HD Devegowda: ಮೋದಿ ರ‍್ಯಾಲಿ ಚುನಾವಣೆ ಮೇಲೆ ಪ್ರಭಾವ ಬೀರಲ್ಲ ಎಂದಿದ್ದೇಕೆ ದೇವೇಗೌಡರು?
ಬೆಂಗಳೂರು, ಏಪ್ರಿಲ್. 27: ಮೇ 10 ರ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಚುನಾವಣಾ ರ‍್ಯಾಲಿಗಳು ಮತ್ತು ಸಭೆಗಳನ್ನು ನಡೆಸಲಿದ್ದಾರೆ. ಶನಿವಾರದಿಂದ (ಏಪ್ರಿಲ್. 29) ದಿಂದ ಬರೋಬ್ಬರಿ ಆರು ದಿನಗಲ ಕಾಲ ರಾಜ್ಯದ ಹಲವು ಭಾಗಗಳಲ್ಲಿ ಬೃಹತ್ ಪ್ರಚಾರ ನಡೆಸಲಿದ್ದಾರೆ. ಈ ಬಗ್ಗೆ ಮಾಜಿ ಪ್ರಧಾನಿ ಮತ್ತು ಜನತಾ ದಳ (ಜಾತ್ಯತೀತ) ಮುಖ್ಯಸ್ಥ ಎಚ್‌ಡಿ ದೇವೇಗೌಡರು ಮಾತನಾಡಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ವಿಶೇಷ ಸಂವಾದದಲ್ಲಿ ಮಾತನಾಡಿರುವ ದೇವೇಗೌಡರು, ಪ್ರಧಾನು ಮೋದಿಯವರ ರ‍್ಯಾಲಿಗಳು ವಿಧಾನ ಸಭಾ ಚುನಾವಣೆಗಿಂತ ಹೆಚ್ಚು ಲೋಕಸಭಾ ಚುಣಾವಣೆ ಮೇಲೆ ಪ್ರಭಾವ ಬೀರುತ್ತವೆ ಎಂದಿದ್ದಾರೆ. ಅವರು ಹೀಗೆನ್ನಲು ಕಾರಣವೇನು...? ಮುಂದಿನ ಚುನಾವಣೆಗೆ ಪಕ್ಷ ಸಿದ್ಧವಾಗಿರುವ ಬಗ್ಗೆ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ವಿಶೇಷ ಸಂದರ್ಶನದ ವಿವರ ಇಲ್ಲಿದೆ.

ಪಕ್ಷದ ಪರ ಪ್ರಚಾರವನ್ನೂ ಮಾಡುತ್ತಿದ್ದೀರಿ. ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ನೀವು ಹೇಗೆ ನೋಡುತ್ತೀರಿ?
ನನ್ನ ಪ್ರಚಾರದಲ್ಲಿ ವಿಶೇಷವೇನೂ ಇಲ್ಲ. ದಿನಕ್ಕೆ ಮೂರು ಕಾರ್ಯಕ್ರಮಗಳನ್ನು ಆಯೋಜಿಸಿ ಎಂದು ಪಕ್ಷದ ನಾಯಕರಿಗೆ ಹೇಳಿದ್ದೇನೆ. ಸುಮಾರು 40 ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ. ಕಳೆದ 60 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ. ಕುಮಾರಸ್ವಾಮಿಯವರು ತಮ್ಮ ಕಾರ್ಯಕ್ರಮಗಳಿಂದ ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸಿದ್ದಾರೆ. ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದರೂ ಅವರು ಕಷ್ಟಪಡುತ್ತಿದ್ದಾರೆ.
ಜೆಡಿಎಸ್ ಸೇರಿದಂತೆ ಮೂರೂ ಪಕ್ಷಗಳು ಬಹುಮತ ಪಡೆಯುವುದಾಗಿ ಹೇಳಿಕೊಂಡಿವೆ. ನಿಮ್ಮ ಅನಿಸಿಕೆ ಏನು?
ನಾನು ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ದೇಶದಲ್ಲೇ ಪ್ರಪ್ರಥಮ ಬಾರಿಗೆ ಎಚ್‌ಡಿ ಕುಮಾರಸ್ವಾಮಿ ಅವರು ವಿಶಿಷ್ಟ ಕಾರ್ಯಕ್ರಮವನ್ನು (ಪಂಚರತ್ನ ತೃ ಯಾತ್ರೆ) ರಾಜ್ಯದ ಜನತೆಯ ಮುಂದಿಟ್ಟು ಶ್ರಮಿಸುತ್ತಿದ್ದಾರೆ. ಈ ಸಂದೇಶವನ್ನು ಹಳ್ಳಿಗಳ ಜನರಿಗೆ ತಲುಪಿಸಲಾಗಿದೆ. ಮುಂದಿನ ದಿನಗಳಲ್ಲಿ ಚುನಾವಣೆಗೂ ಮುನ್ನ ಮತ್ತೆ ಈ ವಿಚಾರಗಳನ್ನು ಜನರ ಬಳಿಗೆ ಕೊಂಡೊಯ್ಯಲಿದ್ದಾರೆ. ಇದು ಸಾಕಷ್ಟು ಪರಿಣಾಮ ಬೀರಿದ್ದು, ಜೆಡಿಎಸ್ ಬಹುಮತ ಪಡೆಯುವ ವಿಶ್ವಾಸವಿದೆ.

ಕೃಷಿ ಸಾಲ ಮನ್ನಾ, ವೃದ್ಧಾಪ್ಯ ವೇತನ, ಇನ್ನೂ ಹಲವು ಕ್ರಮಗಳನ್ನು ಕೈಗೊಂಡಿದ್ದರು. ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ರಾಜಕಾರಣಿ ಎಂದು ಅವರ ವಿರೋಧಿಗಳು ಒಪ್ಪಿಕೊಳ್ಳುತ್ತಾರೆ.
ಜೆಡಿಎಸ್ ಹಳೆ ಮೈಸೂರು ಭಾಗಕ್ಕೆ ಸೀಮಿತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅದು ನಿಜವೇ?
ಕಳೆದ (2018) ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ಒಮ್ಮೆ ನೋಡಿ. ವಿಜಯಪುರ ಮತ್ತು ರಾಯಚೂರಿನಲ್ಲಿ ತಲಾ ಮೂರು, ಬೀದರ್‌ನಲ್ಲಿ ಎರಡು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಒಂದು ಸ್ಥಾನವನ್ನು ಗೆದ್ದಿದ್ದೇವೆ. ನಾವು ಆ ಪ್ರದೇಶದಲ್ಲಿ ಒಂಬತ್ತು ಸ್ಥಾನಗಳನ್ನು ಗೆದ್ದಿದ್ದೇವೆ. ಈ ಬಾರಿ ಆ ಪ್ರದೇಶದಲ್ಲಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಕೆಲವು ಸ್ನೇಹಿತರು ಇದನ್ನು ಕೇವಲ ಹಳೆಯ ಮೈಸೂರು ಪಾರ್ಟಿ ಎಂದು ಬ್ರಾಂಡ್ ಮಾಡಲು ಬಯಸುತ್ತಾರೆ. ಆದರೆ, ಸತ್ಯಗಳು ವಿಭಿನ್ನವಾಗಿವೆ.
ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಅದರಲ್ಲಿ ಏನಾದರೂ ಸತ್ಯವಿದೆಯೇ?
ವರುಣಾದಲ್ಲಿ (ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವ ಕ್ಷೇತ್ರದಿಂದ) ಯಡಿಯೂರಪ್ಪ ಅವರ ಪುತ್ರ ಸ್ಪರ್ಧೆಯಿಂದ ಹಿಂದೆ ಸರಿದ ಬಗ್ಗೆ ಅವರು ಏನು ಹೇಳುತ್ತಾರೆ..? ಬಿಜೆಪಿ ಹೈಕಮಾಂಡ್ ಪ್ರತಿಕ್ರಿಯೆ ಏನು...? ಅದು ಏನನ್ನು ಸೂಚಿಸುತ್ತದೆ..? ಅವರು ತಮ್ಮದೇ ಆದ ಒಳ ಒಪ್ಪಂದಗಳನ್ನು ಹೊಂದಿದ್ದಾರೆ.

2024 ರ ಚುನಾವಣೆಯ ಮೊದಲು ಮೈತ್ರಿ ಮಾಡಿಕೊಳ್ಳುವ ವಿರೋಧ ಪಕ್ಷಗಳ ಪ್ರಯತ್ನದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಇದು ಕಷ್ಟ. ಬಿಜೆಪಿ 303 ಸ್ಥಾನ ಗೆದ್ದಿದ್ದು, ಈ ಬಾರಿ ಅವರಿಗೂ ಕಷ್ಟ. ಆದರೆ ಅವರು ಇತರರ ನೆರವಿನಿಂದ ಸರ್ಕಾರ ರಚಿಸಲು ಸಾಧ್ಯ. ಅದು ಕೂಡ ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ರಾಜಸ್ಥಾನವನ್ನು ನೋಡಿ, ಅಲ್ಲಿಯೂ ಅವರು ಹೋರಾಡುತ್ತಿದ್ದಾರೆ. ಅಲ್ಲದೆ, ಇತರ ಪಕ್ಷಗಳು ಕೂಡ ಕಾಂಗ್ರೆಸ್ ನಾಯಕತ್ವವನ್ನು ಒಪ್ಪಿಕೊಳ್ಳುವುದಿಲ್ಲ.
ಬಿಜೆಪಿ ವಿರುದ್ಧ ಒಗ್ಗಟ್ಟಿನ ಪ್ರತಿಪಕ್ಷ ರೂಪುಗೊಂಡರೆ, ನೀವು ಅದರ ಭಾಗವಾಗುತ್ತೀರಾ?
ಇಲ್ಲ
ಪ್ರಧಾನಿ ಮೋದಿಯವರ ರ‍್ಯಾಲಿಗಳು ಕರ್ನಾಟಕದಲ್ಲಿ ಅಲೆಯನ್ನು ಬದಲಾಯಿಸಬಹುದು ಎಂದು ಬಿಜೆಪಿ ಯೋಚಿಸುತ್ತಿದೆ
ಅವರು ಸುಮಾರು 40 ರಿಂದ 50 ಸ್ಥಳಗಳಲ್ಲಿ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದರ ಪರಿಣಾಮ ಸಂಸತ್ ಚುನಾವಣೆ ಮೇಲೆ ಹೆಚ್ಚು. ವಿಧಾನಸಭಾ ಚುನಾವಣೆ ಪ್ರಾದೇಶಿಕ ಸಮಸ್ಯೆಯಾಗಿದೆ. ಅವರ ಭಾಷಣಗಳು ಸಂಸತ್ತಿನ ಚುನಾವಣೆಯ ಸಮಯದಲ್ಲಿ ಹೆಚ್ಚು ಪರಿಣಾಮ ಬೀರುತ್ತವೆ. ಆದರೆ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪ್ರಭಾವ ಬೀರುವುದು ಕಷ್ಟ.
ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಲ್ಲಿಕಾರ್ಜುನ ಖರ್ಗೆ ಅವರು ವಿವಿಧ ಪಕ್ಷಗಳ ನಾಯಕರನ್ನು ಭೇಟಿ ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ.
ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದಾರೆ. ಒಬ್ಬರು ಅದಾನಿ ಬಗ್ಗೆ ಮಾತನಾಡುತ್ತಿದ್ದರೆ ಮತ್ತೊಬ್ಬರು ಇನ್ನೇನೋ ಮಾತನಾಡುತ್ತಿದ್ದಾರೆ. ಅದರಲ್ಲಿ ಯಾವುದೇ ಅರ್ಥವಿಲ್ಲ.
ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡನ್ನೂ ಎದುರಿಸುತ್ತಿರುವ ಜೆಡಿಎಸ್ ಪರಿಸ್ಥಿತಿ
ಪಕ್ಷ ಉಳಿಸಲು ಹೋರಾಟ ನಡೆಸುತ್ತಿದ್ದೇವೆ. ಇದು ರೈತರ ಪಕ್ಷವಾಗಿದ್ದು, ರೈತನ ಮಗನಾಗಿ ನಾನು ಆ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಜೆಡಿಎಸ್ ರೈತರ ಮತ್ತು ಬಡ ಜನರ ವಿಶ್ವಾಸ ಗಳಿಸಿದೆ. ನಾವು ಯಾವಾಗಲೂ ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿದ್ದೇವೆ. ಅದನ್ನು ಜನ ಮರೆತಿಲ್ಲ.
ರಾಜ್ಯ ಸರ್ಕಾರವು ಮುಸ್ಲಿಮರಿಗೆ 4% ಕೋಟಾವನ್ನು ರದ್ದುಗೊಳಿಸಿದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನಾನು ಅದನ್ನು ಜಾರಿಗೆ ತಂದಿದ್ದೆ. ಆದರೆ ಬಿಜೆಪಿ ಅದನ್ನು ರದ್ದುಗೊಳಿಸಿತು. ಅವರು ಅದನ್ನು ಮಾಡಬಾರದಿತ್ತು. ಇದು ತಪ್ಪು. ಅದನ್ನುನಾವು ಮತ್ತೆ ಮರುಸ್ಥಾಪಿಸುತ್ತೇವೆ ಎಂಬ ನಿಲುವು ತಳೆದಿದ್ದೇನೆ.
ಜನಾದೇಶ ಸಿಗದಿದ್ದರೆ ಜೆಡಿಎಸ್ ಕಾಂಗ್ರೆಸ್ ಅಥವಾ ಬಿಜೆಪಿ ಜೊತೆ ಹೋಗಲಿದೆಯೇ?
ಪ್ರಾಮಾಣಿಕವಾಗಿ ಹೇಳುವುದಾದರೇ ಜನಾದೇಶ ಸಿಗುವುದಿಲ್ಲ ಎಂದು ನಾನು ಭಾವಿಸುವುದಿಲ್ಲ. ಜೆಡಿಎಸ್ ಖಂಡಿತ ಸರಳ ಬಹುಮತ ಪಡೆಯಲಿದೆ.
(ಮಾಹಿತಿ ಕೃಪೆ- ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್)












Click it and Unblock the Notifications