ಸದನದಲ್ಲಿ ಬಿಎಂಎಸ್ ಟ್ರಸ್ಟ್ ಅಕ್ರಮ ಬಿಚ್ಚಿಟ್ಟ ಎಚ್‌ಡಿ ಕುಮಾರಸ್ವಾಮಿ
ಬೆಂಗಳೂರು, ಸೆಪ್ಟೆಂಬರ್ 22: ಜೆಡಿಎಸ್ ಶಾಸಕಾಂಗ ಪಕ್ಷ ನಾಯಕ, ಶಾಸಕ ಎಚ್.ಡಿ. ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ಬಿಎಂಎಸ್ ಕಾಲೇಜು ಟ್ರಸ್ಟ್ ಮತ್ತು ಜಮೀನು ಅಕ್ರಮದ ಬಗ್ಗೆ ನಿಯಮ 69 ಅಡಿ ವಿಷಯ ಪ್ರಸ್ತಾಪಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮದಲ್ಲಿ ತಾಕತ್ತಿದ್ದರೆ, ಧಮ್ ಇದ್ದರೆ ಎಂದಿದ್ದಾರೆ. ಬಸವರಾಜ ಬೊಮ್ಮಾಯಿ ನನ್ನ ಸಹೋದರ ಇದ್ದಂತೆ. ಅವರಿಂದ ಇಂತಹ ಅಗ್ರೆಸ್ಸಿವ್ ಆದ ಮಾತು ನಿರೀಕ್ಷೆ ಮಾಡಿರಲಿಲ್ಲ. ನಿಮಗೆ ಧಮ್ಮಿದ್ದರೆ, ತಾಕತ್ತಿದ್ದರೆ ಎಂದು ಮುಖ್ಯಮಂತ್ರಿಗಳು ಆಹ್ವಾನ ನೀಡಿದ್ದರು. ಹಾಗಾಗಿ ಪಬ್ಲಿಕ್ ಟ್ರಸ್ಟ್ ಒಂದರ ದಾಖಲೆಯನ್ನು ನಾನು ಇಂದು ಸದನದ ಮುಂದೆ ಇಡುತ್ತಿದ್ದೇನೆ. ಸರ್ಕಾರದ ಮುಂದೆಯೂ ಇಡುತ್ತೇನೆ ಎಂದರು.
ಹಿಂದಿನ ಕೇಂದ್ರ ಸರ್ಕಾರದ ಅವಧಿಯಲ್ಲಿ 2 ಜಿ ಸ್ಪೆಕ್ಟ್ರಾಂ ಹಗರಣ ನಡೆದಿತ್ತು. ಸಿಎಜಿ ಅವರು ರಿಪೋರ್ಟ್ ಕೊಟ್ಟಿದ್ದರಿಂದ ಸರ್ಕಾರವನ್ನೇ ಬದಲಿಸುವಂತೆ ಮಾಡಿತು. ಇದು ಆಗಿನ ಸರ್ಕಾರದ ಮೇಲೆ ಕಪ್ಪು ಮಸಿ ಬರುವಂತೆ ಮಾಡಿತು. ನಮ್ಮ ರಾಜ್ಯದ ವಿಚಾರದಲ್ಲಿ 2008ರಲ್ಲಿ ರಾಜ್ಯ ಸರ್ಕಾರ ಕೆಲವೊಂದು ನಿರ್ಧಾರ ತೆಗೆದುಕೊಂಡಿತ್ತು. ಕೆಲವು ನಿರ್ಧಾರಗಳ ಬಗ್ಗೆ ದಾಖಲೆ ಇಟ್ಟು ಹೋರಾಟ ಮಾಡಲಾಗಿತ್ತು. ಆಗ ಯಡಿಯೂರಪ್ಪ ಸಿಎಂ ಆಗಿದ್ದಾಗ 23 ದಿನ ಜೈಲಿಗೆ ಹೋಗಬೇಕಾಯ್ತು ಎಂದರು.
ಯಡಿಯೂರಪ್ಪ ಕಾನೂನು ಹೋರಾಟ ಮಾಡಿ ಕೊನೆಗೆ ಜೈಲಿನಿಂದ ಹೊರಗೆ ಬಂದರು. ಈ ವಿಷಯದ ಬಗ್ಗೆಯೇ ನಮ್ಮ ಕ್ಷೇತ್ರದ ಮಂತ್ರಿ(ಅಶ್ವತ್ಥ್ ನಾರಾಯಣ) ಒಂದು ಸವಾಲು ಹಾಕಿದ್ದಾರೆ. ಅದೆಂದರೆ ನಾನು ಗಾಳಿಯಲ್ಲಿ ಗುಂಡು ಹಾರಿಸ್ತೇನೆ ಅಂತ ಹೇಳಿದ್ದರು. ಹಾಗಾಗಿ ಅದರ ಬಗ್ಗೆ ನಾನು ಚರ್ಚೆ ಮಾಡುತ್ತಿದ್ದೇನೆ. ಯಾರ ಮೇಲಿನ ದ್ವೇಷದಿಂದಾಗಲಿ, ಸರ್ಕಾರವನ್ನು ಇಕ್ಕಟ್ಟಿಗೆ ಸಲ್ಲಿಸಲು ಈ ಪ್ರಸ್ತಾವನೆ ಸಲ್ಲಿಸ್ತಿಲ್ಲ.
ಮುಖ್ಯಮಂತ್ರಿಗಳು ಕೂಡ 40 % ಬಗ್ಗೆ, ಹಿಂದೆ ಪ್ರಧಾನಿ ಬಂದಾಗ ಕಾಂಗ್ರೆಸ್ 10 % ಬಗ್ಗೆ ಚರ್ಚೆ ಮಾಡಿದ್ದರು. ಅಲ್ಲಿಂದ ಚರ್ಚೆ ಆರಂಭವಾಗಿದೆ. ಪೇ ಸಿಎಂ ಕುರಿತು ಕೂಡ ಬೆಳಗ್ಗೆ ಚರ್ಚೆಯಾಗಿದೆ, ಆದರೆ ನಾಡಿನಲ್ಲಿ ತಾಂಡವವಾಡುತ್ತಿರುವ ಸಮಸ್ಯೆಗಳೇ ಬೇರೆ, ನಾವು ಇಲ್ಲಿ ಚರ್ಚೆ ಮಾಡೋದೇ ಬೇರೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಪುಂಗನೂರಿನ ಬಿಎಂಎಸ್ ಸಂಸ್ಥೆ ಮುಖ್ಯಸ್ಥ
ಬಿಎಂಎಸ್ ಸಂಸ್ಥೆ ಮುಖ್ಯಸ್ಥರು ಪುಂಗನೂರಿನ ಬಿ.ಎನ್ . ಶ್ರೀನಿವಾಸಯ್ಯನವರು. ಸ್ವಾತಂತ್ರ್ಯ ಪೂರ್ವದಲ್ಲಿ ಇಲ್ಲಿಗೆ ಬಂದವರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೇಡಿಯಾಲಜಿ ಡಿಪಾರ್ಟ್ ಮೆಂಟ್ ಕಟ್ಟಿದರು. ಅವರ ಉತ್ತಮ ನಡವಳಿಕೆಯಿಂದ ಮೈಸೂರು ಮಹಾರಾಜರು ಬಿಎಂಎಸ್ ಸಂಸ್ಥೆಗೆ ಅವಕಾಶ ಕೊಟ್ಟರು. ಎಂಜಿನಿಯರಿಂಗ್ ಕಾಲೇಜು ಕಟ್ಟಲು ಅನುಮತಿ ಕೊಟ್ಟರು. 1953ರಲ್ಲಿ ಶ್ರೀನಿವಾಸಯ್ಯ ನಿಧನ ಹೊಂದಿದರು. ಶ್ರೀನಿವಾಸಯ್ಯ ಅವರಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ಲಕ್ಷ್ಮಮ್ಮ, ಇನ್ನೊಬ್ಬರು ಲಕ್ಷ್ಮೀದೇವಮ್ಮ. ಲಕ್ಷ್ಮಮ್ಮನವರ ಮಗ ನಾರಾಯಣ್ 1957ರಲ್ಲಿ ಒಂದು ಟ್ರಸ್ಟ್ ಸ್ಥಾಪನೆ ಮಾಡ್ತಾರೆ. ಟ್ರಸ್ಟ್ ನಲ್ಲಿ ಐವರು ಸದಸ್ಯರಿರಬೇಕು. ಇಬ್ಬರನ್ನು ನಾರಾಯಣ್ ಅವರೇ ನೇಮಕ ಮಾಡ್ತಾರೆ.
2.12.1957ರಲ್ಲಿ ಈ ಟ್ರಸ್ಟ್ ಪ್ರಾರಂಭವಾಗುತ್ತದೆ. ವೆಂಕಟಾಚಲಯ್ಯ ಮಾರ್ಗದರ್ಶನದಲ್ಲಿ ಟ್ರಸ್ಟ್ ಪ್ರಾರಂಭವಾಗುತ್ತದೆ. ಮುಂದೆ ಮೈಸೂರು ಬ್ಯಾಂಕ್‌ನ ನಾರಾಯಣ ರೆಡ್ಡಿ ಮುಖ್ಯಸ್ಥ ಆಗ್ತಾರೆ. ಬಿಎಂಎಸ್ ಹೆಸರಿನಲ್ಲಿ ಎಂಜಿನಿಯರಿಂಗ್ ಸೇರಿ ಹಲವು ಕಾಲೇಜುಗಳು ಪ್ರಾರಂಭಗೊಳ್ಳುತ್ತವೆ. ನಾರಾಯಣ್ ಅವರಿಗೆ ಗಂಡು ಮಕ್ಕಳು ಇರಲಿಲ್ಲ. ಹಾಗಾಗಿ ಡೋನರ್ ಟ್ರಸ್ಟಿ ನೇಮಕ ಮಾಡಲಾಗುತ್ತದೆ. ಕಡಿದಾಳ್ ಮಂಜಪ್ಪ ನೇತೃತ್ವದಲ್ಲಿ ನೇಮಕ ಮಾಡಲಾಗುತ್ತದೆ. ಕಡಿದಾಳ್ ಮಂಜಪ್ಪ ಅವರು ಟ್ರಸ್ಟಿ ಆಗಿ ಕೆಲಸ ಮಾಡ್ತಾರೆ ಎಂದು ಹೇಳಿದರು.

ನಾರಾಯಣ್ ಪತ್ನಿ ಟ್ರಸ್ಟಿಯಾಗಿ ನೇಮಕ
ಬಿಎಂಎಸ್ ಟ್ರಸ್ಟ್ ಹೆಸರಿನಲ್ಲಿ ವಿವಿಧ ಕಾಲೇಜುಗಳು ನಡೆಯುತ್ತದೆ. ನಾರಾಯಣ್ ಅವರು ಜೀವಿತಾವಧಿ ಹಾಗೂ ಡೋನರ್ ಟ್ರಸ್ಟ್ ಆಗಿ ಕೆಲಸ ಮಾಡ್ತಾರೆ. ಅವರ ನಂತರ ಅವರ ಕುಟುಂಬದದವರು ದಾನಿ ಟ್ರಸ್ಟಿ ಆಗಿದ್ದರು. ಇವರಿಗೆ 40 ವರ್ಷ ಆಗಿಯೂ ಮಕ್ಕಳಾಗಲಿಲ್ಲ. ಕಡಿದಾಳ್ ಮಂಜಪ್ಪ ಅವರು ಟ್ರಸ್ಟಿ ಆಗಿದ್ದಾಗ ಮೂಲ ಟ್ರಸ್ಟ್‌ಗೆ ತಿದ್ದುಪಡಿ ತಂದರು. ಆಗ 1978ರಲ್ಲಿ ದಾನಿಗಳ ಟ್ರಸ್ಟಿಗಳು ಕುಟುಂಬದವರು ಇಲ್ಲದಿದ್ದಾಗ ಶೆಡ್ಯೂಲ್ 4/1ರಲ್ಲಿ ನಾರಾಯಣ್ ಧರ್ಮ ಪತ್ನಿ ಮಿನಿ ನಾರಾಯಣ್ ಅವರನ್ನು ದಾನಿ ಟ್ರಸ್ಟಿ ಆಗಿ ನೇಮಕ ಮಾಡುತ್ತಾರೆ. ಮಿನಿ ನಾರಾಯಣ್ ಅವರ ವಂಶದವರು ಅಥವಾ ಅವರ ಕುಟುಂಬದವರು ಟ್ರಸ್ಟಿಗಳಾಗಿ ಎಂದು ನೇಮಕ ಮಾಡುತ್ತಾರೆ.

ಟ್ರಸ್ಟ್ ಅವ್ಯವಹಾರದ ಬಗ್ಗೆ ತಳವಾರ್ ಪತ್ರ
2018 ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಒಂದು ಮಸೂದೆ ತರಲಾಯಿತು. ಆದರೆ ನಾನು ಅದನ್ನು ತಿರಸ್ಕಾರ ಮಾಡಿದೆ. 2019ರಲ್ಲಿ ಮಸೂದೆ ತರುವ ಪ್ರಯತ್ನ ನಡೆಯಿತು. ದಯಾನಂದ್ ಪೈ 10 ವರ್ಷ ಟ್ರಸ್ಟಿಯಾಗಿದ್ದರು. ಆದರೆ ಬೈಲಾ ಪ್ರಕಾರ ಮೂರು ವರ್ಷದ ಮೇಲೆ ಟ್ರಸ್ಟಿ ಆಗಲು ಬರಲ್ಲ. ನಾನು ಜುಲೈ 23ಕ್ಕೆ ರಾಜೀನಾಮೆ ಕೊಟ್ಟೆ. ನನಗೆ ಹಲವು ಪ್ರಪೋಸಲ್ ಬಂದಿತ್ತು. ಸರ್ಕಾರದ ನನ್ನ ಸಹಿಯನ್ನು ನಾನು ಮಾರಾಟಕ್ಕೆ ಇಟ್ಟಿರಲಿಲ್ಲ. 23.08.2019 ರಲ್ಲಿ ಮತ್ತೆ ಅರ್ಜಿ ಬಂತು. ಅವತ್ತು ಯಡಿಯೂರಪ್ಪ ಸಿಎಂ ಆಗಿದ್ದರು. ತಳವಾರ್ ಅವರು ಸರ್ಕಾರಕ್ಕೆ ಟ್ರಸ್ಟ್ ಅವ್ಯವಹಾರದ ಬಗ್ಗೆ ಪತ್ರ ಬರೆದಿದ್ದರು. ಸರ್ಕಾರದ ನೆರಳಲ್ಲಿ ಬೆಳೆದ ಟ್ರಸ್ಟ್, ಈಗ ಕುಟುಂಬದ ಪರವಾಗಿ ಆಗುತ್ತಿದೆ.

ಬಡ ಮಕ್ಕಳ ಅನುಕೂಲಕ್ಕಾಗಿ ಟ್ರಸ್ಟ್ ಪ್ರಾರಂಭ
ನಾಲ್ಕು ವಿಧೇಯಕ ಬಂದಾಗ ನಾವು ತಿರಸ್ಕಾರ ಮಾಡಿದ್ದೆವು. ಆ ನಂತರ ಶಿಕ್ಷಣ ಸಚಿವರು ತಿದ್ದುಪಡಿ ಅನುಮೋದನೆ ನೀಡಿದ್ದರು. ಇದಕ್ಕೆ ಅಂದಿನ ಉಪಮುಖ್ಯಮಂತ್ರಿಗಳು ಸಹಿ ಹಾಕಿದ್ದರು. ಈ ಟ್ರಸ್ಟ್ ಆರಂಭ ಆಗಿದ್ದು ಬಡ ಮಕ್ಕಳ ಅನುಕೂಲಕ್ಕಾಗಿ, ಆದರೆ ಇವರ ಈ ಸಹಿಯಿಂದಾಗಿ ಸಾರ್ವಜನಿಕ ಟ್ರಸ್ಟ್ ಆಗಿದ್ದಂತದ್ದು, ಖಾಸಗಿ ಟ್ರಸ್ಟ್ ಆಗಿ ಪರಿವರ್ತನೆ ಆಯ್ತು ಎಂದರು.

ದಾಖಲೆ ಕೊಡಿ ಅಂತಾ ನನ್ನ ಕೆಣಕಿದರು
ಬಿಎಂಎಸ್ ಕಾಲೇಜು ಟ್ರಸ್ಟ್ ಜಮೀನು ಅಕ್ರಮದಲ್ಲಿ ಈಗಿನ ಉನ್ನತ ಶಿಕ್ಷಣ ಸಚಿವರು ಯಾವ ರೀತಿ ಶಾಮೀಲಾಗಿದ್ದಾರೆ ಅಂದರೆ ಅವರು ನಿಜವಾಗಿ ಆ ಜಾಗದಲ್ಲಿ ಒಂದು ಕ್ಷಣವೂ ಕೂರುವಂತಿಲ್ಲ. ಬಿಎಂಎಸ್ ಕಾಲೇಜು ಟ್ರಸ್ಟ್, ಜಮೀನು ಅಕ್ರಮದ ಬಗ್ಗೆ ದಾಖಲೆ ಕೊಡಿ ಅಂತಾ ರಾಮನಗರಕ್ಕೆ ಬಂದು ಸಚಿವರು ಕೆಣಕಿದರು. ಈಗ ದಾಖಲೆ ಇಟ್ಟಿದ್ದೇನೆ ಈ ದಾಖಲೆ ಸಾಕಾ? ಇನ್ನೂ ಬೇಕಾ? ಎಂದು ಸಚಿವ ಅಶ್ವತ್ಥನಾರಾಯಣರನ್ನು ಉದ್ದೇಶಿಸಿ ಎಚ್‌ಡಿ ಕುಮಾರಸ್ವಾಮಿ ಹೇಳಿದರು.












Click it and Unblock the Notifications