ಬಿಡಿಎಗೆ ₹250 ಕೋಟಿ ಕಲೆಕ್ಷನ್ ಟಾರ್ಗೆಟ್: ಎಚ್‌ಡಿಕೆ ಆರೋಪ!

ಬೆಂಗಳೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ವಿದೇಶ ಪ್ರವಾಸದಿಂದ ಹಿಂದಿರುಗಿದ ತಕ್ಷಣ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ, ಭ್ರಷ್ಟಾಚಾರ, ಕಮೀಷನ್ ಸಂಗ್ರಹದ ಕುರಿತು ಆರೋಪ ಮಾಡಿದ್ದಾರೆ. ಅಲ್ಲದೆ ಮತ್ತಷ್ಟು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ನಿನ್ನೆ ರಾತ್ರಿ ಮಾಜಿ ಸಿಎಂ ಎಚ್‌ಡಿಕೆ ಯುರೋಪ್ ಪ್ರವಾಸ ಮುಗಿಸಿ, ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಿಎಂ, ಕಾಂಗ್ರೆಸ್ ಪಕ್ಷ ಈಸ್ಟ್ ಇಂಡಿಯಾ ಪಕ್ಷದಂತೆ ರಾಜ್ಯವನ್ನ ಲೂಟಿ ಮಾಡುತ್ತಿದೆ. ಪೊಲೀಸ್ ವರ್ಗಾವಣೆಯಲ್ಲಿ ವೈಎಸ್‌ಟಿ ದಂಧೆಕೋರರು ಶಾಮೀಲಾಗಿದ್ದಾರೆ, ಬಿಡಿಎ ಅಧಿಕಾರಿಗಳಿಂದ 250 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ್ದಾರೆ ಎಂದು ಅವರು ಆರೋಪ ಮಾಡಿದ್ದಾರೆ.

HD Kumaraswamy corruption allegations against Karnataka government

ಇಲ್ಲಿ ಲಂಚ.. ದೆಹಲಿಯಲ್ಲಿ ಭಾಷಣ!

ರಾಜ್ಯದಲ್ಲಿ ಪರ್ಸೆಂಟೇಜ್ ಸಂಗ್ರಹ ಅವ್ಯಾಹತವಾಗಿ ನಡೆಯುತ್ತಿದೆ. ಸಚಿವರೊಬ್ಬರು ನೇರವಾಗಿ ಗುತ್ತಿಗೆದಾರರಿಂದ ಕಮೀಷನ್ ಡಿಮ್ಯಾಂಡ್ ಮಾಡುತ್ತಿದ್ದಾರೆ. ಹಾಗೇ ಇತ್ತೀಚೆಗೆ ಆ ಸಚಿವರನ್ನ ಭೇಟಿಯಾಗಲು ಹೋಗಿದ್ದ ಗುತ್ತಿಗೆದಾರರಿಗೆ, ಹಣ ತಂದಿದ್ದರೆ ಒಳಗಡೆ ಬನ್ನಿ. ಇಲ್ಲ ಅಂದರೆ ಹೊರಗಿರಿ ಎಂದು ಸಚಿವರ ಚೇಲಾಗಳು ತಾಕೀತು ಮಾಡಿದ್ದಾರೆ. ಇವರು ಹೋಗಿ ದೆಹಲಿಯಲ್ಲಿ ಭ್ರಷ್ಟಾಚಾರ ಕಡಿಮೆ ಮಾಡ್ತೀವಿ ಅಂತಾ ರಾಹುಲ್ ಗಾಂಧಿ ಅವರಿಗೆ ಹೇಳುತ್ತಾರೆ! ಇಂಥವರಿಂದ ರಾಜ್ಯದ ಉದ್ಧಾರ ಸಾಧ್ಯವೇ? ಪಾರದರ್ಶಕ ಆಡಳಿತ ನೀಡಲು ಆಗುತ್ತದೆಯೇ? ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ಬಿಡಿಎಗೆ ₹250 ಕೋಟಿ ಕಲೆಕ್ಷನ್ ಟಾರ್ಗೆಟ್?

ಬಿಡಿಎ ಅಧಿಕಾರಿಗಳಿಂದಲೂ ಹಣಕ್ಕೆ ಬೇಡಿಕೆಯನ್ನು ಇಡಲಾಗಿದೆ. ದಿಲ್ಲಿಗೆ ಹಣ ಕಳಿಸಬೇಕು, ಕೊನೆಯಪಕ್ಷ 250 ಕೋಟಿ ರೂಪಾಯಿ ಕಲೆಕ್ಷನ್ ಆಗಬೇಕೆಂದು ಮಹಾನುಭಾವರು ತಾಕೀತು ಮಾಡುತ್ತಾರೆ. ದುಡ್ಡು ಯಾರಿಗೆ ಸೇರಬೇಕು ಅವರ ಪಟ್ಟಿ ಕೊಡುತ್ತೇವೆ ಅವರಿಗೆ ನೇರ ದುಡ್ಡು ತಲುಪಿಸಿ ಎಂದು ಹೇಳುತ್ತಾರಂತೆ. ನಾನು ಯುರೋಪ್‌ನಲ್ಲಿ ಇದ್ದಾಗಲೇ ಈ ಮಾಹಿತಿ ಬಂತು ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿಕೆ ಚಾಟಿ ಬೀಸಿದರು.

HD Kumaraswamy corruption allegations against Karnataka government

ಕೈ ನಾಯಕರ ವಿರುದ್ಧ ಗಂಭೀರ ಆರೋಪ

ಕಾಂಗ್ರೆಸ್ ಪಕ್ಷ ಕರ್ನಾಟಕವನ್ನ ಈಸ್ಟ್ ಇಂಡಿಯಾ ಕಂಪನಿಯಂತೆ ಲೂಟಿ ಮಾಡ್ತಿದೆ. ಜನರಿಗೆ ಗ್ಯಾರಂಟಿ ತುಪ್ಪ ಸವರಿ ವರ್ಗಾವಣೆ ದಂಧೆಯಲ್ಲಿ ಕೊಳ್ಳೆ ಹೊಡೆಯುತ್ತಿದೆ. ಹೊರನೋಟಕ್ಕೆ ಭ್ರಷ್ಟಾಚಾರ ತೊಡೆದು ಹಾಕುವ ಮಾತು ಹೇಳುತ್ತಿದ್ದಾರೆ. ನಿಜಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಅಂತಹ ಮನಃಸ್ಥಿತಿ ಇಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು. ಅಲ್ಲದೆ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ವಸೂಲಿಗೆ ಆ ಪಕ್ಷ ಇರೋದು. ಈಸ್ಟ್ ಇಂಡಿಯಾ ಕಂಪನಿ ಇಡೀ ದೇಶವನ್ನು ಇವರಿಗೆ ಕೊಟ್ಟು ಹೋದರು. ಈಸ್ಟ್ ಇಂಡಿಯಾ ಕಂಪನಿಯ ವಸೂಲಿಯನ್ನ ಕಾಂಗ್ರೆಸ್ ಮುಂದುವರಿಸಿಕೊಂಡು ಬಂದಿದೆ ಎಂದಿದ್ದಾರೆ.

ಗೃಹ ಇಲಾಖೆಯಲ್ಲಿ ವೈಎಸ್‌ಟಿ!

ಹಾಗೇ ಗೃಹ ಇಲಾಖೆಯಲ್ಲಿ ವರ್ಗಾವಣೆಯ ದಂಧೆ ಬಗ್ಗೆ ಕೇಳಿ ನನಗೆ ಆಘಾತ ಉಂಟಾಯಿತು. ಪೊಲೀಸರನ್ನು ಹೀಗೆ ಬಳಸಿದರೆ ಕಾನೂನು ಸುವ್ಯವಸ್ಥೆ ಕಾಪಾಡುವ ಅವರು ಇನ್ನೇನು ಕೆಲಸ ಮಾಡುತ್ತಾರೆ? ಬ್ರಿಗೇಡ್ ರಸ್ತೆ ಸಮೀಪದ, ಗರುಡಾ ಮಾಲ್ ಹತ್ತಿರದ ಪೊಲೀಸ್ ಮೆಸ್‌ನಲ್ಲಿ ನಡೆದ ಸಭೆಯಲ್ಲಿ ಯಾರೆಲ್ಲಾ ಇದ್ದರು? ವೈಎಸ್‌ಟಿ ಟ್ಯಾಕ್ಸ್ ಬಾಬ್ತುನವರು ಅಲ್ಲೇ ಇದ್ದರಲ್ಲವೇ? ಪೊಲೀಸ್ ವರ್ಗಾವಣೆ ಸಂಬಂಧ ನಡೆದ ಈ ಸಭೆಯಲ್ಲಿ ಸಿಎಂ, ಗೃಹ ಸಚಿವರು, ಇಲಾಖೆಯ ಉನ್ನತ ಅಧಿಕಾರಿಗಳ ಜೊತೆಯಲ್ಲಿ ಆ ವೈಎಸ್‌ಟಿ ಟ್ಯಾಕ್ಸ್ ಕುಳಗಳನ್ನ ಕೂರಿಸಿಕೊಂಡು ಚರ್ಚೆ ಮಾಡಿದ್ದೇಕೆ? ಪೊಲೀಸ್ ಇಲಾಖೆಯ ಸಭೆಯಲ್ಲಿ ಅವರಿಗೇನು ಕೆಲಸ? ಅವರನ್ನು ಒಳಗಡೆ ಬಿಟ್ಟುಕೊಂಡವರು ಯಾರು? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

HD Kumaraswamy corruption allegations against Karnataka government

ಭ್ರಷ್ಟಾಚಾರದ ರಿಪೋರ್ಟ್ ಕಾರ್ಡು!

36 ಜನ ಮಂತ್ರಿಗಳನ್ನು ದೆಹಲಿಗೆ ಕರೆದುಕೊಂಡು ಹೋಗಿದ್ದರು. ಹೈಕಮಾಂಡಿಗೆ ರಿಪೋರ್ಟ್ ಕಾರ್ಡು ಕೊಡೋದಕ್ಕೆ ಹೋಗಿದ್ದರಂತೆ. ಅವರು ರಿಪೋರ್ಟ್ ಕಾರ್ಡ್ ಇಡಬೇಕಿರುವುದು ರಾಜ್ಯದ ಆರೂವರೆ ಕೋಟಿ ಜನತೆಯ ಮುಂದೆ ಹೊರತು ಹೈಕಮಾಂಡ್‌ನ ಎದುರು ಅಲ್ಲ. ಈ ರಾಜ್ಯದ ಜನ ವೋಟು ಹಾಕಿ ಇವರನ್ನು ಗೆಲ್ಲಿಸಿದ್ದಾರೆ. ನಾವೇನು ಮಾಡಿದ್ದೇವೆ, ಮಾಡುತ್ತೇವೆ ಎನ್ನುವ ವರದಿಯನ್ನು ಈ ಜನರ ಮುಂದೆ ಇಡಬೇಕು. ಇವರು ಭ್ರಷ್ಟಾಚಾರದ ರಿಪೋರ್ಟ್ ಕಾರ್ಡು ಕೊಡಲು ಹೋಗಿರಬೇಕು ಎಂದು ಎಚ್‌ಡಿಕೆ ವಾಗ್ದಾಳಿ ನಡೆಸಿದ್ದಾರೆ.

ಹಣಕಾಸು ಬಗ್ಗೆ ಶ್ವೇತಪತ್ರ ಹೊರಡಿಸಿ

ಇವರು ಲೂಟಿ ಮಾಡುವುದಕ್ಕೆ ಖಜಾನೆ ಖಾಲಿ ಎಂದು ತೋರಿಸುವ ಹುನ್ನಾರ ನಡೆಸಿದ್ದಾರೆ. ಗ್ಯಾರಂಟಿ ಗೊಂದಲ ಮಾಡಿಕೊಂಡು, ವಿಧಾನಸಭೆ ಕ್ಷೇತ್ರಗಳಿಗೆ ಹಣ ಇಲ್ಲ ಎನ್ನುವ ಸಬೂಬು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಹಣಕ್ಕೆ ಕೊರತೆ ಇಲ್ಲ. ಗ್ಯಾರಂಟಿಗಳಿಗೆ 20ರಿಂದ 25 ಸಾವಿರ ಕೋಟಿ ರೂಪಾಯಿ ಸಾಕು. ಕಳೆದ ವರ್ಷ 40,000 ಕೋಟಿ ರೂಪಾಯಿ ಹೆಚ್ಚುವರಿ ತೆರಿಗೆ ಆದಾಯ ಬಂದಿದೆ. ತೆರಿಗೆ ಎಲ್ಲಾ ಬಾಬ್ತುಗಳಲ್ಲಿ ನಿರೀಕ್ಷೆಗೂ ಮೀರಿ ತೆರಿಗೆ ಸಂಗ್ರಹ ಆಗಿದೆ. ಹಾಗಾದರೆ 14 ಬಜೆಟ್ ಮಂಡಿಸಿದ ಮಹಾನುಭಾವರು ಕೊರತೆ ಬಜೆಟ್ ಮಂಡಿಸಿದ್ದು ಯಾಕೆ? ಅದರ ಹಿಂದಿನ ಹುನ್ನಾರ ಏನು ಎಂದು ಎಚ್‌ಡಿಕೆ ಪ್ರಶ್ನಿಸಿದ್ದಾರೆ.'

HD Kumaraswamy corruption allegations against Karnataka government

ನಾನು ಸಿಎಂ ಅಗಿದ್ದಾಗ ರೈತರ..

ರಾಜ್ಯದಲ್ಲಿ ಹಣದ ಕೊರತೆ ಇಲ್ಲ. ದೊಡ್ಡ ನಾಟಕ ನಡೆಯುತ್ತಿದೆ. ಒಂದ್ಕಡೆ ಸಾಲ ಪ್ರಮಾಣ ಹೆಚ್ಚಳ ಮಾಡಿಕೊಂಡಿದ್ದಾರೆ, ಇನ್ನೊಂದು ತೆರಿಗೆ ಸಂಗ್ರಹದಲ್ಲಿ ಗುರಿ ಮೀರಿದ ಸಾಧನೆ ಆಗಿದೆ. ಕೇಂದ್ರ ಸರಕಾರದಿಂದಲೂ ಯಾವುದೇ ಬಾಕಿ ಇಲ್ಲ. ನಾನು ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಲು 25,000 ಕೋಟಿ ರೂಪಾಯಿ ನೀಡಿದ್ದೆ. ಅಭಿವೃದ್ಧಿ ಎಲ್ಲೂ ನಿಲ್ಲಲಿಲ್ಲ, ಶಾಸಕರ ಅನುದಾನಕ್ಕೂ ಕತ್ತರಿ ಬೀಳಲಿಲ್ಲ. ಅವರ ಭಾಗ್ಯಗಳಿಗೂ ಹಣ ನೀಡಿದೆ. ಎಲ್ಲವನ್ನೂ ಜನರ ಮುಂದಿಡಿ. ನಿಮಗೆ ಧೈರ್ಯ ಇದ್ರೆ ಶ್ವೇತಪತ್ರ ಹೊರಡಿಸಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸವಾಲು ಎಸೆದಿದ್ದಾರೆ.

ಡಿಸಿಎಂ ಬಗ್ಗೆ ಎಚ್‌ಡಿಕೆ ಹೇಳಿದ್ದೇನು?

ನಾನು ಪ್ರವಾಸ ಹೋಗಿದ್ದು ಯುರೋಪ್ ದೇಶಗಳಿಗೆ. ಕುಟುಂಬ ಸದಸ್ಯರು, ಸಹೋದರ, ಸಹೋದರಿಯರ ಜತೆ ತೆರಳಿದ್ದೆ. ಆದರೆ ಇಲ್ಲಿ ಕುಮಾರಸ್ವಾಮಿ ಅವರು ಸಿಂಗಾಪುರಕ್ಕೆ ಹೋಗಿ ಸರ್ಕಾರ ಕೆಡವಲು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ವದಂತಿ ಹಬ್ಬಿಸಿದರು. ಇದು ನಮ್ಮ ರಾಜ್ಯದ ಬೇಹುಗಾರಿಕೆ ಇಲಾಖೆ ಕೆಲಸ ಮಾಡುತ್ತಿರುವ ರೀತಿ ಎಂದು ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

19 ಕ್ಷೇತ್ರ ಗೆದ್ದಿರುವ ಕುಮಾರಸ್ವಾಮಿ ಬಗ್ಗೆ 136 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ಗೆ ಭಯವಿದೆ. ಅವರಿಗೆ ಬಹುಮತ ಇದ್ದರೂ ಸುಸ್ಥಿರ ಸರ್ಕಾರ ನೀಡಲು ಸಾಧ್ಯವೆ ಇಲ್ಲ. ಅವರು ಅಭದ್ರತೆ ಭಾವದಿಂದ ಬಳಲುತ್ತಿದ್ದಾರೆ. ಡಿಕೆ ಶಿವಕುಮಾರ್ ಅವರು ಯಾಕೆ ಈ ರೀತಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಅವ್ರಿಗೆ ಸರ್ಕಾರ ಪೂರ್ಣಾವಧಿಗೆ ಇರುತ್ತೆ ಎನ್ನುವ ನಂಬಿಕೆ ಇದ್ದಂತೆ ಕಾಣುತ್ತಿಲ್ಲ. ಅವರು ಹೆಚ್ಚಾಗಿ ಶಾಸ್ತ್ರ & ಜ್ಯೋತಿಷ್ಯ ಕೇಳುತ್ತಾರೆ. ಜ್ಯೋತಿಷ್ಯದ ಮೂಲಕ ಚುನಾವಣೆಗಾಗಿ ಕೃತಕ ಶಕ್ತಿ ತುಂಬಿಕೊಂಡಿದ್ದಾರೆ, ಆ ಶಕ್ತಿ ಬಹಳ ದಿನ ಇರಲ್ಲ ಅನ್ನುವುದು ಅವರ ತಲೆ ಒಳಗೆ ಇರಬಹುದು. ಅದಕ್ಕೆ ಈ ಹೇಳಿಕೆ ಕೊಟ್ಟಿರಬಹುದು ಎಂದು ಎಚ್‌ಡಿ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+