ಕನ್ನಡಿಗರ ಸಮಸ್ಯೆಗಳ ಬಗ್ಗೆ ಎಚ್.ಡಿ ದೇವೇಗೌಡ - ನಾರಾಯಣಗೌಡ ಚರ್ಚೆ
ಬೆಂಗಳೂರು: ಮಾಜಿ ಪ್ರಧಾನಿ, ಸಂಸದ ಎಚ್.ಡಿ. ದೇವೇಗೌಡ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಟಿ.ಎ ಅವರು ಭೇಟಿ ಮಾಡಿದ್ದು ವಿವಿಧ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ.
ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ನಾರಾಯಣಗೌಡ ಅವರು, ಎಚ್.ಡಿ ದೇವೇಗೌಡ ಅವರನ್ನು ಭೇಟಿಯಾಗಿ ದೀರ್ಘಕಾಲ ಚರ್ಚೆ ನಡೆಸುವ ಅವಕಾಶ ಸಿಕ್ಕಿತು. ದೇವೇಗೌಡರು ನಿಜಕ್ಕೂ ಒಬ್ಬ ವಿಸ್ಮಯ. 93 ವರ್ಷ ವಯಸ್ಸಿನಲ್ಲಿಯೂ ಅವರು ದೇಶದ ಮತ್ತು ರಾಜ್ಯದ ಎಲ್ಲ ಪ್ರಮುಖ ಘಟನಾನಾವಳಿಗಳ ಬಗ್ಗೆ ಪೂರ್ಣ ಮಾಹಿತಿ ಹೊಂದಿದ್ದಾರೆ ಮಾತ್ರವಲ್ಲ, ತಮ್ಮದೇ ಆದ ಸ್ಪಷ್ಟ ನಿಲುವುಗಳನ್ನು ಇಟ್ಟುಕೊಂಡಿದ್ದಾರೆ. ವಯೋಸಹಜ ಮರೆವು ಅಥವಾ ಚಿಂತನಾ ಶಕ್ತಿಯ ಕ್ಷೀಣತೆ ಅವರಿಗೆ ಅನ್ವಯಿಸದು ಎಂಬುದು ಸುಳ್ಳಲ್ಲ. ಇನ್ನೂ ರಾಜಕೀಯವಾಗಿ ಪೂರ್ಣ ಸಕ್ರಿಯರಾಗಿರುವ ಅವರ ಮಾತುಗಳು ಆ ಉತ್ಸಾಹವನ್ನು ಸ್ಪಷ್ಟವಾಗಿ ತೋರಿಸುತ್ತವೆ ಎಂದಿದ್ದಾರೆ.

ಈ ಭೇಟಿಯಲ್ಲಿ ದೇವೇಗೌಡರು ಕರ್ನಾಟಕ ಮತ್ತು ಕನ್ನಡಿಗರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ವಿವರವಾಗಿ ಮಾತನಾಡಿದರು. ಕಾವೇರಿ ನೀರು ವಿವಾದ, ಹಿಂದಿ ಹೇರಿಕೆ ವಿರೋಧ, ಕನ್ನಡ ಭಾಷಾ ರಕ್ಷಣೆ, ಸ್ಥಳೀಯರಿಗೆ ಉದ್ಯೋಗ ಆದ್ಯತೆ ಮತ್ತು ರೈತರ ಕಷ್ಟಗಳಂತಹ ವಿಷಯಗಳ ಮೇಲೆ ಸಾಕಷ್ಟು ಮಾತುಕತೆಗಳಾದವು. ಪರಿಹಾರಗಳ ಕುರಿತು ಅವರ ಸಲಹೆಗಳು ಅತ್ಯಂತ ಮೌಲ್ಯಯುತವಾದವು. ಅವರ ರಾಜಕೀಯ ಜ್ಞಾನಕ್ಕೆ ನಿಜವಾಗಿಯೂ ಸಾಟಿಯಿಲ್ಲ. ಇಳಿ ವಯಸ್ಸಿನಲ್ಲಿಯೂ ಜನರ ಕಷ್ಟ-ನಷ್ಟಗಳ ಬಗ್ಗೆ ಇಷ್ಟೊಂದು ಆಳವಾದ ಕಾಳಜಿ ಹೊಂದಿರುವುದು ಅವರ ವಿಶೇಷತೆ.
ನಾನು ದೇವೇಗೌಡ ಅವರನ್ನು ಹಲವು ಬಾರಿ ಭೇಟಿಯಾಗಿದ್ದೇನೆ. ಪ್ರತಿಬಾರಿಯೂ ಅವರೊಂದಿಗೆ ಮಾತನಾಡುವುದು ಒಂದು ವಿಶ್ವವಿದ್ಯಾಲಯದಲ್ಲಿ ಪಾಠ ಕೇಳುವಂತೆ ಅನುಭವವಾಗುತ್ತದೆ. ದೇವೇಗೌಡರೇ ಒಬ್ಬ ಜೀವಂತ ವಿಶ್ವವಿದ್ಯಾಲಯ. ಅವರ ಮಾತುಗಳಲ್ಲಿ ರಾಜಕೀಯ ಸೂಕ್ಷ್ಮತೆ, ಆಳವಾದ ಒಳನೋಟಗಳು ಮತ್ತು ದೀರ್ಘ ಅನುಭವದ ಸಾರವೇ ಇರುತ್ತದೆ. ಪ್ರತಿ ಭೇಟಿಯಲ್ಲಿಯೂ ಮಂತ್ರಮುಗ್ಧನಂತೆ ಕೇಳಿಸಿಕೊಳ್ಳುತ್ತೇನೆ. ಇಂದು ಕೂಡ ಈ ವಯಸ್ಸಿನಲ್ಲಿಯೂ ಅವರ ಉತ್ಸಾಹ ಮತ್ತು ಚುರುಕುತನ ಕಂಡು ಸಂಭ್ರಮಿಸಿದೆ ಎಂದಿದ್ದಾರೆ.
ಇಂತಹ ನಾಯಕರಿಂದ ಕರ್ನಾಟಕಕ್ಕೆ ಇನ್ನೂ ಬಹಳಷ್ಟು ಮಾರ್ಗದರ್ಶನ ಬೇಕು. ಅವರ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಎಂದೂ ಅವರು ಟ್ವೀಟ್ ಮಾಡಿದ್ದಾರೆ.
ಕನ್ನಡಪರ ಹೋರಾಟಗಾರರ ಮೇಲಿನ ಮೊಕದ್ದಮೆ ಹಿಂಪಡೆಯಲು ಮನವಿ
ಇನ್ನು ಕನ್ನಡಪರ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ನಾರಾಯಣಗೌಡ ಅವರು ಮನವಿ ಮಾಡಿದ್ದಾರೆ. ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡಪರ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಘೋಷಿಸಿದ್ದರು. ಈ ಸಂಬಂಧ ಕ್ಯಾಬಿನೆಟ್ ಉಪಸಮಿತಿ ರಚಿಸಿರುವುದಾಗಿಯೂ ಅವರು ಹೇಳಿದ್ದರು. ಇದೇ ವಿಷಯದ ಕುರಿತು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ ಎಂದು ನಾರಾಯಣಗೌಡ ಅವರು ಹೇಳಿದ್ದಾರೆ.
ಸಂತೋಷದ ವಿಷಯವೇನೆಂದರೆ ಕನ್ನಡಪರ, ರೈತಪರ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವ ತೀರ್ಮಾನವನ್ನು ನಾವು ತೆಗೆದುಕೊಂಡಿದ್ದೇವೆ, ಅತಿ ಶೀಘ್ರದಲ್ಲೇ ಇದಕ್ಕೆ ಸಂಬಂಧಿಸಿದ ನಿರ್ಣಯವನ್ನು ಸಂಪುಟ ಸಭೆಯಲ್ಲಿ ಅಂಗೀಕರಿಸಲಿದ್ದೇವೆ ಎಂದು ಗೃಹಸಚಿವರು ಹೇಳಿದರು. ಇದು ಅತ್ಯಂತ ಸ್ವಾಗತಾರ್ಹವಾದ ನಿರ್ಧಾರ. ಇದಕ್ಕಾಗಿ ಮುಖ್ಯಮಂತ್ರಿಗಳು, ಗೃಹಸಚಿವರು ಮತ್ತು ಸಚಿವಸಂಪುಟದ ಎಲ್ಲ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
ಇದೇ ಸಂದರ್ಭದಲ್ಲಿ ನಾವು ಯಾರೂ ವೈಯಕ್ತಿಕ ಕ್ರಿಮಿನಲ್ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ಕೇಳುತ್ತಿಲ್ಲ. ಅಂಥ ಪ್ರಕರಣಗಳೂ ನಮ್ಮ ಮೇಲೆ ಇಲ್ಲ. ಅನೇಕ ಚಳವಳಿಗಳ ಸಂದರ್ಭದಲ್ಲಿ ಹೂಡಲಾದ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲು ಕೋರುತ್ತಿದ್ದೇವೆ ಎಂಬುದನ್ನು ಗೃಹಸಚಿವರಿಗೆ ಮನವರಿಕೆ ಮಾಡಿಕೊಟ್ಟೆ. ಸರ್ಕಾರ ಈಗಾಗಲೇ ಚಳವಳಿಯ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲು ತೀರ್ಮಾನಿಸಿದೆ ಎಂದು ಗೃಹ ಸಚಿವರು ಹೇಳಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.












Click it and Unblock the Notifications