ಇನ್ನೇನು ಬಗೆಹರಿಯಿತು ಎನ್ನುವಷ್ಟರಲ್ಲಿ ಮತ್ತೆ ಕಗ್ಗಂಟಾದ ಸಂಪುಟ ವಿಸ್ತರಣೆ?

ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸರಕಾರದ ಸಂಪುಟ ವಿಸ್ತರಣೆ ಕಸರತ್ತು ಮತ್ತೆ ಕಗ್ಗಂಟಾಗಿ ಕೂತಿದೆ. ಗುರುವಾರ (ಮೇ 31) ತಡರಾತ್ರಿಯವರೆಗೂ ನಡೆದ ಎರಡೂ ಪಕ್ಷಗಳ ಪ್ರಮುಖರ ಸಭೆ ಅಪೂರ್ಣಗೊಂಡಿದೆ ಎನ್ನುವ ಮಾಹಿತಿಯಿದೆ.

ಮೂಲಗಳ ಪ್ರಕಾರ ಜೆಡಿಎಸ್, ದಿನದಿಂದ ದಿನಕ್ಕೆ ತನ್ನ ಪಟ್ಟನ್ನು ಹೆಚ್ಚಿಸಿಕೊಳ್ಳುತ್ತಿರುವುದು ಕಾಂಗ್ರೆಸ್ಸಿಗೆ ತಲೆನೋವಾಗಿ ಪರಿಣಮಿಸಿದೆ. ಹಣಕಾಸು ಖಾತೆ ತನಗೇ ಬೇಕೆಂದು ಹಠ ಹಿಡಿದು ಯಶಸ್ವಿಯಾಗಿದ್ದ ಜೆಡಿಎಸ್, ಈಗ ಮತ್ತೆ ಇನ್ನೊಂದು ಪ್ರಮುಖ ಖಾತೆಯೂ ತನಗೆಬೇಕೆಂದು ದಾಳ ಉರುಳಿಸಿದೆ ಎಂದು ಕೆಲವು ಪತ್ರಿಕೆಗಳು ವರದಿ ಮಾಡಿವೆ.

ರಾಹುಲ್ ಗಾಂಧಿಯವರ ಅನುಪಸ್ಥಿತಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಮಾತುಕತೆಗಳು ಗುಲಾಂನಬಿ ಆಜಾದ್, ವೇಣುಗೋಪಾಲ್, ಸಿದ್ದರಾಮಯ್ಯ, ಡ್ಯಾನಿಷ್ ಆಲಿ ನಡುವೆ ನಡೆಯುತ್ತಿದ್ದರೂ, ಯಾವುದಕ್ಕೂ ತಾರ್ಕಿಕ ಅಂತ್ಯ ಕಾಣಿಸಲು ಈ ಮುಖಂಡರಿಗೆ ಸಾಧ್ಯವಾಗುತ್ತಿಲ್ಲ.

ಜೆಡಿಎಸ್ ಪಕ್ಷದಿಂದ ಸಂಪುಟ ಸೇರುವವರ ಪಟ್ಟಿ ಸಿದ್ದವಾಗಿದ್ದರೂ, ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಆಪರೇಶನ್ ಕಮಲಕ್ಕೆ ಓಗೊಡದೇ ಪಕ್ಷದ ಮೇಲೆ ನಿಯತ್ತು ಮುಂದುವರಿಸಿದ ಹಲವು ಶಾಸಕರನ್ನು ಸಮಾಧಾನ ಪಡಿಸುವುದು ಕಾಂಗ್ರೆಸ್ಸಿಗೆ ಸವಾಲಾಗಿ ಪರಿಣಮಿಸುತ್ತಿದೆ.

ಹಣಕಾಸು ಮತ್ತು ಗೃಹ ಇಲಾಖೆಯನ್ನು ಕ್ರಮವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರಿಗೆ ನೀಡಲು ಎರಡೂ ಪಕ್ಷಗಳು ಒಪ್ಪಿಗೆ ಸೂಚಿಸಿರುವುದು ಹಳೆಯ ವಿಚಾರ. ಈಗ, ಕಳೆದ ಸರಕಾರದ ಅವಧಿಯಲ್ಲೂ ಅದೇ ಖಾತೆಯನ್ನು ನಿಭಾಯಿಸುತ್ತಿದ್ದ, ಕಾಂಗ್ರೆಸ್ಸಿನ ಪ್ರಭಾವಿ ಮುಖಂಡನ ಖಾತೆ ತನಗೆ ಬೇಕೆಂದು ಜೆಡಿಎಸ್ ಪಟ್ಟುಹಿಡಿದಿದೆ ಎನ್ನುವ ಸುದ್ದಿಯಿದೆ. ಮುಂದೆ ಓದಿ..

ದೇವೇಗೌಡರ ಜೊತೆ ಸಮಾಲೋಚನೆ

ದೇವೇಗೌಡರ ಜೊತೆ ಸಮಾಲೋಚನೆ

ಬಹುತೇಕ ಶುಕ್ರವಾರ ಸಂಪುಟ ರಚನೆಯ ಕಸರತ್ತು ಮುಗಿಯಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಈ ಪ್ರಕ್ರಿಯೆ ಸೋಮವಾರದ (ಜೂ 4) ವರೆಗೂ ಮುಂದುವರಿಯುವ ಸಾಧ್ಯತೆಯಿದೆ. ಕಾಂಗ್ರೆಸ್ಸಿನ ಹಿರಿಯ ಮುಖಂಡರು, ದೇವೇಗೌಡರ ಜೊತೆ ಸಮಾಲೋಚನೆ ನಡೆಸಿ, ಆದಷ್ಟು ಬೇಗ ಈ ಪ್ರಕ್ರಿಯೆ ಮುಗಿಸಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಲೋಕೋಪಯೋಗಿ ಇಲಾಖೆಯ ಮೇಲೆ ಎರಡೂ ಪಕ್ಷಗಳಿಗೆ ಕಣ್ಣಿತ್ತು

ಲೋಕೋಪಯೋಗಿ ಇಲಾಖೆಯ ಮೇಲೆ ಎರಡೂ ಪಕ್ಷಗಳಿಗೆ ಕಣ್ಣಿತ್ತು

ಮೊದಲು, ಲೋಕೋಪಯೋಗಿ ಇಲಾಖೆಯ (PWD) ಮೇಲೆ ಎರಡೂ ಪಕ್ಷಗಳಿಗೆ ಕಣ್ಣಿತ್ತು. ಆದರೆ, ಎಚ್ ಡಿ ರೇವಣ್ಣ ಆ ಖಾತೆಗೆ ಭಾರೀ ಲಾಬಿ ನಡೆಸಿದ್ದರಿಂದ, ಆ ಖಾತೆಯನ್ನು ಜೆಡಿಎಸ್ಸಿಗೆ ನೀಡಲು ನಿರ್ಧರಿಸಲಾಗಿತ್ತು. ಆದರೆ, ರೇವಣ್ಣ ಈಗ ಇನ್ನೊಂದು ಖಾತೆಗೆ ಪಟ್ಟುಹಿಡಿದಿರುವುದರಿಂದ, ಎಲ್ಲಾ ಪ್ರಕ್ರಿಯೆ ಮತ್ತೆ ವಿಳಂಬವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಕಾಂಗ್ರೆಸ್ಸಿನ ಆಪತ್ಬಾಂದವ ಡಿ ಕೆ ಶಿವಕುಮಾರ್

ಕಾಂಗ್ರೆಸ್ಸಿನ ಆಪತ್ಬಾಂದವ ಡಿ ಕೆ ಶಿವಕುಮಾರ್

ಕಳೆದ ಸಿದ್ದರಾಮಯ್ಯನವರ ಸರಕಾರದಲ್ಲಿ ಇಂಧನ ಖಾತೆಯನ್ನು ಹೊಂದಿದ್ದ, ಕಾಂಗ್ರೆಸ್ಸಿನ ಆಪತ್ಬಾಂದವ ಡಿ ಕೆ ಶಿವಕುಮಾರ್ ಅವರಿಗೇ ಬಹುತೇಕ ಈ ಬಾರಿಯೂ ಇಂಧನ ಖಾತೆಯನ್ನು ನೀಡಲು ನಿಶ್ಚಯಿಸಲಾಗಿತ್ತು ಎನ್ನುವ ಸುದ್ದಿಯ ನಡುವೆ, ರೇವಣ್ಣ ತನಗೆ ಇಂಧನ ಖಾತೆ ಬೇಕೆಂದು ಹೊಸ ದಾಳ ಉರುಳಿಸಿದ್ದಾರೆ ಎನ್ನುವ ಮಾಹಿತಿಯಿದೆ.

ದೇವೇಗೌಡರ ಮತ್ತು ಡಿ ಕೆ ಶಿವಕುಮಾರ್ ಕುಟುಂಬ

ದೇವೇಗೌಡರ ಮತ್ತು ಡಿ ಕೆ ಶಿವಕುಮಾರ್ ಕುಟುಂಬ

ದೇವೇಗೌಡರ ಮತ್ತು ಡಿ ಕೆ ಶಿವಕುಮಾರ್ ಕುಟುಂಬಗಳ ನಡುವಿನ ಸಂಬಂಧ ತೀರಾ ಹಳಸಿದ್ದರೂ, ಇತ್ತೀಚಿನ ದಿನಗಳಲ್ಲಿ ಎರಡೂ ಕಡೆಯವರು ಅದನ್ನು ಸಾರ್ವಜನಿಕವಾಗಿ ತೋರಿಸುತ್ತಿರಲಿಲ್ಲ. ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೇ, ಕಾಂಗ್ರೆಸ್ ತನ್ನ ಬೆಂಬಲವನ್ನು ಜೆಡಿಎಸ್ಸಿಗೆ ಸೂಚಿಸಿದಾಗ, ಒಲ್ಲದ ಮನಸ್ಸಿನಿಂದಲೇ ಹೈಕಮಾಂಡ್ ಸೂಚಿಸಿದ ಕೆಲಸವನ್ನು ಡಿಕೆ ಶಿವಕುಮಾರ್ ನಿಯತ್ತಾಗಿ ಮಾಡಿ ಮುಗಿಸಿದ್ದರು.

ಸುಸೂತ್ರವಾಗಿ ಬಗೆಹರಿಯಬಹುದು ಎನ್ನುವಂತಿದ್ದ ಸಂಪುಟ ವಿಸ್ತರಣೆ ಮತ್ತೆ ಕಗ್ಗಂಟು

ಸುಸೂತ್ರವಾಗಿ ಬಗೆಹರಿಯಬಹುದು ಎನ್ನುವಂತಿದ್ದ ಸಂಪುಟ ವಿಸ್ತರಣೆ ಮತ್ತೆ ಕಗ್ಗಂಟು

ಆದರೆ, ಡಿ ಕೆ ಶಿವಕುಮಾರ್ ಅವರಿಗೆಂದೇ ಹೇಳಲಾಗುತ್ತಿದ್ದ ಇಂಧನ ಖಾತೆಯನ್ನು ಇದ್ದಕ್ಕಿದ್ದಂತೇ ರೇವಣ್ಣ ಯಾಕೆ ಡಿಮಾಂಡ್ ಮಾಡುತ್ತಿದ್ದಾರೆ ಎನ್ನುವುದು ಸದ್ಯದ ಮಟ್ಟಿಗೆ ಅರ್ಥವಾಗದ ರಾಜಕೀಯ. ಅದೇನೇ ಇರಲಿ, ಕೊನೆಗೂ, ಸುಸೂತ್ರವಾಗಿ ಬಗೆಹರಿಯಬಹುದು ಎನ್ನುವಂತಿದ್ದ ಸಂಪುಟ ವಿಸ್ತರಣೆ ಮತ್ತೆ ಕಗ್ಗಂಟಾದಂತಿದೆ ಎನ್ನುವ ಮಾಹಿತಿಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+