊಳ್ಳಿ ರಾಯಣ್ಣ ಅವರು ಹಾಗೆಯೇ ಪೂಜ್ಯರು. ಈ ವಿಷಯ ನಿಮಗೆ ಅರ್ಥವಾಗಲಿಲ್ಲ, ಯಾಕೆ? 4/5
— H D Kumaraswamy (@hd_kumaraswamy) December 19, 2021
"ಬೆಳಗಾವಿಯಲ್ಲಿ ಬೇರೆಯವರು ಬೇಳೆ ಬೇಯಿಸಿಕೊಳ್ಳುವುದು ಬೇಡ. ನಮ್ಮ ಹೆಮ್ಮೆಯ ಕಲಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ವಿರೂಪಗೊಳಿಸಿದ ದೇಶ ದ್ರೋಹಿಗಳಿಗೆ ತಕ್ಕ ಪಾಠ ಕಲಿಸುವುದು ಬಿಟ್ಟು ಕನ್ನಡಪರ ಹೋರಾಟಗಾರರ ಮೇಲೆ ರಾಜ್ಯ ಸರಕಾರ ಪ್ರತಾಪ ತೋರಿಸುವುದು ಬೇಡ" ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

"ಕತ್ತಲಾದ ಮೇಲೆ ಕಳ್ಳರಂತೆ ನುಸುಳಿ ವಾಹನಗಳಿಗೆ ಕಲ್ಲು ಹೊಡೆಯುವುದು ಹೇಡಿತನ. ಮಹಾನ್ ರಾಷ್ಟ್ರಪ್ರೇಮಿ, ಕೆಚ್ಚದೆಯ ವೀರರಾದ ರಾಯಣ್ಣ ಅವರ ಪ್ರತಿಮೆಗೆ ಹಾನಿ ಮಾಡಿದ್ದು ನಿಜವಾದ ವಿಕೃತ. ಮಹಾರಾಷ್ಟ್ರ ಮುಖ್ಯಮಂತ್ರಿಗಳು ಇದನ್ನೆಲ್ಲ ಸಮರ್ಥನೆ ಮಾಡಿಕೊಳ್ಳುತ್ತಿರುವುದು ವಿಪರ್ಯಾಸ" ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಿಡಿಸಿದ್ದಾರೆ.
ಉದ್ಧವ್ ಠಾಕ್ರೆ ಹೇಳಿದ್ದೇನು?; ಬೆಂಗಳೂರಿನ ಸ್ಯಾಂಕಿ ರಸ್ತೆಯಲ್ಲಿರುವ ಶಿವಾಜಿ ಮಹಾರಾಜರ ಪ್ರತಿಮೆಗೆ ಮಸಿ ಬಳಿದಿರುವುದು ಮತ್ತು ಬೆಳಗಾವಿ ಘಟನೆ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರತಿಕ್ರಿಯೆ ನೀಡಿದ್ದರು.
'ಪ್ರತಿಮೆಗೆ ಮಸಿ ಬಳಿದಿರುವುದು ಕನ್ನಡಿಗರ ವಿಕೃತ ಮನಸ್ಥಿತಿ. ಪ್ರಧಾನಿ ನರೇಂದ್ರ ಮೋದಿ ಕೂಡಲೇ ಮಧ್ಯಸ್ಥಿಕೆ ವಹಿಸಿ ಕರ್ನಾಟಕ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕು" ಎಂದು ಉದ್ಧವ್ ಠಾಕ್ರೆ ಒತ್ತಾಯಿಸಿದ್ದರು.
"ಈ ಘಟನೆಯನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಹಲವು ವರ್ಷಗಳಿಂದ ಕರ್ನಾಟಕದಲ್ಲಿ ಮರಾಠಿಗರು ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ. ಈಗ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅಪವಿತ್ರಗೊಳಿಸಲಾಗಿದೆ" ಎಂದು ಉದ್ಧವ್ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದರು.
"ಕೇಂದ್ರ ಮತ್ತು ಕರ್ನಾಟಕ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗಳನ್ನು ಕೂಡಲೇ ವಿಚಾರಣೆಗೆ ಒಳಪಡಿಸಬೇಕು. ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು" ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಒತ್ತಾಯಿಸಿದ್ದರು.
ಮಹಾರಾಷ್ಟ್ರ ಸರ್ಕಾರ ಮತ್ತು ಹಲವು ಸಚಿವರು ಬೆಳಗಾವಿಯಲ್ಲಿ ಪುಂಡಾಟ ಮಾಡುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಗೆ ತಮ್ಮ ಬೆಂಬಲವನ್ನು ನೀಡಿದ್ದರು.
ಬಸವರಾಜ ಬೊಮ್ಮಾಯಿ ಹೇಳಿಕೆ; ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಹೇಳಿಕೆ ನೀಡಿದ್ದು, "ಎರಡು ದಿನದಿಂದ ದೇಶ ಭಕ್ತರ ಮೂರ್ತಿಗಳನ್ನು ಭಂಗ ಮಾಡೋ ವಿಚಾರದಲ್ಲಿ ಕೆಲವರು ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ, ಕಿತ್ತೂರು ರಾಣಿ ಚೆನ್ನಮ್ಮ, ವೀರ ಸಂಗೊಳ್ಳಿ ರಾಯಣ್ಣ ಅವರು ದೇಶ ಭಕ್ತರು. ದೇಶಕ್ಕಾಗಿ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದವರು.
ಅವರನ್ನು ಯಾವುದೇ ಒಂದು ಭಾಷೆಗೆ ಅಥವಾ ಸಮುದಾಯಕ್ಕೆ ಸೀಮಿತ ಮಾಡುವುದಕ್ಕೆ ಆಗಲ್ಲ" ಎಂದು ಹೇಳಿದ್ದಾರೆ.
"ಈ ದೇಶಭಕ್ತರ ಹೆಸರಿನಲ್ಲಿ ವಿಭಜಿಸುವ ಕೃತ್ಯ ವನ್ನು ಸಂಪೂರ್ಣಾವಾಗಿ ಖಂಡಿಸುತ್ತೇನೆ. ಈಗಾಗಲೇ ಗೃಹ ಮಂತ್ರಿಗಳಿಗೆ ಸೂಚನೆ ನೀಡಿದ್ದೇನೆ. ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಅನೇಕರನ್ನು ಬಂಧಿಸಲಾಗಿದೆ. ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳವಂತೆ ಸೂಚನೆ ನೀಡಿದ್ದೇನೆ. ಆದ್ದರಿಂದ ಜನ ಈ ಭಾವನಾತ್ಮಕ ವಿಚಾರಗಳಿಗೆ ಕಿವಿಗೊಡದೇ ಎರಡು ರಾಜ್ಯದ ನಡುವಿರುವ ಬಾಂಧವ್ಯವನ್ನು ಮುಂದುವರೆಸಿಕೊಂಡು ಹೋಗಬೇಕು" ಎಂದು ಮುಖ್ಯಮಂತ್ರಿಗಳು ಕರೆ ನೀಡಿದ್ದಾರೆ.
27 ಜನರ ಬಂಧನ; ಇನ್ನು ಇದುವರೆಗೂ ಬೆಂಗಳೂರಿನಲ್ಲಿ 3 ಬೆಳಗಾವಿಯಲ್ಲಿ 27 ಜನರನ್ನ ಬಂಧಿಸಿಲಾಗಿದೆ.
ಶಿವಾಜಿ ಪ್ರತಿಮೆಗೆ ಮಸಿ ಬಳಿದ ಪ್ರಕರಣದ ತನಿಖೆ ಮುಂದುವರೆದಿದ್ದು, ಎರಡು ವಿಶೇಷ ತಂಡ ರಚನೆ ಮಾಡಿ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ.
ಒಟ್ಟು ಕೃತ್ಯ ಎಸಗಿದ 5 ಜನರನ್ನು ಮೈಸೂರು ರಸ್ತೆಯಲ್ಲಿ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಶಿವಾಜಿ ಪ್ರತಿಮೆಗೆ ಮಸಿ ಬಳಿದು ವಿಡಿಯೋ ಮಾಡಿಕೊಂಡಿದ್ದ ಆರೋಪಿಗಳು ಅದನ್ನು ಸ್ನೇಹಿತರಿಗೆ ಶೇರ್ ಮಾಡಿದ್ದರು. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಬಳಿಕ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.












Click it and Unblock the Notifications